ದಕ್ಷಿಣ ಕನ್ನಡ

ಕೋಳಿ ಅಂಕಕ್ಕೆ ದಾಳಿ: 11 ಮಂದಿ ಸೆರೆ

Published On :

ಪುತ್ತೂರು: ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಬಾಯಂಬಾಡಿ ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಸಂಪ್ಯ ಪೊಲೀಸರು ಗುರುವಾರ ದಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ 11 ಮಂದಿಯನ್ನು ಬಂಧಿಸಿ, ನಗದು ಹಾಗೂ ಕೋಳಿಗಳನ್ನು ವಶ ಪಡಿಸಲಾಗಿದೆ. ಕೊಳ್ತಿಗೆ ಗ್ರಾಮದ ಶೀನಪ್ಪ ದಾಸ್, ಪುಟ್ಟ, ಬಾಬು ಕೊಳ್ತಿಗೆ, ದಿನೇಶ್, ಬಾಬು, ಬಾಲಕೃಷ್ಣ ರೈ, ರಮೇಶ್, ಗಣೇಶ್ ಗೌಡ, ಕೃಷ್ಣ ಪ್ರಸಾದ್, ಅಂಗಾರ ಮತ್ತು ರಾಜೇಶ್ ಬಂಧಿತ ಆರೋಪಿಗಳು.  ಸಂಪ್ಯ ಠಾಣಾಧಿಕಾರಿ ಜಗದೀಶ್ ರೆಡ್ಡಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಆರೋಪಿಗಳನ್ನು ಬಂಧಿಸಿದ ಪೊಲೀಸರು 15 ಕೋಳಿ, ರು. 1820 ನಗದು ಹಣ ಮತ್ತು 2 ಕೋಳಿ ಬಾಳು (ಸಣ್ಣ ಕತ್ತಿ)ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಾರಿ, ಬಸ್ ಡಿಕ್ಕಿ: ಓರ್ವನಿಗೆ ಗಾಯ
ಪುತ್ತೂರು: ಈಚರ್ ಲಾರಿ ಮತ್ತು ಕೆಎಸ್‌ಆರ್‌ಟಿಸಿ ಬಸ್ಸೊಂದರ ನಡುವೆ ಡಿಕ್ಕಿ ಸಂಭವಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಬುಧವಾರ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೇರಮೊಗ್ರು ಸಮೀಪದ ಶಕ್ತಿಕಲ್ಲು ಎಂಬಲ್ಲಿ ನಡೆದಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪುತ್ತೂರು ತಾಲೂಕಿನ ಕೈಲ ಗ್ರಾಮದ ಕೆ.ಸಿ. ಫಾರಂ ಗೋಕುಲನಗರ ನಿವಾಸಿ ಜಯಪ್ರಕಾಶ್ (42) ಗಾಯಗೊಂಡವರು. ಕೈಮೂಳೆ ಮುರಿತಕ್ಕೊಳಗಾಗಿರುವ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನಲ್ಲಿದ್ದ ಕೆಲವು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ. ಮಂಗಳೂರಿನಿಂದ ಮೀನು ಹೇರಿಕೊಂಡು ಬೆಂಗಳೂರಿಗೆ ಹೊರಟಿದ್ದ ಈಚರ್ ಲಾರಿ ಮತ್ತು ಉಪ್ಪಿನಂಗಡಿ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮರಕ್ಕೆ ಕಾರು ಡಿಕ್ಕಿ: ಐವರಿಗೆ ಗಾಯ
ಉಪ್ಪಿನಂಗಡಿ: ಇಲ್ಲಿನ ಸಮೀಪದ ಕರಾಯ ಗ್ರಾಮದ ಗರಡಿ ಎಂಬಲ್ಲಿ ಕಾರೊಂದು ಚಾಲಕನ ನಿಯಂತ್ರಣಕ್ಕೆ ಸಿಲುಕದೆ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಗಾಯಗೊಂಡ ಘಟನೆ ಗುರುವಾರ ಸಂಜೆ ಸಂಭವಿಸಿದೆ. ಸುಳ್ಯ ಪರಿಸರದ ಕುಟುಂಬವೊಂದರ ಸದಸ್ಯರು ಕಾರಿನಲ್ಲಿ ಬೆಳ್ತಂಗಡಿ ಕಡೆಯಿಂದ ಸುಳ್ಯದತ್ತ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಯಿಂದ ಕಮಾಲಾಕ್ಷಿ (62), ವಿಶಾಲಾಕ್ಷಿ (52),  ಕಾರ್ತಿಕ್ (7), ಹೊನ್ನಪ್ಪ (53), ಪುನಿತ್ (27) ಎಂಬ ಐವರು ಗಾಯಗೊಂಡು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ. ಪುತ್ತೂರು ಟ್ರಾಫಿಕ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಪಿಕಪ್ ಡಿಕ್ಕಿ: ಬೈಕ್ ಸವಾರ ಗಂಭೀರ
ಬಂಟ್ವಾಳ: ಪಿಕಪ್ ವಾಹನ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಗುರುವಾರ ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿಯ ನಾವೂರ ಗ್ರಾಮದ ಫರ್ಲಾದಲ್ಲಿ ಸಂಭವಿಸಿದೆ. ಮೂರ್ಜೆ ನಿವಾಸಿ ವೀರಪ್ಪ ಮೂಲ್ಯ (42) ಗಾಯಾಳುವಾಗಿದ್ದು, ಕುತ್ತಿಗೆ ಹಾಗೂ ತಲೆಗೆ ತೀವ್ರ ಏಟಾಗಿದ್ದು ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಬಿ.ಸಿ.ರೋಡ್‌ನಿಂದ ಮೂರ್ಜೆ ಕಡೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಪಿಕಪ್ ಡಿಕ್ಕಿ ಹೊಡೆದಿದೆ. ವೀರಪ್ಪ ಬೈಕ್ ಸಹಿತ ರಸ್ತೆಬದಿಯ ಚರಂಡಿಗೆ ಎಸೆಯಲ್ಪಟ್ಟಿದ್ದರು.ಅವರ ಮೇಲೆ ಪಿಕಪ್ ಬಿದ್ದಿತ್ತು. ತಕ್ಷಣ ಸ್ಥಳೀಯರು ಧಾವಿಸಿ ಮೇಲೆತ್ತಿದ್ದರು. ಆದರೆ ಸಕಾಲದಲ್ಲಿ 108 ಅಂಬ್ಯುಲೆನ್ಸ್ ಬಾರದ ಕಾರಣ ಖಾಸಗಿ ವಾಹನದಲ್ಲಿ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.