ತಂಬಾಕು ವ್ಯಸನಿಗಳಿಗೆ ವಿಮಾ ಸೌಲಭ್ಯ ಇಲ್ಲ
ಮಂಗಳೂರು: ಹೊಗೆಸೊಪ್ಪು, ಗುಟ್ಕಾ ಸೇವಿಸುವರು, ಧೂಮಪಾನಿಗಳನ್ನು ವಿಮಾ ಸೌಲಭ್ಯದಿಂದ ಹೊರಗಿಡಲಾಗಿದೆ ಎಂದು ಕ್ಯಾನ್ಸರ್ ತಡೆ ಪ್ರಾಜೆಕ್ಟ್ ಸಂಸ್ಥೆಯ ನಿರ್ದೇಶಕ ಡಾ. ವಿಶಾಲ್ ರಾವ್ ಹೇಳಿದರು.
ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಮಂಗಳೂರು ಪೊಲೀಸ್ ಅತಿಥಿಗೃಹದಲ್ಲಿ ಪಶ್ಚಿಮವಲಯ ಪೊಲೀಸ್ ಅಧಿಕಾರಿಗಳಿಗೆ ತಂಬಾಕು ಉತ್ಪನ್ನ ಕಾಯ್ದೆ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ಹೇಳಿದರು.
ವಿಮೆ ಮಾಡಿದ್ದರೂ ಒಂದು ವೇಳೆ ಆತ ಧೂಮಪಾನಿ ಅಥವಾ ತಂಬಾಕು ಸೇವಿಸುವಾತ ಎಂಬುದನ್ನು ಸಾಬೀತು ಪಡಿಸಿದರೆ ವಿಮಾ ಪರಿಹಾರ ನೀಡಬೇಕೆಂದಿಲ್ಲ ಎಂದು ವಿವರಿಸಿದರು.
ಪೊಲೀಸ್ ಅಧಿಕಾರಿಗಳಲ್ಲಿಯೂ ಅನೇಕ ಮಂದಿ ತಂಬಾಕು ಚಟದ ದಾಸರಾಗಿದ್ದಾರೆ. ತಂಬಾಕಿನಿಂದ ದೂರವಿರಿ ಇಲ್ಲವಾದರೆ ಕ್ಯಾನ್ಸರ್ ಕೊಲ್ಲಲಿದೆ ಎಂದರು. ಸಿಗರೇಟ್ ಪ್ಯಾಕ್ನಲ್ಲಿರುವ ಭಯಾನಕ ಸಂದೇಶಗಳನ್ನು ನೋಡಿ ಅರ್ಥಮಾಡಿಕೊಳ್ಳಬೇಕು. ಸಮಸ್ಯೆ ಮೂಲ ಪರಿಹಾರಕ್ಕೆ ತಂಬಾಕು ಉತ್ಪಾದನೆ ಸ್ಥಗಿತಗೊಳಿಸುವ ಬಗ್ಗೆ ಸರ್ಕಾರ ಆಲೋಚನೆ ಮಾಡುತ್ತಿದೆ. ತಂಬಾಕು ಬೆಳೆಯುವ ಬೆಳೆಗಾರರ ಮನ ಪರಿವತಿಸಿ ಬೆಳೆ ಬದಲಾವಣೆಗೆ ಮನವೊಲಿಸಲಾಗುತ್ತಿದೆ ಎಂದರು.
ಅಪರಾಧ ವಿಭಾಗ ಎಡಿಜಿಪಿ ಎ.ಎಂ. ಪ್ರಸಾದ್ ಮಾತನಾಡಿ, ಕೇಂದ್ರ ಸರ್ಕಾರದ ಸೂಚನೆಯಂತೆ ಕಾಯ್ದೆಯನ್ನು ಮತ್ತೆ ಬಿಗುಗೊಳಿಸಲಾಗುತ್ತಿದೆ ಎಂದರು. ಐಜಿಪಿ ಪ್ರತಾಪ್ ರೆಡ್ಡಿ ಮಾತನಾಡಿ, ಪಶ್ಚಿಮ ವಲಯ ಜಿಲ್ಲೆಗಳಲ್ಲಿ ತಂಬಾಕು ಕಾಯ್ದೆಯಂತೆ 2013ರ ವರೆಗೆ 2303 ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಶಾಲೆಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡಿರುವ ಶೇ.90 ಪ್ರಕರಣಗಳಿವೆ ಎಂದರು.
ಡಾ.ರಿಯಾಝ್, ಪೊಲೀಸ್ ಕಮಿಷನರ್ ಮನಿಶ್ ಕರ್ಬಿಕರ್, ಎಸ್ಪಿ ಅಭಿಷೇಕ್ ಗೋಯಲ್ ಇದ್ದರು.
ಧ್ವನಿ ಇಲ್ಲ: ತಂಬಾಕು ಚಟಕ್ಕೆ ಸಿಲುಕಿದ ಸಂತ್ರಸ್ತರೊಬ್ಬರಿಗೆ ಕ್ಯಾನ್ಸರ್ 4ನೇ ಹಂತದಲ್ಲಿತ್ತು. ಅವರ ಗಂಟಲಲ್ಲಿ ಈಗ ಧ್ವನಿ ಪೆಟ್ಟಿಗೆಯೇ ಇಲ್ಲ. ಅವರು ಉಸಿರಾಟ ಮಾಡುವುದು ಗಂಟಲಲ್ಲಿ, 1.5 ಲಕ್ಷದಲ್ಲಿ ದಾನಿಗಳ ನೆರವಿನಿಂದ ಧ್ವನಿ ಪೆಟ್ಟಿಗೆ ಕೂಡಿಸಲಾಗಿದೆ ಆದರೆ ಅವರು ಮಾತನಾಡುವುದು ಗಂಟಲಲ್ಲಿ. ಸ್ವರವೂ ಸ್ಪಷ್ಟವಾಗಿಲ್ಲ. ತನಗಾದ ಈ ಅನುಭವವನ್ನು ಅವರು ಇಂಥ ತರಬೇತಿ ಕಾರ್ಯಾಗಾರಗಳಲ್ಲಿ ಗಂಟಲು ಮೂಲಕ ಹೇಳಿಕೊಳ್ಳುತ್ತಾರೆ.
ಛಾವಣಿಗೆ ಚಿಮ್ಮುವ ರಕ್ತ
ತಂಬಾಕು ಸೇವನೆ ದುಷ್ಪರಿಣಾಮ ಕಣ್ಣಿಗೆ ಕಟ್ಟುವಂತೆ ಡಾ.ವಿಶಾಲ್ ರಾವ್ ಹೇಳುವುದು ಹೀಗೆ.
ಆಸ್ಪತ್ರೆಯಲ್ಲಿ ಒಬ್ಬ ತಂಬಾಕು ಚಟದ ರೋಗಿ ದಾಖಲಾಗಿದ್ದರು. ಅತನಿಗೆ ಇನ್ನೂ 28 ವರ್ಷ. ಮದುವೆ ನಿಶ್ಚಿತಾರ್ಥವಾಗಿತ್ತು. ಕೈ ಹಿಡಿಯುವಾಕೆ ಸಿಗರೇಟು ಚಟ ಬಿಡುವಂತೆ ಹೇಳಿದಳು. ಅದಕ್ಕೆ ಒಪ್ಪಿ ಯುವಕ ಸಿಗರೇಟು ಬಿಟ್ಟ. ಸ್ವಲ್ಪ ಸಮಯದಲ್ಲಿ ಮುಖದಲ್ಲಿ ಮಚ್ಚೆ ಕಾಣಿಸಿಕೊಂಡಿತು. ತಪಾಸಣೆ ನಡೆಸುವಾಗ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ವೈದ್ಯರು ದವಡೆ ತೆಗೆದರು. ಗಂಟಲು ಹೋಯಿತು. ಕ್ಯಾನ್ಸರ್ ಮಾರಿಗೆ ಕೊನೆಗೆ ಹೃದಯದ ರಕ್ತನಾಳವೇ ತೂತಾಯಿತು.
ಎದೆ ಮೂಲಕ ದೇಹವಿಡೀ ರಕ್ತ ಪಂಪ್ ಆಗುತ್ತದೆ. ಎದೆಯ ಬಳಿಯೇ ರಕ್ತನಾಳ ತೂತಾದ ಪರಿಣಾಮ ಬೆಡ್ನಲ್ಲಿ ಮಲಗಿದ್ದ ಯುವಕನ ಎದೆಯಿಂದ ಚಾವಣಿ ವರೆಗೆ ರಕ್ತ ಚಿಮ್ಮುತ್ತಿತ್ತು. ಪ್ರತಿ ನಿತ್ಯ ಅದನ್ನು ಹೊಲಿಯುತ್ತಿದ್ದೆವು. ಮೂರು ತಿಂಗಳ ಕಾಲ ಬದುಕಿದ್ದ, ಮದುವೆಯಾಗದೆ ಹಾಗೆಯೇ ಸತ್ತು ಹೋದ. ಯಾರಿಗೂ ಈ ರೀತಿಯ ದಾರುಣ ಸಾವು ಬರಬಾರದು ಎನ್ನುತ್ತಾರೆ ರಾವ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

