ಪಡಿತರ ಚೀಟಿ ರದ್ದು ವಿರುದ್ಧ ಬೃಹತ್ ಪ್ರತಿಭಟನೆ
ಕುಂದಾಪುರ: ತಾಲೂಕಿನಾದ್ಯಂತ ಸುಮಾರು 9,936 ಪಡಿತರ ಚೀಟಿಯನ್ನು ರದ್ದುಪಡಿಸಿರುವುದನ್ನು ವಿರೋಧಿಸಿ ಸಿ.ಪಿ.ಐ(ಎಂ) ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿಯ ಸಹಭಾಗಿತ್ವದಲ್ಲಿ ಕುಂದಾಪುರ ತಹಸೀಲ್ದಾರ್ ಕಚೇರಿ ಮುತ್ತಿಗೆ ಹೋರಾಟ ಯಶಸ್ವಿಯಾಗಿ ಜರುಗಿತು.
ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ರಾಜ್ಯಾದ್ಯಂತ 35 ಜಿಲ್ಲೆಗಳಲ್ಲಿ ಎ.ಪಿ.ಎಲ್, ಬಿ.ಪಿ.ಎಲ್ ಹಾಗೂ ಅಂತ್ಯೋದಯ ಒಳಗೊಂಡಂತೆ ಒಟ್ಟು 47,71,476 ರೇಶನ್ ಕಾರ್ಡ್ಗಳನ್ನು ಏಕಾಏಕಿ ರದ್ದುಪಡಿಸಲಾಗಿದೆ. ಉಡುಪಿ ಜಿಲ್ಲೆಯೊಂದರಲ್ಲೇ ಸುಮಾರು 26,652 ಪಡಿತರ ಚೀಟಿಗಳನ್ನು ಸರ್ಕಾರ ರದ್ದುಪಡಿಸಿದೆ.
ಸರ್ಕಾರ ನಕಲಿ ಪಡಿತರ ಚೀಟಿ ರದ್ದುಪಡಿಸುವ ನೆಪದಲ್ಲಿ ಬಡವರ ರೇಶನ್ ಕಾರ್ಡನ್ನು ಏಕಾಏಕೀ ರದ್ದುಪಡಿಸಿರುವುದು ಖಂಡನಾರ್ಹವಾಗಿದೆ. ಮನೆ ತೆರಿಗೆ, ಕಟ್ಟಡ ನಂಬ್ರ, ಮನೆ ವಿದ್ಯುತ್ ಮೀಟರ್ ಆರ್.ಆರ್. ಸಂಖ್ಯೆ ದಾಖಲೆಗಳೊಂದಿಗೆ ಪಡಿತರ ಚೀಟಿಯ ಪ್ರತಿಯನ್ನು ಸ್ಥಳೀಯ ಪಂಚಾಯತ್ಗೆ ಹಾಜರುಪಡಿಸಲು ಸೂಚನೆ ನೀಡಲಾಗಿದೆ.
ಅಂತೆಯೇ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿ ಹೊಂದಿದವರೆಲ್ಲರೂ ಸಕಲ ದಾಖಲೆಗಳನ್ನು ಹಾಜರುಪಡಿಸಿದ್ದರೂ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖಾಧಿಕಾರಿಗಳು ಏಕಪಕ್ಷೀಯವಾಗಿ ಸಹಸ್ರಾರು ಪಡಿತರ ಚೀಟಿಯನ್ನು ರದ್ದುಪಡಿಸಿ ಬಡವರ ತುತ್ತಿನ ಚೀಲಕ್ಕೆ ಆತಂಕ ಒಡ್ಡಿದೆ. ಸಮರ್ಪಕ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ ಎಂಬ ನೆಪ ಹೇಳಿ ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದಲ್ಲದೇ ಕಳೆದ ಫೆಬ್ರವರಿ ತಿಂಗಳಿಂದ ಪಡಿತರ ಆಹಾರ ಧಾನ್ಯ ನ್ಯಾಯಬೆಲೆ ಅಂಗಡಿ ಮೂಲಕ ವಿತರಣೆ ಮಾಡುವುದಕ್ಕೆ ತಡೆ ಹಿಡಿಯಲಾಗಿದೆ.
ಗ್ರಾಮಾಂತರ ಪ್ರದೇಶದಲ್ಲಿ ಒಂದೇ ಸೂರಿನಡಿ 2- 3 ಕುಟುಂಬ ಅನಿವಾರ್ಯ ಪರಿಸ್ಥಿತಿಯಲ್ಲಿ ಬಡತನದಿಂದ ಜೀವನ ಸಾಗಿಸುತ್ತಿದ್ದು, ಒಂದೇ ಮನೆಯ ಕಟ್ಟಡ ನಂಬ್ರ ಹೊಂದಿಕೊಂಡು 2- 3 ಕುಟುಂಬ ವಾಸವಾಗಿರುವುದರಿಂದ ಮನೆ ಕಟ್ಟಡ ತೆರಿಗೆ ವಿಂಗಡಿಸಿರದ ಕಾರಣ ಉಳಿದೆರಡು ಕುಟುಂಬದ ಪಡಿತರ ಚೀಟಿಯನ್ನು ರದ್ದುಪಡಿಸಲಾಗಿದೆ. ಒಂದೇ ಮನೆಯ ವಿದ್ಯುತ್ ಸಂಪರ್ಕದಲ್ಲಿ ಒಂದೇ ಸೂರಿನಡಿ 2- 3 ಕುಟುಂಬ ವಾಸವಾಗಿರುವುದರಿಂದ ಪ್ರತೀ ಕುಟುಂಬದ ಪಡಿತರ ಚೀಟಿದಾರರಿಗೆ ವಿದ್ಯುತ್ ಬಿಲ್ ಪಾವತಿ ರಶೀದಿ, ಆರ್.ಆರ್. ನಂಬ್ರ ಪ್ರತ್ಯೇಕ ಹಾಜರು ಪಡಿಸಲು ಸಾಧ್ಯವಾಗುತ್ತಿಲ್ಲ. ಈ ನೆಪದಲ್ಲಿ ಸಹಸ್ರಾರು ಪಡಿತರ ಚೀಟಿ ರದ್ದು ಮಾಡಿರುವುದು ಸರಿಯಲ್ಲ. ಸಕಲ ದಾಖಲಾತಿಗಳನ್ನು ಪಡಿತರ ಚೀಟಿಯೊಂದಿಗೆ ಗ್ರಾಮ ಪಂಚಾಯತ್ ಕಚೇರಿಗೆ ಕೊಟ್ಟಿದ್ದರೂ ಇಲಾಖಾಧಿಕಾರಿಗಳು ಬಹುತೇಕ ಪಡಿತರ ಚೀಟಿಗಳನ್ನು ಅಕ್ರಮವಾಗಿ ರದ್ದುಪಡಿಸಿದೆ.
ಸರ್ಕಾರದ ಜನವಿರೋಧಿ ನೀತಿಯನ್ನು ಪ್ರತಿಭಟಿಸಿ ಕುಂದಾಪುರ ತಾಲೂಕಿನಾದ್ಯಂತ ಪಡಿತರ ಚೀಟಿ ವಂಚಿತ ಕುಟುಂಬದ ಸದಸ್ಯರನ್ನು ಸಂಘಟಿಸಿ ಕುಂದಾಪುರ ತಹಸೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಆಕ್ರೋಶ:ರದ್ದುಪಡಿಸಿದ ಪಡಿತರ ಚೀಟಿಯನ್ನು ಈ ಕೂಡಲೇ ಹಿಂದಕ್ಕೆ ಕೊಡಬೇಕು, ನಿಲುಗಡೆಯಾದ ಫೆಬ್ರವರಿ ತಿಂಗಳ ಪಡಿತರ ಆಹಾರ ಧಾನ್ಯ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ಪಡಿತರ ಚೀಟಿಯೊಂದಿಗೆ ಮನೆ ತೆರಿಗೆ ಪಾವತಿ ರಶೀದಿ, ವಿದ್ಯುತ್ ಮೀಟರ್ ಆರ್. ಆರ್. ನಂಬ್ರ ಇತ್ಯಾದಿ ದಾಖಲೆಗಳನ್ನು ಹಾಜರುಪಡಿಸುವುದಕ್ಕೆ ಕಾಲಾವಕಾಶ ವಿಸ್ತರಣೆ ಮಾಡಬೇಕು. ಎ.ಪಿ.ಎಲ್, ಬಿ.ಪಿ.ಎಲ್ ಎಂಬ ತಾರತಮ್ಯ ಮಾಡದೇ ಪ್ರತೀ ಕುಟುಂಬಕ್ಕೆ ಮಾಸಿಕ ಕೆ.ಜಿ. ಗೆ ರು. 2.00 ದರದಲ್ಲಿ 35 ಕೆ.ಜಿ. ಆಹಾರ ಧಾನ್ಯ ವಿತರಣೆ ಮಾಡಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಪಡಿತರ ಚೀಟಿ ರದ್ದಾದ ಕುಟುಂಬದ ಸದಸ್ಯರೆಲ್ಲರೂ ಕುಂದಾಪುರ ತಹಸೀಲ್ದಾರ್ ಕಚೇರಿ ಎದುರು ಘೋಷಣೆಗಳನ್ನು ಕೂಗುತ್ತಾ ಆಳುವ ಸರ್ಕಾರದ ವಿರುದ್ಧ ಆಕ್ರೋಶಭರಿತ ಧ್ವನಿ ಎತ್ತಿದರು.
ಭರವಸೆ: ಬೆಳಗ್ಗೆಯಿಂದ ಮಧ್ಯಾಹ್ನದ ತನಕ ನೂರಾರು ಪೋಲೀಸ್ ಬಿಗಿ ಬಂದೋಬಸ್ತ್ನಲ್ಲಿ ತಹಸೀಲ್ದಾರ್ ಕಚೇರಿ ಮುತ್ತಿಗೆ ಹಾಕಿ, ಉಗ್ರ ಹೋರಾಟ ನಡೆಸಿದ ಪರಿಣಾಮ ಇಲಾಖಾಧಿಕಾರಿಗಳು ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಮುಖಂಡರೊಡನೆ ಮಾತುಕತೆ ನಡೆಸಿ ಮುಂದಿನ 15 ದಿನಗಳೊಳಗೆ ರದ್ದುಪಡಿಸಿದ ಎಲ್ಲಾ ಪಡಿತರ ಚೀಟಿಗಳನ್ನು ಹಿಂದಕ್ಕೆ ಕೊಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಆಹಾರ, ನಾಗರಿಕ ಪೂರೈಕೆ ಇಲಾಖಾಧಿಕಾರಿಗಳು ನೀಡಿದ ಭರವಸೆಗೆ ತಪ್ಪಿ ನಡೆದಲ್ಲಿ ನಮ್ಮ ತೀವ್ರ ರೀತಿಯ ಹೋರಾಟ ಜಿಲ್ಲಾ ಕೇಂದ್ರದಲ್ಲಿ ನಡೆಯಲಿದೆ ಎಂಬ ಎಚ್ಚರಿಕೆಯೊಂದಿಗೆ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಾಯಿತು.
ಕುಂದಾಪುರ ತಹಸೀಲ್ದಾರ್ ಕಚೇರಿ ಮುತ್ತಿಗೆ ಹೋರಾಟ ಚಳುವಳಿಯಲ್ಲಿ ಸಿ.ಪಿ.ಎಂ ಪಕ್ಷದ ತಾ. ಕಾರ್ಯದರ್ಶಿ ಮಹಾಬಲ ವಡೇರಹೋಬಳಿ, ಎಚ್. ನರಸಿಂಹ, ವಿ. ನರಸಿಂಹ, ಸುರೇಶ್ ಕಲ್ಲಾಗರ, ಸುಬ್ರಹ್ಮಣ್ಯ ಆಚಾರ್, ಪುರಸಭೆ ಸದಸ್ಯರಾದ ಗುಣರತ್ನ, ಕಲಾವತಿ, ತಾಲೂಕು ಪಂಚಾಯಿತಿ ಸದಸ್ಯೆ ಶಶಿಕಲಾ ಪೂಜಾರಿ, ಕೃಷಿಕೂಲಿಕಾರರ ಸಂಘದ ಮುಖಂಡರಾದ ರಾಜೀವ ಪಡುಕೋಣೆ, ಕರಿಯ ದೇವಾಡಿಗ, ನಾಗರತ್ನ, ವೆಂಕಟೇಶ ಕೋಣಿ ಹೋರಾಟಕ್ಕೆ ನೇತೃತ್ವ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

