ಬಸವ ವಸತಿ ಮನೆ ನಿರ್ಮಾಣಕ್ಕೆ 4 ತಿಂಗಳ ಗಡುವು
ಮಂಗಳೂರು: ಬಸವ ವಸತಿ ಯೋಜನೆಯಲ್ಲಿ ಮನೆಗಳ ನಿರ್ಮಾಣಕ್ಕೆ ತಾಂತ್ರಿಕ ಸಮಸ್ಯೆ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆ ನಿರ್ಮಾಣ ಗಡುವನ್ನು 4 ತಿಂಗಳಿಗೆ ವಿಸ್ತರಿಸುವಂತೆ ಸರ್ಕಾರವನ್ನು ಕೋರಲು ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ತೀರ್ಮಾನಿಸಿದೆ.
ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊರಗಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ಸಾಮಾನ್ಯ ಸಭೆ ನಡೆಯಿತು.
ಸದಸ್ಯ ಎಂ.ಎಸ್.ಮಹಮ್ಮದ್ ಪ್ರಸ್ತಾಪಿಸಿ, ಬಸವ ವಸತಿ ಯೋಜನೆ ಅನುಷ್ಠಾನಕ್ಕೆ ನೋಡೆಲ್ ಅಧಿಕಾರಿಗಳಿದ್ದಾರೆ, ಹೀಗಿದ್ದೂ ಅನುಷ್ಠಾನಕ್ಕೆ ನಿರ್ಲಕ್ಷ ತೋರಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಸದಸ್ಯ ಸತೀಶ್ ಕುಂಪಲ, ಸದಸ್ಯೆ ಮಮತಾ ಗಟ್ಟಿ ದನಿಗೂಡಿಸಿದರು. ಯೋಜನಾಧಿಕಾರಿ ನಝೀರ್ ಮಾತನಾಡಿ, ಈ ಯೋಜನೆಯಲ್ಲಿ ರು. 3 ಲಕ್ಷ ಅಥವಾ 1200 ಚದರ ಅಡಿಗಿಂತ ದೊಡ್ಡ ಮನೆ ನಿರ್ಮಿಸಲು ಅವಕಾಶವಿಲ್ಲ ಎನ್ನುವ ನಿಯಮದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗಿಗೆ ನೀಡಿದಂತೆ ದ.ಕ.ಜಿಲ್ಲೆಗೂ ವಿನಾಯ್ತಿ ನೀಡಲಾಗಿದೆ ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್ ಮಾತನಾಡಿ, ನಿಯಮಾನುಸಾರ 1 ತಿಂಗಳು ವಿಸ್ತರಿಸಬಹುದು. ಜಿಲ್ಲೆಯಲ್ಲಿ 30 ಸಾವಿರ ಮನೆ ನಿರ್ಮಾಣ ಗುರಿ ಹಾಕಿಕೊಳ್ಳಲಾಗಿದೆ. ಹಾಗಾಗಿ 4 ತಿಂಗಳೊಳಗೆ ಮನೆ ನಿರ್ಮಾಣಕ್ಕೆ ಮುಂದಾಗಬೇಕು. ಈ ಬಗ್ಗೆ ಸರ್ಕಾರಕ್ಕೆ ಬರೆದುಕೊಳ್ಳುವುದಾಗಿ ನಿರ್ಣಯಿಸಲಾಗುವುದು ಎಂದರು.
ಈಗಲೂ 11 ಗಂಟೆಗೆ ಶಾಲೆ: ಬಂಟ್ವಾಳದ ಸಜಿಪಮೂಡದಲ್ಲಿ ಕಳೆದ 8 ವರ್ಷಗಳಿಂದ ಸರ್ಕಾರಿ ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜು ಒಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಶಾಲೆಗೆ ಜಮೀನು ಲಭ್ಯವಿದ್ದರೂ ಪ್ರತ್ಯೇಕ ತರಗತಿ ಕೊಠಡಿ ಮಂಜೂರಾಗದ್ದರಿಂದ ಸಮಸ್ಯೆ ಉಂಟಾಗಿದೆ. ಈ ವಿಚಾರ ಕಳೆದ ಸಭೆಯಲ್ಲಿ ಪ್ರಸ್ತಾಪವಾಗಿದ್ದರೂ ಸಮಸ್ಯೆ ಇತ್ಯರ್ಥವಾಗಿಲ್ಲ ಎಂದು ಸದಸ್ಯೆ ಮಮತಾ ಗಟ್ಟಿ ಅಳಲು ತೋಡಿಕೊಂಡರು. ಪದವಿ ಪೂರ್ವ ಕಾಲೇಜಿಗೆ ಪ್ರತ್ಯೇಕ ಕೊಠಡಿ ಮಂಜೂರಾತಿ ಕೋರಲಾಗಿದೆ. ಮುಂದಿನ ವರ್ಷಕ್ಕೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಭರವಸೆ ನೀಡಿದರು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ 'ನಮ್ಮ ಗ್ರಾಮ ನಮ್ಮ ರಸ್ತೆ' ಕಾಮಗಾರಿಯಲ್ಲಿ ತುಂಡಾದ ಪೈಪ್ಲೈನ್ ಮೇಲೆಯೇ ರಸ್ತೆ ಕಾಮಗಾರಿ ನಡೆಸಲಾಗಿದೆ ಎಂದು ಸದಸ್ಯ ಸದಸ್ಯ ಸಂತೋಷ್ ಬೋಳ್ಯಾರು ದೂರಿದರು. ಎಲ್ಲ ಕಡೆಗಳ ರಸ್ತೆ ಕಾಮಗಾರಿ ಸರಿಯಾಗಿ ನಡೆಸುವಂತೆ ಅಧ್ಯಕ್ಷ ಕೊರಗಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಸೋಲಾರ್ ದೀಪ ಸರಿಪಡಿಸಿದ್ದರೂ ಉರಿಯುತ್ತಿಲ್ಲ. ಇದನ್ನು ಮತ್ತೆ ಪರೀಕ್ಷಿಸುವ ಗೋಜಿಗೆ ಯಾರೂ ಮುಂದಾಗಿಲ್ಲ ಎಂದು ಸದಸ್ಯೆ ಚಂದ್ರಕಲಾ ಆರೋಪಿಸಿದರು. ಇದಕ್ಕೆ ಬೆಳ್ತಂಗಡಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸರಿಯಾಗಿ ಉತ್ತರಿಸಲಿಲ್ಲ. ಆಗ ಸಿಇಒ ಡಾ.ವಿಜಯ ಪ್ರಕಾಶ್ ಸರಿಯಾದ ಮಾಹಿತಿ ನೀಡುವಂತೆ ಅಧಿಕಾರಗಳನ್ನು ತರಾಟೆಗೆ ತೆಗೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

