ದಕ್ಷಿಣ ಕನ್ನಡ

ಯಕ್ಷಗಾನಕ್ಕೆ ಹೊಸತನ ಬೇಕು, ಸಿನಿಕತನವಲ್ಲ: ಪ್ರೊ. ಸಾಮಗ

Published On :

ಮಂಗಳೂರು: ಕರಾವಳಿ ಗಂಡುಕಲೆ ಯಕ್ಷಗಾನ ಉಳಿಯಬೇಕಾದರೆ ಪಂಡಿತರು ಸಿನಿಕತನ ಮಾತನಾಡದೆ ಹೊಸತನ ಸೃಷ್ಟಿಸಬೇಕು ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ಹೇಳಿದರು.
 ಶನಿವಾರ ಪುರಭವದಲ್ಲಿ ಕುರಿಯ ವಿಠಲ ಶಾಸ್ತ್ರಿ ಜನ್ಮಶತಮಾನೋತ್ಸವ ಪ್ರಯುಕ್ತ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ, ಮುಮ್ಮೇಳ ಅನುಸಂಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಕಲಾ ಪ್ರಪಂಚದಲ್ಲಿ ತಾನು ಮಾಡಿದ್ದೇ ಸರಿ ಎನ್ನುವ ಭಾವ ಸರಿ ಅಲ್ಲ. ವೃತ್ತಿಪರ ಕಲಾವಿದರೂ ತಮ್ಮ ಮೇಳಗಳಲ್ಲಿ ಹೊಸತನ ಸೃಷ್ಟಿಸುವ ಮನಸ್ಸು ಮಾಡಬೇಕು. ಪ್ರಾತ್ಯಕ್ಷಿಕೆಗಳು ಹೆಚ್ಚಾಗಬೇಕು. ಸಿನಿಕತನ ಮಾತುಗಳು ಯಕ್ಷಗಾನ ಬೆಳವಣಿಗೆಗೆ ಮಾರಕವಾಗಬಲ್ಲದು. ಕಲಾ ಕುಸುಮಗಳೇ ಕಮರಿ ಹೋಗುವ ಸಾಧ್ಯತೆ ಹೆಚ್ಚು. ಮುಂದಿನ ತಲೆಮಾರುಗಳಿಗೆ ಯಕ್ಷಗಾನ ಸೊಬಗನ್ನು ಪಸರಿಸಲು ಇನ್ನೂ ಹೆಚ್ಚಿನ ಪ್ರಾತ್ಯಕ್ಷಿಕೆಗಳು ನಡೆಬೇಕಿದೆ. ಕುರಿಯ ಶಾಸ್ತ್ರಿಗಳು ಯಕ್ಷಗಾನ ಪಾರಂಪರಿಕ ಸೌಂದರ್ಯಕ್ಕೆ ಭಂಗ ಉಂಟುಮಾಡದೆ ತಮ್ಮತನ ಸೃಷ್ಟಿಸಿದರು. ಕಲೆ ಕಲಿಕೆಗೆ ಅಂತ್ಯ ಎನ್ನುವುದಿಲ್ಲ. ಪ್ರಪಂಚದ ಬೆಳವಣಿಗೆ ಜತೆ ಸಿದ್ಧಾಂತ ಇಟ್ಟುಕೊಂಡೇ ನೆಲೆಕಂಡುಕೊಳ್ಳಬೇಕಾಗಿದೆ ಎಂದರು.  
 ಸಂಶೋಧಕ ಡಾ.ಕೆ. ರಾಘವ ನಂಬಿಯಾರ್ ಮಾತನಾಡಿ, ಯಕ್ಷಗಾನದಲ್ಲಿ ಈಗ ಕೆಲವೊಂದು ವಿಚಾರ ಇಲ್ಲದ ಪರಂಪರೆಗಳ ಅಂಶಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಬಿಡ್ತಿಗೆ, ತಾಳ, ಲಯ, ಮುಕ್ತಾಯ ಒಂದಕ್ಕೊಂದು ಹೊಂದಾಣಿಕೆ ಇರಬೇಕು. ಕಲೆಬೆರಕೆ ಅಂಶಗಳನ್ನು ಪ್ರದರ್ಶಿಸಿದರೆ ಪ್ರೇಕ್ಷಕರೇನೋ ಚಪ್ಪಾಳೆ ತಟ್ಟುತ್ತಾರೆ. ತೆಂಕು ಮತ್ತು ಬಡಗುತಿಟ್ಟನ್ನು ಪ್ರತ್ಯೇಕವಾಗಿ ಪ್ರದರ್ಶಿಸಿದರೆ ಉತ್ತಮ. ಹೆಚ್ಚಿನ ಕಲಬೆರಕೆಯಿಂದಾಗಿ ಆಸಕ್ತಿ ಕುಂಠಿತವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್, ಎಚ್.ಬಿ.ಎಲ್. ರಾವ್ ಇದ್ದರು. ಸೇರಾಜೆ ಸೀತಾರಾಮ ಭಟ್ ನಿರ್ವಹಿಸಿದರು. ಜಿ.ಕೆ.ಭಟ್ ಸೇರಾಜೆ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.