ದಕ್ಷಿಣ ಕನ್ನಡ

ಅಭ್ಯರ್ಥಿ ಆಯ್ಕೆ ಕಾಂಗ್ರೆಸ್, ಬಿಜೆಪಿಗೆ ಸಂಕಷ್ಟ

Published On :

ಮಂಗಳೂರು: ವಿಧಾನಸಭಾ ಚುನಾವಣೆಗೆ ಜಿಲ್ಲೆಯ ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳಗಳಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ಕಗ್ಗಂಟು ತಲೆದೋರಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಪಕ್ಷದ ಕಾರ್ಯಕರ್ತರಿಗೆ ಮಣೆ ಹಾಕಬೇಕೇ ಅಥವಾ ಹೊಸಬರನ್ನು ಆಯ್ಕೆ ಮಾಡಬೇಕೇ ಎಂಬ ಬಗ್ಗೆ ಗೊಂದಲ ಬಗೆಹರಿದಿಲ್ಲ.
 ಮೂಡುಬಿದಿರೆಯಲ್ಲಿ ಕಾಂಗ್ರೆಸ್‌ಗೆ ಅಭಯಚಂದ್ರ ಜೈನ್ ಮತ್ತೆ ಸ್ಪರ್ಧಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಹುಡುಕಾಟ ನಡೆಸುತ್ತಿದೆ. ಮಂಡಲ ಅಧ್ಯಕ್ಷ ಜಗದೀಶ್ ಅಧಿಕಾರಿ ಬೇರೆ ಪಕ್ಷದಿಂದ ಬಂದವರು. ಇಲ್ಲಿಗೆ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಟಿಕೆಟ್ ಆಕಾಂಕ್ಷಿ, ಈಗ ಸಂಸದ ನಳಿನ್ ಕುಮಾರ್ ಕಟೀಲ್ ಹೆಸರೂ ಕೇಳಿಬರುತ್ತಿದೆ.
ಪುತ್ತೂರಲ್ಲಿ ತಂತಿಯ ನಡಿಗೆ: ಪುತ್ತೂರಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಅಭ್ಯರ್ಥಿ ಆಯ್ಕೆ ತಂತಿಮೇಲಿನ ನಡಿಗೆ. ಈಚೆಗಷ್ಟೇ ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಗೆ ಟಿಕೆಟ್ ನೀಡಲು ಹೈಕಮಾಂಡ್ ಮಟ್ಟದಲ್ಲಿ ಒಲವು ವ್ಯಕ್ತಗೊಂಡಿದೆ. ಬ್ಲಾಕ್ ಅಧ್ಯಕ್ಷ ಹೇಮನಾಥ ಶೆಟ್ಟಿ ಕೂಡ ಸ್ಪರ್ಧೆಗೆ ಆಸಕ್ತಿ ತೋರಿಸಿದ್ದಾರೆ. ಇಲ್ಲಿ ಬಿಜೆಪಿಯಲ್ಲೂ ಶಾಸಕಿ ಮಲ್ಲಿಕಾ ಪ್ರಸಾದ್ ಮತ್ತೆ ಸ್ಪರ್ಧಿಸುವ ಇಚ್ಛೆಯಲ್ಲಿದ್ದಾರೆ. ಮಾಜಿ ಸಿಎಂ ಡೀವಿ ಸ್ಪರ್ಧಿಸುವುದಿದ್ದರೆ ಅವರಿಗೆ ಕ್ಷೇತ್ರ ಬಿಟ್ಟುಕೊಡುತ್ತೇನೆ ಎಂದಿರುವ ಮಲ್ಲಿಕಾ, ತಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಬಗ್ಗೆ ಎಲ್ಲಿಯೂ ಹೇಳಿಲ್ಲ. ಆದರೆ ಬಿಜೆಪಿ ಹಾಗೂ ಸಂಘ ಪರಿವಾರ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಶೈಲಜಾ ಭಟ್ ಅಥವಾ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರ ಸಂಬಂಧಿ ಡಾ.ಸುಧಾ ರಾವ್‌ರನ್ನು ಕಣಕ್ಕಿಳಿಸಲು ಉತ್ಸುಕವಾಗಿವೆ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರೂ, ಅವರ ಸಂಬಂಧಿ ಸಂಜೀವ ಮಠಂದೂರು ಅಥವಾ ಉದ್ಯಮಿ ಅಶೋಕ್ ರೈ ಹೆಸರೂ ಚಾಲ್ತಿಯಲ್ಲಿದೆ.
ಬೆಳ್ತಂಗಡಿಯಲ್ಲೂ ಕಗ್ಗಂಟು: ಬೆಳ್ತಂಗಡಿಯಲ್ಲಿ ಶಾಸಕ ವಸಂತ ಬಂಗೇರ ಅನಾರೋಗ್ಯ ಹೊರತೂ ಮತ್ತೆ ಸ್ಪರ್ಧಿಸುವ ಉತ್ಸಾಹದಲ್ಲಿದ್ದಾರೆ. ಅವರು ತಪ್ಪಿದಲ್ಲಿ ಇಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್‌ಗೆ ಟಿಕೆಟ್ ಖಾತ್ರಿ ಎನ್ನಲಾಗುತ್ತಿದೆ. ಬಿಜೆಪಿ ಮಾತ್ರ ಯಾರಿಗೆ ಟಿಕೆಟ್ ಸಿಕ್ಕಿದರೂ ಭಿನ್ನಮತ ತಪ್ಪುವುದು ಅಸಂಭವ. ಮಾಜಿ ಶಾಸಕ ಪ್ರಭಾಕರ ಬಂಗೇರ ಕಾರ್ಯಕರ್ತರ ಒಡನಾಟ ಹೊಂದಿಲ್ಲ ಎಂಬ ಕಾರಣಕ್ಕೆ ಈ ಬಾರಿ ಬಿಜೆಪಿಯಲ್ಲಿ ಅಭ್ಯರ್ಥಿ ಬದಲಾವಣೆ. ಜಿಲ್ಲಾ ಪ್ರಭಾರಿ ಪ್ರತಾಪಸಿಂಹ ನಾಯಕ್‌ರತ್ತ ಸಂಘಪರಿಹಾರ ದೃಷ್ಟಿ ನೆಟ್ಟಿದೆ. ಹಾಗೆಯೇ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡರ ಹೆಸರೂ ಇದೆ.
ಬಂಟ್ವಾಳದಲ್ಲಿ ಕಾಂಗ್ರೆಸ್‌ನಿಂದ ಹಾಲಿ ರಮಾನಾಥ ರೈ ಕಣಕ್ಕಿಳಿಯಲಿದ್ದು, ಬಿಜೆಪಿಯಿಂದ ಹೊಸಮುಖ ರಾಜೇಶ್ ನಾಯ್ಕರತ್ತ ಸಂಘಪರಿವಾರ ಕೈ ತೋರಿಸಿದೆ. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ತುಂಗಪ್ಪ ಬಂಗೇರ, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಕೂಡ ರೇಸ್‌ನಲ್ಲಿದ್ದಾರೆ.
 ಮಂಗಳೂರು ಕ್ಷೇತ್ರ (ಉಳ್ಳಾಲ)ದಲ್ಲಿ ಶಾಸಕ ಯು.ಟಿ.ಖಾದರ್ ಮತ್ತೆ ಅದೃಷ್ಟ ಪರೀಕ್ಷಿಸಲಿದ್ದು, ಬಿಜೆಪಿಯಿಂದ ಹಾಲಿ ಮಂಡಲ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್ ಕಣಕ್ಕಿಳಿಸಲು ಸಂಘಪರಿವಾರ ಚಿಂತಿಸುತ್ತಿದೆ.
ಇಲ್ಲಿ ಯಾರು ಸ್ಪರ್ಧಿಸಿದರೂ ಭಿನ್ನಮತ: ಮಂಗಳೂರು ದಕ್ಷಿಣದಲ್ಲಿ ಯೋಗೀಶ್ ಭಟ್ ಎದುರು ಬಿಜೆಪಿ ನಗರ ಅಧ್ಯಕ್ಷ ಶ್ರೀಕರ ಪ್ರಭು ಪ್ರಬಲ ಟಿಕೆಟ್ ಆಕಾಂಕ್ಷಿ. ಇವರು ಸಂಘಪರಿವಾರದ ಬಾಗಿಲು ತಟ್ಟುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಜೆ.ಆರ್.ಲೋಬೋ ಹಾಗೂ ಐವನ್ ಡಿಸೋಜ ಮಧ್ಯೆ ಸ್ಪರ್ಧೆ ಇದೆ.
ಮಂಗಳೂರು ಉತ್ತರದಲ್ಲಿ ಶಾಸಕ ಕೃಷ್ಣಪಾಲೇಮಾರ್ ಟಿಕೆಟ್ ನಿರೀಕ್ಷೆಯಲ್ಲಿದ್ದು, ಕಾಂಗ್ರೆಸ್‌ನಿಂದ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮೊಯ್ದಿನ್ ಬಾವ ಮತ್ತೆ ಟಿಕೆಟ್ ಪೈಪೋಟಿಗೆ ಇಳಿದಿದ್ದಾರೆ.
 ಸದ್ಯಕ್ಕೆ ಸಮಸ್ಯೆ ಇಲ್ಲದ ಕ್ಷೇತ್ರ ಸುಳ್ಯ. ಅಲ್ಲಿ ಬಿಜೆಪಿಯಿಂದ ಶಾಸಕ ಅಂಗಾರ, ಕಾಂಗ್ರೆಸ್‌ನಿಂದ ಡಾ.ರಘು ಕಣಕ್ಕಿಳಿಯಲಿದ್ದಾರೆ.

ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.