ಪುತ್ತೂರು: ರೋಗ ಭೀತಿ ಹರಡುತ್ತಿರುವ ತೋಡು
ಪುತ್ತೂರು: ಪುತ್ತೂರು ನಗರ ಭಾಗದಲ್ಲಿ ಹರಿಯುತ್ತಿರುವ ಕಿರು ತೋಡುವಿನಲ್ಲಿ ಕೊಳಚೆ ನೀರಿನೊಂದಿಗೆ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯಗಳು ತುಂಬಿದ್ದು, ಹಲವು ಸಾಂಕ್ರಾಮಿಕ ರೋಗಗಳನ್ನು ಪಸರಿಸುವ ಭೀತಿಯಲ್ಲಿದೆ.
ಪುತ್ತೂರು ನಗರದ ಮಧ್ಯೆ ಹರಿಯುತ್ತಿರುವ ಈ ತೋಡಿನಲ್ಲಿ ನಗರದ ಆಸ್ಪತ್ರೆ, ಮನೆ, ಹೊಟೇಲು ಹಾಗೂ ಇನ್ನಿತರ ಅಂಗಡಿಗಳ ವಿಸರ್ಜಿತ ನೀರು ಮತ್ತು ತ್ಯಾಜ್ಯ ಸೇರುತ್ತಿದೆ.
ತೋಡಿನುದ್ದಕ್ಕೂ ತ್ಯಾಜ್ಯಗಳು ತುಂಬಿದ್ದು ಕೆಲ ಕಡೆಗಳಲ್ಲಿ ಪೊದೆಗಳು ಬೆಳೆದು ನಿಂತಿವೆ. ಪರಿಣಾಮವಾಗಿ ನೀರ ಹರಿವಿಗೆ ತಡೆ ಉಂಟಾಗಿರುವ ಕಾರಣ ಈ ಭಾಗದಲ್ಲಿ ಕೊಳಚೆ ನೀರು ನಿಂತಿದ್ದು ದುರ್ನಾತ ಬೀರುತ್ತಿದೆ.
ಈಗಾಗಲೇ ಚಿಕೂನ್ ಗುನ್ಯಾ, ಡೆಂಘೀ, ಮಲೇರಿಯಾ, ಪೈಲೇರಿಯಾ ಇಂತಹ ಹಲವಾರು ಕಾಯಿಲೆಗಳಿಂದ ಬಳಲಿರುವ ಪುತ್ತೂರಿನ ಜನತೆ ಇದೀಗ ಈ ತೋಡು ಸೊಳ್ಳೆಗಳ ಉತ್ಪತ್ತಿಯ ಕೇಂದ್ರವಾಗಿ ಪರಿಣಮಿಸಿದ್ದು, ಇನ್ನಷ್ಟು ಕಾಯಿಲೆಗಳು ಪಸರಿಸುವ ಭೀತಿಯನ್ನು ಹುಟ್ಟಿಸಿದೆ.
ಆರೋಗ್ಯ ಇಲಾಖೆಯ ಮಾಹಿತಿಯಂತೆ ದ.ಕ. ಜಿಲ್ಲೆಯ ಹವಾಮಾನವು ಸೊಳ್ಳೆಗಳ ಉತ್ಪತ್ತಿಗೆ ಪೂರಕ ಎಂಬಂತಿದೆ. ಇಲ್ಲಿನ ತೇವಾಂಶ ಮತ್ತು ಉಷ್ಣಾಂಶ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಬೆಳವಣಿಗೆಗೆ ಅನುಕೂಲಕರವಾಗಿದೆ.
ಈ ಪ್ರದೇಶಗಳಲ್ಲಿ ಸಾವಿರಾರು ಜನ ದಿನನಿತ್ಯ ಓಡಾಟ ನಡೆಸುತ್ತಿದ್ದಾರೆ. ಅಲ್ಲದೆ ಹಲವು ಮನೆಗಳು ಅಂಗಡಿಗಳು ಇಲ್ಲಿವೆ. ತೋಡಿನಿಂದ ಬರುತ್ತಿರುವ ದುರ್ವಾಸನೆಯಿಂದಾಗಿ ಮನೆಯೊಳಗೆ ಕುಳಿತು ಊಟ ಮಾಡಲೂ ಸಾಧ್ಯವಾಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪ. ಅಲ್ಲದೆ ಪುತ್ತೂರಿನ ಐತಿಹಾಸಿಕ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿಯೇ ತೋಡು ಹರಿಯುತ್ತಿದ್ದು, ಇಲ್ಲಿಗೆ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಿದ್ದಾರೆ.
ಮುಂದಿನ ಕೆಲವೇ ದಿನಗಳಲ್ಲಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ, ಜಾತ್ರೋತ್ಸವಗಳು ನಡೆಯಲಿದ್ದು ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ. ಇದಕ್ಕೆ ಮುನ್ನ ತೋಡು ಸ್ವಚ್ಚಗೊಳ್ಳಬೇಕಾಗಿದೆ.
ನಗರದ ಸೌಂದರ್ಯವನ್ನು ಕೆಡಿಸುತ್ತಾ ಜನರಿಗೆ ರೋಗ ಭಯವನ್ನು ಒಡ್ಡುತ್ತಿರುವ ಈ ತೋಡನ್ನು ಸ್ವಚ್ಚಗೊಳಿಸಲು ಸಂಬಂಧಿಸಿದ ಇಲಾಖೆ ಮುಂದಾಗಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

