ದಕ್ಷಿಣ ಕನ್ನಡ

ಬಸ್ ಚಾಲಕನಿಗೆ ಹಲ್ಲೆ, ಚಿನ್ನಾಭರಣ ಲೂಟಿ

Published On :

ಉಪ್ಪಿನಂಗಡಿ: ಕಡಬ ಠಾಣಾ ವ್ಯಾಪ್ತಿಯ ಸವಣೂರಿನ ಪರಣೆ ಎಂಬಲ್ಲಿ ಸರ್ಕಾರಿ ಬಸ್ ಚಾಲಕ ತನ್ನ ಬೈಕ್‌ಗೆ ಸೈಡ್ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ತಂಡವೊಂದನ್ನು ಕಟ್ಟಿಕೊಂಡು ಹಲ್ಲೆ ನಡೆಸಿ, ಚಾಲಕನ ಕುತ್ತಿಗೆಯಲ್ಲಿದ್ದ ಚಿನ್ನಾಭರಣವನ್ನು ದೋಚಿದ ಘಟನೆ ಶುಕ್ರವಾರ ನಡೆದಿದೆ.
ಕೆಎಸ್‌ಆರ್‌ಟಿಸಿ ಬಸ್ ಪರಣೆ ಕಡೆ ಹೋಗುತ್ತಿದ್ದಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ಮೂಲತಃ ಬೆಳಂದೂರಿನ ಅಂಬ್ಲಾಜೆ ನಿವಾಸಿ ಅಶ್ರಫ್ ಎಂಬಾತ ತನ್ನ ಬೈಕಿಗೆ ಸೈಡ್ ಕೊಟ್ಟಿಲ್ಲ ಎಂದು ಕುಪಿತನಾಗಿ ತನ್ನ ಸಂಗಡಿಗರನ್ನು ಜೊತೆ ಸೇರಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆಸ್ಪತ್ರೆಗೆ ದಾಖಲಾಗಿರುವ ಬಸ್ ಚಾಲಕ ಪ್ರಶಾಂತ ಪೊಲೀಸರಿಗೆ ತಿಳಿಸಿದ್ದಾರೆ.
ರಿಕ್ಷಾ ಚಾಲಕರ ಮೇಲೂ ಹಲ್ಲೆ: ಅಶ್ರಫ್ ಹಾಗೂ ಇತರ ಹದಿನೈದು ಜನರ ತಂಡ ನನಗೆ ಹಲ್ಲೆ ನಡೆಸಿ ತಾನು ಗಾಯಾಳುವಾಗಿ ಬಿದ್ದಿದಾಗ ತನಗೆ ರಕ್ಷಣೆ ನೀಡಿ ತನ್ನನ್ನು ರಿಕ್ಷಾದಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಅಟೋ ಚಾಲಕ ಕೃಷ್ಣ ಪ್ರಸಾದ್ ಹಾಗೂ ಬಸ್ ಪ್ರಯಾಣಿಕ ಹೇಮನಾಥ ಅವರ ಮೇಲೂ ಈ ಗುಂಪು ತೀವ್ರತರಹದ ಹಲ್ಲೆ ನಡೆಸಿದೆ.
 ಮಾತ್ರವಲ್ಲದೆ ಹಲ್ಲೆ ನಡೆಸುವ ಸಂದರ್ಭದಲ್ಲಿ ತನ್ನ ಕುತ್ತಿಗೆಯಲ್ಲಿದ್ದ 3 ಪವನ್ ತೂಕದ ಚಿನ್ನದ ಸರವನ್ನು ಹಲ್ಲೆಕೋರರು ಕಿತ್ತೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ಹಲ್ಲೆ ನಡೆಸಿದ ಆರೋಪಿಯೂ ಪುತ್ತೂರಿನ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ, ಬಸ್ ಚಾಲಕ ನನಗೆ ಸೈಡ್ ಕೊಡದೆ ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾನೆ.
ಈ ಬಗ್ಗೆ ವಿಚಾರಿಸಲು ಹೋದ ನನಗೆ ಬಸ್ ಚಾಲಕ ಪ್ರಶಾಂತ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆಯಿಂದಾಗಿ ಪರಿಸರದಲ್ಲಿ ಕೋಮು ಉದ್ವಿಗ್ನತೆ ಮೂಡಿತ್ತಾದರೂ ಪೊಲೀಸರ ಸಕಾಲಿಕ ಮಧ್ಯ ಪ್ರವೇಶದಿಂದಾಗಿ ಪರಿಸ್ಥಿತಿ ನಿಯಂತ್ರಿಸಲ್ಪಟ್ಟಿತ್ತು. ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಸುರೇಶ್ ಕುಮಾರ್ ಮತ್ತು ಕಡಬ ಪೊಲೀಸರು ಭೇಟಿ ನೀಡಿದ್ದಾರೆ.
ಒಟ್ಟು ನಾಲ್ಕು ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾತ್ರವಲ್ಲ ಅಶ್ರಫ್ ಬಳಸಿರುವ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಖಂಡನೆ: ಘಟನೆಯನ್ನು ಸವಣೂರು ವಲಯ ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದೆ. ಹಿಂಜಾವೇ ಸಂಚಾಲಕ ಸುರೇಶ್ ರೈ ಸೂಡಿಮುಳ್ಳು ಹೇಳಿಕೆ ನೀಡಿ, ಸವಣೂರು ಪರಿಸರದಲ್ಲಿ ಅನಗತ್ಯವಾಗಿ ಗಲಭೆ ಸೃಷ್ಟಿಸಿ ಕೋಮು ದ್ವೇಷ ಹರಡುವ ಉದ್ದೇಶದಿಂದ ಬಸ್ ಚಾಲಕನಿಗೆ ಹಲ್ಲೆ ನಡೆಸಲಾಗಿದೆ.
 ಸವಣೂರು ಪರಿಸರದಲ್ಲಿ ಕೆಲವು ದುಷ್ಟ ಶಕ್ತಿಗಳು ಕಾರ್ಯಾಚರಿಸುತ್ತಿದ್ದು, ಹಿಂದೂಗಳ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇವತ್ತಿನ ಘಟನೆ ಇದಕ್ಕೆ ಹೊರತಾಗಿಲ್ಲ. ಘಟನೆ ನಡೆಯುವ ವೇಳೆ ನೂರಾರು ಜನ ಸೇರಿ ಮೂವರಿಗೆ ಹಲ್ಲೆ ನಡೆಸಿರುವುದು ಉದ್ದೇಶ ಪೂರ್ವಕ ಎನ್ನುವುದು ಸಾಬೀತಾಗಿದೆ.
 ಪೊಲೀಸರು ಸಮಗ್ರ ತನಿಖೆ ನಡೆಸಿ ಗಲಭೆ ಸೃಷ್ಟಿಸಲು ಹುನ್ನಾರ ನಡೆಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಿಬೇಕು ಎಂದು ಅಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.