ನೀತಿ ಸಂಹಿತೆ ಹೆಸರಲ್ಲಿ ರಸ್ತೆ ರಾಜಕೀಯ..
- ದುರ್ಗಾಕುಮಾರ್ ನಾಯರ್ಕೆರೆ
ಸುಳ್ಯ: ಸಂಚಾರಕ್ಕೆ ಸಂಚಕಾರ ತಂದೊಡ್ಡಿದ ಆಲೆಟ್ಟಿ- ಬಡ್ಡಡ್ಕ- ಪಾಣತ್ತೂರ್ ಅಂತರಾಜ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿ ಆರಂಭಗೊಂಡ ಎರಡು ದಿನದಲ್ಲೇ ಚುನಾವಣಾ ನೀತಿ ಸಂಹಿತೆ ಕಾರಣದಿಂದ ಸ್ಥಗಿತಗೊಂಡಿದ್ದು ಇದಕ್ಕೆ ಕಾಂಗ್ರೆಸ್ನ ಆಕ್ಷೇಪ ಕಾರಣ ಎಂದು ಜನರಿಂದ ತೀವ್ರ ಆಕ್ರೋಶ ಎದುರಿಸಬೇಕಾಗಿ ಬಂದಿದೆ.
ಸುಳ್ಯದಿಂದ ಆಲೆಟ್ಟಿ- ಬಡ್ಡಡ್ಕ- ಕಲ್ಲಪ್ಪಳ್ಳಿ - ಪಾಣತ್ತೂರು ಮೂಲಕ ಕೇರಳ ಸಂಪರ್ಕಿಸುವ ಈ ರಸ್ತೆ ಕರ್ನಾಟಕದ ಭಾಗದಲ್ಲಿ ತೀವ್ರ ದುಃಸ್ಥಿತಿಯಿಂದ ಕೂಡಿತ್ತು. 20 ವರ್ಷಗಳ ಹಿಂದೆ ಬಡ್ಡಡ್ಕದವರೆಗೆ ಡಾಂಬರೀಕರಣಗೊಂಡಿದ್ದ ತೀರಾ ಇಕ್ಕಟ್ಟಾದ ರಸ್ತೆಯನ್ನು ಉಳಿದ ಭಾಗದಲ್ಲಿ ಅಭಿವೃದ್ಧಿಪಡಿಸಬೇಕು ಎಂಬುದು ಈ ಭಾಗದ ನಾಗರಿಕರ ಬಹು ಕಾಲದ ಬೇಡಿಕೆಯಾಗಿತ್ತು.
ಚುನಾವಣೆ ಬಂದಾಗ ಭರವಸೆ ನೀಡುವ ಜನಪ್ರತಿನಿಧಿಗಳು ಬಳಿಕ ಇದನ್ನು ಮರೆಯುತ್ತಿದ್ದರು. ಹೀಗಾಗಿ ಈ ಭಾಗದ ರಸ್ತೆಯಲ್ಲಿ ಸಂಚಾರ ಪ್ರಯಾಸಕರವಾಗಿತ್ತು. ಕೇವಲ ಆಗಾಗ ತೇಪೆ ಹಾಕುವ ಮತ್ತು ಅದು ಮಳೆಗೆ ಎದ್ದು ಹೋಗುವ ಕಾರ್ಯ ಮಾತ್ರ ನಡಯುತ್ತಿತ್ತು. ಎರಡು ವಾರ ಹಿಂದೆ ಈ ಪ್ರದೇಶದಲ್ಲಿ ಮಳೆ ಬಂದಾಗ ರಸ್ತೆ ಕೆಸರುಮಯವಾಗಿ ಯಾವುದೇ ವಾಹನ ಸಂಚರಿಸದಂತೆ ಅಡ್ಡಿಯಾಗಿತ್ತು. ಇದು ಮಾಧ್ಯಮಗಳಲ್ಲಿ ಅಗಾಗ ವರದಿಯಾಗುತ್ತಿತ್ತು.
ಇದರಿಂದ ಒತ್ತಡಕ್ಕೆ ಸಿಲುಕಿದ ಆಡಳಿತ ಪಕ್ಷದವರು ತಡವಾಗಿ ಎಚ್ಚೆತ್ತುಕೊಂಡ ಪರಿಣಾಮ ಕಳೆದ ನವೆಂಬರ್ನಲ್ಲಿ ಮುಖ್ಯಮಂತ್ರಿ ವಿಶೇಷ ನಿಧಿಯಿಂದ ಈ ರಸ್ತೆ ಅಭಿವೃದ್ಧಿಗೆ ರು. 2 ಕೋಟಿ ಮತ್ತು ಸಂಸದರ ನಿಧಿಯಿಂದ ರಸ್ತೆ ಹೊಂಡ ಮುಚ್ಚಲು ರು. 20 ಲಕ್ಷ ಅನುದಾನ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಕುರಿತು ಟೆಂಡರ್ ಪ್ರಕ್ರಿಯೆ ನಡೆದಿದ್ದು, ಟೆಂಡರ್ ತೆರೆಯುವ ಮತ್ತು ಕೆಲಸದ ಆದೇಶ ನೀಡಲು ಬಾಕಿ ಇತ್ತು.
ಚುನಾವಣಾ ತರಾತುರಿ: ಚುನಾವಣೆ ದಿನ ಹತ್ತಿರ ಬರುತ್ತಿದ್ದಂತೆಯೇ, ಊರವರ ಒತ್ತಡಕ್ಕೆ ಮಣಿದ ಬಿಜೆಪಿ ನಾಯಕರು ಕೆಲಸ ಆರಂಭಿಸಲು ನಿರ್ಧರಿಸಿ ತರಾತುರಿಯಲ್ಲಿ ಶಾಸಕರಿಂದ ಗುದ್ದಲಿ ಪೂಜೆ ನಡೆಸಿದರು.
ಒಬ್ಬರೇ ಟೆಂಡರ್ ಹಾಕಿರುವುದನ್ನು ಅರಿತ ನಾಯಕರು, ಅವರನ್ನು ಸಂಪರ್ಕಿಸಿ ಕೆಲಸ ಆರಂಭಿಸಲು ಹೇಳಿದರು. ಅದರಂತೆ ಕಾಮಗಾರಿ ಆರಂಭಗೊಂಡಿತು. ಎರಡು ದಿನದಲ್ಲೇ ಚುನಾವಣೆ ಘೋಷಣೆಯಾಗಿ ತಕ್ಷಣದಿಂದ ನೀತಿ ಸಂಹಿತೆ ಜಾರಿಗೆ ಬಂತು.
ಚುನಾವಣೆ ವೇಳೆಯ ಈ ಕಾಮಗಾರಿಯಿಂದ ಬಿಜೆಪಿ ಲಾಭ ಪಡೆಯುತ್ತದೆ ಎಂದು ಭಾವಿಸಿದ ಕಾಂಗ್ರೆಸ್ ಅಖಾಡಕ್ಕಿಳಿಯಿತು. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮತ್ತು ಟೆಂಡರ್ ಆಗದೇ ಕಾಮಗಾರಿ ನಡೆಸುವುದು ಎಷ್ಟು ಸೂಕ್ತ ಎಂದು ದೂರಿತು. ಅಧಿಕಾರಿಗಳ ಸೂಚನೆ ಮೇರೆಗೆ ಕಾಮಗಾರಿ ಸ್ಥಗಿತಗೊಂಡಿತು.
ಕಾಂಗ್ರೆಸ್ ವಿರುದ್ಧ ಆಕ್ರೋಶ: ಇದಕ್ಕೆ ಕಾರಣವಾದ ಕಾಂಗ್ರೆಸ್ ವಿರುದ್ಧ ಈ ಭಾಗದ ಜನರಿಗೆ ತೀವ್ರ ಆಕ್ರೋಶ ಉಂಟಾಯಿತು. ರಸ್ತೆ ಸಂಚಾರಕ್ಕೆ ಸಾಧ್ಯವಿಲ್ಲದಂತ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಅಡ್ಡಿ ಪಡಿಸಿರುವುದರಿಂದ ಅಸಮಾಧಾನಗೊಂಡ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಇದನ್ನು ನಾಯಕರ ಗಮನಕ್ಕೂ ತಂದರು.
ಮತ್ತೊಂದೆಡೆ ಈ ರಸ್ತೆಯ ದುಃಸ್ಥಿತಿಯ ಕಾರಣದಿಂದ ಇಷ್ಟರವರೆಗೆ ಹಿಡಿಶಾಪ ಎದುರಿಸಬೇಕಾಗಿ ಬಂದ ಬಿಜೆಪಿ ಈ ಸಂದರ್ಭ ಸರಿಯಾಗಿಯೇ ಬಳಸಿಕೊಳ್ಳತೊಡಗಿದೆ. ಆರಂಭದಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಿದ ಅದು ನೀತಿ ಸಂಹಿತೆಯ ಕಾರಣದಿಂದ ಕೇವಲ ಪತ್ರಿಕಾಗೋಷ್ಠಿಯನ್ನಷ್ಟೇ ಮಾಡಿ, ಅಭಿವೃದ್ಧಿಗೆ ಅಡ್ಡಿ ಮಾಡಿದ ಕಾಂಗ್ರೆಸ್ನ ಈ ಕ್ರಮವನ್ನು ಕರಪತ್ರ ಮಾಡಿ ಹಂಚುವುದಾಗಿ ಹೇಳಿದೆ. ಹೀಗಾಗಿ ಇಷ್ಟರವರೆಗಿನ ತಮ್ಮ ವೈಫಲ್ಯವನ್ನು ಈ ಒಂದು ಕಾರಣದಿಂದ ಕಾಂಗ್ರೆಸ್ನೆಡೆಗೆ ತಿರುಗಿಸುವಲ್ಲಿ ಯಶಸ್ವಿಯೂ ಆಗಿದೆ.
ತಿರುಗೇಟು: ಬಿಜೆಪಿಯ ಈ ಕ್ರಮಕ್ಕೆ ತಿರುಗೇಟು ನೀಡಲು ಕಾಂಗ್ರೆಸ್ ಮುಂದಾಗಿದೆ. 20 ವರ್ಷದಿಂದ ಈ ರಸ್ತೆಯ ಅಭಿವೃದ್ಧಿ ಕುರಿತಂತೆ ಏನೂ ಮಾಡದ ಬಿಜೆಪಿ ಈಗ ಕಾಂಗ್ರೆಸ್ನ್ನು ದೂರುವುದು ಮತದಾರರಿಗೆ ಅರ್ಥವಾಗದ ವಿಷಯವೇನಲ್ಲ. ನಮ್ಮ ಆಕ್ಷೇಪವಿದ್ದದ್ದು ಶಿಷ್ಟಾಚಾರ ಪಾಲಿಸದಿದ್ದುಕ್ಕಾಗಿ ಮತ್ತು ಟೆಂಡರ್ ಹಾಕದೆ ಕಾಮಗಾರಿ ಆರಂಭಿಸಿದುದಕ್ಕಾಗಿ ಹೊರತು ಕಾಮಗಾರಿಗೆ ಅಡ್ಡಿ ಪಡಿಸಿಲ್ಲ ಎಂದು ಹೇಳಿರುವ ಕಾಂಗ್ರೆಸ್ ಈ ಕುರಿತಂತೆ ಭಾನುವಾರ ಪ್ರತಿಭಟನೆ ನಡೆಸಿದೆಯಲ್ಲದೆ, ಅಪಪ್ರಚಾರ ಮಾಡುತ್ತಿರುವ ಬಿಜೆಪಿ ನಾಯಕರನ್ನು ಸತ್ಯ ಪ್ರಮಾಣಕ್ಕೆ ಆಹ್ವಾನಿಸಿದೆ.
ಒಟ್ಟಿನಲ್ಲಿ ಇದುವರೆಗಿನ ವೈಫಲ್ಯ ಮುಚ್ಚಿಕೊಳ್ಳಲು ಮತ್ತು ಊರವರ ಕೆಂಗಣ್ಣು ತಪ್ಪಿಸಿಕೊಳ್ಳುವುದಕ್ಕೆ ಬಿಜೆಪಿಗೆ ಹೊಸ ಅಸ್ತ್ರ ದೊರೆತಿದೆ. ಕೋಲು ಕೊಟ್ಟು ಪೆಟ್ಟು ತಿಂದ ಸ್ಥಿತಿ ಕಾಂಗ್ರೆಸ್ನದ್ದಾಗಿದೆ. ಸ್ಥಳೀಯರಿಗಂತೂ ಪ್ರಯಾಸದ ಪ್ರಯಾಣವೇ ಗತಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

