ಮೂಡುಬಿದಿರೆಗೆ ಚರಂಡಿ, ನೀರು ಸಮಸ್ಯೆ
ಮೂಲ್ಕಿ: ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಮೂಡುಬಿದಿರೆ ತಾಲೂಕಾಗಿ ಘೋಷಣೆಯಾಗಿದ್ದು, ಜೊತೆಗೆ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಸಮಸ್ಯೆಗಳು, ನೂತನ ಪ್ರತಿನಿಧಿಗಳಿಂದ ಜನರ ನಿರೀಕ್ಷೆಗಳೂ ಬೆಳೆಯುತ್ತಿವೆ.
ಮೂಡುಬಿದಿರೆಯಲ್ಲಿ ದಿನದಿಂದ ದಿನಕ್ಕೆ ಬಹು ಮಹಡಿ ಕಟ್ಟಡಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಬೃಹತ್ ಶಿಕ್ಷಣ ಸಂಸ್ಥೆಗಳು ದೇಶ ವಿದೇಶಗಳ ವಿದ್ಯಾರ್ಥಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ.
ಇಂತಹ ಪ್ರದೇಶದಲ್ಲಿ ಒಳಚರಂಡಿ ಸಹಿತ ಹಲವು ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ಕುಡಿಯುವ ನೀರಿನ ಸಮಸ್ಯೆ, ಸುಸಜ್ಜಿತ ಮಾರುಕಟ್ಟೆ, ಪಾರ್ಕಿಂಗ್ ಸಮಸ್ಯೆ, ಬೈಪಾಸ್ ರಸ್ತೆ, ರಿಂಗ್ ರೋಡ್ ವ್ಯವಸ್ಥೆ ಮೂಡುಬಿದಿರೆಯ ನೂತನ ಆಡಳಿತ ಮಂಡಳಿಯ ಮುಂದಿರುವ ಸವಾಲುಗಳಾಗಿದೆ.
ತ್ಯಾಜ್ಯ ನೀರು ವಿಲೇ'ವರಿ': ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು 27,000 ಜನಸಂಖ್ಯೆ ಹೊಂದಿದೆ. ಹೆಚ್ಚುತ್ತಿರುವ ಬಹು ಮಹಡಿ ಕಟ್ಟಡಗಳು ಹಾಗೂ ಬೃಹತ್ ಶಿಕ್ಷಣ ಸಂಸ್ಥೆಗಳ ವಸತಿ ನಿಲಯಗಳ ತ್ಯಾಜ್ಯ ನೀರು ಈಗ ಸಿಕ್ಕ ಸಿಕ್ಕಲ್ಲಿ ಹರಿಯುತ್ತಿದ್ದು ಸುಸಜ್ಜಿತವಾದ ಒಳಚರಂಡಿ ವ್ಯವಸ್ಥೆ ಅಗತ್ಯವಿದೆ.
ಈ ಬಗ್ಗೆ ಈಗಾಗಲೇ ರು. 60 ಕೋಟಿ ಯೋಜನೆಯ ಪ್ರಸ್ತಾವನೆಯಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಅನುಮೋದನೆಗಾಗಿ ಕಾಯುತ್ತಿದೆ. ನೂತನ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಯೋಜನೆ ಮಂಜೂರಾಗಲು ಜನಪ್ರತಿನಿಧಿಗಳು ಹೆಚ್ಚಿನ ಒತ್ತಡ ತರಬೇಕಾಗಿದೆ.
ನೀರಿಗೆ ಸಮಸ್ಯೆ: ಮೂಡುಬಿದಿರೆ ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ಈಗ ಪುಚ್ಚಮೊಗರು ಅಣೆಕಟ್ಟೆ ಮೂಲಕ ನೀರು ಸರಬರಾಜು ಆಗುತ್ತಿದೆ. ಅಣೆಕಟ್ಟಿನ ಎತ್ತರ ಹೆಚ್ಚಿಸಿದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯ.
ಆದರೆ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಸ್ಥಳೀಯರ ವಿರೋಧವಿದ್ದು ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿಯಬೇಕಾಗಿದೆ.
ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುವ ಯೋಜನೆ ಉತ್ತಮ ರೀತಿಯಲ್ಲಿ ನಿರ್ವಹಣೆಯಾಗುತ್ತಿದ್ದು ತಾತ್ಕಾಲಿಕವಾಗಿ ಮೂಡುಬುದಿರೆ ಸೋನ್ಸ್ ಫಾರ್ಮ್‌ನಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಡೆಯುತ್ತಿದೆ. ಕಸ ವಿಂಗಡಿಸಿ ಕೆಲವನ್ನು ಮರುಬಳಕೆಗೆ ಉಪಯೋಗಿಸಲಾಗುತ್ತಿದ್ದು ಕರಿಂಜೆಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಆರಂಭವಾಗಲಿದ್ದು ಬಳಿಕ ಘನತ್ಯಾಜ್ಯ ನಿರ್ವಹಣೆಯ ಸಮಸ್ಯೆ ನಿವಾರಣೆಯಾಗಲು ಸಾಧ್ಯವಿದೆ.
ವಾಹನ ದಟ್ಟಣೆ ಸಮಸ್ಯೆ: ಮೂಡುಬಿದಿರೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು ಮೂಡುಬಿದಿರೆಯ ಬಡಗ ಬಸದಿ ರಸ್ತೆಯಿಂದ ಮುಖ್ಯ ರಸ್ತೆಯವರೆಗೆ ಪ್ರತಿದಿನ ಟ್ರಾಫಿಕ್ ಸಮಸ್ಯೆಯಿಂದ ವಾಹನ ಸವಾರರಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ.
ಬೈಪಾಸ್ ರಸ್ತೆ ಅಥವಾ ರಿಂಗ್ ರೋಡ್ ಅಗತ್ಯವಿದ್ದು ಈ ಬಗ್ಗೆ ಕೂಡ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸರ್ಕಾರದಿಂದ ಅನಮೋದನೆಗಾಗಿ ಕಾಯುತ್ತಿದೆ.
ಪಾರ್ಕಿಂಗ್ ಸಮಸ್ಯೆಯಿದ್ದು ಪಾರ್ಕಿಂಗ್ ವ್ಯವಸ್ಥೆಯ ಅಗತ್ಯವಿದ್ದು ಮೂಡುಬಿದಿರೆಯಲ್ಲಿ ಶಂಕುಸ್ಥಾಪನೆಗೊಂಡ ರು. 10 ಕೋಟಿ ವೆಚ್ಚದ ಮಾರುಕಟ್ಟೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಕಾಮಗಾರಿಗೆ ಈಗ ಸುಮಾರು ರು. 20 ಕೋಟಿ ಅಗತ್ಯವಿದ್ದು ಕೆಳ ಅಂತಸ್ತಿನಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಿದಲ್ಲಿ ಹಾಗೂ ಮೇಲ್ಗಡೆ ತರಕಾರಿ ಹಾಗೂ ಮೀನು ಮಾರುಕಟ್ಟೆ ರಚಿಸಿದಲ್ಲಿ ಸಮಸ್ಯೆ ಬಗೆಹರಿಯುವ ಸಾಧ್ಯತೆಯಿದೆ.
ಮೂಡುಬಿದಿರೆ ಪರಿಸರ ಜನರ ಸಹಕಾರದಿಂದ ಪ್ಲಾಸ್ತಿಕ್ ಮುಕ್ತವಾಗುವಲ್ಲಿ ಯಶಸ್ಸು ಕಾಣುತ್ತಿದ್ದ ಜಿಲ್ಲಾಡಳಿತದ ಮೆಚ್ಚುಗೆ ಪಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

