ದಕ್ಷಿಣ ಕನ್ನಡ

ಬಹಿಷ್ಕಾರವೆಂಬ ಸುಳ್ಳು ಬೆದರಿಕೆ

Published On :

ಉಡುಪಿ: ಗ್ರಾಮದ ಸ್ಥಳೀಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಗ್ರಾಮಸ್ಥರು ಬೆದರಿಕೆ ಹಾಕುವುದು ನಮ್ಮ ರಾಜ್ಯದಲ್ಲಿ ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ನಡೆಯುತ್ತಿರುತ್ತದೆ. ಆದರೆ ಈ ರೀತಿ ಸುಳ್ಳು ಬೆದರಿಕೆಯೊಡ್ಡುವ ಚಾಳಿ ಉಡುಪಿ ಜಿಲ್ಲೆಯಲ್ಲಿ ಉಳಿದ ಜಿಲ್ಲೆಗಳಿಗಿಂತ ಸ್ವಲ್ಪ ಹೆಚ್ಚೇ ಇದೆ. ಹಾಗಂತ ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಗ್ರಾಮದ ಜನರು ಚುನಾವಣೆಗಳನ್ನು ಬಹಿಷ್ಕರಿಸಿದ್ದಿಲ್ಲ.
ಈ ಸುಳ್ಳು ಬಹಿಷ್ಕಾರದ ಚಾಳಿ ಯಾವಾಗಿಂದ ಶುರು ಆಯಿತು ಎನ್ನುವುದು ನಿಖರವಾಗಿ ಹೇಳುವುದಕ್ಕಾಗುವುದಿಲ್ಲವಾದರೂ ಕಳೆದ 2 ದಶಕಗಳಿಂದ ಪ್ರತಿಯೊಂದು ಚುನಾವಣೆಯಲ್ಲಿಯೂ ಈ ಬಹಿಷ್ಕಾರದ ಬೆದರಿಕೆಗಳು ಕೇಳಿ ಬರುತ್ತಲೇ ಇವೆ. ಕಳೆದ 2008ರ ವಿಧಾನಸಭಾ ಚುನಾವಣೆಯಲ್ಲಂತೂ ಉಡುಪಿ ಜಿಲ್ಲೆಯ ಸುಮಾರು 6 ಗ್ರಾಮಗಳ ಜನರು ತ್ಯಾಜ್ಯ ಘಟಕ, ಉಷ್ಣವಿದ್ಯುತ್ ಸ್ಥಾವರ, ರಸ್ತೆ ಮುಂತಾದ ತಮ್ಮ ಗ್ರಾಮದ ಸಮಸ್ಯೆಗಳನ್ನು ಕಾರಣವಾಗಿಟ್ಟುಕೊಂಡು ಚುನಾವಣೆ ಬಹಿಷ್ಕರಿಸುವುದಾಗಿ ಘೋಷಿಸಿದ್ದರು. ಆದರೆ ಚುನಾವಣೆಯ ದಿನ ಮಾತ್ರ ಈ ಗ್ರಾಮಸ್ಥರು ತಪ್ಪದೇ ಹೋಗಿ ಮತದಾನ ಮಾಡಿ ಬಂದಿದ್ದಾರೆ. ಹಾಗಂತ ಅವರ ಊರಿನ ಸಮಸ್ಯೆಯಾದರೂ ಪರಿಹಾರವಾಗಿದೆಯೇ ಅದೂ ಇಲ್ಲ.
 ಕಾಪು ವಿಧಾನಸಭಾ ಕ್ಷೇತ್ರದ ಪಡುಬಿದ್ರಿ, ನಡ್ಸಾಲು ಗ್ರಾಮದ ಜನರು ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧ ಚುನಾವಣ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಆದರೆ 5 ವರ್ಷಗಳ ನಂತರವೂ ಈ ಸ್ಥಾವರ ಕಾರ್ಯನಿರ್ವಹಿಸುತ್ತಿದೆ. ಉಡುಪಿ ಕ್ಷೇತ್ರದ ಪ್ರಗತಿನಗರದ ಜನರು ನಗರಸಭೆಯ ತ್ಯಾಜ್ಯವನ್ನು ತಂದು ಸುರಿಯುವುದನ್ನು ವಿರೋಧಿಸಿ ಮತದಾನ ಬಹಿಷ್ಕರಿಸುವುದಾಗಿ ಹೇಳಿದ್ದರು. ಆದರೆ ಇಂದಿಗೂ ತ್ಯಾಜ್ಯವನ್ನು ಅಲ್ಲಿಯೇ ತೆಗೆದುಕೊಂಡು ಹೋಗಿ ಸುರಿಯಲಾಗುತ್ತಿದೆ.
 ಚುನಾವಣೆ ಬಹಿಷ್ಕರಿಸುವುದಾಗಿ ಘೋಷಿಸಿದ ಕೂಡಲೇ ಆಯಾ ಕ್ಷೇತ್ರದ ಅಭ್ಯರ್ಥಿಗಳು ಓಡಿ ಹೋಗಿ ತಾವು ಗೆದ್ದು ಬಂದರೆ ಆ ಸಮಸ್ಯೆಯನ್ನು ಬಗೆಹರಿಸುವುದಾಗಿ ಗ್ರಾಮಸ್ಥರನ್ನು ಮರಳು ಮಾಡುತ್ತಾರೆ, ಗ್ರಾಮಸ್ಥರು ನಂಬುತ್ತಾರೆ, ಮತದಾನ ಮಾಡುತ್ತಾರೆ ಮತ್ತೆ ಮೂರ್ಖರಾಗುತ್ತಾರೆ. ಈ ಬಾರಿಯೂ ಈಗಾಗಲೇ ಉಡುಪಿ ವಿಧಾನಸಭಾ ಕ್ಷೇತ್ರದ ಕೆಮ್ಮಣ್ಣು ಗ್ರಾಪಂನ ಪಡುಕುದ್ರು ಗ್ರಾಮದ ಜನರು ಸಂಪರ್ಕ ರಸ್ತೆ ಇಲ್ಲ ಎಂದು ಮತದಾನ ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ಚುನಾವಣೆಗೆ ಇನ್ನೂ ತಿಂಗಳಿದೆ, ಇನ್ನೆಷ್ಟು ಕಡೆಗಳಲ್ಲಿ ಮತದಾನ ಬಹಷ್ಕಾರದ ಬ್ಯಾನರುಗಳು ಕಂಡು ಬರುತ್ತವೆಯೇ ಗೊತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.