ರೌಡಿಗಳಿಗೆ ಮುಚ್ಚಳಿಕೆ ಬರೆಯುವ ಸಮಯ..
ಜಿತೇಂದ್ರ ಕುಂದೇಶ್ವರ
ಮಂಗಳೂರು: ಚುನಾವಣೆ ಬಂತೆಂದರೆ ರಾಜಕಾರಣಿಗಳು, ಅಧಿಕಾರಿಗಳು, ವೀಡಿಯೋಗ್ರಾಫರ್ಗಳು, ಕಾರ್ಮಿಕರು ಬ್ಯುಸಿಯಾಗುತ್ತಾರೆ ಇದೇ ರೀತಿ ಕ್ರಿಯಾಶೀಲ ರೌಡಿಗಳು ಮುಚ್ಚಳಿಕೆ ಬರೆಯುವುದರಲ್ಲಿ ಬ್ಯುಸಿ ಆಗುತ್ತಿದ್ದಾರೆ!
ರೌಡಿಗಳನ್ನು ಹದ್ದುಬಸ್ತಿನಲ್ಲಿಡಲು ಎಲ್ಲ ಪೊಲೀಸ್ ಠಾಣೆಗಳಲ್ಲಿ ರೌಡಿಗಳಿಗೆ ಕ್ರಿಮಿನಲ್ ಪ್ರೊಸೀಜರ್ ಕೋಡ್ನಂತೆ 110ನೇ ಸೆಕ್ಷನ್ ಅಡಿ ಪ್ರಕರಣ ದಾಖಲಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 50 ಪ್ರಕರಣ ದಾಖಲಾಗಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಾದ ತಕ್ಷಣ ಮುಚ್ಚಳಿಕೆ ಪ್ರಕ್ರಿಯೆ ಶುರುವಾಗುತ್ತದೆ. ವಿಜಯೋತ್ಸವ ಮುಗಿಯುವವರೆಗೆ ಮುಂದುವರಿಯುತ್ತದೆ. ಆದರೆ ಇದು ಎಫ್ಐಆರ್ ಮಾದರಿಯಲ್ಲ. ಈ ಕೇಸ್ ವಿರುದ್ಧ ತನಿಖೆ ಮಾಡುವ ಅಧಿಕಾರ ಪೊಲೀಸ್ ಠಾಣಾಧಿಕಾರಿಗಳಿಗೆ ಇಲ್ಲ. ಈ ಪ್ರಕರಣ ತನಿಖೆ ಮಾಡುವುದು ಉಪವಿಭಾಗಾಧಿಕಾರಿ, ತಹಸೀಲ್ದಾರ್.
ನಿರಾತಂಕ ಚುನಾವಣೆ ನಡೆಯಬೇಕಾದರೆ ರೌಡಿಗಳನ್ನು ಮಟ್ಟ ಹಾಕುವುದು ಅನಿವಾರ್ಯ. ಪದೇ ಪದೇ ಶಾಂತಿ ಭಂಗ ಮಾಡುವ ರೌಡಿಗಳನ್ನು ಠಾಣೆಗೆ ಕರೆಸಿ ಅವರ ವಿರುದ್ಧ ಶಾಂತಿ ಭಂಗ ಪ್ರಕರಣ ದಾಖಲಿಸುತ್ತಾರೆ.
ರೌಡಿಗಳನ್ನು ಉಪವಿಭಾಗಾಧಿಕಾರಿಗಳ ಮುಂದೆ ಪೊಲೀಸರು ಹಾಜರುಪಡಿಸುತ್ತಾರೆ. ರೌಡಿಗಳ ವಿರುದ್ಧ ಎಷ್ಟು ಪ್ರಕರಣ ಇದೆ ಎಂಬ ವಿವರ ಪೊಲೀಸರು ದಂಡಾಧಿಕಾರಿಗೆ ನೀಡಬೇಕು. ಪುನಃ ಶಾಂತಿ ಭಂಗ ಉಂಟು ಮಾಡುವುದಿಲ್ಲ ಎಂದು ಉಪವಿಭಾಗಾಧಿಕಾರಿ ಮುಂದೆ ರೌಡಿಗಳು ಬಾಂಡ್ ಪೇಪರ್ನಲ್ಲಿ ಮುಚ್ಚಳಿಕೆ ಬರೆದುಕೊಡುತ್ತಾರೆ. ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಕನಿಷ್ಠ 2ರಿಂದ 3 ಮಂದಿ ಮುಚ್ಚಳಿಕೆ ಬರೆಯುತ್ತಾರೆ. ರೌಡಿಗಳ ಸಂಖ್ಯೆ ಹೆಚ್ಚಿದ್ದರೆ ಮುಚ್ಚಳಿಕೆ ಬರೆಯುವವರೂ ಹೆಚ್ಚುತ್ತಾರೆ. ಇದಾದ ಮೇಲೂ ಅಪರಾಧ ಮಾಡಿದರೆ ಕೋರ್ಟ್ನಲ್ಲಿ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತದೆ.
'ತೀರಾ ಗಲಾಟೆ ಮಾಡುವ ಸಂದರ್ಭ ಬಂದರೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 151ರಡಿ ಪ್ರಕರಣ ದಾಖಲಿಸಿ ಮುಂಜಾಗ್ರತೆ ಕ್ರಮವಾಗಿ ಒಂದು ದಿನ ಪೊಲೀಸ್ ಠಾಣೆಯಲ್ಲಿ ಬಂಧಿಸಿಡಬಹುದು' ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
'ಅಪರಾಧ ಕ್ರಿಯಾ ಸಂಹಿತೆಯಲ್ಲಿ ಪೊಲೀಸರು ಕೈಗೊಳ್ಳಬಹುದಾದ ಮುಂಜಾಗ್ರತೆ ಕ್ರಮ ವಿವರಿಸಲಾಗಿದೆ. ಅಪರಾಧ ತಡೆ ಹಿಡಿಯಲು ರೌಡಿಗಳನ್ನು ಬಂಧಿಸಬಹುದು, ಸಾರ್ವಜನಿಕ ಆಸ್ತಿ ಹಾನಿ ಮಾಡುವುದನ್ನು ತಡೆಯಲು ಪೊಲೀಸರು ಬಂಧನ ಕ್ರಮ ತೆಗೆದುಕೊಳ್ಳಬಹುದು. ಆದ್ದರಿಂದ ಚುನಾವಣೆ ಸಂದರ್ಭ ರೌಡಿ, ಹವ್ಯಾಸಿ ಅಪರಾಧಿಗಳನ್ನು ಬಂಧಿಸುವ ಅವಕಾಶ ಇದೆ.
ಮತದಾನ ಸಂದರ್ಭ ಚುನಾವಣೆ ಆಯೋಗಕ್ಕೆ ಸಂಪೂರ್ಣ ಅಧಿಕಾರವಿದೆ. ಅಗತ್ಯ ಬಿದ್ದರೆ ಯಾರನ್ನೂ ಬಂಧಿಸುವ ವಿಶೇಷಾಧಿಕಾರವಿದೆ' ಎನ್ನುತ್ತಾರೆ ನ್ಯಾಯವಾದಿ ಪವನ್ಚಂದ್ರ ಶೆಟ್ಟಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

