ದಕ್ಷಿಣ ಕನ್ನಡ

ಚೀನಾ ಆಕ್ರಮಣ; ಕೇಂದ್ರ ಮಧ್ಯಪ್ರವೇಶಿಸಲಿ

Published On :

ಕ.ಪ್ರ. ವಾರ್ತೆ  ಮಂಗಳೂರು  ಮೇ 1
ಭಾರತದ ಭೂಪ್ರದೇಶವನ್ನು ಚೀನಾ ಆಕ್ರಮಿಸಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಬೇಕು ಎಂದು ಸಿಪಿಎಂ ಪಾಲಿಟ್‌ಬ್ಯುರೋ ಸದಸ್ಯೆ ಬೃಂದಾ ಕಾರಟ್ ಆಗ್ರಹಿಸಿದ್ದಾರೆ.
 ಬುಧವಾರ ಮಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ 19 ಕಿ.ಮೀ. ಗಡಿ ಭಾಗವನ್ನು ಚೀನಾ ಆಕ್ರಮಿಸಿದೆ. ಆದರೂ ಭಾರತ ಚೀನಾಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಎರಡೂ ದೇಶಗಳು ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂದು ಹೇಳಿದರು.   ಕಲ್ಲಿದ್ದಲು ಹಗರಣದಲ್ಲಿ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ವರದಿ ಸೋರಿಕೆ ಹಿನ್ನಲೆಯಲ್ಲಿ ಸಮಿತಿ ಅಧ್ಯಕ್ಷ ಸಿ.ಸಿ. ಚಾಕೊ ಹಾಗೂ ಕಾನೂನು ಸಚಿವ ಅಶ್ವನಿ ಕುಮಾರ್ ರಾಜಿನಾಮೆ ನೀಡಬೇಕಿತ್ತು. ಆದರೆ ಕೇಂದ್ರ ಸರ್ಕಾರ ಅಂತಿಮ ತೀರ್ಪು ಹೊರಬೀಳುವವರೆಗೆ ಕಾಯುವ ಪರಿಸ್ಥಿತಿ ತಂದೊಡ್ಡಿದೆ. ತಪ್ಪಿತಸ್ಥರ ವಿಚಾರದಲ್ಲಿ ಕೇಂದ್ರ ಮೌನ ವಹಿಸಿರುವುದು ಏಕೆ? ಎಂದು ಪ್ರಶ್ನಿಸಿದರು.
ಕೇಂದ್ರ ಕುಂಟು ನೆಪ: ಸಿಬಿಐ ಸಂಸ್ಥೆಗೆ ಸ್ವಾಯತ್ತತೆ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ಆಶಯವನ್ನು ಸ್ವಾಗತಿಸಿದ ಅವರು, ಲೋಕಪಾಲ್ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರೂ ರಾಜ್ಯಸಭೆಯಲ್ಲಿ ಅಂಗೀಕಾರಕ್ಕೆ ಕುಂಟುನೆಪ ಒಡ್ಡಲಾಗುತ್ತಿದೆ. ನಾನಾ ಹಗರಣಗಳಲ್ಲಿ ಕೇಂದ್ರ ಸಚಿವರು ಸಿಲುಕಿ ಸಿಬಿಐ ತನಿಖೆ ಎದುರಿಸುತ್ತಿರುವುದರಿಂದ ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದರು.
 ಜೆಪಿಸಿ ವರದಿ ವಿಚಾರದಲ್ಲಿ ಸುಷ್ಮಾ ಸ್ವರಾಜ್ ಚಾಕೋ ರಾಜಿನಾಮೆ ಕೇಳಿರುವುದು ವೈಯಕ್ತಿಕ ರಾಜಕೀಯ ಲಾಭಕ್ಕಾಗಿ. ದೇಶದಲ್ಲಿ ಆಹಾರ ಭದ್ರತೆ, ಅರಣ್ಯವಾಸಿಗಳ ಬವಣೆ ಬಗ್ಗೆ ಮಾತೆತ್ತದ ಸುಷ್ಮಾ ಕೇವಲ ರಾಜಕೀಯ ಲಾಭದ ವಿಚಾರವಿದ್ದರೆ ಮಾತ್ರ ಮಾತನಾಡುತ್ತಾರೆ. ಕರ್ನಾಟಕದಲ್ಲಿ ಬಳ್ಳಾರಿ ಗಣಿ ರಾಜಕಾರಣದ ಹಣಕಾಸು ಲಾಭ ಕಂಡುಕೊಂಡಿದ್ದಾರೆ ಎಂದು ಆರೋಪಿಸಿದರು.
ರಿಯಲ್ ಎಸ್ಟೇಟ್ ಪಾಲಿಟಿಕ್ಸ್: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ರಿಯಲ್ ಎಸ್ಟೇಟ್ ಪಾಲಿಟಿಕ್ಸ್ ಮಾಡುತ್ತಿವೆ ಎಂದು ಆರೋಪಿಸಿದ ಬೃಂದಾ ಕಾರಟ್, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕೋಮುವಾದ ರಾಜಕೀಯ ಮಾಡುತ್ತಿವೆ. ಜನತೆಗೆ ಮೂಲಸೌಕರ್ಯ ನೀಡಬೇಕು ಎಂಬ ವಿಚಾರವನ್ನೇ ಮರೆತಿವೆ. ನಾಡಿನ ಜ್ವಲಂತ ಸಮಸ್ಯೆಯಾದ ಎಪಿಲ್-ಬಿಪಿಎಲ್ ಸಮಸ್ಯೆ, ಹಣದುಬ್ಬರ, ಅಸಂಘಟಿತ ಕಾರ್ಮಿಕರ ಏಳಿಗೆ ಹಿತಾಸಕ್ತಿಯನ್ನು ಮರೆಮಾಚಿವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.