ಮತದಾರರ ಜಾಗೃತಿ ಜತೆ ಹಕ್ಕೊತ್ತಾಯ
ಮಂಗಳೂರು: ಯಾವುದೇ ಚುನಾವಣೆ ಬರಲಿ ಇವುಗಳು ಸ್ಪರ್ಧಿಸುವುದಿಲ್ಲ, ಹಾಗೆಂದು ಪ್ರತ್ಯೇಕ ಅಜೆಂಡಾ ಹೊಂದಿ ಜನರ ಬಳಿಗೆ ತೆರಳುತ್ತವೆ. ರಾಜಕೀಯ ಪಕ್ಷಗಳು ಭರವಸೆಯ ಅಜೆಂಡಾ ನೀಡಿದರೆ ಇವರು ಬದಲಾವಣೆಯ ಅಜೆಂಡಾ ನೀಡುತ್ತಿವೆ. ಇದುವೇ ಸರ್ಕಾರೇತರ ಸಂಸ್ಥೆಗಳ ಚುನಾವಣಾ ಕರಾಮತ್ತು.
ಜ್ವಲಂತ ಸಮಸ್ಯೆಯ ಹಕ್ಕೊತ್ತಾಯ: ಬೆಳ್ತಂಗಡಿ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ 1996ರಿಂದ ಎಲ್ಲ ಚುನಾವಣೆಯಲ್ಲೂ ನಾಡಿನ ಜ್ವಲಂತ ಸಮಸ್ಯೆಯನ್ನು ಮುಂದಿಟ್ಟು ಕರಪತ್ರಗಳನ್ನು ಹಂಚುತ್ತಿದೆ. ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಆಯಾ ಸಮಸ್ಯೆಗಳನ್ನು ರಾಜಕೀಯ ಪಕ್ಷಗಳ ಜತೆ ಮುಖಾಮುಖಿ ನಡೆಸುವುದು ಇದರ ವೈಶಿಷ್ಟ್ಯ.
ಮಂಗಳೂರು ವಿಶೇಷ ಆರ್ಥಿಕ ವಲಯ, ಪೆಟ್ರೋಲಿಯಂ, ಕೆಮಿಕಲ್ಸ್ ಅಂಡ್ ಪೆಟ್ರೋಕೆಮಿಕಲ್ಸ್ ಇನ್ವೆಸ್ಟ್ಮೆಂಟ್ ರೀಜನ್ಸ್(ಪಿಸಿಪಿಐಆರ್), ನೇತ್ರಾವತಿ ತಿರುವು ಯೋಜನೆಗಳ ವಿರುದ್ಧ ಪರಿಸರ, ರೈತರ ಪರವಾಗಿ ಧ್ವನಿ ಎತ್ತಿದೆ. ಜ್ವಲಂತ ಸಮಸ್ಯೆಗಳಿಗೆ ತಕ್ಕಮಟ್ಟಿನ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯೂ ಆಗಿದೆ.
ಈ ಬಾರಿ ಬೆಳ್ತಂಗಡಿ ಹೊರತುಪಡಿಸಿ ಜಿಲ್ಲೆಯಲ್ಲಿ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಗಳ ಮುಖಂಡರ ಜತೆ ಮುಖಾಮುಖಿ ಕಾರ್ಯಕ್ರಮಕ್ಕೆ ಆಯೋಗದಿಂದ ಅನುಮತಿ ಸಿಕ್ಕಿಲ್ಲ. 500ಕ್ಕಿಂತ ಜಾಸ್ತಿ ಮಂದಿ ಸೇರುವುದಿದ್ದರೆ ಅನುಮತಿ ನೀಡಲಾಗದು ಎಂದು ಆಯೋಗ ಹೇಳಿರುವುದರಿಂದ ಜಿಲ್ಲೆಯಲ್ಲಿ ಮುಖಾಮುಖಿ ಬದಲು ಪಕ್ಷ ಮುಖಂಡರಿಗೆ ತಮ್ಮ ಹಕ್ಕೊತ್ತಾಯ ತಲುಪಿಸುತ್ತಿದ್ದೇವೆ. ಸಾಧ್ಯವಾದಷ್ಟು ಮನೆ ಮನೆಗೆ ಭೇಟಿ ನೀಡಿ ಜನತೆಗೆ ಹಕ್ಕೊತ್ತಾಯದ ಮನವರಿಗೆ ಮಾಡುತ್ತಿದ್ದೇವೆ ಎನ್ನುತ್ತಾರೆ ನಾಗರಿಕ ಸೇವಾ ಟ್ರಸ್ಟ್ ಸಂಚಾಲಕ ಸೋಮನಾಥ ನಾಯಕ್.
ಮಕ್ಕಳ ಹಕ್ಕಿಗಾಗಿ ಬೇಡಿಕೆ: ಮಕ್ಕಳ ಗುಣಾತ್ಮಕ ಶಿಕ್ಷಣ, ಬದುಕು ಮತ್ತು ಹಕ್ಕಿಗಾಗಿ ಅಭ್ಯರ್ಥಿಗಳನ್ನು ಪ್ರಶ್ನಿಸುವಂತೆ ಮಂಗಳೂರಿನ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಕರಪತ್ರ ಮುದ್ರಿಸಿ ಹಂಚುತ್ತಿದೆ. ಮಕ್ಕಳ ಶಿಕ್ಷಣ ಹಕ್ಕು ಬಗೆಗಿನ 16 ಅಂಶಗಳನ್ನು ಕರಪತ್ರದಲ್ಲಿ ಪ್ರಸ್ತಾಪಿಸಿದ್ದು, ಪ್ರತಿ ಅಭ್ಯರ್ಥಿಗೆ ಇದನ್ನು ಕಳುಹಿಸಿಕೊಟ್ಟಿದೆ. ಒಕ್ಕೂಟದ ಈ ಕಾರ್ಯಕ್ಕೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಬಾಲಕಾರ್ಮಿಕ ವಿರೋಧಿ ಆಂದೋಲನ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ಜತೆಯಲ್ಲಿವೆ. ಸಾಂವಿಧಾನ ಹಕ್ಕು ಆಗಿರುವ ಮಕ್ಕಳ ಶಿಕ್ಷಣವನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸಬೇಕು ಎನ್ನುವುದು ಒಕ್ಕೂಟದ ವಾದ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಸ್ಡಿಎಂಸಿ ವತಿಯಿಂದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಮನವಿ ಸಲ್ಲಿಸಿ ಹಲವು ಬೇಡಿಕೆ ಇಟ್ಟಿದ್ದೆವು. ಅದರಲ್ಲಿ ಎಸ್ಡಿಎಂಸಿ ಅಧ್ಯಕ್ಷರ ಆಯ್ಕೆ ಶಾಸಕರ ಪರಿಧಿಯಿಂದ ಹೊರಗಿಡಬೇಕು ಎಂಬ ಬೇಡಿಕೆ ಈಡೇರಿದೆ. ಮೊನ್ನೆಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೂಲಸೌಕರ್ಯಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಿದ್ದವೆ. ಈ ಬಾರಿ ಕರಪತ್ರವನ್ನು ಎಲ್ಲ ರಾಜಕೀಯ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನೀಡುತ್ತಿದ್ದೇವೆ ಎನ್ನುತ್ತಾರೆ ಒಕ್ಕೂಟ ಸಂಯೋಜಕಿ ಕಸ್ತೂರಿ.
ಮೂಲಸೌಕರ್ಯಕ್ಕೆ ಆದ್ಯತೆ: ಮಂಗಳೂರಿನ ಪ್ರಜಾ ವಿಕಾಸ ಸೇವಾ ಟ್ರಸ್ಟ್ ಕುಡಿವ ನೀರು, ಅಂತರ್ಜಲ ವೃದ್ಧಿಗೆ ಕ್ರಮ, ಚರಂಡಿ ವ್ಯವಸ್ಥೆ, ಫುಟ್ಪಾತ್, ರಸ್ತೆಗಳ ಬಗ್ಗೆ ಗಮನ, ಸೌರಶಕ್ತಿ ವಿದ್ಯುತ್, ಗ್ಯಾಸ್ ಏಜೆನ್ಸಿ ಅನ್ಯಾಯ ಸರಿಪಡಿಸುವುದು ಸೇರಿದಂತೆ ಜನಸಾಮಾನ್ಯರ ತೊಂದರೆಗಳಿಗೆ ಮುಕ್ತಿ ನೀಡುವಂತೆ ಕೋರಿ ಅಭ್ಯರ್ಥಿಗಳಿಗೆ ಕರಪತ್ರ ಹಂಚುತ್ತಿದೆ. ಕೈಕಂಬದ ದಿಶಾ ಟ್ರಸ್ಟ್ ಕೂಡ ಇದೇ ದಿಕ್ಕಿನಲ್ಲಿ ಹೆಜ್ಜೆ ಹಾಕಿದೆ.
ನಾವು ರಾಜ್ಯವ್ಯಾಪಿ ಈ ರೀತಿ ಕರಪತ್ರ ಅಭಿಯಾನ ನಡೆಸುತ್ತಿದ್ದು, ತಪ್ಪದೇ ಮತ ಚಲಾಯಿಸುವಂತೆ ವಿನಂತಿ ಮಾಡುತ್ತಿದ್ದೇವೆ. ಯುವಜನತೆ, ಮಹಿಳೆ ಮತ್ತು ಮಕ್ಕಳಲ್ಲಿ ಮಾದಕದ್ರವ್ಯ ನಿಯಂತ್ರಣಕ್ಕೆ ಆಮ್ಆದ್ಮಿ ಪಕ್ಷ ಜತೆ ಸೇರಿ ಅರಿವು ಮೂಡಿಸುತ್ತಿದ್ದೇವೆ. ರಾಜಕೀಯ ಪಕ್ಷಗಳು ತಮ್ಮದೇ ಆದ ಅಜೆಂಡಾ ಹೊಂದಿರುವುದರಿಂದ ನಾವು ಮನವಿ ಪತ್ರ ರೀತಿಯಲ್ಲಿ ಬೇಡಿಕೆಗಳನ್ನು ಇಡುತ್ತಿದ್ದೇವೆ.
ಮಹಾನಗರ ಪಾಲಿಕೆ ಚುನಾವಣೆಯಿಂದ ಈ ಅಭಿಯಾನ ಪ್ರಾರಂಭಿಸಿದ್ದೇವೆ ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ಧರ್ಮೇಂದ್ರ.
- ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

