ದಕ್ಷಿಣ ಕನ್ನಡ

ಕುಲ್ಕುಂದದಲ್ಲಿ ಶೇ. 89 ಹಕ್ಕು ಚಲಾವಣೆ

Published On :

ಬಂಟ್ವಾಳ: ಈ ಬಾರಿಯ ಚುನಾವಣೆಗೆ ಶಸ್ತ್ರಸಜ್ಜಿತ ಯೋಧರ ಪಡೆ ವಿಶೇಷ ಮೆರುಗು ತಂದಿದೆ. ಟಿವಿಯಲ್ಲೋ, ಪೇಪರ್‌ನಲ್ಲೋ ಶಸ್ತ್ರಸಜ್ಜಿತ ಯೋಧರನ್ನು ಕಂಡಿದ್ದ ಗ್ರಾಮಾಂತರ ಪ್ರದೇಶದ ಜನತೆ ತಮ್ಮೂರುಗಳಲ್ಲಿ ಅವರನ್ನು ಕಂಡು ಬೆರಗಾಗಿದ್ದಾರೆ.
ಪ್ರತಿ ಬೂತ್‌ಗಳಲ್ಲಿ 3ರಿಂದ 5 ಮಂದಿ ಯೋಧರ ಪಡೆ ಕಾರ್ಯ ನಿರ್ವಹಿಸಿದ್ದು, ಅವರ ಕುಶಲೋಪರಿ, ಗಂಭೀರತನ ಮತ ಚಲಾಯಿಸಲು ಬಂದ ಬಹುತೇಕರಿಗೆ ಇಷ್ಟವಾದರೆ, ಅವರ ಕೈಯಲ್ಲಿದ್ದ ಮೆಷಿನ್ ಗನ್ ಭಯ ಹುಟ್ಟಿಸುವಂತಿತ್ತು. ಭಯಮುಕ್ತ ಚುನಾವಣೆಗೆ ಇದೆಲ್ಲ ಬೇಕೇ ಎಂದು ಕೆಲವರು ಪ್ರಶ್ನಿಸಿದರೆ, ಮತದಾರರಿಗೆ ಮುಕ್ತ ಮತದಾನಕ್ಕೆ ಈ ಪಡೆಗಳು ಧೈರ್ಯ ಹೇಳಿವೆ ಎಂಬ ಅನಿಸಿಕೆಗಳೂ ವ್ಯಕ್ತವಾಗಿವೆ.
ಹದ್ದಿನ ಕಣ್ಣು: ಪ್ರತಿ ಮತಗಟ್ಟೆಗಳ ನೂರು ಮೀ. ವ್ಯಾಪ್ತಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಈ ಯೋಧರ ಪಡೆ, ಅದರೊಳಗಿನ ಪ್ರದೇಶದಲ್ಲಿ ಮುಕ್ತ ಮತದಾನಕ್ಕೆ ಅವಶ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿತ್ತು. ಮತಗಟ್ಟೆಗೆ ಆಗಮಿಸುವ ಮತದಾರರ ಗುರುತಿನ ಚೀಟಿ ಪರಿಶೀಲಿಸಿ, ಅವರನ್ನು ಯಾವ ಸಾಲಿನಲ್ಲಿ ನಿಲ್ಲಬೇಕು ಎಂದು ಒಬ್ಬರು ಹೇಳಿದರೆ, ಮತಗಟ್ಟೆಯ ಪ್ರವೇಶದ್ವಾರದಲ್ಲಿ ನಿಂತ ಮತ್ತೊಬ್ಬ ಯೋಧ ಸರತಿ ಸಾಲಿನಲ್ಲಿ ಶಿಸ್ತು ಕಾಪಿಡುತ್ತಿದ್ದ. ಉಳಿದವರು ಮತಗಟ್ಟೆ ವ್ಯಾಪ್ತಿಯಲ್ಲಿ ಹದ್ದಿನ ಕಣ್ಣಿರಿಸಿ ಕಾಯುತ್ತಿದ್ದರು. ವಯೋವೃದ್ಧರು, ಅನಾರೋಗ್ಯ ಪೀಡಿತರು ಬಂದಾಗ ಇವರೂ ಮಾನವೀಯತೆ ಮೆರೆದು ಮತದಾನಕ್ಕೆ ನೇರ ಅವಕಾಶ ಒದಗಿಸಿಕೊಡುತ್ತಿದ್ದರು.
ಮತದಾರರಿಗೆ ಸಹಾಯ: ಸಹಾಯ ಕೇಳುತ್ತಿದ್ದ ಮತದಾರರಿಗೆ 'ಹಿಂದಿಯಲ್ಲಿ ಮಾತನಾಡಿ', 'ನಿಮ್ಮ ಚೀಟಿ ತೋರಿಸಿ', 'ನೀವು ಪಕ್ಕದ ಬೂತ್‌ಗೆ ಹೋಗಿ' ಎನ್ನುತ್ತಿದ್ದರೆ, ಸರತಿ ಸಾಲು ತಪ್ಪಿಸಿ ಇಣುಕುತ್ತಿದ್ದವರಿಗೆ 'ಸಾಲಾಗಿ ಬನ್ನಿ', 'ಮುಂದೆ ಹೋಗಿ', 'ಮಾತನಾಡ ಬೇಡಿ' ಎಂದೆಲ್ಲ ಲೆಕ್ಕದ ಮಾತನಾಡುತ್ತಿದ್ದರು.
ಯೋಧನೊಬ್ಬ ತಾನು ಮಂಗಳೂರಿಗೆ ಮೊದಲ ಬಾರಿ ಬಂದಿದ್ದೇನೆ, ಒಂದು ವಾರದಲ್ಲೇ ಮುಖ ಕಪ್ಪಾಗಿದೆ, ಬಿಸಿಲು ಜೋರಿದೆ ಎಂದು ತನ್ನ ಅನುಭವವನ್ನು ಖುಷಿಯಿಂದಲೇ ಹಂಚಿಕೊಂಡ.
ಒಟ್ಟಿನಲ್ಲಿ ಭದ್ರತೆಗೆಂದು ದೇಶದ ವಿವಿಧೆಡೆಯಿಂದ ಕರೆಸಲ್ಪಟ್ಟ ಈ ಯೋಧರ ತಂಡ ನಮ್ಮ ರಾಜ್ಯದಲ್ಲಿ ಶಾಂತಿಯುತ ಮತದಾನ ನಡೆಯುವಂತೆ ಮಾಡಿತು.
ಚುನಾವಣೆ ಸಂಪೂರ್ಣವಾಗಿ ಚುನಾವಣಾ ಆಯೋಗದ ಹದ್ದುಬಸ್ತಿನಲ್ಲಿದೆ ಎಂಬುದನ್ನೂ ಕೂಡ ಇಂದಿನ ಚುನಾವಣಾ ಪ್ರಕ್ರಿಯೆಗಳು, ಮತಗಟ್ಟೆಯ ಪರಿಸರ ಸಾರಿಹೇಳುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.