ದಕ್ಷಿಣ ಕನ್ನಡ

ನಕ್ಸಲ್ ಪ್ರದೇಶದಲ್ಲಿ ಶಾಂತ ಮತದಾನ

Published On :

ಮಂಗಳೂರು: ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶದಲ್ಲಿ ಶಾಂತ ರೀತಿಯ ಮತದಾನ ನಡೆಯಿತು. ಮತದಾರರು ಉತ್ಸಾಹದಿಂದ ಪಾಲ್ಗೊಂಡರು.
ಬೆಳ್ತಂಗಡಿಯ ಕುತ್ಲೂರು ಮತಗಟ್ಟೆಗೆ 10 ಕಿ.ಮೀ. ವ್ಯಾಪ್ತಿಯಲ್ಲಿ ಒಂದೇ ಮತಕೇಂದ್ರ ಇದ್ದು, ಜನರು ರಿಕ್ಷಾಗಳಿಗೆ ರು. 100 ಕೊಟ್ಟು  ಬರಬೇಕಾಯಿತು. ಜಿಲ್ಲಾಡಳಿತ ಮತದಾರರು ಮತಗಟ್ಟೆಗೆ ತೆರಳಲು ರು. 5ಗೆ ಬಸ್ ವ್ಯವಸ್ಥೆ ಮಾಡಿತ್ತು. ಆದರೆ ಅಗತ್ಯವಿರುವ ಪ್ರದೇಶದಲ್ಲಿ ಈ ವ್ಯವಸ್ಥೆ ಕಂಡುಬಂದಿಲ್ಲ.
ಸಿಕ್ಕಿಂ ಸಿಬ್ಬಂದಿಗಳಿಗೆ ಅಲರ್ಜಿ: ನಕ್ಸಲ್ ಪೀಡಿತ ಪ್ರದೇಶದಲ್ಲಿ ಇಂಡಿಯನ್ ರಿಸರ್ವ್ ಬೆಟಾಲಿಯನ್ ಸಿಕ್ಕಿಂ ವಿಭಾಗದವರು ಬಿಗಿ ಬಂದೋಬಸ್ತ್ ಮಾಡಿದ್ದರು. 'ಇಲ್ಲಿನ ವಾತಾವರಣ ಬಿಸಿಯಾಗಿದ್ದು, ಬೇಗೆ ತಡೆದುಕೊಳ್ಳಲು ಆಗುತ್ತಿಲ್ಲ. ಇದನ್ನು ಹೊರತು ಪಡಿಸಿದರೆ ಇನ್ನೇನು ತೊಂದರೆ ಇಲ್ಲ'  ಎನ್ನುತ್ತಾರೆ ಸಿಬ್ಬಂದಿಗಳು. ಪರಿಣಾಮ ಇವರ ಮುಖ ಮತ್ತು ಮೈಯಲ್ಲಿ ಬಿಸಿಲಿನಿಂದಾಗಿ ಅಲರ್ಜಿ ಆಗಿದ್ದವು.
ರಸ್ತೆ ಬದಿ ಮತದಾರರ ಚೀಟಿ ವಿತರಣೆ: ನಕ್ಸಲ್ ಪೀಡಿತ ಪ್ರದೇಶವಾದ ಕುತ್ಲೂರಿನಲ್ಲಿ ಬಿಎಲ್‌ಒ ಅಧಿಕಾರಿಗಳು ಮತದಾರರ ಚೀಟಿ ವಿತರಿಸಲು ಕೇಂದ್ರದ ಹೊರಗಡೆ ರಸ್ತೆ ಬದಿಯ ಮರದ ಕೆಳಗಡೆ ವ್ಯವಸ್ಥೆ ಮಾಡಿದ್ದರು.
ರಸ್ತೆ, ವಾಹನ ಸೌಲಭ್ಯವಿಲ್ಲ: ಪುತ್ತೂರು ಮತಗಟ್ಟೆಯಿಂದ ಪಂಜಾಲು ಮತಗಟ್ಟೆ ಕೇಂದ್ರ 10 ಕಿ.ಮೀ. ದೂರದಲ್ಲಿದೆ. ಅಲ್ಲಿಂದ ಮತಗಟ್ಟೆಗೆ ಜೀಪು ಅಥವಾ ನಡೆದುಕೊಂಡು ಬರಬೇಕು. ಮನೆಯಿಂದ ರಸ್ತೆ ಬಳಿ 3ಕಿ.ಮೀ. ದೂರ ನಡೆದುಕೊಂಡು ಬರಬೇಕು.
'ನಾನು ಬೆಳಗ್ಗೆ ಬೇಗನೆ ಎದ್ದು ನಡೆದುಕೊಂಡು ಬಂದಿದ್ದೇನೆ. ವಾಪಸ್ಸು ಹೋಗಲು ಯಾವುದಾದರೂ ವಾಹನ ಸಿಗಬಹುದೇನೋ ಎಂಬುದಾಗಿ ಕಾಯುತ್ತಿದ್ದೇನೆ' ಎನ್ನುತ್ತಾರೆ ಭೋಜಣ್ಣ. ಇಲ್ಲಿನ ಮತಗಟ್ಟೆಗೆ ಬಂದ ಅಲಂಬದ ವಾಸಂತಿ ಅವರ ಇನ್ನೊಂದು ಕಥೆ. 'ನಮ್ಮ ಮನೆಯಿಂದ ಮತಗಟ್ಟೆ 6 ಕಿ.ಮೀ. ದೂರದಲ್ಲಿದೆ. ರಿಕ್ಷಾದವರು ರು. 150 ತೆಗೆದುಕೊಳ್ಳುತ್ತಾರೆ. ನಮ್ಮ ಸ್ವಂತ ಖರ್ಚಿನಿಂದ ಮತಗಟ್ಟೆಗೆ ಮತ ಹಾಕಲು ಬಂದಿದ್ದೇನೆ. ನಾನು ಕೈಮಗ್ಗದ ಮೂಲಕ ಬೆಡ್‌ಶೀಟ್ ತಯಾರಿಸುತ್ತಿದ್ದೇವೆ. ಮಿಜಾರ್ ಸೊಸೈಟಿಯವರು ನೂಲು ಕೊಡುತ್ತಾರೆ, ಒಂದು ಬೆಡ್‌ಶೀಟ್‌ಗೆ ರು. 40 ಕೊಡುತ್ತಾರೆ. ಈಗಾಗಲೇ 30 ಬೆಡ್ ತಯಾರಿಸಲಾಗಿದೆ. ನಮಗೆ ಒಂದು ಬೆಡ್‌ಗೆ ರು. 80 ಕೊಡಬೇಕು ಎಂಬುವುದು ನಮ್ಮ ಬೇಡಿಕೆ' ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ರು. 200 ಖರ್ಚು
'ನೆಲ್ಲಿತಡ್ಕದಿಂದ ಕುತ್ಲೂರು ಮತಗಟ್ಟೆಗೆ ಬಂದು ಹೋಗಬೇಕಾದರೆ ರು. 600 ಖರ್ಚಾಗುತ್ತದೆ. ರಿಕ್ಷಾದಲ್ಲಿ 3 ಜನ ಬಂದರೆ ಪ್ರತಿಯೊಬ್ಬರಿಗೆ ರು. 200 ಖರ್ಚು ಬೀಳುತ್ತದೆ' ಎನ್ನುತ್ತಾರೆ ನೆಲ್ಲಿತಡ್ಕದ ದೇವಮ್ಮ.
'ಬೆಳಗ್ಗೆ ಬೇಗ ಹೊರಟು ಬಂದಿದ್ದೇವೆ. ಮತ ಹಾಕಿದಾಗ ಮಧ್ಯಾಹ್ನ ಆಗಿದೆ. ರಿಕ್ಷಾದವರಿಗೆ ರು. 200 ಕೊಟ್ಟು ಬಂದಿದ್ದೇವೆ. ಮತದಾನ ಮಾಡಲೇಬೇಕು. ಮನೆಗೆ ಬಾಗಿಲಿಲ್ಲ, ಮೂವರು ಮಕ್ಕಳಿದ್ದಾರೆ, ಓದಿಸಬೇಕು. ಪಂಚಾಯ್ತಿ ವತಿಯಿಂದ ಸೌರದೀಪ ವ್ಯವಸ್ಥೆ ಆಗಿದೆ. ಆದರೆ ಸರ್ಕಾರದ ಸೌಲಭ್ಯಗಳು ಇನ್ನೂ ಬಂದಿಲ್ಲ. ಬಡವರನ್ನು ಆರ್ಥಿಕವಾಗಿ ಮೇಲಕ್ಕೆತ್ತುವ ಕಾರ್ಯವಾಗಬೇಕಾಗಿದೆ' ಎಂದರು.
'ನಮ್ಮ ಊರು ಗುಡ್ಡಗಾಡು ಪ್ರದೇಶವಾಗಿದ್ದು, ಪ್ರಚಾರಕ್ಕಾಗಿ ಜನಪ್ರತಿನಿಧಿಗಳು ಬಂದಿಲ್ಲ. ಒಬ್ಬರು ಬಂದಿದ್ದು, ಆ ಸಂದರ್ಭ ಮನೆಯಲ್ಲಿ ಇರಲಿಲ್ಲ, ಚೀಟಿಯನ್ನು ಬಾಗಿಲಿಗೆ ಸಿಕ್ಕಿಸಿ ಹೋಗಿದ್ದರು' ಎನ್ನುತ್ತಾರೆ ನೆಲ್ಲಿತಡ್ಕದ ಸುಂದರಿ.
ಡಿಐಎಸ್‌ಎಫ್ ಸಹಕಾರ
ಬೆಳ್ತಂಗಡಿಯ ಓಡಿಲ್ನಾಳದಲ್ಲಿ ಮಧ್ಯಾಹ್ನ 1ರ ವೇಳೆಗೆ 702ರಲ್ಲಿ 380 ಚಲಾವಣೆಯಾಗಿದೆ. ಡಿಐಎಸ್‌ಎಫ್ ಪಡೆಯವರು 83ವರ್ಷದ ವೃದ್ಧರನ್ನು ಕೈ ಹಿಡಿದು ಮತಗಟ್ಟೆಗೆ ಕರೆದುಕೊಂಡು ಹೋಗಿ ಮತ ಚಲಾಯಿಸಲು ಸಹಕರಿಸಿದರು.
ನಿಧಾನಗತಿ ಮತದಾನ
ಬೆಳಗ್ಗೆ 10.30ರ ಸುಮಾರಿಗೆ ಜಿಲ್ಲೆಯಲ್ಲಿ ಶೇ.10.13 ನಿಧಾನಗತಿಯ ಮತದಾನವಾಗಿತ್ತು. ಬೆಳಗ್ಗೆ 7ರಿಂದ ಪ್ರಾರಂಭವಾದ ಬಸ್, ಜೀಪು ವ್ಯವಸ್ಥೆ ಮತದಾರರನ್ನು ಅಷ್ಟಾಗಿ ಸೆಳೆದಿಲ್ಲ. ದ.ಕ.ಜಿಲ್ಲೆಯಲ್ಲಿ ಜಾರಿಗೆ ತರಲು ಉದ್ದೇಶಿಸಿದ ಈ ಯೋಜನೆಯನ್ನು ಆಯೋಗ ರಾಜ್ಯಕ್ಕೆ ವಿಸ್ತರಿಸಿತ್ತು. ಜಿಲ್ಲೆಯಲ್ಲಿ ಸಂಜೆ 4ರ ವರೆಗೆ ಆದರೂ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಅಷ್ಟಾಗಿ ಆಯೋಗದ ವಾಹನವನ್ನು ಮತದಾರರು ನೆಚ್ಚಿಕೊಂಡಿಲ್ಲ.
ಮತಯಂತ್ರದ ತೊಂದರೆ
ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಅಲ್ಲಲ್ಲಿ ತೊಂದರೆ ಕಾಣಿಸಿದೆ. ಮಧ್ಯಾಹ್ನವರೆಗೆ 8 ಕಡೆಗಳಲ್ಲಿ ಮತಯಂತ್ರ ದೋಷ ಕಾಣಿಸಿತ್ತು. ಬೋಳಾರ ಮತಗಟ್ಟೆಯಲ್ಲಿ ಬೆಳಗ್ಗೆ 7ರ ಬದಲು 8.20ಕ್ಕೆ ಮತದಾನ ಶುರುವಾಯಿತು. ಮತಯಂತ್ರದ ಅಳಿಸುವ ಬಟನ್‌ನ್ನು ಮತಗಟ್ಟೆ ಅಧಿಕಾರಿ ಒತ್ತಿದ ಪರಿಣಾಮ ಅಲ್ಲಿಗೆ ಇನ್ನೊಂದು ಯಂತ್ರವನ್ನು ತಂದು ಮತದಾನ ಮುಂದುವರಿಸಲಾಯಿತು. ಅಷ್ಟರಲ್ಲಿ 1.20 ನಿಮಿಷ ಕಳೆದಿತ್ತು. ಆದರೂ ಮತದಾನಕ್ಕೆ ಜಾಸ್ತಿ ಅವಧಿ ಕೊಡಲು ಮತಗಟ್ಟೆ ಅಧಿಕಾರಿ ನಿರಾಕರಿಸಿದರು. ಇನೋಳಿ, ಲೇಡಿಹಿಲ್, ಕಾಟಿಪಳ್ಳಗಳಲ್ಲಿ ಮತಯಂತ್ರ ಕೈಕೊಟ್ಟು ಮತದಾನ ವಿಳಂಬವಾಗಿದೆ.
ಮೂಡುಬಿದಿರೆಯ ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನದಿಂದಲೇ ಮತಯಂತ್ರಗಳಲ್ಲಿ ಬ್ಯಾಟರಿ ಚಾರ್ಜ್ ಸಮಸ್ಯೆ ತಲೆದೋರಿದ್ದು, ಮೇಲಧಿಕಾರಿಗಳು ಸಂಜೆವರೆಗೆ ಮತದಾನಕ್ಕೆ ತೊಂದರೆ ಇಲ್ಲ ಎಂದು ಸಮಜಾಯಿಶಿ ನೀಡುತ್ತಿದ್ದರು.
ಬೆಳ್ಳಂಬೆಳಗ್ಗೆ ನಕಲಿ ಮತದಾನ
ಪುತ್ತೂರು ಕ್ಷೇತ್ರದ ಕುರಿಯ 242ನೇ ಮತಗಟ್ಟೆಯಲ್ಲಿ ಬೆಳಗ್ಗೆಯೇ ನಕಲಿ ಮತದಾನವಾಯಿತು. ಇಲ್ಲಿನ ಇಬ್ರಾಹಿಂ ಅಮ್ಮುಂಜೆ ಎಂಬವರ ಮತವನ್ನು ಬೇರೊಬ್ಬರು ಚಲಾಯಿಸಿದ್ದರು. ಇಬ್ರಾಹಿಂ ಆಗಮಿಸಿದಾಗ ಮತ ಚಲಾವಣೆಯಾಗಿತ್ತು. ಬಳಿಕ ಅವರಿಗೆ ಟೆಂಡರ್ ಮತದಾನಕ್ಕೆ ಮತಗಟ್ಟೆ ಅಧಿಕಾರಿಗಳು ಅವಕಾಶ ನೀಡಿದರು.
ಕೈಕೊಟ್ಟ ಮತಯಂತ್ರ
ಸರ್ವೆಯ 271ನೇ ಮತಗಟ್ಟೆಯಲ್ಲಿ ಮತಯಂತ್ರ ಹಾಳಾದ ಕಾರಣ ಸುಮಾರು ಒಂದು ಗಂಟೆ ತಡವಾಗಿ ಮತದಾನ ಆರಂಭಗೊಂಡಿತು.
ಅಭ್ಯರ್ಥಿಗಳ ಮತದಾನ
ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯೋಗೀಶ್ ಭಟ್ ಸೆಂಟ್ರಲ್ ವಾರ್ಡ್‌ನಲ್ಲಿ, ಸಂಸದ ನಳಿನ್ ಕುಮಾರ್ ಉರ್ವ ಅಲೋಶಿಯಸ್ ಹೈಸ್ಕೂಲ್, ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೋ ಕದ್ರಿ ಶಿವಭಾಗ್ ವಾರ್ಡ್, ಮಂಗಳೂರು ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಬೋಳಿಯಾರ್ ಜಾರದಗುಂಡಿ, ಬಿಜೆಪಿ ಅಭ್ಯರ್ಥಿ ಚಂದ್ರಹಾಸ ಉಳ್ಳಾಲ್ ಬಬ್ಬುಕಟ್ಟೆ ಮತಗಟ್ಟೆಯಲ್ಲಿ ಮತದಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.