ಮನ್ವಿತಗೆ ವೈದ್ಯ ವೃತ್ತಿ ಕನಸು
ಮಂಗಳೂರು: ಅಪ್ಪಟ ಗ್ರಾಮೀಣ ಹುಡುಗಿ, ಬಹುಮುಖ ಪ್ರತಿಭೆ, ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ದ್ವಿತೀಯ ಸ್ಥಾನ ಗಳಿಸಿರುವ ಮನ್ವಿತಾಗೆ ವೈದ್ಯಳಾಗುವ ಆಸೆ.
ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಫಜೀರು ಗ್ರಾಮದ ಕಂಬಳಪದವು ನಿವಾಸಿ, ಕೊಣಾಜೆ ವಿಶ್ವಮಂಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿನಿ ಮನ್ವಿತ ಎಂ. ಕುಲಾಲ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 621 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯಳೆನಿಸಿದ್ದಾಳೆ.
ಗಣಿತ, ವಿಜ್ಞಾನ ಶೇ.100: ಇಂಗ್ಲಿಷ್- 125, ಗಣಿತ-100, ಸಮಾಜವಿಜ್ಞಾನ- 100, ಹಿಂದಿ- 99, ಕನ್ನಡ- 99, ವಿಜ್ಞಾನ ವಿಷಯದಲ್ಲಿ ಈಕೆ 98 ಅಂಕ ಪಡೆದಿದ್ದಾರೆ.
ಹಳ್ಳಿ ಹುಡುಗಿ: ಹಳ್ಳಿ ಪ್ರದೇಶ ಕಂಬಳಪದವಿನ ಮನ್ವಿತ ಎ.ಎನ್. ಮೋಹನ್‌ದಾಸ್-ಶೋಭಾ ದಂಪತಿಯ ಒಬ್ಬಳೇ ಮಗಳು. ತಂದೆ ಸ್ವಂತ ಉದ್ದಿಮೆ ನಡೆಸುತ್ತಿದ್ದು ತಾಯಿ ಎಂ.ಕಾಂ. ಪದವೀಧರೆಯಾಗಿದ್ದು ಗೃಹಿಣಿಯಾಗಿದ್ದಾರೆ. ಸಣ್ಣ ಪ್ರಮಾಣದ ತೋಟ, ಗದ್ದೆ ಇದ್ದು, ಮಧ್ಯಮ ವರ್ಗದ ಸಣ್ಣ ಕುಟುಂಬ.
ತನ್ನ ಸಾಧನೆಗೆ ಹೆತ್ತವರೇ ಸ್ಪೂರ್ತಿ, ಜತೆಗೆ ಶಿಕ್ಷಕರ ಪ್ರೋತ್ಸಾಹವೂ ಕಾರಣ ಎನ್ನುತ್ತಾಳೆ ಈಕೆ.
ಟ್ಯೂಶನ್‌ಗೆ ಹೋಗಿಲ್ಲ: ಪ್ರತಿದಿನ ಮುಂಜಾನೆ 5.30ಕ್ಕೆ ಎದ್ದು, 8ತನಕ ಓದುತ್ತೇನೆ. ಯಾವುದೇ ಟ್ಯೂಶನ್ ಹೋಗದೆ ಸ್ವಂತ ಆಸಕ್ತಿಯಿಂದ ಓದುತ್ತಿದ್ದೇನೆ. ಪ್ರತಿದಿನದ ಪಾಠವನ್ನು ಮನೆಗೆ ಬಂದು ಅವುಗಳನ್ನು ಮನನ ಮಾಡುತ್ತೇನೆ. ಇದರಿಂದ ಪಾಠಗಳು ಅರ್ಥವಾಗುತ್ತದೆ. ಮುಂದಿನ ತರಗತಿಯಲ್ಲಿ ತೆಗೆದುಕೊಳ್ಳುವ ಪಾಠದ ಬಗ್ಗೆ ಮುಂಚಿತವಾಗಿ ಓದಿರುತ್ತೇನೆ. ಮುಂದೆ ಡಾಕ್ಟರ್ ಆಗುವ ಆಸೆ ಇದೆ ಎನ್ನುತ್ತಾರೆ ಮನ್ವಿತ.
ಚಿತ್ರಕಲೆಯಲ್ಲೂ ಮುಂದು: ಚಿತ್ರಕಲೆಯಲ್ಲೂ ಮನ್ವಿತಾ ಸಾಧನೆ ಗಮನಾರ್ಹ. ಪ್ರತಿಭಾ ಕಾರಂಜಿಯ ಚಿತ್ರಕಲಾ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಈಕೆ 3ನೇ ಸ್ಥಾನ ಪಡೆದಿದ್ದಾರೆ. ಭರತನಾಟ್ಯ ಜ್ಯೂನಿಯರ್ ಪರೀಕ್ಷೆ ತೇರ್ಗಡೆಯಾಗಿದ್ದಾರೆ. ವಾಲಿಬಾಲ್‌ನಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ, ಜಿಲ್ಲೆಯಲ್ಲಿ ನಡೆದ ಚಿತ್ರಕಲಾ ಸ್ಪರ್ಧೆ, ರಂಗೋಲಿ, ನೃತ್ಯ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿಕೊಡುವ ಕೀರ್ತಿ ಇವರದು.
ಇಷ್ಟದಂತೆ ಓದಲು ಅವಕಾಶ: 'ಚಿಕ್ಕಂದಿನಿಂದಲೇ ಕಲಿಕೆಯಲ್ಲಿ ಮುಂದಿರುತ್ತಿದ್ದಳು. ಮಿತ ಮಾತು. ಯಾವುದೇ ಒತ್ತಡ ಹೇರದೆ, ಅವಳ ಇಷ್ಟದಂತೆ ಓದಲು ಅವಕಾಶ ಕೊಡುತ್ತಿದ್ದೆವು. ಚಿತ್ರ ಬಿಡಿಸುವುದು ಎಂದರೆ ಅವಳಿಗೆ ಆಸಕ್ತಿ ಅದಕ್ಕೂ ಪ್ರೋತ್ಸಾಹ ನೀಡುತ್ತಿದ್ದೇವೆ. ತುಂಬಾ ಸಂತೋಷವಾಗಿದೆ' ಎನ್ನುತ್ತಾರೆ ಮನ್ವಿತನ ತಾಯಿ ಶೋಭಾ.
ದುಡ್ಡು ಸುರಿದು ಓದಿಸಲು ಕಷ್ಟ: 'ಅವಳು ತನಗೆ ಇಂಥದ್ದನ್ನು ತಂದುಕೊಡಿ ಎಂದು ಯಾವತ್ತೂ ಹಠ ಮಾಡಿದವಳಲ್ಲ. ಅವಳ ಆಸಕ್ತಿಯಿಂದ ಓದುತ್ತಾಳೆ. ಅವಳ ಚಿಕ್ಕಪ್ಪ ಕಾರವಾರದಲ್ಲಿ ಕಣ್ಣಿನ ವೈದ್ಯರಾಗಿದ್ದು, ಮುಂದೆ ಡಾಕ್ಟರ್ ಆಗಬೇಕು ಎಂದು ಆಸೆ ಪಟ್ಟಿದ್ದಾಳೆ. ಮೆರಿಟ್ ಸೀಟ್ ಲಭಿಸಿದರೆ ಕಲಿಸಬಹುದು. ದುಡ್ಡು ಕೊಟ್ಟು ಓದಿಸುವಷ್ಟು ತಾಕತ್ತಿಲ್ಲ' ಎನ್ನುತ್ತಾರೆ ತಂದೆ ಮೋಹನ್‌ದಾಸ್.
ಮನ್ವಿತ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿರುವುದು ಹೆಮ್ಮೆಯನಿಸಿದೆ. ಪ್ರತಿವರ್ಷ ಶೇ. ನೂರು ಫಲಿತಾಂಶ ಪಡೆಯುತ್ತಿದ್ದ ಶಾಲೆಗೆ ಈ ಸಾಧನೆ ಸಂದಿರುವುದು ಇದೇ ಮೊದಲು. ಈ ಬಾರಿಯೂ ಶೇ. 100 ಫಲಿತಾಂಶ ಬಂದಿದೆ ಎನ್ನುತ್ತಾರೆ ವಿಶ್ವಮಂಗಳ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಅಪ್ಪಿ ಬಾಯಿ.
-ವಜ್ರಾಕ್ಷಿ ಬಂಟ್ವಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

