ಲೋಬೊರನ್ನು ಭಟ್ ಬೆಂಬಲಿಸಲಿ: ಐವನ್ ಡಿಸೋಜ
ಮಂಗಳೂರು: ಚುನಾವಣೆಯಲ್ಲಿ ಸೋತಿರುವ ಮಾಜಿ ಶಾಸಕ ಎನ್.ಯೋಗೀಶ್ ಭಟ್ ತಾವು ಮಾಡಿರುವ ಜನಪರ ಯೋಜನೆಗಳನ್ನು ಗೆದ್ದ ಶಾಸಕರು ಮುಂದುವರಿಸಲಿ ಎಂದು ಹೇಳಿದ್ದಾರೆ. ಆದರೆ ಆವರು ಇದುವರೆಗೆ ಅಂಕಿ, ಅಂಶಗಳನ್ನು ಹೇಳಿದ್ದು ಬಿಟ್ಟರೆ ಯಾವುದೇ ಯೋಜನೆ ಜಾರಿಗೆ ತಂದಿಲ್ಲ ಎಂದು ಕಾಂಗ್ರೆಸ್ ವೀಕ್ಷಕ ಐವನ್ ಡಿಸೋಜ ಹೇಳಿದ್ದಾರೆ.
ಈ ರೀತಿಯ ಹೇಳಿಕೆ ನೀಡುವುದನ್ನು ಬಿಟ್ಟು ಗೆದ್ದು ಶಾಸಕರಾಗಿರುವ ಜೆ.ಆರ್. ಲೋಬೋಗೆ ಭಟ್ ಬೆಂಬಲ ನೀಡಲಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ಮಾಡಿದರು.
ಚಿಕ್ಕಮಗಳೂರಲ್ಲಿ ದತ್ತಪೀಠ ವಿವಾದ ಎಬ್ಬಿಸಿ ಅಧಿಕಾರ ಅನುಭವಿಸಿದ ಬಿಜೆಪಿ ಬಳಿಕ ದತ್ತ ಪೀಠದ ಒಳಗೆ ಪಾದ ಪೂಜೆ ಮಾಡುವ ಪ್ರಯತ್ನ ಕೂಡಾ ಮಾಡಿಲ್ಲ. ಇವರ ಇಂಥ ಸುಳ್ಳು ಭರವಸೆ ನೋಡಿ ಮತದಾರರು ಈ ಬಾರಿ ತಿರಸ್ಕರಿಸಿದ್ದಾರೆ ಎಂದು ಮಾಜಿ ಮೇಯರ್ ಅಶ್ರಫ್ ಹೇಳಿದರು. ಬಿಜೆಪಿಗೆ ದೇಶದ ಆಡಳಿತ ನಡೆಸಲು ಮತದಾರರು ಅವಕಾಶ ನೀಡಿ ಭ್ರಮನಿರಸನವಾಗಿ 5 ವರ್ಷಗಳ ಬಳಿಕ ಕಿತ್ತು ತೆಗೆದರು. ಮಂಗಳೂರು ಮಹಾನಗರಪಾಲಿಕೆಯಲ್ಲಿಯೂ ಸರಿಯಾಗಿ ಆಡಳಿತ ನಡೆಸದ ಬಿಜೆಪಿಗೆ ಬುದ್ಧಿ ಕಲಿಸಿದರು. ಇದೀಗ ರಾಜ್ಯದಲ್ಲಿ 5 ವರ್ಷ ಆಡಳಿತ ನಡೆಸಿ ನಂಬಿಕೆ ದ್ರೋಹ ಮಾಡಿದರು. ಅದಕ್ಕೆ ಜನರು ತಕ್ಕ ಪಾಠ ಕಲಿಸಿದರು.
ಜಿಲ್ಲೆಯ ಮುಸ್ಲಿಂ ಮತಗಳನ್ನು ವಿಭಜಿಸಲು ಎಸ್ಡಿಪಿಐ ಯತ್ನಕ್ಕೆ ಫಲ ಸಿಕ್ಕಿಲ್ಲ. ಕೆಎಫ್ಡಿ, ಪಿಎಫ್ಐ, ಎಸ್ಡಿಪಿಐ ವಿರೋಧವಾಗಿ ಜನ ಮತಚಲಾಯಿಸಿದರು ಎಂದರು.
ಸುದ್ದಿಗೋಷ್ಠಿಯಲ್ಲಿ ಕಳ್ಳಿಗೆ ತಾರಾನಾಥ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಅರುಣ್ ಕುವೆಲ್ಲೊ ಇದ್ದರು.
ನಾಳೆಯಿಂದ ಬ್ರಹ್ಮಕಲಶ
ಮಂಗಳೂರು: 150 ವರ್ಷ ಪುರಾತನ ಕಂಕನಾಡಿ ಕುದ್ಕೋರಿಗುಡ್ಡ ಶ್ರೀಸತ್ಯ ಸಾರಮಾಣಿ ಶ್ರೀಕಲ್ಲುರ್ಟಿ, ಶ್ರೀರಾಹುಗುಳಿಗ ದೈವಸ್ಥಾನದ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಮೇ 11ರಿಂದ 15ರ ವರೆಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ರತ್ನಾಕರ ಕರ್ಕೇರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
11ರಂದು ಸಂಜೆ 4ಕ್ಕೆ ಹೊರೆಕಾಣಿಕೆ, 12ರಂದು ಬೆಳಗ್ಗೆ 7ಕ್ಕೆ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶ ವೇ.ಮೂ.ವಾದಿರಾಜ ಉಪಾಧ್ಯ ನೇತೃತ್ವದಲ್ಲಿ ನಡೆಯಲಿದೆ. 13ರಂದು ಸಂಜೆ 7ಕ್ಕೆ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ದೈವಸ್ಥಾನ ಉದ್ಘಾಟಿಸುವರು. 14 ಮತ್ತು 15ರಂದು ದೈವಗಳ ನೇಮೋತ್ಸವ ನಡೆಯಲಿದೆ ಎಂದರು.
ನಾಳೆ ಕಟೀಲು ಮೇಳದಲ್ಲಿ ಸನ್ಮಾನ
ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸೇವಾ ಸಂಘ ಅರ್ನಾಪು ಅಳಪೆ ಕಣ್ಣೂರು ಇದರ 41ನೇ ವಾರ್ಷಿಕೋತ್ಸವ ಪ್ರಯುಕ್ತ ಮೇ 11ರಂದು ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಸಂಜೆ 6ಕ್ಕೆ ಸಮಾರಂಭದಲ್ಲಿ ಮೇಳದ ಕಲಾವಿದರು, ಸಹಾಯಕರು ಸೇರಿ 48 ಮಂದಿಯನ್ನು ಸನ್ಮಾನಿಸಲಾಗುವುದು. ಕಟೀಲು ದೇವಳ ಪ್ರಧಾನ ಅರ್ಚಕ ವೇ.ಮೂ.ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡುವರು ಎಂದು ಸಂಘಟಕ ಜಯ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂಲ್ಕಿಯಲ್ಲಿ ಕಾಂಗ್ರೆಸ್ ವಿಜಯೋತ್ಸವ
ಮೂಲ್ಕಿ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ಅಭಯಚಂದ್ರ ಜೈನ್ ಅವರು ಸತತ ನಾಲ್ಕನೇ ಬಾರಿಗೆ ಜಯ ಗಳಿಸಿದ್ದರಿಂದ ಹರ್ಷಿತರಾದ ಮೂಲ್ಕಿ ಹೋಬಳಿಯ ಪಕ್ಷದ ಕಾರ್ಯಕರ್ತರು ವಾಹನಗಳಲ್ಲಿ ಮೂಲ್ಕಿಗೆ ಆಗಮಿಸಿ ಮೂಲ್ಕಿ ಬಸ್ಸು ನಿಲ್ದಾಣ ಬಳಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಸಾಲ್ಯಾನ್ ಪೈಯೊಟ್ಟು, ಕಾರ್ಯದರ್ಶಿ ವಸಂತ ಬೆರ್ನಾಡ್, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ, ಮಾಜಿ ಅಧ್ಯಕ್ಷ ಬಿ.ಎಂ. ಆಸೀಫ್ ಮತ್ತಿತರರು ಇದ್ದರು.
ಸ್ಕಾರ್ಪಿಯೊ- ಬೈಕ್ ಡಿಕ್ಕಿ: ಉಪನ್ಯಾಸಕ ಗಾಯ
ಪುತ್ತೂರು: ಸ್ಕಾರ್ಪಿಯೋ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿಯಲ್ಲಿ ನಡೆದಿದೆ. ನೆಲ್ಯಾಡಿ ಬೆಥನಿ ಐಟಿಐ ಕಾಲೇಜಿನ ಉಪನ್ಯಾಸಕ ಬೋಬನ್ ಕೆ.ಜೆ. ಗಾಯಗೊಂಡು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರಿನಿಂದ ಸಕಲೇಶಪುರಕ್ಕೆ ಹೋಗುತ್ತಿದ್ದ ಸ್ಕಾರ್ಪಿಯೊ ಕಾರು ನೆಲ್ಯಾಡಿ ಎಲೈಟ್ ಪ್ಲಾಜಾದ ಪೆಟ್ರೋಲ್ ಬಂಕ್ಗೆ ತಿರುಗುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಬೋಬನ್ ಕೆ.ಜೆ. ರಸ್ತೆಗೆ ಎಸೆಯಲ್ಪಟ್ಟು ತಲೆಗೆ ತೀವ್ರ ಪೆಟ್ಟಾಗಿ ಗಂಭೀರ ಗಾಯಗೊಂಡಿದ್ದಾರೆ. ನೆಲ್ಯಾಡಿ ಹೊರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾನೂನು ಸುವ್ಯವಸ್ಥೆ ಬಳಿಕ ಅಭಿವೃದ್ಧಿ: ಜೆ.ಆರ್. ಲೋಬೋ
ಮಂಗಳೂರು: ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡಿದ ಬಳಿಕ ಅಭಿವೃದ್ಧಿ ಕಾಮಗಾರಿಗಳತ್ತ ಗಮನ ಹರಿಸಲಾಗುವುದು ಎಂದು ಮಂಗಳೂರು ದಕ್ಷಿಣ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾದ ಜೆ.ಆರ್.ಲೋಬೊ ಹೇಳಿದ್ದಾರೆ. ಚುನಾವಣೆ ಬಳಿಕ ರಾಜಕೀಯ ಹೊರಗಿಟ್ಟು ಅಭಿವೃದ್ಧಿ ಮಾಡುತ್ತೇವೆ. ಮಂಗಳಾ ಕಾರ್ನಿಶ್ ರಿಂಗ್ ರಸ್ತೆ ಕಾಮಗಾರಿ, ರೋಪ್ವೇ ಯೋಜನೆಗಳು ಮುಂದುವರಿಯಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು 5 ವರ್ಷದವರೆಗೆ ಕಾಯದೆ ಶೀಘ್ರವೇ ಈಡೇರಿಸಲಾಗುವುದು. ನಗರಾಭಿವೃದ್ಧಿಗೆ ಚಿಂತಕರ ಚಾವಡಿ ರೂಪಿಸಲಾಗುವುದು. ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ಕಡಿಮೆಗೊಳಿಸಲಾಗುವುದು. ಪಾಲಿಕೆ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಆಸ್ತಿ ತೆರಿಗೆ ಮತ್ತು ನೀರಿನ ತೆರಿಗೆ ಹೆಚ್ಚಳ ಮಾಡುವುದಿಲ್ಲ. ಸಮರ್ಪಕವಾಗಿ ತೆರಿಗೆ ಸಂಗ್ರಹಿಸಿ ಆದಾಯ ಹೆಚ್ಚಿಸಿಕೊಳ್ಳುತ್ತೇವೆ. ಮಂಗಳೂರು ನಗರಾಭಿವೃದ್ಧಿ ಬಗ್ಗೆ ಸಿಡಿಪಿಯನ್ನು ಪುನರ್ ಪರಿಶೀಲಿಸಲಾಗುವುದು ಎಂದರು. ಪೊಲೀಸರ ಅಥವಾ ಅಧಿಕಾರಿಗಳ ವರ್ಗಾವಣೆಗೆ ಯತ್ನಿಸುವುದಿಲ್ಲ. ಈ ಮೂಲಕ ಬಿಜೆಪಿ ಆಡಳಿತದ ಸಮಯದಲ್ಲಿದ್ದ ಅಧಿಕಾರಿಗಳು ಇದ್ದ ಮಾತ್ರಕ್ಕೆ ಪೊಲೀಸರ ನೈತಿಕತೆಯನ್ನು ನಾವು ಪ್ರಶ್ನೆ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸುರೇಶ್ ಬಲ್ಲಾಳ್ ಇದ್ದರು.
ಕರಾವಳಿ ಪ್ರಾಧಿಕಾರಕ್ಕೆ ತಿಂಗಳೆ ರಾಜಿನಾಮೆ
ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಬುಧವಾರ ರಾಜಿನಾಮೆ ನೀಡಿದ್ದಾರೆ. 2012 ಡಿ.31ರಂದು ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಅವರು, ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಬಹುಮತ ಪಡೆಯದ ಹಿನ್ನಲೆಯಲ್ಲಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜಿನಾಮೆ ಪತ್ರವನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಿಗೆ ರವಾನಿಸಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕರಾವಳಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಲಾಗಿತ್ತು. ಪ್ರಾಧಿಕಾರದ ಮೊದಲ ಅಧ್ಯಕ್ಷರಾಗಿ ನಾಗರಾಜ ಶೆಟ್ಟಿ ನೇಮಕಗೊಂಡಿದ್ದರು. ನಂತರದ ಬೆಳವಣಿಗೆಯಲ್ಲಿ ನಾಗರಾಜ ಶೆಟ್ಟಿ ರಾಜಿನಾಮೆ ನೀಡಿ ಕೆಲವು ಸಮಯ ಸುಮ್ಮನಿದ್ದರು. ರಾಜಿನಾಮೆ ಅಂಗೀಕಾರವಾಗದ ಹಿನ್ನಲೆಯಲ್ಲಿ ಮತ್ತೆ ಅಧ್ಯಕ್ಷರಾಗಿ ಮುಂದುವರಿದರು. ಆದರೆ ಮತ್ತೆಯೂ ಪರಿಸ್ಥಿತಿ ಸರಿಯಾಗದ ಕಾರಣ ನಾಗರಾಜ ಶೆಟ್ಟಿ ರಾಜಿನಾಮೆ ನೀಡಿದಾಗ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

