ಇನ್ನು ಡಿಮಸ್ಟರಿಂಗ್ಗೆ ಸ್ಮಾರ್ಟ್ಫೋನ್ ಬಳಕೆ
ಮಂಗಳೂರು: ಕರ್ನಾಟಕದಲ್ಲಿ ಮುಂಬರುವ ಚುನಾವಣೆಯಲ್ಲಿ ಡಿಮಸ್ಟರಿಂಗ್ ಕಾರ್ಯ ಸ್ಮಾರ್ಟ್ಫೋನ್ ಆಧಾರಿತವಾಗಿ ನಡೆಯಲಿದ್ದು, ಈ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ವಿಕೇಂದ್ರೀಕರಣಗೊಳಿಸಲಿದೆ. ಆಯಾ ವಿಧಾನಸಭಾ ಕ್ಷೇತ್ರದ ಕೇಂದ್ರದಲ್ಲಿ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ನಡೆಯುತ್ತದೆ. ಮತದಾನ ದಿನ ಡಿಮಸ್ಟರಿಂಗ್ ಮುಕ್ತಾಯಗೊಳ್ಳಲು ತಡ ರಾತ್ರಿವರೆಗೂ ಮತದಾನ ಕೇಂದ್ರದ ಸಿಬ್ಬಂದಿಗಳು ಕಾಯಬೇಕಿತ್ತು. ಇನ್ನು ಈ ಬವಣೆ ತಪ್ಪಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಡೆದ ಸ್ಮಾರ್ಟ್ಫೋನ್ ಬಳಕೆ ಪ್ರಯೋಗ ಡಿಮಸ್ಟರಿಂಗ್ನ್ನು ಸರಳೀಕರಣಗೊಳಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಮತಗಟ್ಟೆಗಳಿಗೆ ಮತಯಂತ್ರ, ವಿವಿಧ ಬಗೆಯ ಫಾರ್ಮ್ಗಳು, ಶಾಯಿ, ಇನ್ನಿತರ ಸಲಕರಣೆಗಳನ್ನು ಸಿಬ್ಬಂದಿಗಳು ಒಂದು ಕೇಂದ್ರದಿಂದ ತೆಗೆದುಕೊಂಡು ಹೋಗುವುದಕ್ಕೆ ಮಸ್ಟರಿಂಗ್ ಎನ್ನುತ್ತಾರೆ. ಮತದಾನ ಮುಗಿದ ಕೂಡಲೇ ಮತಯಂತ್ರ ಸಹಿತ ಎಲ್ಲ ಸರಂಜಾಮಿನೊಡನೆ ಸಿಬ್ಬಂದಿಗಳು ವಾಹನದಲ್ಲಿ ಮತ್ತೆ ಕೇಂದ್ರಕ್ಕೆ ಬಂದು ವರದಿ ಒಪ್ಪಿಸುವ ಪ್ರಕ್ರಿಯೆ ಡಿಮಸ್ಟರಿಂಗ್. ಪ್ರತಿ ಚುನಾವಣೆಯಲ್ಲೂ ಡಿಮಸ್ಟರಿಂಗ್ ಕಾರ್ಯ ವಿಳಂಬವಾಗುತ್ತದಲ್ಲದೆ, ದೂರದ ಮತಗಟ್ಟೆಯಿಂದ ಸಿಬ್ಬಂದಿಗಳು ಬರುವುದಕ್ಕೂ ಬಹಳ ಸಮಯ ಬೇಕು. ಹಾಗಾಗಿ ಮತಗಟ್ಟೆಯಲ್ಲಿ ಮತದಾನದ ಪ್ರಮಾಣ ಸೇರಿದಂತೆ ಅಂತಿಮ ವಿವರಗಳು ಜಿಲ್ಲಾ ಚುನಾವಣಾಧಿಕಾರಿಯ ಕೈ ಸೇರುವಾಗ ಮಧ್ಯರಾತ್ರಿ. ಇದನ್ನು ತಪ್ಪಿಸಲು ಈ ಜಿಲ್ಲೆಯಲ್ಲಿ ಹೊಸ ಪ್ರಯೋಗಕ್ಕೆ ಜಿಲ್ಲಾಧಿಕಾರಿ ಹರ್ಷಗುಪ್ತ ಮುಂದಾಗಿದ್ದರು.
ಡಿಮಸ್ಟರಿಂಗ್ಗೆ ಸ್ಮಾರ್ಟ್ಫೋನ್: ಡಿಮಸ್ಟರಿಂಗ್ ವಿಧಾನಕ್ಕೆ ಸ್ಮಾರ್ಟ್ಫೋನ್ ಬಳಕೆ ಹೊಸ ಅಲೋಚನೆ. ಪ್ರತಿ ಸೆಕ್ಟರ್ ಅಧಿಕಾರಿಗೆ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ನೀಡಲಾಗುತ್ತದೆ. ಇದಲ್ಲದೆ ಮತಗಟ್ಟೆ ಅಧಿಕಾರಿಗಳೂ ಸ್ಮಾರ್ಟ್ಫೋನ್ ಬಳಸಬಹುದು. ಸೆಕ್ಟರ್ ಅಧಿಕಾರಿ ಮತದಾನ ಮುಗಿದ ಕೂಡಲೇ ಮತಗಟ್ಟೆಗೆ ಸಂಬಂಧಿಸಿದ ಎಲ್ಲ ಅಂಕಿ ಅಂಶ ಮಾಹಿತಿಯನ್ನು ಸ್ಮಾರ್ಟ್ಫೋನ್ ಮುಖೇನ ಜಿಲ್ಲಾ ಚುನಾವಣಾ ವಿಭಾಗದ ವೆಬ್ಸೈಟ್ಗೆ ರವಾನಿಸುತ್ತಾರೆ. ಅಲ್ಲಿಯೇ ಜಿಲ್ಲಾ ಚುನಾವಣಾಧಿಕಾರಿ ಎಲ್ಲ ಮತಗಟ್ಟೆಗಳ ಮತದಾನದ ಸಮಗ್ರ ವಿವರ ಪಡೆಯುತ್ತಾರೆ. ಇದೆಲ್ಲವೂ ಮತದಾನ ಮುಗಿದ ಕೆಲವೇ ನಿಮಿಷಗಳಲ್ಲಿ ನಡೆಯುತ್ತದೆ. ಇದರಿಂದ ತ್ವರಿತವಾಗಿ ಮತದಾನದ ಸಮಗ್ರ ಮಾಹಿತಿಯನ್ನು ನೀಡಲು ಸಾಧ್ಯವಿದೆ.
ಈ ಕ್ರಮದಿಂದ ಮತಗಟ್ಟೆ ಸಿಬ್ಬಂದಿಗಳು ಡಿಮಸ್ಟರಿಂಗ್ ಕೇಂದ್ರಕ್ಕೆ ಬಂದು ವರದಿ ಒಪ್ಪಿಸಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಮತಯಂತ್ರ, ಸರಂಜಾಮನ್ನು ಒಪ್ಪಿಸಿ ಕೂಡಲೇ ಮನೆಗೆ ತೆರಳಬಹುದು. ಜಿಲ್ಲಾಧಿಕಾರಿ ಹರ್ಷಗುಪ್ತರ ಈ ಪ್ರಯೋಗವನ್ನು ರಾಜ್ಯ ಚುನಾವಣಾ ಆಯೋಗ ಶ್ಲಾಘಿಸಿದ್ದು, ಮುಂದಿನ ಚುನಾವಣೆಯಲ್ಲಿ ಡಿಮಸ್ಟರಿಂಗ್ಗೆ ಸ್ಮಾರ್ಟ್ಫೋನ್ ಬಳಕೆ ಕುರಿತಂತೆ ಅಧಿಕೃತವಾಗಿ ಆದೇಶ ಹೊರಡಿಸಲಿದೆ.
ಸುಲಭ ತಂತ್ರಜ್ಞಾನ: 'ಸೆಕ್ಟರ್ ಅಧಿಕಾರಿಗಳು ಚುನಾವಣೆಗೆ ವಾರಕ್ಕೆ ಮೊದಲು ಮತಗಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಸಮಗ್ರ ವಿವರವನ್ನು ಸ್ಮಾರ್ಟ್ಫೋನ್ ಮುಖೇನ ಜಿಲ್ಲಾಧಿಕಾರಿಗೆ ಕಳುಹಿಸಲಾಗುತ್ತಿತ್ತು. ಇದಕ್ಕೆ ಜಿಪಿಎಸ್ ಅಳವಡಿಸಲಾಗಿದ್ದು, ಸೆಕ್ಟರ್ ಅಧಿಕಾರಿಗಳು ಎಲ್ಲಿದ್ದಾರೆ ಎಂಬುದೂ ಗೊತ್ತಾಗುತ್ತದೆ.
ಚುನಾವಣಾ ಮುನ್ನಾ ದಿನ ಮತಗಟ್ಟೆ ವ್ಯವಸ್ಥೆಯ ಬಗ್ಗೆ, ಚುನಾವಣಾ ದಿನ ಗಂಟೆಗೊಮ್ಮೆ ಮತದಾನದ ಸಮಗ್ರ ಮಾಹಿತಿ ಹಾಗೂ ಮತದಾನ ಮುಗಿದಾಕ್ಷಣ ಇಡೀ ದಿನದ ಮತಗಟ್ಟೆ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ರವಾನಿಸಲಾಗಿದೆ. ಇದೊಂದು ಸುಲಭ, ಉತ್ತಮ ತಂತ್ರಜ್ಞಾನ ವ್ಯವಸ್ಥೆ' ಎನ್ನುತ್ತಾರೆ ಸೆಕ್ಟರ್ ಅಧಿಕಾರಿಯಾಗಿದ್ದ ಪುತ್ತೂರು ಮೆಸ್ಕಾಂ ಎಇಇ ಲೋಹಿತ್.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

