ಅರಿಶಿಣ ಡ್ರಾಪ್ಸ್ ತಗೊಳ್ಳಿ, ಆರೋಗ್ಯವಂತರಾಗಿರಿ!
ಮಂಗಳೂರು: 'ಅರಿಶಿಣ ಡ್ರಾಪ್ಸ್ ತಗೊಳ್ಳಿ, ಆರೋಗ್ಯವಂತರಾಗಿ....'
ಮುಂದೆ ಇಂಥದ್ದೊಂದು ಸ್ಲೋಗನ್ ಬಂದರೆ ಅಚ್ಚರಿಬೇಡ. ಏಕೆಂದರೆ ಶುದ್ಧ ಅರಿಶಿಣದಿಂದ ದ್ರಾವಣವೊಂದನ್ನು ತಯಾರಿಸಿ ದೇಶೀಯ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಮಾನವನಿಗೆ ಬಾಧಿಸುತ್ತಿರುವ ನಾನಾ ಕಾಯಿಲೆಗಳಿಗೆ ರಾಮಬಾಣವಾಗಿ ಇದನ್ನು ಉಪಯೋಗಿಸಲು ಸಾಧ್ಯ ಎಂಬುದನ್ನು ವೈದ್ಯಕೀಯ ಜಗತ್ತು ತೋರಿಸಲು ಮುಂದಾಗಿದೆ.
ಕಚ್ಚಾ ಅರಿಶಿಣ ಬೇರನ್ನು ಪುಡಿ ಮಾಡಿ, ಸೋಸಿ, ಅದರ ಸಾರ ಹೊರತೆಗೆದು ರಸದ ರೂಪದಲ್ಲಿ ತಿಳಿಯಾದ ನಸುಗೆಂಪು ಹಾಗೂ ಹಳದಿಯುಕ್ತ ದ್ರಾವಣವೂ ನಾನಾ ಔಷಧಗಳ ಸಾಲಿಗಿನ್ನು ಸೇರಲಿದೆ. ಬಿಸಿ ನೀರಿನೊಂದಿಗೆ ಎರಡು ಡ್ರಾಪ್ಸ್ ಶುದ್ಧ ಅರಿಶಿಣ ದ್ರಾವಣ ಸೇವಿಸಿ ಆರೋಗ್ಯವಂತರಾಗಿ ಎಂಬ ಸಂದೇಶ ಸಾರುತ್ತಿದೆ.
ಅಸ್ಸಾಂ ಅರಿಶಿನ, ಕುಮಟಾ ಉತ್ಪನ್ನ: ಇಲ್ಲಿ ಡ್ರಾಪ್ಸ್ ತಯಾರಿಕೆಗೆ ಬಳಕೆಯಾಗುವ ಅರಿಶಿಣ ಅಸ್ಸಾಂನದ್ದು. ಅಲ್ಲಿಂದಲೇ ಡ್ರಾಪ್ಸ್ಗೆ ಬೇಕಾಗುವಷ್ಟು ಅರಿಶಿಣವನ್ನು ತರಿಸಲಾಗುತ್ತದೆ. ಕುಮಟಾ ಹೊಳೆಗದ್ದೆಯ ಬೆತ್ತಗೇರಿಯ ನಿರ್ಮಲಾ ಫುಡ್ ಪ್ರೊಸೆಸಿಂಗ್ ಘಟಕದಲ್ಲಿ ಇದರ ಉತ್ಪಾದನೆಯಾಗುತ್ತದೆ. ಅರಿಶಿಣದಲ್ಲಿ 30 ಬಗೆ ತಳಿಗಳಿದ್ದು, ಅಸ್ಸಾಂನಲ್ಲಿ ಬೆಳೆಯುವ ಶುದ್ಧ ಅರಿಶಿಣವನ್ನು ಈ ಔಷಧಿ ತಯಾರಿಕೆಗೆ ಬಳಸಲಾಗುತ್ತದೆ. ಅಲ್ಲಿಂದಲೇ ಅರಿಶಿಣ ತಂದು ಸಂಸ್ಕರಿಸಿ ಡ್ರಾಪ್ಸ್ ತಯಾರಿಸುತ್ತಾರೆ. ಬೆಂಗಳೂರಿನ ಉತ್ಥಾನ ಅಸೋಸಿಯೇಟ್ಸ್ ಈ ಉತ್ಪನ್ನವನ್ನು ಹಂದ್ರಾರಸ’ ಹೆಸರಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ಅರಿಶಿಣ ಬ್ಯಾಕ್ಟಿರಿಯಾ ನಿರೋಧಕ, ಫಂಗಸ್ ನಿರೋಧಕ, ವೈರಸ್ ನಿರೋಧಕವಾಗಿದ್ದು, ಭಾರತೀಯ ಮೂಲದ ಗಿಡಮೂಲಿಕೆ. ಹರಿದ್ರಾರಸವನ್ನು ನಿಯಮಿತವಾಗಿ ಅಥವಾ ಕ್ರಮಬದ್ಧವಾಗಿ ತೆಗೆದುಕೊಂಡರೆ ಬೊಜ್ಜು ಮತ್ತು ತೂಕ ಕಡಿಮೆಯಾಗುತ್ತದೆ. ಕೊಲೆಸ್ಟ್ರಾಲ್ ಆರೋಗ್ಯಕರವಾಗಿರುತ್ತದೆ. ಪಿತ್ತಕೋಶದ ಸಮಸ್ಯೆ ದೂರವಾಗುತ್ತದೆ. ರಕ್ತಪರಿಚಲನೆ ಉತ್ತಮಗೊಂಡು ರಕ್ತ ಶುದ್ಧಿ ಆಗುತ್ತದೆ ಎನ್ನುತ್ತಾರೆ ಮಂಗಳೂರಿನ ವೇದಂ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕೇಶವರಾಜ್.
ಎಲ್ಲದಕ್ಕೂ ಅರಿಶಿಣ ಮದ್ದು!: ವೈದ್ಯಕೀಯ ಚಿಕಿತ್ಸೆಯಲ್ಲಿ ರಕ್ತಹೀನತೆ, ಅಲರ್ಜಿ, ಬಿಪಿ, ಕೊಲೆಸ್ಟ್ರಾಲ್, ಶೀತ, ಕಫ, ಕ್ಯಾನ್ಸರ್, ಸಕ್ಕರೆ ಕಾಯಿಲೆ, ಕೊಬ್ಬು, ವಿಷಯುಕ್ತ ಆಹಾರ ಸೇವನೆ, ಜ್ವರ, ಪಿತ್ತಕೋಶದಲ್ಲಿ ಕಲ್ಲು, ಅತಿಸಾರಭೇದಿ, ಅಜೀರ್ಣ, ಮೂರ್ಛೇರೋಗ, ಮುಟ್ಟಿನ ಸಮಸ್ಯೆ, ಮೂಲವ್ಯಾಧಿ, ಮೂತ್ರ ವಿಸರ್ಜನೆ ಸಮಸ್ಯೆ, ಅಲ್ಸರ್ ಹಾಗೂ ಗಾಯಗಳಂಥ ಸಮಸ್ಯೆಗಳ ಉಪಶಮನಕ್ಕೆ ಇದನ್ನು ಬಳಸುತ್ತಾರೆ. ಬಳಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು ಎನ್ನುತ್ತಾರೆ ಡಾ.ಕೇಶವರಾಜ್.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

