ನಿರುದ್ಯೋಗಿಗಳಿಗೆ ಮಸಾಜ್ ತರಬೇತಿ!
ಮಂಗಳೂರು: ನಿರುದ್ಯೋಗಿ ಯುವಕ, ಯುವತಿಯರು ಕೆಲಸವಿಲ್ಲ ಎಂದು ಸುಮ್ಮನೆ ಕೂರಬೇಕಾಗಿಲ್ಲ, ರಟ್ಟೆ ಬಲವಿದ್ದರೆ ಸಾಕು. ನಿಮಗೆ ಉದ್ಯೋಗ ಗ್ಯಾರಂಟಿ.
ನಿರುದ್ಯೋಗಿಗಳ ಉದ್ಯೋಗಕ್ಕೆ ಪೂರಕವಾಗಲು ಶಹರಿ ರೋಜ್‌ಗಾರ್ ಯೋಜನೆಯ ಸ್ಟೆಪ್‌ಅಪ್ ಘಟಕದ ಆಶ್ರಯದಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಾವಲಂಬನೆಗೆ ಈಗ ಮಸಾಜ್ ಥೆರಪಿ ಮತ್ತು ಪಿಸಿಯೋಥೆರಪಿ ತರಬೇತಿ ಯೋಜನೆ ಜಾರಿಗೆ ಬರುತ್ತಿದೆ. ನಿರುದ್ಯೋಗಿಗಳ ಕೈಗೆ ಉದ್ಯೋಗ ನೀಡುವ ಸರ್ಕಾರದ ಯೋಜನೆಯನ್ನು ಸ್ಥಳೀಯಾಡಳಿತ ಮತ್ತು ಆಯುರ್ವೇದ ಆಸ್ಪತ್ರೆಗಳ ಸಹಯೋಗದಲ್ಲಿ ನಗರ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ರಾಜ್ಯದ 7 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರುದ್ಯೋಗಿಗಳಿಗೆ ಮಸಾಜ್ ಥೆರಪಿ ತರಬೇತಿ ನಡೆಸುವಂತೆ ನಾಲ್ಕು ತಿಂಗಳ ಹಿಂದೆ ಸರ್ಕಾರವೇ ಸುತ್ತೋಲೆ ಹೊರಡಿಸಿತ್ತು. ಮಂಗಳೂರು ಮಹಾನಗರ ಪಾಲಿಕೆ ಇದನ್ನು ಮೊದಲಾಗಿ ಅನುಷ್ಠಾನಿಸುತ್ತಿದ್ದು, ಈಗಾಗಲೇ 44 ಮಂದಿ ತರಬೇತಿ ಪಡೆದಿದ್ದಾರೆ. ಇನ್ನೂ 20 ಮಂದಿ ತರಬೇತಿಗೆ ಹೆಸರು ನೋಂದಾಯಿಸಿದ್ದಾರೆ.
ತರಬೇತಿ ಉಚಿತ, ಉದ್ಯೋಗಕ್ಕೆ ನೆರವು: ಬಿಪಿಎಲ್ ಪಟ್ಟಿಯಲ್ಲಿರುವ ನಿರುದ್ಯೋಗಿ ಯುವಕ, ಯುವತಿಯರು ಮಸಾಜ್ ಥೆರಪಿ ತರಬೇತಿಗೆ ಸೇರಬಹುದು. ತರಬೇತಿ ಅವಧಿ 4 ತಿಂಗಳು. ಮಸಾಜ್ ಥೆರಪಿ, ಫಿಸಿಯೋ ಥೆರಪಿ ಕೊಡಲಾಗುತ್ತದೆ. ಮಂಗಳೂರಿನಲ್ಲಿ ವೇದಂ ಆಯುರ್ವೇದ ಆಸ್ಪತ್ರೆಯ ಡಾ.ಕೇಶವರಾಜ್ ಮತ್ತು ಡಾ.ಸಚಿನ್ ನಡ್ಕ ಥೆರಪಿ ತರಬೇತಿ ನೀಡುತ್ತಿದ್ದಾರೆ. ಮಸಾಜ್‌ನ ಮೂಲ ವಿಧಾನ ಸಹಿತ ಅವಶ್ಯಕ ತರಬೇತಿಯನ್ನು ಕೊಡಲಾಗುತ್ತಿದೆ.
ತರಬೇತಿ ಅಭ್ಯರ್ಥಿಗಳಿಗೆ ಶಹರೀ ರೋಜ್‌ಗಾರ್ ಯೋಜನೆಯಲ್ಲಿ ಮಾಸಿಕ ತಲಾ ರು. 10 ಸಾವಿರ ನೀಡಲಾಗುತ್ತಿದೆ. ಇದು ನಿರಂತರ ತರಬೇತಿ ಯೋಜನೆ. ಪ್ರಥಮ ಬ್ಯಾಚ್ ಯಶಸ್ವಿಯಾಗಿ ತರಬೇತಿ ಪೂರೈಸಿದೆ. ತರಬೇತಿ ಪೂರ್ಣಗೊಳಿಸಿದವರಿಗೆ ಮಹಾನಗರ ಪಾಲಿಕೆಯಿಂದ ಸರ್ಟಿಫಿಕೆಟ್ ನೀಡಲಾಗುವುದು ಎನ್ನುತ್ತಾರೆ ಶಹರೀ ರೋಜ್‌ಗಾರ್ ಯೋಜನಾ ಅಧಿಕಾರಿ ರೂಪ ಶೆಟ್ಟಿ.
ಇಲ್ಲಿ ತರಬೇತಿ ಪಡೆದವರು ಸ್ವಂತವಾಗಿ ಮಸಾಜ್ ಕೇಂದ್ರ ತೆರೆಯಬಹುದು. ಇಲ್ಲವೇ ಆಸ್ಪತ್ರೆಗಳಲ್ಲಿ ಮಸಾಜ್, ಫಿಸಿಯೋಥೆರಪಿ ನೀಡಬಹುದು. ಇದಲ್ಲದೆ ಹರ್ಬಲ್ ಬ್ಯೂಟಿ ಪಾರ್ಲರ್‌ಗಳಲ್ಲಿ ಮಸಾಜ್ ನಡೆಸಬಹುದು. ಮಹಾನಗರ ಪಾಲಿಕೆ ನೀಡುವ ಸರ್ಟಿಫಿಕೆಟ್ ಸಾಕಾಗುತ್ತದೆ. ಸ್ವಉದ್ಯೋಗಕ್ಕೆ ರು. 2 ಲಕ್ಷವರೆಗೆ ರೋಜ್‌ಗಾರ್ ಯೋಜನೆಯಲ್ಲಿ ಸಾಲ ಸೌಲಭ್ಯವಿದೆ. ಇದರಲ್ಲಿ ರು. 50 ಸಾವಿರ ಸಬ್ಸಿಡಿ ಎನ್ನುತ್ತಾರೆ ಡಾ.ಸಚಿನ್ ನಡ್ಕ.
ನಿರುದ್ಯೋಗಿಗಳಿಗೆ ಇದು ಅತ್ಯುತ್ತಮ ಯೋಜನೆ. ಈ ತರಬೇತಿ ಹೊಸ ಅನುಭವ ನೀಡಿದೆ. ಇನ್ನು ಸ್ವಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿದೆ. ಆಸಕ್ತರಿಗೆ ಇದು ಉತ್ತಮ ಉದ್ಯೋಗವಾಗಿದ್ದು, ಭವಿಷ್ಯವಿದೆ ಎನ್ನುತ್ತಾರೆ ಅಭ್ಯರ್ಥಿ ಪ್ರಶಾಂತ್.
ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

