ದಕ್ಷಿಣ ಕನ್ನಡ

ಬಸ್-ಬೈಕ್ ಡಿಕ್ಕಿ: ಶಿಕ್ಷಕಿ ಸಾವು, ಸವಾರ ಗಂಭೀರ

Published On :

ಮೂಲ್ಕಿ: ಖಾಸಗಿ ಬಸ್- ಬೈಕ್ ಡಿಕ್ಕಿಯಾಗಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಶಿಕ್ಷಕಿ ಸಾವಿಗೀಡಾಗಿದ್ದು, ಸವಾರ ತೀವ್ರ ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಮೂಲ್ಕಿಯ ಕಾರ್ನಾಡು ಬೈಪಾಸ್‌ನ ಮಾರುತಿ ಶೋರೂಮ್ ಎದುರುಗಡೆ  ನಡೆದಿದೆ.
ಕಿನ್ನಿಗೋಳಿ ಯುಗಪುರುಷದ ಕಟ್ಟಡದಲ್ಲಿರುವ ನಾರಾಯಣ ಗುರು ವಿದ್ಯಾಸಂಸ್ಥೆ ಶಿಕ್ಷಕಿ ಅಮಿತಾ (26) ಮೃತರು. ಬೈಕ್ ಸವಾರ ಸತೀಶ್ ಪದ್ಮಶಾಲಿ ತೀವ್ರ ಗಾಯಗೊಂಡಿದ್ದು, ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿರುವ ತಮ್ಮ ಸಂಬಂಧಿಕರನ್ನು ನೋಡಲು ಅಮಿತಾ, ಮನೆಯ ಹತ್ತಿರದ ನಿವಾಸಿ ಸತೀಶ್ ಪದ್ಮಶಾಲಿ ಅವರ ಬೈಕ್‌ನಲ್ಲಿ ಹೋಗಿದ್ದರು. ಬಳಿಕ ಮೂಲ್ಕಿಗೆ ಹಿಂತಿರುಗಿ ಬರುತ್ತಿದ್ದಾಗ ಕಾರ್ನಾಡು ಬೈಪಾಸ್ ಬಳಿ ಹಿಂದಿನಿಂದ ಬರುತ್ತಿದ್ದ ಖಾಸಗಿ ತಡೆರಹಿತ ಬಸ್ಸು ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು. ಪರಿಣಾಮ ಬೈಕ್ ಹಿಂಬದಿಯಲ್ಲಿದ್ದ ಅಮಿತಾ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ತೀವ್ರ ಗಾಯಗೊಂಡರು. ಅವರನ್ನು ಕೂಡಲೆ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸತೀಶ್ ತೀವ್ರ ಗಾಯಗೊಂಡು ಮುಕ್ಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯ: ಬಾಲ್ಯ ವಿವಾಹಕ್ಕೆ ಅಧಿಕಾರಿಗಳ ತಡೆ
ಸುಳ್ಯ: ಕಳಂಜ ಗ್ರಾಮದ ಕೋಟೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ 22ರಂದು ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ಶಿಶು ಕಲ್ಯಾಣ ಅಧಿಕಾರಿಗಳ ತಂಡ ತಡೆದಿದೆ. ಕಳಂಜ ಗ್ರಾಮದ ಮುಂಡುಗಾರು ಚನಿಯ ಮುಗೇರ ಎಂಬವರ ಪುತ್ರಿ ಕವಿತಾ ಮತ್ತು ಗುತ್ತಿಗಾರು ಗ್ರಾಮದ ಮಂತ್ರಮಜಲು ಶೀನ ಎಂಬವರ ಪುತ್ರ 24 ವರ್ಷ ಪ್ರಾಯದ ಶಿವರಾಮ ಎಂಬವರ ವಿವಾಹಕ್ಕೆ ಶಿಶು ಕಲ್ಯಾಣಧಿಕಾರಿ ತಡೆ ನೀಡಿದ್ದಾರೆ. ಇದಕ್ಕೆ ಕಾರಣ- ಕವಿತಾಗೆ 18 ವರ್ಷ ತುಂಬಲು ಇನ್ನೂ ನಾಲ್ಕು ತಿಂಗಳು ಬಾಕಿ ಇದೆ.
ಸಹಾಯಧನಕ್ಕೆ ಹೋದಾಗ ಪ್ರಕರಣ ಬೆಳಕಿಗೆ: ಪರಿಶಿಷ್ಟ ಜಾತಿಯ ಈ ಇಬ್ಬರ ವಿವಾಹ ನಡೆಸಲು ಆಮಂತ್ರಣ ಪತ್ರಿಕೆ ಮುದ್ರಿಸಿ ಎಲ್ಲ ತಯಾರಿ ಮಾಡಲಾಗಿತ್ತು. ಈ ಮದುವೆಗೆ ಎಸ್‌ಸಿ ಸಹಾಯಧನ ಯೋಜನೆಯಡಿ ಧನ ಸಹಾಯ ನೀಡಿ ಎಂದು ಕವಿತಾ ಅವರ ತಂದೆ ಸ್ಥಳೀಯ ಕಳಂಜ ಗ್ರಾಮ ಪಂಜಾಯಿತಿಗೆ ಅರ್ಜಿ ನೀಡಿದ್ದರು. ಇದಕ್ಕೆ ಅಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತರುಣಿಯ ಜನನ ಪ್ರಮಾಣ ದೃಢಪತ್ರಿಕೆ ನೀಡಿ ಎಂದು ಕೇಳಿದಾಗ ಅವರು ನೀಡಿರಲಿಲ್ಲ. ಈ ಬಗ್ಗೆ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಅವರು ಸುಳ್ಯ ಸಿಡಿಪಿಒ ಗಮನಕ್ಕೆ ತಂದು ದಾಖಲೆ ಪರಿಶೀಲಿಸಿದಾಗ ತರುಣಿಯ ಜನನ ಪ್ರಮಾಣ ಪತ್ರದಲ್ಲಿ ಜನ್ಮ ದಿನಾಂಕ 16.09.1995 ಎಂದು ನಮೂದಾಗಿತ್ತು. 18 ವರ್ಷ ಪೂರ್ತಿಯಾಗಲು ಇನ್ನೂ 4 ತಿಂಗಳು ಬಾಕಿ ಇರುವ ಕವಿತಾ ಮನೆಗೆ ಸಿಡಿಪಿಒ ತೆರಳಿ ಮದುವೆ ಮಾಡದಂತೆ ತಡೆಯಾಜ್ಞೆ ನೀಡಿದರು. ಮದುಮಗನಿಗೂ ಈ ಬಗ್ಗೆ ಸೂಚನೆ ನೀಡಿದ್ದಾರೆ.
  ಅಲ್ಲದೆ, ನಾಲ್ಕು ತಿಂಗಳು ಕಳೆದ ಬಳಿಕ ಮದುವೆಯಾಗಲು ಸೂಚಿಸಿದ್ದಾರೆ. ಬಳಿಕ ಅವರಿಬ್ಬರಿಂದಲೂ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.

ಕಡಲಿಗೆ ಬಿದ್ದು ಮೀನುಗಾರ ಸಾವು
ಮಂಗಳೂರು: ಮೀನುಗಾರಿಕೆ ಧಕ್ಕೆಯಲ್ಲಿ ಬೋಟ್‌ನಲ್ಲಿ ಮಲಗಿದ್ದ ಭಟ್ಕಳ ಮೂಲದ ಲಕ್‌ಮಯ್ಯ (45) ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಮೀನುಗಾರಿಕೆ ನಡೆಸುತ್ತಿದ್ದ ಲಕ್‌ಮಯ್ಯ ಬೋಟ್‌ನಲ್ಲಿದ್ದವರಿಗೆ ಅಡುಗೆ ಮಾಡುತ್ತಿದ್ದರು. ಸಾರಾಯಿ ಕುಡಿಯುವ ಅಭ್ಯಾಸವಿದ್ದು ಶುಕ್ರವಾರ ಮಧ್ಯಾಹ್ನ ಮದ್ಯ ಸೇವಿಸಿ ಊಟ ಮಾಡಿ ಬೋಟ್‌ನಲ್ಲಿ ಮಲಗಿದ್ದರು. ಈ ವೇಳೆ ಅಯತಪ್ಪಿ ಕಡಲಿಗೆ ಬಿದ್ದಿದ್ದು, ಮೀನುಗಾರರು ಕಡಲಿಗೆ ಇಳಿದು ಹುಡುಕಾಡಿ ಲಕ್‌ಮಯ್ಯ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಕಾರ್ಕಳ: ವ್ಯಕ್ತಿ ಆತ್ಮಹತ್ಯೆ
ಕಾರ್ಕಳ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ನಲ್ಲೂರು ಗ್ರಾಮದಲ್ಲಿ ಗುರುವಾರ ನಡೆದಿದೆ. ಆನಂದ (41) ಮೃತರು. ಇವರು ವಿಪರೀತ ಶರಾಬು ಸೇವಿಸುವ ಚಟ ಹೊಂದಿದ್ದು, ಬಹುಷ ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಮೃತರ ಸಹೋದರ ಅಣ್ಣು ಆಚಾರಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಂತರ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಆತ್ಮಹತ್ಯೆ
ಕಾಪು: ಅಸೌಖ್ಯದಿಂದ ಬಳಲುತ್ತಿದ್ದ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಏಣಗುಡ್ಡೆ ಗ್ರಾಮದ ಕಟಪಾಡಿ ಅಗ್ರಹಾರದಲ್ಲಿ ಶುಕ್ರವಾರ ನಡೆದಿದೆ. ಸುಧಾ ಅವರು 2 ತಿಂಗಳಿನಿಂದ ಅಸೌಖ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗದೆ ಇದ್ದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಪತಿ ಶಂಕರ ಆಚಾರ್ಯ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು- ಬೈಕ್ ಡಿಕ್ಕಿ: ಸವಾರಗೆ ಗಾಯ
ಸುಳ್ಯ: ದೊಡ್ಡತೋಟದಲ್ಲಿ ಶನಿವಾರ ಬೆಳಗ್ಗೆ ಬೈಕ್ ಮತ್ತು ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ. ಹರೀಶ್ ಶಿಡ್ಲುಕಜೆ ಗಾಯಗೊಂಡಿದ್ದು, ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರು. 20 ಸಾವಿರ ಮೌಲ್ಯದ ಸೊತ್ತು ಕಳವು
ಕಾರ್ಕಳ: ನಗರದ ಹಿರಿಯಂಗಡಿ ಎಂಬಲ್ಲಿನ ಮನೆಗೆ ನುಗ್ಗಿದ ಕಳ್ಳರು ರು. 20 ಸಾವಿರ ಮೌಲ್ಯದ ಸೊತ್ತು ದೋಚಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಹಿರಿಯಂಗಡಿ ನಿವಾಸಿ ಪರ್ವಿನ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿಟ್ಟಿದ್ದ ರು. 20 ಸಾವಿರ ಮೌಲ್ಯದ ಸೊತ್ತು ಕಳವು ನಡೆಸಿದ್ದಾರೆ. ಈ ಕುರಿತು ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಳೆಯಲ್ಲಿ ಮುಳುಗಿ ವ್ಯಕ್ತಿ ಸಾವು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಲ್ಯ ಗ್ರಾಮದ ದೇರಾಜೆ ನಿವಾಸಿ ಬಾಲಕೃಷ್ಣ ಗೌಡ (30) ಎಂಬವರು ಬಲ್ಯದ ಕೊಲ್ಯದ ಕಟ್ಟ ಎಂಬಲ್ಲಿ ಗುಂಡ್ಯ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಆತ್ಮಹತ್ಯೆಯ ಶಂಕೆ ಮೂಡಿಸಿದೆ. ಬಲ್ಯ ಗ್ರಾಮದ ದೇರಾಜೆ ನಿವಾಸಿ ಕೃಷ್ಣಪ್ಪ ಗೌಡರ ಪುತ್ರ ಬಾಲಕೃಷ್ಣ ಗೌಡ ಶುಕ್ರವಾರ ಸಂಜೆ ಮನೆಯಿಂದ ಹೊರಟುಹೋದವರು ರಾತ್ರಿಯಾದರೂ ಬಂದಿಲ್ಲವಾದ್ದರಿಂದ ಹುಡುಕಾಟ ನಡೆಸಿದಾಗ ಗುಂಡ್ಯ ಹೊಳೆಯ ಕಟ್ಟ ಎಂಬಲ್ಲಿ ಶವ ಪತ್ತೆಯಾಯಿತು. ಮೃತರು ಪಾರ್ಶ್ವವಾಯು ಪೀಡಿತರಾಗಿದ್ದು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.