ದಕ್ಷಿಣ ಕನ್ನಡ

ಅಂತರ್ಜಲ ಕುಸಿತ, ಪ್ರತಿಬಂಧಕ ಕ್ರಮ ಆಗಿಲ್ಲ

Published On :

ಮಂಗಳೂರು: ಜಿಲ್ಲೆಯಲ್ಲಿರುವುದು ಒಟ್ಟು 35 ತೆರೆದ ಬಾವಿ, 19 ಕೊಳವೆಬಾವಿ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಂತರ್ಜಲ ಮಟ್ಟ ಕುಸಿತ. ಕೆಲವು ಬಾವಿಗಳನ್ನು ಮುಚ್ಚಿದ್ದರೆ, ಕೊಳವೆಬಾವಿ ಬಾಯಾರಿದ ಸ್ಥಿತಿಯಲ್ಲಿದೆ. ಇದು ಜಿಲ್ಲೆಯಲ್ಲಿ ಅಂತರ್ಜಲ ಮಟ್ಟದ ಸದ್ಯದ ಸ್ಥಿತಿಗತಿ.
ಪುತ್ತೂರಿನ ರೆಂಜ ಮತ್ತು ಸುಳ್ಯದಲ್ಲಿ ತೆರೆದ ಬಾವಿಯನ್ನು ನೀರಿಲ್ಲ ಎಂದು ಮುಚ್ಚಿದ್ದಾರೆ. ದರ್ಬೆಯಲ್ಲಿ ರಸ್ತೆ ಅಗಲೀಕರಣದಿಂದ ಬಾವಿಯನ್ನು ಮುಚ್ಚಲಾಗಿದೆ. ಕೊಳವೆಬಾವಿ ಸುತ್ತಮುತ್ತಲಿನ ಕುಡಿವ ಉದ್ದೇಶಕ್ಕೆ ಮತ್ತು ಕೃಷಿ ಪಂಪ್ಸೆಟ್ಗಳಿಂದ ನಿರಂತರವಾಗಿ ನೀರನ್ನು ಪಂಪ್ ಮಾಡುವ ಕಾರಣ ಕೋಟೆಕಾರಿನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಇಲ್ಲಿ 7.60 ಮೀಟರ್ ಇಳಿಕೆಯಾದರೆ, ರೆಂಜ ಮತ್ತು ನಾರಾವಿಯಲ್ಲಿ 4.50 ಮೀಟರ್, ರಾಯಿಯಲ್ಲಿ 4.15 ಮೀಟರ್ಗೆ ಕುಸಿದಿದೆ.
ಕುಸಿದ ಅಂತರ್ಜಲ: ಬೇಸಗೆಯಲ್ಲಿ ಜಿಲ್ಲೆಯಲ್ಲಿ ಅಂತರ್ಜಲ ಕುಸಿತ ಬಗ್ಗೆ ಅಂತರ್ಜಲ ಇಲಾಖೆ ಅಧ್ಯಯನ ನಡೆಸಿದ್ದು, ಅದಕ್ಕೆಂದೇ ನಿರ್ದಿಷ್ಟ ಕೊಳವೆಬಾವಿಗಳನ್ನು ಗುರುತಿಸಿದೆ. ಬಂಟ್ವಾಳದಲ್ಲಿ ಮಾಣಿ, ಮುಡಿಪು, ರಾಯಿ, ಬೆಳ್ತಂಗಡಿಯ ನಾರಾವಿ, ಉಜಿರೆ, ಉರುವಾಲು, ಮಂಗಳೂರಿನ ಕೋಟೆಕಾರು, ಬೆಳುವಾಯಿ, ಮೂಡುಬಿದಿರೆ, ಶಿರ್ತಾಡಿ, ಸುರತ್ಕಲ್, ಪುತ್ತೂರಿನ ಕಡಬ, ಕುಂತೂರು, ರೆಂಜ, ಸರ್ವೇ, ಸುಳ್ಯದ ಅರಂತೋಡು, ಬೆಳ್ಳಾರೆ, ಗುತ್ತಿಗಾರು, ಜಾಲ್ಸೂರುಗಳಲ್ಲಿ ಅಭ್ಯಯನ ಕೈಗೊಂಡಿದೆ. ತೆರೆದ ಬಾವಿ ಇರುವಲ್ಲೂ ಪರಿಸ್ಥಿತಿ ಸುಧಾರಿಸಿಲ್ಲ. ಫರಂಗಿಪೇಟೆ, ಉಕ್ಕುಡ, ಬಡಗಕಾರಂದೂರು, ಮುಂಡಾಜೆ, ಪುಂಜಾಲಕಟ್ಟೆ, ವೇಣೂರು, ಬಜ್ಪೆ, ಗಂಜಿಮಠ, ಕಾವೂರು, ಮೂಲ್ಕಿ, ಗುಂಡ್ಯ, ದರ್ಬೆ, ಉಪ್ಪಿನಂಗಡಿ, ಸಂಪಾಜೆ, ಸುಳ್ಯ, ಸುಬ್ರಹ್ಮಣ್ಯಗಳಲ್ಲಿ ತೆರೆದ ಬಾವಿಗಳಲ್ಲಿ ಅಂತರ್ಜಲ ಪ್ರಮಾಣ ಇಳಿಮುಖವಾಗಿದೆ.
43 ಗ್ರಾಮಗಳಲ್ಲಿ ಅಂತರ್ಜಲ ಅತಿ ಬಳಕೆ: ಬಂಟ್ವಾಳದ 24, ಮಂಗಳೂರಿನ 5, ಪುತ್ತೂರಿನ 14 ಸೇರಿ ಒಟ್ಟು 43 ಗ್ರಾಮಗಳಲ್ಲಿ ಅಂತರ್ಜಲ ಅತಿ ಬಳಕೆಯ ಅಪಾಯವನ್ನು ಹೇಳಲಾಗಿದೆ. ಜಿಲ್ಲಾ ಅಂತರ್ಜಲ ಕಚೇರಿಯ ಅಧ್ಯಯನ ವರದಿಯಲ್ಲಿ ಇದನ್ನು ಹೇಳಲಾಗಿದ್ದು, ಜಿಲ್ಲಾಡಳಿತ ಮನಸ್ಸು ಮಾಡಿದರೆ ಅಂತರ್ಜಲ ಸಂರಕ್ಷಣೆಗೆ ಈ ಗ್ರಾಮಗಳಲ್ಲಿ ಕಾನೂನನ್ನು ಜಾರಿಗೆ ತರಬಹುದು.
2009ರಲ್ಲಿ ಸಿದ್ಧಪಡಿಸಿದ ವರದಿಯನ್ನು 2011ರಲ್ಲಿ ಜಿಲ್ಲಾಡಳಿತ ಪ್ರಕಟಿಸಿದೆ. 2011ರ ಅಧಿನಿಯಮ ಪ್ರಕಾರ ಸರ್ಕಾರಿ ಅಧಿಸೂಚಿತ ಪ್ರದೇಶಗಳಲ್ಲಿ ಮಾತ್ರ ಕೊಳವೆಬಾವಿ ಕೊರೆಯಲು ಅನುಮತಿ ಕಡ್ಡಾಯಗೊಳಿಸಲಾಗಿದೆ. ಇದರಲ್ಲಿ ದ.ಕ.ಜಿಲ್ಲೆಯ ತಾಲೂಕುಗಳು ಇಲ್ಲ. ಆದರೆ ಕುಡಿವ ನೀರಿನ ಸಂರಕ್ಷಣೆ ಸಲುವಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ.
ಬೋರ್ವೆಲ್ಗೆ ಪರವಾನಗಿ ಕಡ್ಡಾಯ: ಜಿಲ್ಲೆಯ ಭೌಗೋಳಿಕ ರಚನೆ ಪ್ರಕಾರ ಮುರಕಲ್ಲು ಜಾಸ್ತಿ ಇದ್ದು, ಅಂತರ್ಜಲ ಸಂಗ್ರಹಕ್ಕೆ ಅವಕಾಶ ಕಡಿಮೆ. ಒಮ್ಮೆಲೇ ಮಳೆ ಬಂದುಹೋದರೆ ಅಂತರ್ಜಲ ಸಂಗ್ರಹ ಅಸಾಧ್ಯ. ಪದೇ ಪದೇ ಮಳೆ ಬರಬೇಕು ಎನ್ನುವುದು ಅಂತರ್ಜಲ ತಜ್ಞರ ಅಭಿಪ್ರಾಯ. ಅಂತರ್ಜಲ ಸಂಗ್ರಹ ಕುರಿತು ಈಗ ಮತ್ತೆ ಅಧ್ಯಯನ ನಡೆಸಿದ್ದು, ವರದಿ ಅಂತಿಮಗೊಂಡಿಲ್ಲ. ಅಂತರ್ಜಲ ಇಲಾಖೆಯಿಂದ ವರದಿ ಬಂದ ಬಳಿಕ ಅಂತರ್ಜಲ ಅತಿ ಬಳಕೆ ಗ್ರಾಮಗಳಲ್ಲಿ ಬೋರ್ವೆಲ್ ಕೊರೆಯಲು ಜಿಲ್ಲಾಡಳಿತದಿಂದ ಅನುಮತಿ ಬೇಕಾಗುತ್ತದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಅಂತರ್ಜಲ ಪ್ರಾಧಿಕಾರ ಅಥವಾ ವಿತ್ತ ಪ್ರಾಧಿಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ ಎನ್ನುತ್ತಾರೆ ಜಿಲ್ಲಾ ಭೂ, ಗಣಿ ವಿಜ್ಞಾನ, ಅಂತರ್ಜಲ ನಿರ್ದೇಶನಾಲಯ ಅಧಿಕಾರಿ ಹರೀಶ್.
- ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.