ದಕ್ಷಿಣ ಕನ್ನಡ

ನೀರು, ರಸ್ತೆ ಸಮಸ್ಯೆಗೆ ತಕ್ಷಣ ಸ್ಪಂದಿಸಿ

Published On :

ಪುತ್ತೂರು: ಜನರ ಮೂಲಭೂತ ಆವಶ್ಯಕತೆಯಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಾರ್ವಜನಿಕರಿಗೆ ತೊಂದರೆಯಾದರೆ ಅಧಿಕಾರಿಗಳೇ ನೇರ ಜವಾಬ್ದಾರಿಯಾಗಲಿದ್ದೀರಿ ಎಂದು ಶಾಸಕಿ ಶಕುಂತಳಾ ಶೆಟ್ಟಿ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.
 ಸೋಮವಾರ ಪುರಸಭಾ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ಸಂಗ್ರಹಿಸಿದರು.
ಚರಂಡಿ ದುರಸ್ತಿ ಮಾಡಿ: ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ದುರಸ್ತಿಗೊಳಿಸುವ ಕಾರ್ಯ ನಡೆಯಬೇಕು. ಮಳೆಗಾಲಕ್ಕೆ ಮುನ್ನ ರಸ್ತೆ ಬದಿಯ ಚರಂಡಿಗಳ ಹೂಳೆತ್ತಬೇಕು, ವಿದ್ಯುತ್ ಪ್ರಸರಣಕ್ಕೆ ತೊಡಕಾಗುತ್ತಿರುವ ಮರಗಳ ಕೊಂಬೆಗಳನ್ನು ಕಡಿಯುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಚರಂಡಿಯಲ್ಲಿ ಹರಿಯಬೇಕಾದ ಮಳೆ ನೀರು ರಸ್ತೆಯಲ್ಲಿ ಹರಿದರೆ ರಸ್ತೆ ಹಾಳಾಗುತ್ತದೆ. ಮಳೆ ನೀರು ಹರಿದು ರಸ್ತೆ ಹಾಳಾದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿದರು.
ಟ್ಯಾಂಕರ್ ಮೂಲಕ ನೀರು: ಪುರಸಭಾ ವ್ಯಾಪ್ತಿಯಲ್ಲಿ ಕಾರೆಕ್ಕಾಡು, ಸೀಟಿಗುಡ್ಡೆ, ಸಾಲ್ಮರ, ಸಾಮೆತ್ತಡ್ಕ ಮತ್ತಿತರ ಕಡೆಗಳಲ್ಲಿ ನೀರಿನ ಸಮಸ್ಯೆಗಳಿದ್ದು, ಇದನ್ನು ತಕ್ಷಣ ಪರಿಹರಿಸಬೇಕು. ನೀರಿಲ್ಲದ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಶಕುಂತಳಾ ಶೆಟ್ಟಿ, ಕಸ ವಿಲೇವಾರಿ ದಿನನಿತ್ಯ ನಡೆಯಬೇಕು. ರಸ್ತೆಯಲ್ಲಿ ಎಲ್ಲಿಯೂ ಕಸ ಕಾಣುವಂತಾಗಬಾರದು. ಈ ಎಲ್ಲ ಕೆಲಸಗಳನ್ನು ಅಧಿಕಾರಿಗಳು ಜವಾಬ್ದಾರಿ ಅರಿತು ಮಾಡಬೇಕು ಎಂದು ಹೇಳಿದರು.
ರಸ್ತೆ ಅಗೆತ ಸಲ್ಲದು: ಡಾಂಬರಿಕರಣ ಕಾಮಗಾರಿ ಪೂರ್ಣಗೊಂಡ ರಸ್ತೆಗಳನ್ನು ಇನ್ನಿತರ ಉದ್ದೇಶಕ್ಕೆ ಅಗೆತ ಮಾಡಲು ಅವಕಾಶ ನೀಡಬಾರದು. ದುರಸ್ತಿಯಾಗಿರುವ ರಸ್ತೆಗಳನ್ನು ಅನವಶ್ಯಕವಾಗಿ ಅಗೆದು ಹಾಳು ಮಾಡಿದರೆ ಅದಕ್ಕೆ ಅಧಿಕಾರಿಗಳು ಜವಾಬ್ದಾರರಾಗಲಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
 ಇದೇ ಸಂದರ್ಭ ಸುಳ್ಯಪದವು ರಸ್ತೆಯನ್ನು ಯಾಕೆ ಈತನಕ ದುರಸ್ತಿಪಡಿಸಿಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಲ್ಲಿ ಶಾಸಕಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಂಜಿನಿಯರ್ ಶಿವಕುಮಾರ್, ಈ ರಸ್ತೆಯಲ್ಲಿ 6 ಕಿ.ಮೀ. ದುರಸ್ತಿಗೆ ಅನುದಾನ ಮಂಜೂರಾಗಿದ್ದು, 4 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. 2 ಕಿ.ಮೀ. ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.