ವಿಮಾನ ದುರಂತಕ್ಕೆ 3 ವರ್ಷ: ಇನ್ನೂ ಆಗಿಲ್ಲ ಸ್ಮಾರಕ
ಜಿತೇಂದ್ರ ಕುಂದೇಶ್ವರ
ಮಂಗಳೂರು: ಬಜಪೆ ಕೆಂಜಾರಿನಲ್ಲಿ 158 ಮಂದಿಯನ್ನು ಬಲಿ ಪಡೆದ ವಿಮಾನ ದುರಂತಕ್ಕೆ 3 ವರ್ಷ. ಆದರೂ ವಿಮಾನ ದುರಂತ ಸ್ಮಾರಕ ನಿರ್ಮಾಣ ಇನ್ನೂ ಮರೀಚಿಕೆಯಾಗಿದೆ. ದುರಂತ ನಡೆದ ಸ್ಥಳದಲ್ಲಿ ಮಡಿದವರ ಹೆಸರು ಹಾಕಿ ನಿರ್ಮಿಸಲಾದ ತಾತ್ಕಾಲಿಕ ಸ್ಮಾರಕವನ್ನು 6 ತಿಂಗಳಲ್ಲಿಯೇ ದುಷ್ಕರ್ಮಿಗಳು ಒಡೆದು ಹಾಕಿದ್ದರು. ಗುರುತು ಪತ್ತೆಹಚ್ಚಲಾಗದ 12 ಮೃತದೇಹಗಳನ್ನು ತಣ್ಣೀರುಬಾವಿ ಪರಿಸರದಲ್ಲಿ ದಫನ ಮಾಡಲಾಗಿತ್ತು. ಆದರೆ ದಫನ ಮಾಡಿದ ಶವಗಳ ಮೇಲ್ಭಾಗದಲ್ಲಿಯೇ ಮರಳು ಹೊತ್ತ ಲಾರಿಗಳು ಓಡಾಡುತ್ತಾ ಸ್ಮಾರಕ ನಿರ್ಮಾಣ ವಿಚಾರವನ್ನು ಅಣಕಿಸುತ್ತಿವೆ.
ಮಂಗಳವಾರ ಸಂಜೆ ವಿಮಾನ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದಾಗ ಹೂಗುಚ್ಛ, ಮೊಂಬತ್ತಿ ಇಡುವ ಪೀಠದಂತ ಜಾಗಕ್ಕೆ ಏರ್ ಇಂಡಿಯಾ ಸಂಸ್ಥೆ ವತಿಯಿಂದ ಕಾರ್ಮಿಕರು ಶುಚಿ ಗೊಳಿಸಿ ಸುಣ್ಣಬಣ್ಣ ಬಳಿಯುವ ಕಾರ್ಯದಲ್ಲಿ ನಿರತರಾಗಿದ್ದರು. ಆದ್ಯಪಾಡಿ ರಸ್ತೆ ಅಗೆದು ಕಾಂಕ್ರಿಟೀಕರಣ ಮಾಡಿದ್ದರಿಂದ ರಸ್ತೆ ಮೊಂಬತ್ತಿ ಇಡುವ ಜಾಗಕ್ಕಿಂತ ಕೆಳಗೆ ಸಾಗಿದೆ. ಆದ್ದರಿಂದ ಈ ಬಾರಿ ಮೆಟ್ಟಿಲು ಮಾಡಲಾಗಿದೆ. ಶಾಶ್ವತ ಸ್ಮಾರಕ ಮಾಡುವ ಪ್ರಯತ್ನ ಮಾತ್ರ ನಡೆದೇ ಇಲ್ಲ.
ಮಡಿದವರ ಸ್ಮಾರಕ ನಿರ್ಮಿಸಬೇಕು ಎಂದು ಏರ್ ಇಂಡಿಯಾ ಸಂಸ್ಥೆಯಲ್ಲಿ ವಿಮಾನದುರಂತ ಸಂತ್ರಸ್ತರ ಸಂಘಟನೆ ಕಳೆದ ವರ್ಷ ಕೇಳಿತ್ತು. ಆಗ ಬಜಪೆ ಪಂಚಾಯ್ತಿ ವ್ಯಾಪ್ತಿ ಮರವೂರಲ್ಲಿ ಸ್ಮಾರಕ ನಿರ್ಮಿಸುವುದಾಗಿ ಮೌಖಿಕ ಭರವಸೆ ನೀಡಿತ್ತು. ಆದರೆ ಅದು ಕಾರ್ಯ ರೂಪಕ್ಕೆ ಬರಲೇ ಇಲ್ಲ.
ಪ್ರತಿ ವರ್ಷ ಮೇ 22ರಂದು ದುರಂತದಲ್ಲಿ ಮಡಿದವರ ಕುಟುಂಬದವರು, ಹಿತೈಷಿಗಳು ದುರಂತ ನಡೆದ ಸ್ಥಳಕ್ಕೆ ಬಂದು ಹೂ ಇಟ್ಟು, ದೀಪ ಬೆಳಗುತ್ತಾರೆ. ಆದರೆ ಈ ಪ್ರದೇಶ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ಅಲ್ಲಿ ಸ್ಮಾರಕ ಮಾಡುವುದು ಸಾಧ್ಯವಿಲ್ಲದ ಮಾತಾಗಿದೆ. 'ದುರಂತ ಸಂಭವಿಸಿದ ಆಸುಪಾಸು ಸರ್ಕಾರಿ ಜಾಗದಲ್ಲಿ ಸ್ಮಾರಕ ಮಾಡಬೇಕು. ಬಜಪೆ ಮರವೂರು ಗ್ರಾಮ ಪಂಚಾಯ್ತಿಯಲ್ಲಿ ಮಾಡುವುದಾಗಿ ಏರ್ಇಂಡಿಯಾ ಸಂಸ್ಥೆ ಭರವಸೆ ನೀಡಿತ್ತು. ಈ ಬಾರಿ ಮತ್ತೆ ಮನವಿ ಸಲ್ಲಿಸುತ್ತೇವೆ. ದಫನ ಮಾಡಿದ ತಣ್ಣೀರುಬಾವಿ ಪ್ರದೇಶದಲ್ಲಿ ರಸ್ತೆ ನಿರ್ಮಿಸಿರುವುದರಿಂದ ಸಂತ್ರಸ್ತರ ಕುಟುಂಬದವರ ಭಾವನೆಗಳಿಗೆ ನೋವಾಗುತ್ತಿದೆ. ಈ ವಿಚಾರವನ್ನು ಏರ್ಇಂಡಿಯಾ ಗಮನಕ್ಕೆ ತಂದಿದ್ದೇವೆ' ಎಂದು ದುರಂತ ಸಂತ್ರಸ್ತರ ಸಂಘಟನೆ ಅಧ್ಯಕ್ಷ ಮೊಹಮ್ಮದ್ ಬ್ಯಾರಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
25 ಲಕ್ಷದಿಂದ 8 ಕೋಟಿ!: ವಿಮಾನ ದುರಂತದಲ್ಲಿ ಮೃತಪಟ್ಟ ಮಕ್ಕಳಿಗೆ 25ಲಕ್ಷ, ಕೆಲಸ ಮಾಡದ ಮಹಿಳೆಯರಿಗೆ 35 ಲಕ್ಷ ನೀಡಲಾಗಿದೆ.
1 ಕೋಟಿಯಿಂದ 8 ಕೋಟಿ ವರೆಗೆ ಪರಿಹಾರ ನೀಡಲಾಗಿದೆ. ದುಬೈಯಲ್ಲಿದ್ದ ಕಾಸರಗೋಡು ಉದ್ಯಮಿ ಕುಟುಂಬಕ್ಕೆ 8 ಕೋಟಿ ನೀಡಲಾಗಿದೆ.
ಸ್ಥಳೀಯ ಕಾನೂನಿನಡಿ ಪರಿಹಾರ ನೀಡಿದ್ದು, ಅಂತಾರಾಷ್ಟ್ರೀಯ ಕಾನೂನು ಮಾನದಂಡ ಅನುಸರಿಸಿಲ್ಲ ಎಂದು 14 ಕುಟುಂಬದವರು ಮಂಗಳೂರು ಸ್ಥಳೀಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಏರ್ ಇಂಡಿಯಾ ಪರವಾಗಿ ಅಧಿಕಾರಿಗಳು ಕೋರ್ಟ್ಗೆ ಹಾಜರಾಗಿದ್ದಾರೆ. ಸರ್ಕಾರ ಪರವಾಗಿ ಹಾಜರಾಗಿಲ್ಲ, ಹಾಜರಾಗುವಂತೆ ಕೋರ್ಟ್ ಅದೇಶ ನೀಡಿದೆ ಎಂದು ವಕೀಲ ಅಮೃತ ಕಿಣಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ವಿಚಾರಣೆ
ವಿಮಾನ ದುರಂತದಲ್ಲಿ ಮಗ ಮೃತಪಟ್ಟ ಹಿನ್ನೆಲೆಯಲ್ಲಿ ಕೇರಳದ ಸಲಾಂ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹಾಕಿದ್ದಾರೆ. ಮಾಂಟ್ರಿಯಲ್ ಕಾಯ್ದೆ ಮತ್ತು ಕ್ಯಾರೇಜ್ ಬೈ ಏರ್ ಆಕ್ಟ್ ಸೆ.21(1)ರಲ್ಲಿರುವ '75 ಲಕ್ಷವರೆಗೆ' ಎಂಬ ಪದದ ಅರ್ಥ, ವ್ಯಾಪ್ತಿ ಬಗ್ಗೆ ಇನ್ನಷ್ಟೇ ವಾದ, ವಿವಾದ ಆಲಿಸಿ ತೀರ್ಪು ಬರಬೇಕಿದೆ. ವಿಚಾರಣೆ ನವೆಂಬರ್ ತಿಂಗಳಿಗೆ ಮುಂದೂಡಲಾಗಿದೆ ಎಂದು ಸಂತ್ರಸ್ತರ ಸಂಘಟನೆಯ ಅಬ್ದುಲ್ ರಜಾಕ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

