ಕೃಷಿಗೆ ಬಿಡಿ, ನಿತ್ಯ ಬಳಕೆಗೂ ನೀರಿಗಾಗಿ ಪರದಾಟ
ದೀಪಕ್ ಅಳದಂಗಡಿ
ಬೆಳ್ತಂಗಡಿ: ಕಳೆದ ಫೆಬ್ರವರಿ ತನಕ ಮಳೆಯ ಅವಶ್ಯಕತೆ ಇಲ್ಲದೆ ದಿನ ದೂಡಿದ ತಾಲೂಕಿನ ನಾಗರಿಕರು, ಕೃಷಿಕರು ಇದೀಗ ಮಾತ್ರ ನೀರಿಗಾಗಿ ಪರದಾಡುವಂತಹ ಸ್ಥಿತಿ ಉಂಟಾಗಿದೆ.
ಫೆಬ್ರವರಿ ಮಾಸಾಂತ್ಯದ ವೇಳೆಗೆ ನದಿಗಳಲ್ಲಿ ಹರಿವು ಇತ್ತು. ಮನೆ, ಸಾರ್ವಜನಿಕ ಬಾವಿ, ಬೋರ್ವೆಲ್ಗಳಲ್ಲೂ ನೀರು ಕಡಿಮೆಯಾಗಿರಲಿಲ್ಲ. ಕೃಷಿಕರು ಉಚಿತ ವಿದ್ಯುತ್ ಇದ್ದುದರಿಂದ ಧಾರಾಳವಾಗಿ ನದಿ, ಕರೆಗಳಿಂದ ನೀರೆತ್ತಿ ತೋಟಗಳಿಗೆ ನೀರು ಉಣಿಸುತ್ತಿದ್ದರು. ಇದೀಗ ಕೃಷಿಗೆ ಇರಲಿ ನಿತ್ಯ ಬಳಕೆಗೂ ನೀರಿಗಾಗಿ ಪರಿತಪಿಸುವಂಥ ಸ್ಥಿತಿ ಇದೆ.
ಒಣಗುತ್ತಿರುವ ಅಡಕೆ ತೋಟಗಳು: ಕಳೆದ ಮೂರು ನಾಲ್ಕು ವರ್ಷಗಳಿಂದ ಫೆಬ್ರವರಿ ಅಥವಾ ಮಾರ್ಚ್ ಮಧ್ಯಭಾಗದಲ್ಲಿ ಬೇಸಗೆಯ ಮಳೆ ಸಾಕಷ್ಟು ಬರುತ್ತಿತ್ತು. ಇದರಿಂದ ಅಡಕೆ ತೋಟದ ಕೃಷಿಕರು ಸಂತುಷ್ಟರಾಗುತ್ತಿದ್ದರು. ಕುಡಿಯುವ ನೀರಿಗೂ ತೊಂದರೆ ಇರುತ್ತಿರಲಿಲ್ಲ. ಆದರೆ ಈ ವರ್ಷ ಮಾತ್ರ ಪರಿಸ್ಥಿತಿ ಕೆಟ್ಟು ಹೋಗುತ್ತಾ ಇದೆ. ಈ ಬಾರಿ ಬೇಸಗೆಯ ಮಳೆ ಬೀಳದೆ ಹೆಚ್ಚು ನೀರು ಬೇಡುವ ಅಡಕೆ ತೋಟಗಳು ಕೆಂಪಾಗುತ್ತಾ ಸಾಗಿವೆ. ತೋಟಗಳಿಗೆ ನೀರು ಉಣಿಸದಿದ್ದರೆ ಫಸಲಿಗೂ ತೊಂದರೆ. ತಾಲೂಕಿನಲ್ಲಿ ಹಲೆವೆಡೆ ಹೊಳೆಗಳಿಗೆ ಕಿಂಡಿ ಅಣೆಕಟ್ಟುಗಳನ್ನು ಕಟ್ಟಿದ್ದರೂ ಈ ಬಾರಿ ಅವುಗಳೆಲ್ಲ ಪಳೆಯುಳಿಕೆಗಳಂತೆ ಕಾಣುತ್ತಿವೆ. ನದಿಗಳು ಬತ್ತಿ ಹೋಗಿರುವುದರಿಂದ ಅಂತರ್ಜಲದ ಕೊರತೆ ಉಂಟಾಗಿದೆ.
ನಿಡ್ಲೆ ಗ್ರಾಮದ ಮಾಪಲಾಜೆ, ಪಿಲಿಕಜೆ, ನಿಡ್ಲೆ ಬಸ್ ನಿಲ್ದಾಣದ ಬಳಿ, ಬಾವಲಿಕಾಡು ಮೊದಲಾದ ಕಡೆ ಜನರು ಕುಡಿಯುವ ನೀರಿಲ್ಲದೆ ಹನಿ ನೀರಿಗಾಗಿ ಪರಿತಪಿಸುವಂತಾಗಿದೆ. ಜನ ಬಾವಿಗಳಿರುವ ಮನೆಗಳಿಗೆ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಲವು ಕಿ.ಮೀ. ದೂರದಿಂದ ನೀರು ತರಬೇಕಾದ ಪರಿಸ್ಥಿತಿ ಇಲ್ಲಿದೆ.
ಸ್ವಂತ ಖರ್ಚಿನಲ್ಲೇ ನೀರು ಪೂರೈಕೆ: ನಾವೂರು ಈ ಪರಿಸರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದ್ದು, ಕೇಳುವವರಿಲ್ಲದಂತಾಗಿದೆ. ಈ ಭಾಗದ ಜನತಾ ಕಾಲೋನಿ, ಹೊಡಿಕ್ಕಾರ್, ಮುರ, ನಾವೂರು ಪೇಟೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸಿದ್ದು ಇಲ್ಲಿಯೂ ನೀರಿಗಾಗಿ ಮನೆ ಮನೆ ಅಲೆಯುವ ಸ್ಥಿತಿ ಎದುರಾಗಿದೆ.
ಬಾರ್ಯ ಮತ್ತು ಬಾರ್ಯ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಾದ ಪಿಲಿಗೂಡು, ಪೆರಿಯೊಟ್ಟು, ಬನ್ನೆಂಗಳ ಪರಿಸರದಲ್ಲಿ ನೀರಿನ ಹಾಹಾಕಾರವಿದೆ. ಇಲ್ಲಿ ಧರ್ಣಪ್ಪ ಗೌಡ ಎಂಬವರು ಸ್ವಂತ ಖರ್ಚಿನಲ್ಲಿ ತನ್ನದೇ ವಾಹನದಲ್ಲಿ ಅಲ್ಲಲ್ಲಿ ಇರುವ ಕೊಳವೆ ಬಾವಿಗಳಿಂದ ನೀರನ್ನು ಸಂಗ್ರಹಿಸಿ ನೀರಿಗಾಗಿ ಪರಿತಪಿಸುವವರ ಪಾಲಿಗೆ ಸಂಜೀವಿನಿಯಾಗಿದ್ದಾರೆ. ಕೊಯ್ಯೂರು ಗ್ರಾಮದ ಮಲೆಬೆಟ್ಟು ಜನತಾ ಕಾಲನಿಯ ಸುಮಾರು ಇಪ್ಪತ್ತೆರಡು ಕುಟುಂಬಗಳು ಸುಮಾರು ಐದು ತಿಂಗಳಿನಿಂದ ನೀರಿಗಾಗಿ ಪರಿತಪಿಸುತ್ತಿದ್ದಾರೆ.
ಮಡಂತ್ಯಾರು ಸಮೀಪದ ಬಸವನಗುಡಿ ಪರಿಸರ, ಕಲ್ಮಂಜ ಗ್ರಾಮದ ಸದಾಶಿವ ನಗರ ಮತ್ತು ನೇತ್ರಾವತಿ ನಗರಗಳ ವಾಸಿಗಳು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಬೆಳ್ತಂಗಡಿ ಪಟ್ಟಣಕ್ಕೆ ನೀರು ಸರಬರಾಜಿಗೆ ಹತ್ತಿರದ ಹೊಳೆಗೆ ತಾತ್ಕಾಲಿಕ ಅಣೆಕಟ್ಟು ಕಟ್ಟಿ ನೀರು ಸಂಗ್ರಹಸಿ ಜನರಿಗೆ ನಿಯಮಿತವಾಗಿ ನೀರು ನೀಡಲಾಗುತ್ತಿದೆ. ಅಲ್ಲಿನ ಸ್ಥಿತಿ ನೋಡಿದಾಗ ತಿಂಗಳು ಕಳೆಯುವುದು ಕಷ್ಟವಾಗಲಿದೆ. ನಗರದ ವಾರ್ಡ್ 6ರಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕ್ ನಿರ್ಮಿಸುವ ಅಗತ್ಯವಿದೆ.
ಕಳೆದ ಹದಿನೈದು ದಿನಗಳಿಂದೀಚೆಗೆ ತಾಲೂಕಿನ ಕೆಲ ಭಾಗಗಳಲ್ಲಿ ಧರ್ಮಸ್ಥಳ, ನಾರಾವಿ, ವೇಣೂರು ಮೊದಲಾದೆಡೆ ಮಳೆ ಬಿದ್ದಿದೆ. ಆದರೆ ನೀರಿನ ತಾತ್ವಾರದ ಪರಿಹಾರಕ್ಕೆ ಬಿದ್ದ ಮಳೆ ಏನೂ ಸಾಲದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

