ಶಿಕ್ಷಣ ಸಂಸ್ಥೆಯಿಂದ ನೇತ್ರಾವತಿ ನದಿ ಒತ್ತುವರಿ
ಗ್ರಾಮ ಪಂಚಾಯಿತಿ, ತಾಲೂಕು ಕಚೇರಿ ತನಿಖೆ, ನೋಟಿಸ್ಗೂ ಕ್ಯಾರೆ ಎನ್ನದ ಆಡಳಿತ ಮಂಡಳಿ
-ವಿಶೇಷ ವರದಿ
ಮಂಗಳೂರು: ಮಕ್ಕಳ ಆಟದ ಮೈದಾನಕ್ಕೆಂದು ಅಡ್ಯಾರಿನ ಖಾಸಗಿ ಶಿಕ್ಷಣ ಸಂಸ್ಥೆ ನೇತ್ರಾವತಿ ನದಿ ತಟಕ್ಕೆ ಮಣ್ಣು ಹಾಕಿ ಎಕರೆಗಟ್ಟಲೆ ಒತ್ತುವರಿ ಮಾಡಿದೆ.
2012ರ ಜನವರಿಯಿಂದಲೇ ನದಿ ತಟ ಒತ್ತುವರಿ ಶುರುವಾಗಿದೆ. ಸ್ಥಳೀಯರ ದೂರಿನಂತೆ 2012, ಜೂ.5ರಂದು ಕಂದಾಯ ನಿರೀಕ್ಷಕರು ಮತ್ತು ಸರ್ವೆಯರ್ ತಂಡ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದಾಗ ಒತ್ತುವರಿ ದೃಢಪಟ್ಟಿತ್ತು. ಸ್ಥಳದಲ್ಲಿದ್ದ ಆಡಳಿತ ಮಂಡಳಿ ಒತ್ತುವರಿ ತೆರವು ಮಾಡಲು ಒಪ್ಪಿಕೊಂಡಿತ್ತು.
ಆದರೆ ಒತ್ತುವರಿ ತೆರವುಗೊಳ್ಳದ ಹಿನ್ನೆಲೆಯಲ್ಲಿ ಜೂ.19ಕ್ಕೆ ತಹಸೀಲ್ದಾರ್ ನೋಟಿಸ್ ನೀಡಿದರು. “eÛVÚ ಸಮತಟ್ಟು ಮಾಡುವಾಗ ಸರ್ಕಾರಿ ಪರಂಬೋಕು (ಸ್ವಾಧೀನಕ್ಕೊಳಪಡದ) 3, 4 ಎಕರೆ ಜಾಗದಲ್ಲಿ ತಮಗೆ ಗೊತ್ತಿಲ್ಲದೆಯೇ ಮಣ್ಣು ಬಿದ್ದಿದೆ ಎಂದು ಶಿಕ್ಷಣ ಸಂಸ್ಥೆ ಸ್ಪಷ್ಟನೆ ನೀಡಿತು. ಅತಿಕ್ರಮಣ ತೆರವುಗೊಳಿಸಿರುವುದಾಗಿ ವೀಡಿಯೋ ದಾಖಲೆ ಕೂಡಾ ನೀಡಿದರು!
ಅಡ್ಯಾರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಸ್ವಲ್ಪ ಮಣ್ಣು ಮಾತ್ರ ತೆರವುಗೊಳಿಸಿದ್ದಾರೆ ಎಂದು ವರದಿ ಸಲ್ಲಿಸಿದರು. ಅಂತಿಮವಾಗಿ ಒತ್ತುವರಿ ಮಾಡಿದ್ದಕ್ಕೆ ಜೈಲು ಶಿಕ್ಷೆ ವಿಧಿಸಬಹುದು, ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಸೆ.14ರಂದು ನೋಟಿಸ್ ನೀಡಿದರು.
ಲೋಕಾಯುಕ್ತ ಕೇಸ್: ಆರೋಪಿ ಸ್ಥಾನದಲ್ಲಿರುವ ಸಹ್ಯಾದ್ರಿ ತಾಂತ್ರಿಕ ಕಾಲೇಜು ಆಡಳಿತ ಮಂಡಳಿ ಮುಖ್ಯಸ್ಥರು ಎಐಸಿಸಿ ಸದಸ್ಯರೂ ಪ್ರಭಾವಿ ನಾಯಕರೂ ಆಗಿರುವುದರಿಂದ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳಲು ವಿಳಂಬ ಮಾಡಿದೆ. ಶಿಕ್ಷಣ ಸಂಸ್ಥೆ ಜತೆ ಜಿಲ್ಲಾಧಿಕಾರಿ, ತಹಸೀಲ್ದಾರ್ ಶಾಮೀಲಾಗಿದ್ದಾರೆ ಎಂದು ಸ್ಥಳೀಯ ಅಭಿಷೇಕ್ ಮಾರ್ಲ ಕೋರ್ಟ್ಗೆ ದೂರು ನೀಡಿದರು. ಕೋರ್ಟ್ ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಿಸಲು ಆದೇಶಿಸಿತು. ಸಹ್ಯಾದ್ರಿ ಫೌಂಡೇಶನ್ ಅಧ್ಯಕ್ಷ ಮಂಜುನಾಥ ಭಂಡಾರಿ, ಕಾಲೇಜ್ ಟ್ರಸ್ಟಿ ಜಗನ್ನಾಥ ಚೌಟ, ವಿಜಯ ರೈ, ಜಿಲ್ಲಾಧಿಕಾರಿ, ತಹಸೀಲ್ದಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಒತ್ತುವರಿಯಲ್ಲ ಗ್ರೀನರಿ!: ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ಶೇ.80 ವಿದ್ಯಾರ್ಥಿಗಳು ಸರ್ಕಾರದ ವತಿಯಿಂದ ವಿದ್ಯಾರ್ಜನೆ ಮಾಡುತ್ತಿದ್ದಾರೆ. 5 ಎಕರೆ ಪಟ್ಟಾ ಸ್ಥಳದಲ್ಲಿ ಮೈದಾನ ನಿರ್ಮಿಸಿದ್ದು, ಇದಕ್ಕೆ ತಾಗಿಕೊಂಡಿರುವ ನೇತ್ರಾವತಿ ನದಿ ತೀರದ ನಿರುಪಯುಕ್ತ 2ರಿಂದ 3 ಎಕರೆ ಸರ್ಕಾರಿ ಸ್ಥಳದಲ್ಲಿ ಹೆಚ್ಚುವರಿ ಮಣ್ಣು ತುಂಬಿಸಿದ್ದೇವೆ. ನದಿ ಪ್ರವಾಹದಿಂದ ಮೈದಾನ ಮಣ್ಣು ಕೊಚ್ಚಿ ಹೋಗದಿರಲು ಮರ, ಗಿಡ ಬೆಳೆಯುತ್ತಿದ್ದೇವೆ. ಆದರೆ ತಹಸೀಲ್ದಾರ್ ನೋಟಿಸ್ಗೆ ಪ್ರತಿಯಾಗಿ ಒತ್ತುವರಿ ತೆರವುಗೊಳಿಸಿದ್ದೇವೆ ಎಂದು ಶಿಕ್ಷಣ ಸಂಸ್ಥೆ ಹೇಳಿದೆ.
ಈ ಬಗ್ಗೆ ದೂರುದಾರ ಅಭಿಷೇಕ್ ಮಾರ್ಲ ಅವರು ಪ್ರತಿಕ್ರಿಯಿಸಿ, ಮಕ್ಕಳ ಆಟದ ಮೈದಾನಕ್ಕೆ ಸರ್ಕಾರಿ ಜಾಗ ಒತ್ತುವರಿ ಮಾಡಿದ್ದರೆ ನಮ್ಮ ಆಕ್ಷೇಪ ಇಲ್ಲ. ಪ್ರಕೃತಿಗೆ ವಿರುದ್ಧವಾಗಿ ನೇತ್ರಾವತಿ ನದಿ ಜಾಗ ಒತ್ತುವರಿ ಮಾಡಿದ್ದಕ್ಕೆ ನಮ್ಮ ಪ್ರಬಲ ವಿರೋಧ ಇದೆ. ಪರಿಸರ ಸಮತೋಲನ ಹಾಳಾಗುತ್ತದೆ. ಇದು ಸಿಆರ್ಝಡ್ ಕಾನೂನು ವಿರುದ್ಧ. ಕಾಲೇಜಿಗೆ ಅನುಮತಿ ಸಿಗಬೇಕಾದರೆ ಮೈದಾನ ಬೇಕೇ ಬೇಕು. ಕಾಲೇಜು ಮುಂದಿರುವ ಮೈದಾನವನ್ನು ಅನುಮತಿ ವೇಳೆ ತೋರಿಸಿದ್ದರು. ಇದೀಗ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಗೆ ಲೀಸ್ಗೆ ನೀಡಿ, ನದಿ ಪಾತ್ರದಲ್ಲಿ ಮೈದಾನ ಮಾಡುತ್ತಿದ್ದಾರೆ.
ನೇತ್ರಾವತಿ ನದಿ ಉದ್ದಕ್ಕೂ ಮರಳು ತೆಗೆಯುತ್ತಿರುವುದಾಗಿ ನದಿಪಾತ್ರ ಆಗಲವಾಗುತ್ತಿದೆ. ಇನ್ನೊಂದೆಡೆ ನೇತ್ರಾವತಿ ನದಿ ತೀರಕ್ಕೆ ಮಣ್ಣು ಹಾಕಿ ಒತ್ತುವರಿಯೂ ನಡೆಯುತ್ತಿದೆ. ಕಣ್ಣೂರು, ಅಡ್ಯಾರ್, ಬಿ.ಸಿ.ರೋಡ್ ಸೇತುವೆ ಬಳಿ ಮರಳುಗಾರಿಕೆ ನಡೆಯುತ್ತಿರುವುದರಿಂದ ನದಿ ಪಾತ್ರ ವಿಪರೀತ ಆಗಲವಾಗಿದೆ. 30 ವರ್ಷದ ಹಿಂದೆ ನದಿ ದಾಟಲು ಬೋಟ್ನಲ್ಲಿ 10 ನಿಮಿಷ ಸಾಕಿತ್ತು. ಈಗ ಅರ್ಧ ಗಂಟೆ ಬೇಕು ಎಂಬುದು ಸ್ಥಳೀಯರ ಆರೋಪ.
ಬಿ.ಸಿ.ರೋಡ್ನಿಂದ ಕಡಲು ಸೇರುವ ನದಿ ಪಾತ್ರದ ಉದ್ದಕ್ಕೂ ಅಲ್ಲಲ್ಲಿ ಪರಂಬೋಕು ಸ್ಥಳಗಳಲ್ಲಿ ಮಣ್ಣು ತುಂಬಿಸುವ ಕಾರ್ಯ ಸಾಗಿದೆ. ಕಣ್ಣೂರು ಚೆಕ್ಪೋಸ್ಟ್ ಕಣ್ಣೂರು ಮಸೀದಿ ಬಳಿ, ಒಳಚ್ಚಿಲ್ ಪ್ರದೇಶದಲ್ಲಿ ಮಣ್ಣು ತುಂಬಿಸಲಾಗಿದೆ. ಸಿಆರ್ಝಡ್ ಕಾನೂನಿನಂತೆ ನದಿ ಪಾತ್ರದ ನೂರು ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಮಾಡಬಾರದು ಸರ್ಕಾರ ನಿಯಮ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

