ದಕ್ಷಿಣ ಕನ್ನಡ

'ದುರಂತ ದುಃಸ್ವಪ್ನ'ದಿಂದ ನಲುಗಿದ ಪೆರ್ನೆ

Published On :

ಮಂಗಳೂರು: ಪೆರ್ನೆ ಅಗ್ನಿ ದುರಂತ ಸಂಭವಿಸಿ ಎರಡು ತಿಂಗಳು ಸಮೀಪಿಸುತ್ತಿದೆ. ದುರಂತದಲ್ಲಿ ತನ್ನ ಮಡದಿ ಹಾಗೂ ಅತ್ತಿಗೆ ಕಣ್ಣೆದುರು ಸುಟ್ಟು ಹೋದ ದೃಶ್ಯವನ್ನು ನೋಡಿರುವ ಶಂಕರ್ ರೈ ಅವರು ಮಂಕಾಗಿದ್ದು, ಕೆಲಸಕ್ಕೂ ತೆರಳದೆ ಮೌನವಾಗಿದ್ದಾರೆ.
 ತನ್ನ ಮನೆಯಿಂದ ಕೆಲಸಕ್ಕೆ ಹೋಗಿ ಕೆಲ ತಾಸು ಆಗಿರಬಹುದು. ಮನೆಗೆ ಬೆಂಕಿ ಬಿದ್ದಿದೆ ಎಂಬ ಮಾಹಿತಿ ಸಿಕ್ಕಿ, ಏನಾಯಿತೇನೋ ಎಂದು ಓಡೋಡಿ ಬಂದಾಗ ಕಣ್ಣೆದುರು ಕಾಣಿಸಿದ್ದು, ಮಡದಿ ಶೋಭಾ ರೈ, ಅತ್ತಿಗೆ ಬೆಂಕಿಯಲ್ಲಿ ಬೆಂದು ಒದ್ದಾಡುತ್ತಿರುವ ದೃಶ್ಯ ಹಾಗೂ ಆರ್ತನಾದ. ಆವತ್ತು ಮಂಕಾದ ಅವರು ಇನ್ನೂ ಚೇತರಿಸಿಕೊಂಡಿಲ್ಲ.
   ಶಂಕರ್ ರೈ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೊದಲಿನವಳು 10ನೇ ತರಗತಿ, ಎರಡನೆಯವಳು 9ನೇ ತರಗತಿ ಕಲಿಯುತ್ತಿದ್ದಾರೆ.
  ಪ್ರಸ್ತುತ ಇವರು ಮಕ್ಕಳೊಂದಿಗೆ ಹೆಂಡತಿಯ ಸಂಬಂಧಿಕರ ಮನೆ ಮಾಣಿಯಲ್ಲಿ ಇದ್ದಾರೆ. ಖಾಸಗಿ ಬಸ್ಸಿನಲ್ಲಿ ಕಂಡೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಇಬ್ಬರು ಮಕ್ಕಳ ಭವಿಷ್ಯದ ಜವಾಬ್ದಾರಿ ಹೊತ್ತಿರುವ ತಂದೆ ಮೌನವಾಗಿರುವುದನ್ನು ಕಂಡು ಮಕ್ಕಳಿಗೆ ದಿಕ್ಕು ತೋಚದಂತಾಗಿದೆ.
 ಇನ್ನೊಂದು ಘಟನೆಯಲ್ಲಿ ಮುದ್ದಾದ 4 ವರ್ಷದ ಸುನಿಲ್ನನ್ನು ಕಳೆದುಕೊಂಡ ತಾಯಿ ಸ್ವಾತಿ ಸುದ್ದಿ ಕೇಳಿ ಸ್ಮೃತಿ ತಪ್ಪಿ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ.
ಏನೆನೋ ಮಾತನಾಡುತ್ತಾ, ಮಗನನ್ನು ನೆನೆಯುತ್ತಾ ದುಃಖಿಸುತ್ತಿದ್ದಾರೆ. ಸ್ವಾತಿ ತನ್ನ ಕಚೇರಿ ಕೆಲಸಕ್ಕೆ ತೆರಳುವ ಸಂದರ್ಭ ತನ್ನ ಮಗು ಸುನಿಲ್ನನ್ನು ನೆರೆಮನೆಯರ ಬಳಿ ಬಿಟ್ಟು ಕೆಲಸಕ್ಕೆಂದು ಬಸ್ಸು ಹತ್ತಿದ ಅರ್ಧ ತಾಸಿನಲ್ಲಿ ಘಟನೆ ನಡೆದಿದ್ದು, ಮಗುವನ್ನು ಕಳೆದುಕೊಂಡಿದ್ದರು.
 ಓಮ್ನಿಯಲ್ಲಿ ಬೇಕರಿ ಅಂಗಡಿಗೆ ತಿಂಡಿ ತಿನಿಸು ಸರಬರಾಜು ಮಾಡುತ್ತಿದ್ದ ಬಂಟ್ವಾಳದ ವಸಂತ್(30) ಅವರಿಗೆ ಮದುವೆಯಾಗಿ 5 ತಿಂಗಳಾಗಿತ್ತು. ಅಗ್ನಿ ದುರಂತದಲ್ಲಿ ಮೃತರಾದ ವಸಂತ್ ಅವರ ಪತ್ನಿ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಅವರಿಗೆ ಅವರ ಅಣ್ಣ ನಾಗರಾಜ್ ಧೈರ್ಯ ತುಂಬುತ್ತಾ, ಸಾಂತ್ವನ ಹೇಳುತ್ತಿದ್ದಾರೆ.
 ಬಂಟ್ವಾಳ ತಾಲೂಕಿನ ಪೆರ್ನೆಯಲ್ಲಿ ಟ್ಯಾಂಕರ್ ಅಪಘಾತ ಮತ್ತು ಅಗ್ನಿ ದುರಂತಕ್ಕೆ 11 ಮಂದಿಯ ಮುಗ್ಧ ಜೀವಗಳು ಬಲಿಯಾಗಿದ್ದ ಘಟನೆ ಸಂಭವಿಸಿ ಎರಡು ತಿಂಗಳಾಗುತ್ತಿದೆ. ಬೆಂಕಿಗೆ ಸುಟ್ಟು ಹೋದ ಮನೆಯ ಸಾಮಾನುಗಳು, ಮಣ್ಣಿನ ಪಾತ್ರೆ, ಇನ್ನೂ ಅಲ್ಲಿ ದುರಂತವನ್ನು ಸಾರಿ ಹೇಳುತ್ತಿದೆ. ಸುಟ್ಟು ಹೋದ ಮನೆ, ತೆಂಗು, ಮರಗಳು ಸಾಕ್ಷಿ ಹೇಳುತ್ತಿದೆ. ಸುಟ್ಟು ಹೋಗಿ ಎಲ್ಲವನ್ನೂ ಕಳೆದುಕೊಂಡಿರುವ ನಾಲ್ಕು ಮನೆಯ ಮಂದಿ ತಮ್ಮ ಸಂಬಂಧಿಕರ ಮನೆಯನ್ನು ಆಶ್ರಯಿಸಿದ್ದಾರೆ. ಎಲ್ಲವನ್ನೂ ಕಳೆದು ಅನಾಥರಂತೆ ಬದುಕು ಸಾಗಿಸುತ್ತಿದ್ದಾರೆ.
ಹೆದ್ದಾರಿಗೆ ಜಾಗ ಒತ್ತುವರಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹಾಸನ-ಬಿ. ಸಿ.ರೋಡ್ ಚತುಷ್ಪಥ ರಸ್ತೆಗಾಗಿ ಅಗಲೀಕರಣದ ಸಂದರ್ಭ ಪೆರ್ನೆ ಜಾಗವನ್ನು ಒತ್ತುವರಿ ಮಾಡುವ ಸಲುವಾಗಿ ಸರ್ವೇ ನಡೆಸಿತ್ತು. ರಸ್ತೆ ಬದಿಯಲ್ಲಿರುವ ಮನೆಯವರು ಜಾಗವನ್ನು ಒಪ್ಪಿಸುವಂತೆ ತಿಳಿಸಿತ್ತು.
   ಆದರೆ ಈ ಪ್ರಕ್ರಿಯೆ ಕುರಿತು ಪಂಚಾಯ್ತಿಗೆ ನೋಟಿಸ್ ಜಾರಿಗೊಳಿಸುವ ಮೊದಲೇ ಭೀಕರ ಘಟನೆ ಸಂಭವಿಸಿದ್ದು ದುರಂತ ಎಂದು ಹೇಳುತ್ತಾರೆ ಪೆರ್ನೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ.
ರು. 2.50 ಲಕ್ಷ ವಿತರಣೆ: ಈಗಾಗಲೇ ಮೃತರಾದ 11 ಕುಟುಂಬಗಳಿಗೆ ತಲಾ ರು. 1 ಲಕ್ಷದಂತೆ ಹಾಗೂ ಎಚ್ಪಿಸಿಎಲ್ ಕಂಪೆನಿಯಿಂದ ರು. 1.5 ಲಕ್ಷದಂತೆ ಒಟ್ಟು ಒಬ್ಬೊಬ್ಬರಿಗೆ ರು. 2.50 ಲಕ್ಷ ನೀಡಲಾಗಿದೆ.
 ಸಾವಿನ ದವಡೆಯಿಂದ ಪಾರಾದ ಗ್ಯಾರೇಜ್ ಮಾಲೀಕ ಚಂದ್ರಶೇಖರ್ ಅವರ ಗ್ಯಾರೇಜ್ ಬೆಂಕಿಗೆ ಸಂಪೂರ್ಣ ಸುಟ್ಟು ಹೋಗಿದ್ದು, ಪೆರ್ನೆ ವ್ಯಾಪ್ತಿಯಲ್ಲಿ ಹೊಸ ಗ್ಯಾರೇಜ್ ಜಿಲ್ಲಾಡಳಿತ ನಿರ್ಮಿಸಿಕೊಟ್ಟಿದೆ.
ರು. 5 ಸೆಂಟ್ಸ್ ಜಾಗ: ಕಂದಾಯ ಇಲಾಖೆ ಮನೆ ಕಳೆದುಕೊಂಡವರಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊರತಿ ಕಟ್ಟೆಯಲ್ಲಿ ತಲಾ 5 ಸೆಂಟ್ಸ್ ಜಾಗವನ್ನು ಅಳತೆ ಮಾಡಿದೆ. ಮಳೆಗಾಲ ಮುಗಿದ ಬಳಿಕ ಮನೆ ಕೆಲಸ ಪ್ರಾರಂಭಿಸಲು ತೀರ್ಮಾನಿಸಿದೆ.
ರು. 7ಲಕ್ಷ ಸಂಗ್ರಹ: ಗ್ರಾಮ ಪಂಚಾಯ್ತಿನ ಅಧ್ಯಕ್ಷರ ನೇತೃತ್ವದಲ್ಲಿ ಪೆರ್ನೆ ಅನಿಲ ದುರಂತ ಸಂತ್ರಸ್ತರ ನಿಧಿ ಸಂಗ್ರಹದಲ್ಲಿ ಈಗಾಗಲೇ ರು. 7ಲಕ್ಷ ಸಂಗ್ರಹಗೊಂಡಿದ್ದು, ರು. 10 ಲಕ್ಷವಾಗಲು ನಿರೀಕ್ಷಿಸಲಾಗುತ್ತಿದೆ ಎಂದು ಅಧ್ಯಕ್ಷರು ಹೇಳಿದ್ದಾರೆ.
- ವಜ್ರಾಕ್ಷಿ ಬಂಟ್ವಾಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.