ದಕ್ಷಿಣ ಕನ್ನಡ

ಶಾಲಾ ವಾಹನಗಳ ನ್ಯೂನತೆ ಸರಿಪಡಿಸಲು ಗಡುವು

Published On :

ಮಂಗಳೂರು: ಶಾಲಾ ಮಕ್ಕಳನ್ನು ಸಾಗಿಸುವ ಶಾಲಾ ವಾಹನಗಳ ಪರವಾನಗಿಯನ್ನು ನವೀಕರಣಗೊಳಿಸುವುದು ಕಡ್ಡಾಯ. ತಪ್ಪಿದಲ್ಲಿ ಅಪಘಾತವಾದರೆ ಶಾಲಾ ಆಡಳಿತವನ್ನು ನೇರ ಹೊಣೆಗಾರ ಮಾಡಲಾಗುವುದು ಎಂದು ಮಂಗಳೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಶಾಲಾ ವಾಹನಗಳ ಮಾಲಕರ, ಶಾಲಾ ಮುಖ್ಯಸ್ಥರ ಸಭೆಯಲ್ಲಿ ಅವರು ಮಾತನಾಡಿದರು.
ಸಾರಿಗೆ ಪ್ರಾಧಿಕಾರ ಶಾಲಾ ಸ್ಕೂಲ್ ಕ್ಯಾರೇಜ್ ನೀತಿಯನ್ನು ಜಾರಿಗೆ ತಂದಿದ್ದು, ಇನ್ನು ಒಂದು ತಿಂಗಳಲ್ಲಿ ಎಲ್ಲ ಶಾಲಾ ವಾಹನಗಳನ್ನು ತಪಾಸಣೆ ಮಾಡಲಾಗುವುದು. ಶಾಲಾ ವಾಹಗಳಲ್ಲಿನ ನ್ಯೂನತೆ ಸರಿಪಡಿಸಲು ಮೇ 31 ಕೊನೆದಿನ. ನಂತರ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಜೆಯಾಗಿ ತಪಾಸಣೆ ನಡೆಸಲಿದೆ ಎಂದರು.
ಆಟೋ ಬಣ್ಣ ಬದಲಾವಣೆ ಇಲ್ಲ: ಶಾಲಾ ಮಕ್ಕಳನ್ನು ಸಾಗಿಸುವ ಅಟೋರಿಕ್ಷಾಗಳಿಗೆ ಬಣ್ಣ ಬದಲಾವಣೆ ಬೇಡ, ಇತರೆ ವಾಹನಗಳು ಹೈವೇ ಹಳದಿ ಬಣ್ಣ ಬಳಿದಿರಬೇಕು. ವಾಹನದ ನಾಲ್ಕು ಭಾಗಗಳಲ್ಲಿ ಕಪ್ಪು ಬಣ್ಣದ ಅಕ್ಷರದಲ್ಲಿ ಶಾಲಾ ವಾಹನ ಎಂದು ಬರೆಸಿರಬೇಕು. ಲೀಸ್ ವಾಹನವಾಗಿದ್ದಲ್ಲಿ ಅದರ ಮೇಲೂ ದಪ್ಪ ಅಕ್ಷರದಲ್ಲಿ ಬರೆದಿರಬೇಕು. ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಕ್ಕಳನ್ನು ಕರೆದೊಯ್ಯಬಾರದು. ಯಾವುದೇ ಕಾರಣಕ್ಕೂ ಖಾಸಗಿ ವಾಹನಗಳು ಪರವಾನಗಿ ರಹಿತವಾಗಿ ಶಾಲಾ ಮಕ್ಕಳನ್ನು ಬಾಡಿಗೆಗೆ ಕರೆದೊಯ್ಯುವಂತಿಲ್ಲ ಎಂದು ಹೇಳಿದರು.
 ಶಾಲಾ ಕಂಪೌಂಡ್ನೊಳಗೆ ಮಕ್ಕಳನ್ನು ಬಿಟ್ಟು ರಸ್ತೆ ಸಂಚಾರಕ್ಕೆ ಅಡಚಣೆ ಆಗದಂತೆ ನೋಡಿಕೊಳ್ಳಬೇಕು. ಶಾಲಾ ವಾಹನದ ಸಮಗ್ರ ಮಾಹಿತಿ ಶಾಲಾ ಮುಖ್ಯಸ್ಥರಲ್ಲಿ ಇರಬೇಕು. ಇದಕ್ಕಾಗಿ ಸಮಿತಿ ರಚಿಸಬೇಕಾಗಿದ್ದು, ವಾಹನಕ್ಕೆ ಸ್ಪೀಡ್ ಗವರ್ನರ್ ಕಡ್ಡಾಯವಾಗಿದೆ ಎಂದರು. ಶಾಲಾ ವಾಹನದಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇರಬೇಕು. ಬೆಂಕಿ ನಂದಿಸುವ ಉಪಕರಣ ಹೊಂದಿರಬೇಕಾಗಿದ್ದು, ವಾಹನಗಳ ಬಾಗಿಲು ಸುರಕ್ಷಿತ ಲಾಕ್ ಮಾಡುವಂತಿರಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಣ್ಣಪುಟ್ಟ ಸೂಚನೆಗಳನ್ನೂ ಪಾಲಿಸಬೇಕು ಎಂದು ಹೇಳಿದರು.
ಸಂಚಾರಿ ಎಸಿಪಿ ಸುಬ್ರಹ್ಮಣ್ಯ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಜಯಶೇಖರ್ ಹಾಜರಿದ್ದರು.

ಶಾಲೆಗೆ ಮಳೆ ರಜೆ: ಬಿಇಒ ಅಧಿಕಾರ
ಇನ್ನು ಮುಂದೆ ಜಿಲ್ಲೆಯಲ್ಲಿ ವಿಪರೀತ ಮಳೆಯಂಥ ಪ್ರಾಕೃತಿಕ ತೊಂದರೆ ಉಂಟಾದಾಗ ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗೆ(ಬಿಇಒ)ಅಧಿಕಾರ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ದಯಾನಂದ್ ತಿಳಿಸಿದರು.   ಇದುವೆರೆಗೆ ಜಿಲ್ಲಾಧಿಕಾರಿಗೆ ತಿಳಿಸಿ, ಅವರಿಂದ ಒಪ್ಪಿಗೆ ಪಡೆದ ಬಳಿಕವೇ ರಜೆ ನೀಡಬೇಕಿತ್ತು. ಇನ್ನು ವಿದ್ಯಾರ್ಥಿಗಳ ಜೀವದ ಭದ್ರತೆ ಸಲುವಾಗಿ ಬಿಇಒಗಳು ಸಹಾಯಕ ಕಮೀಷನರ್ ಗಮನಕ್ಕೆ ತಂದು ಶಾಲೆಗೆ ರಜೆ ನೀಡಬಹುದು. ಈ ಬಗ್ಗೆ ಎಲ್ಲ ಬಿಇಒಗಳಿಗೆ ಸೂಚನೆ ನೀಡಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.