ಸಿಡಿಲು ಬಡಿದು ಐವರಿಗೆ ಗಾಯ, ಮನೆಗಳಿಗೆ ಹಾನಿ
ಸುಳ್ಯ/ಉಪ್ಪಿನಂಗಡಿ/ಮಂಗಳೂರು: ದ.ಕ. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದ್ದು, ಮಂಗಳೂರಿನಲ್ಲಿ ಮಾತ್ರ ಕೊಂಚ ಬಿಡುವು ಮಾಡಿಕೊಂಡಿದೆ. ಬೆಳ್ತಂಗಡಿಯಲ್ಲಿ ಅತ್ಯಧಿಕ 80.8 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಕುಕ್ಕುಮೂಲೆ ದೇವರಗುಂಡಿ ಎಂಬಲ್ಲಿನ ಗಿರಿಜಾ ಎಂಬವರ ಮನೆಗೆ ಗುರುವಾರ ರಾತ್ರಿ ಸಿಡಿಲು ಬಡಿದು ಓರ್ವ ಮಹಿಳೆ ಹಾಗೂ ಐವರು ಮಕ್ಕಳು ಗಾಯಗೊಂಡಿದ್ದಾರೆ.
ಮನೆಯಲ್ಲಿ ಸೀಮಂತ ಕಾರ್ಯಕ್ರಮ ನಡೆದಿತ್ತು. ರಾತ್ರಿ ಮನೆ ಸಮೀಪದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬಳಿಕ ಮನೆಗೆ ಬಡಿದಿದೆ. ಪರಿಣಾಮ ಮನೆಗೆ ಸೀಮಂತಕ್ಕೆ ಬಂದಿದ್ದ ದರ್ಬೆತಡ್ಕ ನಿವಾಸಿ ಜಾನಕಿ ಹಾಗೂ ಅವರ ಮಗ ಜೀವನ್ (4), ಮನೆ ಸಮೀಪದ ನಿವಾಸಿಗಳಾದ ಅರ್ಪಿತಾ, ಹರ್ಷಿತಾ, ಶೃತಿ, ಸೌಮ್ಯಾ ಸಿಡಿಲಿನ ಆಘಾತಕ್ಕೆ ಒಳಗಾಗಿ ಗಾಯಗೊಂಡರು.
ಮನೆಯ ಎದುರು ಭಾಗದ ಗೋಡೆ ಬಿರುಕು ಬಿಟ್ಟಿದ್ದು ಸಿಮೆಂಟಿನ ತುಂಡುಗಳು ಮನೆಯವರ ಮೇಲೆ ಬಿದ್ದು ಗಾಯಗಳಾಗಿವೆ. ಗಾಯಾಳುಗಳು ಬೆಳ್ಳಾರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜೀವನ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ಮನೆಗೆ ಹಾನಿ: ಕಳೆದ ಗುರುವಾರ ರಾತ್ರಿ ಸುರಿದ ಭಾರೀ ಮಳೆ, ಸಿಡಿಲಿಗೆ ಎರಡು ಮನೆಗಳು ಹಾನಿಗೊಂಡ ಘಟನೆ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಕಲ್ಲೇರಿಯಲ್ಲಿ ಸಂಭವಿಸಿದೆ.
ಕಲ್ಲೇರಿಯ ಶಿವಗಿರಿ ನಿವಾಸಿ ಹುಕ್ರು ಮತ್ತು ಬಾಬು ಎಂಬವರ ಮನೆಗೆ ಸಿಡಿಲು ಅಪ್ಪಳಿಸಿ ಅವರ ಮನೆಯಲ್ಲಿ ಗಂಭೀರ ಸ್ವರೂಪದ ಬಿರುಕು ಮೂಡಿಸಿತ್ತಲ್ಲದೆ, ಮನೆಯ ವಿದ್ಯುತ್ ಸಂಪರ್ಕಗಳೆಲ್ಲವೂ ಹಾನಿಗೀಡಾಯಿತು. ಘಟನೆಯಿಂದ ಮನೆಯಲ್ಲಿದ್ದ ಒಂಬತ್ತರ ಹರೆಯದ ಬಾಲಕನೋರ್ವ ಪ್ರಜ್ಞಾಹೀನನಾಗಿ ಬಿದ್ದಿದ್ದನಾದರೂ ಬಳಿಕ ಚೇತರಿಸಿಕೊಂಡ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ಪಂಚಾಯಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಭೇಟಿ ನೀಡಿ ಸಂತ್ರಸ್ತರಿಗೆ ತಲಾ ಹತ್ತು ಸಾವಿರ ಪರಿಹಾರಧನವನ್ನು ವಿತರಿಸಿದರು.
ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ನಷ್ಟದ ಅಂದಾಜು ನಡೆಸಿದ್ದಾರೆ.
ಗ್ರಾಮಾಂತರದಲ್ಲಿ ಮಳೆ : ಕಳೆದ ಮೂರು ದಿನಗಳಿಂದ ದ.ಕ. ಜಿಲ್ಲೆಯಲ್ಲಿ ನಿರಂತರ ಮಳೆಯಾಗಿದ್ದು, ಗ್ರಾಮಾಂತರಗಳಲ್ಲಿ ಮುಂಗಾರು ಹಿಂಗಾರು ಕಡಿಮೆಯಾಗಿಲ್ಲ. ಆದರೆ ಮಂಗಳೂರು ನಗರದಲ್ಲಿ ಹಗಲು ಮಳೆಯಾದ ಬಗ್ಗೆ ವರದಿಯಾಗಿಲ್ಲ. ಹಗಲು ಪೂರ್ತಿ ಬಿಸಿಲು, ಮೋಡ ಆಟ ನಡೆಯುತ್ತಿತ್ತು.
ನಗರದ ಫ್ಲೋರಾ ಹೌಸ್‌ನಲ್ಲಿ ಗುರುವಾರ ರಾತ್ರಿ ಮಳೆಗೆ ಕಂಪೌಂಡ್ ಕುಸಿದುಬಿದ್ದಿದೆ. ಕೆಎಸ್‌ಆರ್ ರಸ್ತೆ ಬಳಿ ಕೋರ್ಟ್‌ಗೆ ಹೋಗುವ ರಸ್ತೆಯ ತಡೆಗೋಡೆ ಕುಸಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

