ಕಳವಾದ 20 ವಿಗ್ರಹಗಳು ಮರಳಿ ಸಿಕ್ಕವು
ಮಂಗಳೂರು: ಮೂಡುಬಿದರೆ ಜೈನಬಸದಿಯ ಕೋಟ್ಯಂತರ ಮೌಲ್ಯದ 12 ವಿಗ್ರಹಗಳು ಸ್ಪೀಡ್ ಪೋಸ್ಟ್ ಪಾರ್ಸೆಲ್ ಮೂಲಕ ಪೊಲೀಸ್ ಕಮಿಷನರ್ ಕಚೇರಿಗೆ ತಲುಪಿದೆ. ಕೊಹಿನೂರು ವಜ್ರಕ್ಕಿಂತಲೂ ದೊಡ್ಡದಾದ ವಜ್ರದ ಚಂದ್ರಪ್ರಭಾ ಸ್ವಾಮಿ ವಿಗ್ರಹವೂ ಪಾರ್ಸೆಲ್ನಲ್ಲಿತ್ತು. ಈ ಮೂಲಕ ಕೋಟ್ಯಂತರ ಮೌಲ್ಯದ ವಿಗ್ರಹಗಳನ್ನು ವಾರಸುದಾರರಿಗೆ ಮುಟ್ಟಿಸುವ ಮೂಲಕ ಅಂಚೆ ಇಲಾಖೆ ನಂಬಿಕೆ ಉಳಿಸಿಕೊಂಡಿದೆ!.
ಛತ್ತೀಸ್ಗಡದಿಂದ ನ.2ರಂದು ಪೋಸ್ಟ್ ಮಾಡಲಾಗಿತ್ತು. ದೀಪಾವಳಿ, ಭಾನುವಾರ ಸಹಿತ ಸತತ ರಜೆಗಳ ಬಳಿಕವೂ 5ರಂದು ಸಂಜೆ 4 ಗಂಟೆಗೆ ಮಂಗಳೂರು ತಲುಪಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ಜೈನಬಸದಿ ಸಿದ್ಧಾಂತ ಮಂದಿರದ 20 ವಿಗ್ರಹಗಳನ್ನು ವಾಪಸ್ ಜೈನಮಠಕ್ಕೆ ನೀಡುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಗ್ರಹಗಳು: ವಜ್ರದ ಚಂದ್ರಪ್ರಭಾ ಸ್ವಾಮಿ, ಗಜಮುತ್ತು, ಸ್ಫಟಿಕದ ಸಿದ್ಧಪರಮೇಷ್ಠಿ, ಸ್ಫಟಿಕ ರತ್ನದ ಮುನಿಸುವೃತ ಸ್ವಾಮಿ, ಪಚ್ಚೆಕಲ್ಲಿನ ಅರಹಂತಪರಮೇಷ್ಠಿ, ನೀಲ ರತ್ನದ ಮುನಿಸುವೃತ ಸ್ವಾಮಿ, ನೀಲ ರತ್ನದ ಅರಹಂತ, ಸ್ಫಟಿಕ ರತ್ನದ ಅರನಾಥ ಪರಮೇಷ್ಠಿ, ಪಚ್ಚೆಕಲ್ಲು ಪಾರ್ಶ್ವನಾಥ, ನೀಲರತ್ನ ಮಲ್ಲಿನಾಥ, ಸ್ಫಟಿಕ ರತ್ನದ ಸಿದ್ದ ಪರಮೇಷ್ಠಿ ಕುಳಿತ ಭಂಗಿ, ಸ್ಫಟಿಕ ರತ್ನದ ಸಿದ್ಧ ಪರಮೇಷ್ಠಿ.
ಪ್ರಕರಣ ವಿವರ: ಜು.6ರಂದು ಮಳೆಗಾಲದ ರಾತ್ರಿಯಲ್ಲಿ 1 ಗಂಟೆಯಿಂದ 4 ಗಂಟೆ ಅವಧಿಯಲ್ಲಿ ಮೂಡುಬಿದರೆ ಸಿದ್ಧಾಂತಮಂದಿರದ ಪ್ರಾಚೀನ ಕಾಲದ ಜೈನ ವಿಗ್ರಹಗಳು ಕಳವಾಗಿದ್ದವು. ಆರಂಭದಲ್ಲಿ 15 ವಿಗ್ರಹ ಕಳವಾಗಿದೆ ಎಂದು ಹೇಳಿದ್ದರು. ಕೊನೆಗೆ ವಿಗ್ರಹಗಳ ಸಂಖ್ಯೆ ಬಗ್ಗೆಯೇ ಗೊಂದಲ ಆಗಿತ್ತು. ಇದೀಗ ಕಳ್ಳರೇ ಒಪ್ಪಿಕೊಂಡಂತೆ ಕಳವಾದ ವಿಗ್ರಹಗಳ ಸಂಖ್ಯೆ 20.
ಕಿಟಕಿ ಗ್ರಿಲ್ಲನ್ನು ಗ್ಯಾಸ್ ಸಿಲಿಂಡರ್ ಸಹಾಯದಿಂದ ಕತ್ತರಿಸಿ ಒಳಪ್ರವೇಶ ಮಾಡಿ ಕಳವು ಮಾಡಿದ್ದರು. ಪ್ರಾಚೀನ ಕಾಲದ ಈ ವಿಗ್ರಹಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲದಿದ್ದರೂ ಇದರ ಮೌಲ್ಯವನ್ನು ಪೊಲೀಸರು 75 ಕೋಟಿ ಅಂದಾಜಿಸಿದ್ದರು. ಬಸದಿ ಆಡಳಿತ ಮುಖ್ಯಸ್ಥ ಸುದೇಶ್ ಕುಮಾರ್ ನೀಡಿದ ದೂರಿನಂತೆ ಮೂಡುಬಿದರೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ತನಿಖೆ ವೇಳೆ 3 ಜೈನ ವಿಗ್ರಹ ಹಾಗೂ 5 ಚಿನ್ನದ ವಿಗ್ರಹಗಳನ್ನು ಕರಗಿಸಿದ್ದರು. ಅದು 1.22 ಕಿಲೋ, ಹಾಗೂ 2.5 ಲಕ್ಷ ನಗದನ್ನು ಮೊದಲನೇ ಆರೋಪಿ ಘನಶ್ಯಾಮದಾಸ್ ಯಾನೆ ಜಿಎಂ ದಾಸ್ನ ಮಾವ ದಿಗಂಬರ ಮೊಹಾಂತಿ, ದೀಪ್ತಿಮಹಿ ಮೊಹಾಂತಿ ಮನೆಯಿಂದ ವಶಪಡಿಸಿಕೊಳ್ಳಲಾಗಿತ್ತು. ಆರೋಪಿ ಪತ್ನಿ ಮತ್ತು ಮಾವನನ್ನು ಜ.15ರಂದು ಪೊಲೀಸ್ ಕಮಿಷನರ್ ಮನೀಷ್ ಕರ್ಬೀಕರ್ ಮತ್ತು ಅಂದಿನ ಸಿಸಿಬಿ ಇನ್ಸ್ಪೆಕ್ಟರ್ ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ ಬಂಧಿಸಿ ಕರೆ ತಂದಿದ್ದರು.
ಪ್ರಮುಖ ಆರೋಪಿ ಜಿ.ಎಂ. ದಾಸ್ನನ್ನು ಜು.27ರಂದು ಬಂಧಿಸಲಾಗಿತ್ತು. ಆತನ ಹೇಳಿಕೆಯಂತೆ ಅ.4ರಂದು ಸೂತ್ರಧಾರಿ ರಾಜಾಜಿ ಯಾನೆ ಸುಭಾಶ್ ಸಂಚೇತಿಯನ್ನು ಬಂಧಿಸಲಾಗಿತ್ತು.
4 ಜನ ಆರೋಪಿಗಳ ವಿರುದ್ಧ ಸೆ.30ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ನ್ಯಾಯಾಲಯ ಅನುಮತಿ ಪಡೆದು 7 ಜೈನ ವಿಗ್ರಹಗಳ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಪ್ರಮುಖ ಆರೋಪಿಗಳ ಮಂಪರು ಪರೀಕ್ಷೆಗೆ ಕೂಡಾ ಪೊಲೀಸರು ಅರ್ಜಿ ಸಲ್ಲಿಸಿದ್ದರು.
ಸಿಬಿಐ ತನಿಖೆಗೆ ಜೈನಮಠಾಧೀಶರು ಒತ್ತಡ ಹೇರಿದ್ದರು. ಆದರೆ ಕೋರ್ಟ್ ಮಂಪರು ಪರೀಕ್ಷೆಗೆ ಸಮ್ಮತಿ ನೀಡಲಿಲ್ಲ. ಈ ನಡುವೆ ಮಂಗಳವಾರ ಸಂಜೆ 4 ಗಂಟೆಗೆ ತ್ವರಿತ ಅಂಚೆಯಲ್ಲಿ ವಿಗ್ರಹಗಳು ಕಮಿಷನರ್ ಕಚೇರಿ ತಲುಪಿವೆ.
ಮಂಪರು ಪರೀಕ್ಷೆ, ಸಿಬಿಐ ತನಿಖೆ ಹೆದರಿಕೆ ಮಾತ್ರವಲ್ಲದೆ ಇದರ ಹಿಂದಿರುವ ಪ್ರಭಾವಿ ಶಕ್ತಿಗಳು ಬಹಿರಂಗವಾಗುವ ಬೆದರಿಕೆಯಲ್ಲಿ ವಿಗ್ರಹ ಕಳುಹಿಸಿರುವ ಶಂಕೆ ವ್ಯಕ್ತವಾಗಿದೆ.
'12 ವಿಗ್ರಹ ಮತ್ತು ಬೆಳ್ಳಿ ಪೀಠ, ಸ್ಫಟಿಕ ಮತ್ತು ನೀಲದ ಸಣ್ಣ ಚೂರುಗಳು ದೊರೆತಿವೆ. ಪಾರ್ಸೆಲ್ ಕಳುಹಿಸಿದವರು ಯಾರು ಎಂಬುದನ್ನು ತನಿಖೆ ಮಾಡಿ ಪರಿಶೀಲಿಸುತ್ತೇವೆ' ಎಂದು ಕಮಿಷನರ್ ಮನೀಶ್ ಕರ್ಬಿಕರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

