ವ್ಯಾಪಕ ಒತ್ತಡ: ಸೌಜನ್ಯಾ ಪ್ರಕರಣ ಸಿಬಿ'ಐ'ಗೆ
ಬೆಳ್ತಂಗಡಿ: ಕಳೆದ ಒಂದು ವರ್ಷದಿಂದ ರಾಜ್ಯಾದ್ಯಂತ ಭಾರಿ ಹೋರಾಟಗಳ ಮೂಲಕ ಗಮನ ಸೆಳೆದಿದ್ದ ಧರ್ಮಸ್ಥಳ ಸೌಜನ್ಯಾ ಹತ್ಯಾಚಾರ ಪ್ರಕರಣದ ತನಿಖೆಯನ್ನು ಕೊನೆಗೂ ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಿದ್ದು ಹೋರಾಟಗಳಿಗೆ ಒಂದು ಹಂತದ ಗೆಲುವು ದೊರೆತಂತಾಗಿದೆ. ಆದರೆ ಹೋರಾಟಗಾರರು ಹಾಗೂ ಸೌಜನ್ಯಾ ಮನೆಯವರು ಈ ತನಿಖೆಯೂ ನ್ಯಾಯ ಒದಸಬಹುದೇ ಎಂಬ ಅನುಮಾನದಲ್ಲಿದ್ದಾರೆ.
2012 ಅ.9 ರಂದು ಧರ್ಮಸ್ಥಳ ಪಾಂಗಾಳ ಮನೆಯ ಚಂದಪ್ಪ ಗೌಡ-ಕುಸುಮಾತಿ ದಂಪತಿ ಪುತ್ರಿ ಉಜಿರೆ ಎಸ್ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಾ ಸಂಜೆ ಕಾಲೇಜಿನಿಂದ ಮನೆಗೆ ಬರುತ್ತಿರುವಾಗ ನೇತ್ರಾವತಿ ಸ್ನಾನ ಘಟ್ಟದ ಸನಿಹ ನಾಪತ್ತೆಯಾಗಿದ್ದಳು. ಮರುದಿನ ಸ್ಥಳೀಯುರು ಹುಡುಕಾಟ ನಡೆಸಿದಾಗ ಮುಖ್ಯರಸ್ತೆಯ ಬದಿಯಲ್ಲಿಯೇ ಹರಿವ ಹಳ್ಳವೊಂದರ ಸಮೀಪ ಕಾಡಿನಲ್ಲಿ ಆಕೆಯ ಮೃತ ದೇಹ ಪತ್ತೆಯಾಗಿತ್ತು.
ಅಮಾನುಷ ಹತ್ಯೆ: ಸೌಜನ್ಯಾಳನ್ನು ಅತ್ಯಾಚಾರ ಮಾಡಿ ಕೊಲ್ಲಲಾಗಿತ್ತು. ದುಷ್ಕರ್ಮಿಗಳು ಆಕೆಯನ್ನು ಅತ್ಯಂತ ಅಮಾನುಷ ರೀತಿಯಲ್ಲಿ ನಡೆಸಿಕೊಂಡಿದ್ದರು ಎಂದು ಶವ ನೋಡಿದಾಗ ತಿಳಿಯುತ್ತಿತ್ತು.
ಬಟ್ಟೆ ಬರೆಗಳನ್ನು ಹರಿಯಲಾಗಿತ್ತು. ಕುತ್ತಿಗೆಯನ್ನು ದಾರದಿಂದ ಬಿಗಿಯಲಾಗಿತ್ತು. ಕೈಯೊಂದನ್ನು ಗಿಡಕ್ಕೆ ಆಕೆಯ ಚೂಡಿದಾರದ ಶಾಲಿನಿಂದ ಬಿಗಿದುಕಟ್ಟಲಾಗಿತ್ತು. ಈ ಬರ್ಭರ ಕೃತ್ಯದ ಬಗ್ಗೆ ತಾಲೂಕಿನಾದ್ಯಂತ ಭಾರಿ ಪ್ರತಿಭಟನೆಗಳೇ ಭುಗಿಲೆದಿದ್ದವು. ಅಪರಾಧಿಗಳನ್ನು ಹಿಡಿಯುವಂತೆ ಮನವಿಗಳ ಮಹಾಪೂರವೇ ಹರಿದಿತ್ತು.
ಎರಡು ದಿನಗಳ ಬಳಿಕ ಧರ್ಮಸ್ಥಳ ಗುಮ್ಮಟ ಬೆಟ್ಟದಲ್ಲಿ ತಿರುಗಾಡುತ್ತಿದ್ದ ಸಂತೋಷ್ ರಾವ್ ಎಂಬಾತನನ್ನು ಸ್ಥಳೀಯರು ಹಿಡಿದು ಬೆಳ್ತಂಗಡಿ ಪೊಲಿಸರಿಗೆ ಒಪ್ಪಿಸಿದ್ದರು. ಪೊಲಿಸರು ಸಂತೋಷ್ ರಾವ್ ಆರೋಪಿಯೆಂದು ಪ್ರಕರಣ ದಾಖಲಿಸಿಕೊಂಡರು.
ತೀವ್ರ ಪ್ರತಿಭಟನೆ: ಆದರೆ ಸಾರ್ವಜನಿಕರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪ್ರತಿಭಟನೆಗಳು ತೀವ್ರಗೊಳಿಸಿದಾಗ ಮತ್ತು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಂದಿನ ಗೃಹ ಸಚಿವರಿಗೆ ಕೋರಿದಾಗ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿತ್ತು.
ಸೌಜನ್ಯಾ ಮನೆಯವರು ಮೂವರು ವ್ಯಕ್ತಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹಾಗೂ ಪೊಲೀಸ್ ತನಿಖೆಗಳ ವೈಫಲ್ಯಗಳ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಆದರೆ ಸಿಐಡಿ ತನಿಖೆ ಮಂದಗತಿಯಲ್ಲೇ ಸಾಗಿತ್ತು.
ಮಧ್ಯಂತರ ವರದಿ: ಒಂದೆಡೆ ಸಿಬಿಐ ತನಿಖೆಗೆ ಒತ್ತಾಯಿಸಿ ಹೋರಾಟಗಳು ನಡೆಯುತ್ತಿರುವಾಗಲೇ ಸಿಐಡಿ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ಸಂತೋಷ್ ರಾವ್ನೇ ಆರೋಪಿಯೆಂದು ಸ್ಪಷ್ಟಪಡಿಸಿರುವುದು ಕಂಡು ಬಂತು.
ಇದು ಸಾರ್ವಜನಿಕರ ಅಸಮಾಧಾನ ಮತ್ತಷ್ಟು ಸ್ಫೋಟಗೊಳ್ಳಲು ಕಾರಣವಾಯಿತು. ಬಳಿಕ ಶಾಸಕ ವಸಂತ ಬಂಗೇರ ಪ್ರಕರಣವನ್ನು ವಿಧಾನಸೌಧದಲ್ಲಿ ಪ್ರಸ್ತಾವಿಸಿ ಮರು ತನಿಖೆಗೆ ಒತ್ತಾಯಿಸಿದರು.
ಬಳಿಕ ನಡೆದ ಮರು ತನಿಖೆಯಲ್ಲಿಯೂ ಸಂತೋಷ್ ರಾವ್ನೇ ಆರೋಪಿಯೆಂಬ ವರದಿ ಹೊರಬರುತ್ತಿದ್ದಂತೆ ತಾಲೂಕಿನಲ್ಲಿ ಮತ್ತು ರಾಜ್ಯದಲ್ಲಿ ಸಿಬಿಐ ತನಿಖೆಗಾಗಿ ಹೋರಾಟಗಳು ಸ್ಫೋಟಗೊಂಡವು. ಬೃಹತ್ ಪ್ರತಿಭಟನೆಗಳು ನಡೆದವು. ಶಾಸಕರು ಸಿಬಿಐ ತನಿಖೆಯಿಂದಲೇ ಸತ್ಯ ಹೊರಬರುವುದೆಂಬ ಎಂಬ ನಿಲುವನ್ನು ತಾಳಿ ಸರ್ಕಾರವನ್ನು ಆಗ್ರಹಿಸಿದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮುಖ್ಯಮಂತ್ರಿಗೇ ಪತ್ರ ಬರೆದು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದ್ದರು.
ಈ ಎಲ್ಲಾ ಒತ್ತಡಗಳ ಪರಿಣಾಮವಾಗಿ ಸರ್ಕಾರ ಇದೀಗ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ನಿರ್ಧರಿಸಿದೆ.
ಜೇಮ್ಸ್ ಪ್ರಕರಣ: ಬೆಳ್ತಂಗಡಿ ತಾಲೂಕಿನಲ್ಲಿ ಈ ಹಿಂದೆ ಫಾದರ್ ಜೇಮ್ಸ್ ಕೊಲೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆದಿತ್ತು. ಆದರೆ ಅದು ಯಾವ ಹಂತಕ್ಕೆ ತಲುಪಿದೆ ಎಂಬುದು ಯಾರಿಗೂ ಮಾಹಿತಿ ಇಲ್ಲ.
ಇದೀಗ ಎರಡನೇ ಬಾರಿ ಸೌಜನ್ಯಾ ಸಾವಿನ ಪ್ರಕರಣದಲ್ಲಿ ಸಿಬಿಐ ತನಿಖಾ ತಂಡ ತಾಲೂಕಿಗೆ ಆಗಮಿಸಲಿದ್ದು ತನಿಖೆ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಸಾರ್ವಜನಿಕರದ್ದು.
ಸರ್ಕಾರ ನಿರ್ಧಾರ:
ಡಾ.ಹೆಗ್ಗಡೆ ಸ್ವಾಗತ
ಬೆಳ್ತಂಗಡಿ: ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐಗೆ ವಿದ್ಯಾರ್ಥಿ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆ ವಹಿಸುವ ಕುರಿತ ಸರ್ಕಾರದ ನಿರ್ಧಾರವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸ್ವಾಗತಿಸಿದ್ದಾರೆ.
ಧರ್ಮಸ್ಥಳ ಗ್ರಾಮದ ಪಾಂಗಳ ಎಂಬಲ್ಲಿ ನಡೆದ ಯುವತಿಯ ಹತ್ಯಾ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ. ಈ ಕ್ರಮದಿಂದ ಈ ಪ್ರಕರಣದ ಸತ್ಯಾಸತ್ಯತೆಗಳು ಹೊರಬರುವುದಲ್ಲದೆ, ಯುವತಿಯ ಕುಟುಂಬಕ್ಕೆ ನ್ಯಾಯ ಸಿಗುವಂತಾಗಬೇಕು ಎಂದು ಅವರು ಹಾರೈಸಿದ್ದಾರೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಪ್ರಕರಣ ಅನೇಕ ತಿರುವುಗಳನ್ನು ಪಡೆದುದ್ದನ್ನು ಗಮನಿಸಿರುತ್ತೇನೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆಯೂ ಈ ಪ್ರಕರಣದಿಂದ ಅನೇಕ ರೀತಿಯ ಅಪವಾದಗಳ ಸುರಿಮಳೆಯಾಗಿದೆ. ಧರ್ಮಸ್ಥಳದ ಹೆಸರು, ಕೀರ್ತಿಯನ್ನು ಪ್ರಶ್ನಿಸುವಂತಹ ಅನೇಕ ಹೇಳಿಕೆಗಳು ಬರುತ್ತಿವೆ. ನೇರವಾಗಿ, ನಮ್ಮ ಮೇಲೆ ಮತ್ತು ಕುಟುಂಬದವರ ಮೇಲೆಯೂ ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳು ಇನ್ನೂ ಸಹ ಸಭೆಗಳಲ್ಲಿ ಮುಂದುವರಿಯುತ್ತಿದೆಯೆಂಬುದು ವಿಷಾದನೀಯ. ಏನೇ ಇರಲಿ, ಸಿಬಿಐ ತನಿಖೆ ನ್ಯಾಯುತವಾಗಿ ನಡೆಯುತ್ತದೆಯೆಂಬ ವಿಶ್ವಾಸವು ನಮಗಂತೂ ಇದೆ. ಈ ಸಂದರ್ಭದಲ್ಲಿ ಸಿಬಿಐ ವರದಿ ಹೊರಗೆ ಬರುವವರೆಗೂ ಸಹನೆ ವಹಿಸುವಂತೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವೃಥಾ ಆರೋಪಗಳ ಸುರಿಮಳೆ ನಿಲ್ಲಿಸುವಂತೆ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ ಎಂದು ವೀರೇಂದ್ರ ಹೆಗ್ಗಡೆ ಹೇಳಿಕೆಯಲ್ಲಿ ಹೇಳಿದ್ದಾರೆ. ಈ ಪ್ರಕರಣದ ಕುರಿತಾಗಿ ಇದೀಗ ಸಿಬಿಐನಿಂದ ಅಂತಿಮ ತನಿಖಾ ವರದಿ ಬರುವವರೆಗೆ ಸಾರ್ವಜನಿಕರು ಮತ್ತು ಕ್ಷೇತ್ರದ ಭಕ್ತರು ತಾಳ್ಮೆ ಇರಿಸಿಕೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಿಬಿಐ ತನಿಖೆ ಸ್ವಾಗತಾರ್ಹ: ಪೇಜಾವರ ಸ್ವಾಮೀಜಿ
ಮಂಗಳೂರು: ಸೌಜನ್ಯಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿರುವುದು ಸ್ವಾಗತಾರ್ಹ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಸ್ವಾಮೀಜಿ, ಈ ಹಿಂದೆ ಸೌಜನ್ಯಾ ಕೊಲೆ ಪ್ರಕರಣ ಸಿಬಿಐ ಕೊಡುವಂತೆ ಒತ್ತಾಯಿಸಿದ್ದೆ. ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಕೂಡಾ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸೌಜನ್ಯ ಹೆತ್ತವರಿಗೆ ಆದಷ್ಟು ಶೀಘ್ರನ್ಯಾಯ ಸಿಗಲಿ ಎಂದರು.
ಪ್ರತಿಕ್ರಿಯೆ ಇಲ್ಲ: ಮೂಢನಂಬಿಕೆ ವಿಧೇಯಕ ಬಗ್ಗೆ ಏನೂ ಹೇಳುವುದಿಲ್ಲ. ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗೆ ಬಂದರೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

