ದಕ್ಷಿಣ ಕನ್ನಡ

ರೈತರಿಗೆ ಸರ್ಕಾರದ ಭೂಮಾಪನ ಶುಲ್ಕ ಹೆಚ್ಚಳ ಬರೆ

Published On :

ಮಂಗಳೂರು: ಸಾಮಾನ್ಯ ರೈತರಿಗೆ ಇನ್ನು ಜಾಗದ ಸರ್ವೇ ಮಾಡಿಸುವುದು ಸುಲಭವಲ್ಲ. ಯಾಕೆಂದರೆ ಸರ್ವೇ ಮಾಡಿಸಲು ಕೊಡಬೇಕಾದ ಶುಲ್ಕವನ್ನು ಸರ್ಕಾರ ವಿಪರೀತ ಹೆಚ್ಚಿಸಿದೆ. ಹೆಚ್ಚಿಸಿರುವ ಭೂಮಾಪನ ಶುಲ್ಕ ಬಡ ರೈತರಿಗೆ ಮರಣ ಶಾಸನವಾದರೆ, ಸರ್ಕಾರ ಇದನ್ನು ಅನ್ನಭಾಗ್ಯದಂತೆ 'ಸರ್ವೇ ಭಾಗ್ಯ' ಎಂದು ಕರೆದರೂ ಅಚ್ಚರಿಪಡಬೇಕಿಲ್ಲ! ಹೆಚ್ಚಿಸಿದ ಭೂಮಾಪನ ಶುಲ್ಕ ನವೆಂಬರ್ ಒಂದರಿಂದಲೇ ಜಾರಿಗೆ ಬಂದಿದೆ. ಬೇಕಾಬಿಟ್ಟಿ ಹೆಚ್ಚಳ ವಿರೋಧಿ ರಾಜ್ಯಾದ್ಯಂತ ರೈತರು ಭೂಮಾಪನಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸರ್ವೇ ಕಾರ್ಯಕ್ಕೆ ಗ್ರಹಣ ಬಡಿದಂತಾಗಿದೆ.
ನಾಲ್ಕು ಪಟ್ಟು ಹೆಚ್ಚಳ: ಭೂಮಾಪನ ಶುಲ್ಕ ನಗರ ಹಾಗೂ ಗ್ರಾಮಾಂತರ ಪ್ರದೇಶಕ್ಕೆ ಪ್ರತ್ಯೇಕವಾಗಿ ಹೆಚ್ಚಳ ಮಾಡಲಾಗಿದೆ. 11ಇ ನಕ್ಷೆ, ಕನ್ವರ್ಷನ್(ಆಲಿನೇಷನ್) ಪೂರ್ವ ನಕ್ಷೆ ಹಾಗೂ ತತ್ಕಾಲ್ ಪೋಡಿ ಪ್ರಕರಣಗಳಿಗೆ ಹೆಚ್ಚಳ ಅನ್ವಯವಾಗಲಿದೆ. ಈ ಪ್ರಕರಣಗಳಲ್ಲಿ ಜಾಗ ಅಳತೆ(ಸರ್ವೇ) ಮಾಡಲು ರೈತರು ನಗರ ಪ್ರದೇಶದಲ್ಲಿ ಕನಿಷ್ಠ 2 ಎಕರೆ ವರೆಗೆ ಅರ್ಜಿಗೆ ರು. 2,500 ಹಾಗೂ ಪ್ರತಿ ಭಾಗಶಃ ಎಕರೆಗೆ ರು. 500ರಂತೆ ಭೂಮಾಪಕರಿಗೆ ಪಾವತಿಸಬೇಕು. ಗ್ರಾಮೀಣ ಪ್ರದೇಶದಲ್ಲಿ 2 ಎಕರೆ ವರೆಗೆ ಅರ್ಜಿಗೆ ರು. 1,500, ಇದಕ್ಕಿಂತ ಹೆಚ್ಚು ಜಾಗವಿದ್ದಲ್ಲಿ ಹೆಚ್ಚುವರಿಯಾಗಿ ರು. 200ರಂತೆ ಪಾವತಿಸಬೇಕು. ಈ ಕುರಿತ ಆದೇಶವನ್ನು(ಕಂಇ279 ಭೂದಾಸ 2011 ಬೆಂಗಳೂರು ದಿನಾಂಕ 21-10-2013)ಜಾರಿಗೊಳಿಸಿದ್ದು, ನ.1ರಿಂದ ಅನ್ವಯವಾಗುವಂತೆ ಅನುಷ್ಠಾನಕ್ಕೆ ತಂದಿದೆ. ಹೀಗೆ ಏಕಾಏಕಿ ಹೆಚ್ಚಳಗೊಳಿಸಿದ್ದಕ್ಕೆ ಸರ್ಕಾರ ಯಾವುದೇ ಕಾರಣ ಸ್ಪಷ್ಟಪಡಿಸಿಲ್ಲ.
 ಇದುವರೆಗೆ ಭೂಮಾಪನಕ್ಕೆ ರೈತರು ನಗರ ಮತ್ತು ಗ್ರಾಮೀಣದಲ್ಲಿ 11ಇ ಅರ್ಜಿಗೆ ರು. 600 ಹಾಗೂ ತತ್ಕಾಲ್ ಪೋಡಿಗೆ ರು. 500 ನೀಡುತ್ತಿದ್ದರು. ಈಗ ನಾಲ್ಕು ಪಟ್ಟು ಶುಲ್ಕ ಹೆಚ್ಚಳ ಮಾಡಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ.
ಭೂಮಾಪಕರಿಗೆ ಮೊತ್ತ ಹೆಚ್ಚಳ: ಪರವಾನಗಿ ಭೂಮಾಪಕರಿಗೆ ಪ್ರತಿ ಅರ್ಜಿಗೆ ಈ ಹಿಂದೆ ನೀಡುತ್ತಿದ್ದ ಮೊತ್ತವನ್ನು ಪರಿಷ್ಕರಿಸಲಾಗಿದೆ. ರು. 300 ಬದಲು ಕನಿಷ್ಠ ರು. 800. ಶೇ.50ಕ್ಕಿಂತ ಹೆಚ್ಚಿನ ಭೂಮಾಲಿಕರಿಗೆ ಹಿಸ್ಸಾ ಬ್ಲಾಕ್ ವಿಂಗಡಿಸಿದ ಪ್ರಕರಣಗಳಲ್ಲಿ ಪ್ರತಿ ಹೆಚ್ಚುವರಿ ಬ್ಲಾಕ್‌ಗೆ ರು. 150, ಕನಿಷ್ಠ ಶುಲ್ಕ ರು. 800 ಹಾಗೂ ಹೆಚ್ಚುವರಿ ಬ್ಲಾಕ್‌ಗಳಿಗೆ ನೀಡುವ ಶುಲ್ಕ ಒಳಗೊಂಡಂತೆ ಗರಿಷ್ಠ ರು. 2 ಸಾವಿರಕ್ಕೆ ನಿಗದಿಗೊಳಿಸಲಾಗಿದೆ. ಇದರಲ್ಲಿ ಭೂಮಾಪಕರಿಗೆ ಸಿಗುವ ಮೊತ್ತ ರು. 800 ಮಾತ್ರ. ಉಳಿದ ಮೊತ್ತವನ್ನು ಹಳೆಯ ಪೋಡಿ(ಬ್ಯಾಕ್‌ಲಾಗ್ ಪೋಡಿ)ಕೆಲಸಕ್ಕೆ ಉಪಯೋಗಿಸಿಕೊಳ್ಳುವಂತೆ ಸರ್ಕಾರ ಆದೇಶದಲ್ಲಿ ತಿಳಿಸಿದೆ.
 ಭೂಮಾಪಕರಿಗೆ ಅನುಕೂಲಕ್ಕೆ ವಿಪರೀತ ಶುಲ್ಕ ಹೆಚ್ಚಿಸಿದ್ದೆಂದು ಸರ್ಕಾರ ವಾದಿಸಿದರೂ ಇದರಲ್ಲಿ ಹುರುಳಿಲ್ಲ. ರೈತರಿಂದ ಭೂಮಾಪಕರಿಗೆ ಸಿಗುವ ಮೊತ್ತ ಬರೇ ರು. 800. ಇದರ ಪ್ರಯೋಜನ ಭೂಮಾಪಕರಿಗೆ ಅಷ್ಟೇನೂ ಇಲ್ಲ. ರಾಜ್ಯಾದ್ಯಾಂತ ಭೂಮಾಪನಕ್ಕೆ ಅರ್ಜಿ ಸಲ್ಲಿಕೆ ಭಾಗಶಃ ಸ್ಥಗಿತಗೊಂಡರೆ, ಅರ್ಜಿ ಸಲ್ಲಿಸಿದವರು ದುಬಾರಿ ಶುಲ್ಕದಿಂದ ಸರ್ವೇ ನಡೆಸಲು ಮುಂದಾಗುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಬರುವ ಆದಾಯ ಕುಂಠಿತಗೊಳ್ಳಲು ಕಾರಣವಾಗಿದೆ.
1.64 ಅರ್ಜಿ ಬಾಕಿ: 11ಇ ನಕ್ಷೆಗೆ ರಾಜ್ಯದ 30 ಜಿಲ್ಲೆಗಳಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ 1,64,219 ಅರ್ಜಿ ವಿಲೇವಾರಿಯಾಗದೆ ಬಾಕಿ ಉಳಿದಿದೆ. ನವೆಂಬರ್ ಪ್ರಥಮ ಸರ್ವೇ ಶುಲ್ಕ ಏರಿಕೆಯಾದಲ್ಲಿಂದ ಅರ್ಜಿ ವಿಲೇವಾರಿಯೂ ವಸ್ತುಶಃ ಸ್ಥಗಿತಗೊಂಡಿದೆ.
 ಭೂಮಾಪನ ಮತ್ತು ಸರ್ವೇ ಇಲಾಖೆ ವರದಿ ಪ್ರಕಾರ ಗರಿಷ್ಠ ಅರ್ಜಿ ವಿಲೇವಾರಿಗೆ ಬಾಕಿ ಇರುವುದು ಹಾಸನ 12,607, ರಾಯಚೂರು 14,291 ಹಾಗೂ ಮಂಡ್ಯ 11,847 ಅರ್ಜಿ. ಕನ್ವರ್ಷನ್ ಪೂರ್ವ ಹಾಗೂ ತತ್ಕಾಲ್ ಪೋಡಿ ಮಾಹಿತಿ ಇನ್ನಷ್ಟೆ ಅಪ್‌ಡೇಟ್ ಆಗಬೇಕು.
'ಉತ್ತರ ಕರ್ನಾಟಕದಲ್ಲಿ ರೈತರಿಗೆ ಇಷ್ಟೊಂದು ಶುಲ್ಕ ಭರಿಸುವುದು ಸುಲಭದ ಮಾತಲ್ಲ. ಒಬ್ಬ ಹಿಡುವಳಿದಾರ 20 ಎಕರೆ ಜಮೀನಿನಲ್ಲಿ ಒಂದೇ ಸರ್ವೆ ನಂಬರಿನ ಒಂದೇ ಪೋಡಿಯಲ್ಲಿ ಒಂದು ಪ್ರಕರಣಕ್ಕೆ ಸಹೋದರರಿಗೆ ವಿಭಾಗ ಮಾಡಿಕೊಳ್ಳಲು ಗ್ರಾಮೀಣದಲ್ಲಿ ರು. 5100, ನಗರದಲ್ಲಿ ರು. 11500. ಇದು ರೈತ ಸಮುದಾಯಕ್ಕೆ ಮಾಡಿದ ಘೋರ ಅನ್ಯಾಯ'.
- ಮಲ್ಲಯ್ಯ ರೈತ ದಾವಣಗೆರೆ.
'ದುಬಾರಿ ಶುಲ್ಕದಿಂದ ರೈತರು ಜಾಗ ಸರ್ವೇಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸರ್ಕಾರದ ಆದಾಯಕ್ಕೆ ಹೊಡೆತ ಬಿದ್ದಂತಾಗಿದೆ. ಇಷ್ಟೊಂದು ಶುಲ್ಕ ಹೆಚ್ಚಳ ಮಾಡಿರುವುದು ಬಡ ರೈತರಿಗೆ ತೊಂದರೆಯಾಗಿದೆ.'
- ಕೆ.ಜಿ.ಲೋಕೇಶ್ ಅಧ್ಯಕ್ಷರು, ರಾಜ್ಯ ಸರ್ಕಾರಿ ಪರವಾನಗಿ ಭೂಮಾಪಕರ ಸಂಘ.



-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.