ಸುಂಕ ವಸೂಲು ನಿಲ್ಲದಿದ್ದರೆ ಪ್ರತಿಭಟನೆ
ಪಾಣೆಮಂಗಳೂರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಸೇತುವೆ ಸುಂಕವಾಗಿ ವಾಹನ ಸವಾರರಿಂದ ಭಾರಿ ಹಣ ವಸೂಲಿ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಕೋಟಿಗಟ್ಟಲೆ ಹಣ ಸಂಗ್ರಹವಾಗಿದ್ದರೂ, ಸುಂಕದ ವಸೂಲಾತಿ ಇನ್ನೂ ಮುಗಿದಿಲ್ಲ.
ಪಾಣೆಮಂಗಳೂರಿನ ಸೇತುವೆ ನಿರ್ಮಾಣಗೊಂಡು ಹಲವು ವರ್ಷಗಳಾದರೂ ಈ ರೀತಿ ಹಣ ವಸೂಲಿ ಮಾಡುವುದು ಸರಿಯೇ? ವಾಹನ ಮಾಲಕರು ರಸ್ತೆ ಸುಂಕ ಕಟ್ಟುವುದಿಲ್ಲವೇ? ಈಗಲೂ ಸುಂಕ ವಸೂಲಿ ನಡೆಸುವುದು ಹಗಲು ದರೋಡೆಯಲ್ಲದೆ ಇನ್ನೇನು? ಮುಂದೆ ಕೆಲವೇ ತಿಂಗಳಲ್ಲಿ ರಸ್ತೆ ಸುಂಕವಾಗಿ ಬ್ರಹ್ಮರಕೋಟ್ಲುವಿನಲ್ಲಿ ಶಾಖೆ ಪ್ರಾರಂಭಗೊಳ್ಳಲಿದ್ದು, ಕೇಂದ್ರ ಉದ್ಘಾಟನೆಗೆ ಕಾಮಗಾರಿ ನಡೆಯುತ್ತಿದೆ.
ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಈ ಅಕ್ರಮ ವಸೂಲಾತಿಯನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್ಸಿಪಿ) ಜಿಲ್ಲೆಯಾದ್ಯಂತ ಹೋರಾಟ ನಡೆಸುತ್ತದೆ.
ಸುಪ್ರೀತ್ ಕುಮಾರ್ ಪೂಜಾರಿ,
ಜಿಲ್ಲಾಧ್ಯಕ್ಷ, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ
ಅನ್ನ ಬಿಸಾಡುವವರ ವಿರುದ್ಧ ಕ್ರಮ ಕೈಗೊಳ್ಳಿ
ಅನ್ನವೇ ದೇವರು, ನಿರ್ಗತಿಕರು ಅನ್ನವಿಲ್ಲದೇ ಪರದಾಡುವ ಕಾಲ, ದಿನೇ ದಿನೇ ವಸ್ತುಗಳ ಬೆಲೆ ಏರಿಕೆ. ಇಂಥ ಸ್ಥಿತಿ ಬಂದಿರುವಾಗ ಅನ್ನವನ್ನು ಎಲ್ಲೆಂದರಲ್ಲಿ ಎಸೆಯುವ ವಿಚಿತ್ರ ಸನ್ನಿವೇಶ ಬಬ್ಬುಕಟ್ಟೆ ಸಂಯುಕ್ತ ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿದೆ. ಲೆಕ್ಕಕ್ಕಿಂತ ಜಾಸ್ತಿ ಭೋಜನ ತರಿಸಿ ಮಕ್ಕಳು ಅದನ್ನು ಸರಿಯಾಗಿ ಸೇವಿಸದೇ ಕಸದ ಬುಟ್ಟಿಗೆ ಎಸೆಯುತ್ತಾರೆ. ಇದು ಶಾಲಾ ಮಕ್ಕಳಿಗೆ, ಸಮೀಪದ ನಿವಾಸಿಗಳಿಗೂ ತಿಳಿದಿದೆ. ಪದೇ ಪದೇ ಅನ್ನವನ್ನು ಎರಡು ಬಾಕ್ಸ್ನಲ್ಲಿ ತಂದು ಎಸೆಯುತ್ತಾರೆ. ಹೀಗೆ ಎಸೆಯುವ ಬದಲು ಬೇಕಾದಷ್ಟೇ ಅನ್ನವನ್ನು ತರಿಸಿ ಮಕ್ಕಳಿಗೆ ಕೊಟ್ಟರೆ ಸಾಲದೇ? ಒಂದು ವೇಳೆ ಹೆಚ್ಚಾದ ಅನ್ನವನ್ನು ಯಾವುದಾದರೂ ಆಶ್ರಮಕ್ಕೆ ಕಳುಹಿಸಿಕೊಡಲಿ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳು ಕ್ರಮ ತಪ್ಪಿತಸ್ಥರ ವಿರುದ್ಧ ಕೈಗೊಳ್ಳಬೇಕು.
ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಅಧ್ಯಕ್ಷರು ಅಖಿಲ ಭಾರತ ಕಾರ್ಮಿಕ ಸಂಘ
ಮಂಗಳೂರು- ಇನ್ನಷ್ಟು ಬಸ್ ಸಂಚರಿಸಲಿ
ಮಂಗಳೂರು ನಗರದಲ್ಲಿ ಬಸ್ಗಳ ಸೀಟಿನಲ್ಲಿ ಸೀಟಿನ ಸಾಮರ್ಥ್ಯಕ್ಕಿಂತಲೂ ಜಾಸ್ತಿ ಜನರನ್ನು ಹಾಕುವ ಹಾಗಿಲ್ಲ. ಆದರೆ ಸಾರಿಗೆ ಕಾನೂನಿಗೆ ಬೆಲೆ ಕೊಡುವವರು ವಿರಳ. ಸಾರಿಗೆ ಇಲಾಖೆಯ ನಿರ್ಲಕ್ಷ್ಯದಿಂದ ಶಾಲೆಗೆ ಹೋಗುವ ಹೆಣ್ಮಕ್ಕಳು, ಹಿರಿಯ ನಾಗರಿಕರು ತೊಂದರೆ ಅನುಭವಿಸುತ್ತಿದ್ದೆ. ಬಸ್ ಮಾಫಿಯಾ ಹಿಡಿತದಿಂದ ಸಾರಿಗೆ ಅಧಿಕಾರಿಗಳು ತುಂಬಿತುಳುಕಿ ಸಂಚರಿಸುವ ಬಸ್ಗಳ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಬಸ್ಗಳಲ್ಲಿ ತೊಂದರೆಯಾದರೆ ಇಂಥ ನಂಬರಿಗೆ ಕರೆ ಮಾಡಿ ಎಂದು ಅಂಟಿಸಿರುತ್ತಾರೆ. ಆದರೆ ದೂರು ನೀಡಿದರೆ ಕ್ರಮ ಕೈಗೊಳ್ಳುವ ಧೈರ್ಯ ಯಾರೂ ತೋರಿಸುವುದಿಲ್ಲ. ಅದರ ಬದಲು ಇನ್ನಷ್ಟು ಬಸ್ಗಳಿಗೆ ಪರವಾನಗಿ ನೀಡಿ ಅಥವಾ ಸರ್ಕಾರಿ ಬಸ್ಗೆ ಅವಕಾಶ ನೀಡಿ ನೆಮ್ಮದಿಯಿಂದ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಬಾರದೇಕೆ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

