23ರಂದು ಗ್ರಾಪಂ ಪ್ರತಿನಿಧಿಗಳ ಬೃಹತ್ ಸಮಾವೇಶ
ಬಂಟ್ವಾಳ: ಬಿ.ಸಿ.ರೋಡ್ ರಂಗೋಲಿ ಸಭಾಂಗಣದಲ್ಲಿ ನ.23ರಂದು ನಡೆಯಲಿರುವ ದ.ಕ. ಜಿಲ್ಲಾ ಮಟ್ಟದ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಬೃಹತ್ ಸಮಾವೇಶದಲ್ಲಿ ಜಿಲ್ಲೆಯ 1500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ದ.ಕ. ಜಿಲ್ಲಾ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಒಕ್ಕೂಟ ಅಧ್ಯಕ್ಷ ಕೆ. ದೇವದಾಸ ಭಂಡಾರಿ ಹೇಳಿದ್ದಾರೆ.
ಬಿ.ಸಿ.ರೋಡ್ ಎಸ್ಜೆಎಸ್ವೈ ಸಭಾಂಗಣದಲ್ಲಿ ಸೋಮವಾರ ಒಕ್ಕೂಟದ ಸಮಾಲೋಚನಾ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಸಮಾವೇಶದ ವಿವರಣೆ ನೀಡಿದರು.
2004ರಲ್ಲಿ ಬೇಲೂರಿನಲ್ಲಿ ನಡೆದ ಸಮಾವೇಶದ ಬೇಡಿಕೆಗಳನ್ನು ಈಡೇರಿಸಬೇಕು, 3ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಮೊದಲಾದ ಹತ್ತಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಯುವ ಈ ಸಮಾವೇಶಕ್ಕಾಗಿ ವ್ಯಾಪಕ ಸಿದ್ಧತೆ ನಡೆದಿದೆ ಎಂದರು.
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಿಂದ ಗರಿಷ್ಠ ಸಂಖ್ಯೆಯಲ್ಲಿ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಎದುರಿಸುತ್ತಿರುವ ಸಮಸ್ಯೆಗಳು, ಕರ್ತವ್ಯ ನಿರ್ವಹಿಸುವಲ್ಲಿ ಇರುವ ತೊಡಕುಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿ ಸಾಧಿಸುವಲ್ಲಿ ಗ್ರಾಮ ಪಂಚಾಯಿತಿಗಳನ್ನು ಬಲಪಡಿಸುವ ದೃಷ್ಟಿಯಿಂದ ವಿವಿಧ ಬೇಡಿಕೆಗಳನ್ನು ಸಮಾವೇಶದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದ ಬಳಿಕ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ವಸತಿ ಯೋಜನೆ ಮತ್ತು ನಿವೇಶನ ಹಂಚಿಕೆ ಮೊದಲಾದ ವಿಷಯಗಳಲ್ಲಿ ವಿಚಾರ ಮಂಡನೆ ನಡೆಯಲಿದೆ ಎಂದು ಅವರು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಚ್.ಕೆ. ಪಾಟೀಲ್ ಸಮಾವೇಶ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸುವರು ಎಂದರು.
ಆರೋಗ್ಯ ಸಚಿವ ಯು.ಟಿ. ಖಾದರ್, ಯುವಜನ ಸೇವಾ ಸಚಿವ ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ತುಳಸಿ ಮದ್ದಿನೇನಿ ಹಾಗೂ ಒಕ್ಕೂಟದ ಜಿಲ್ಲಾ ಸಲಹೆಗಾರ ಡಾ.ಕೆ. ಚಿನ್ನಪ್ಪ ಗೌಡ ಉಪಸ್ಥಿತಿಯಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಜಿಲ್ಲಾ ಒಕ್ಕೂಟ, ಜಿಲ್ಲೆಯ ಎಲ್ಲ ತಾಲೂಕು ಒಕ್ಕೂಟಗಳು ಹಾಗೂ ಸುಗ್ರಾಮ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ಆಶ್ರಯದಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ದೇವದಾಸ ಭಂಡಾರಿ ಮಾಹಿತಿ ನೀಡಿದರು.
ಜಿಲ್ಲಾ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಸದಾನಂದ ಪೂಜಾರಿ, ಕೋಶಾಧಿಕಾರಿ ಸೂಫಿ ಕುಂಞ, ರಾಜ್ಯ ಪ್ರತಿನಿಧಿಗಳಾದ ಪ್ರಭಾಕರ ಪ್ರಭು, ಆಸ್ಕರ್ ಅಲಿ, ಶಶಿಕಲಾ ಚೌಟ, ಮಹಿಳಾ ಪ್ರತಿನಿಧಿಗಳ ಸಂಘ ಅಧ್ಯಕ್ಷೆ ವೃಂದಾ ಪೂಜಾರಿ, ತಾಲೂಕು ಒಕ್ಕೂಟಗಳ ಅಧ್ಯಕ್ಷ ಕೆ.ಸುಭಾಶ್ಚಂದ್ರ ಶೆಟ್ಟಿ ಬಂಟ್ವಾಳ, ಹಮೀದ್ ಕಿನ್ಯ ಮಂಗಳೂರು, ಪಿ.ಕೆ. ಚಂದ್ರಶೇಖರ್ ಬೆಳ್ತಂಗಡಿ, ಮುರಲೀಧರ ರೈ ಪುತ್ತೂರು, ಸಂತೋಷ್ ಜಾಕೆ ಸುಳ್ಯ ಸುದ್ದಿಗೋಷ್ಠಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

