ಕರಾವಳಿಗೆ 'ಉಗ್ರ ನಿಗ್ರಹ ಪಡೆ' ಕೊಡಿ
ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಆಂತರಿಕ ಭದ್ರತೆ-ಸುರಕ್ಷತೆ ಕಾಪಾಡಲು ಕ್ರಮ ಕೈಗೊಳ್ಳಬೇಕು ಮತ್ತು ಮೂಢನಂಬಿಕೆ ನಿಷೇಧ ಕಾಯ್ದೆ ಕುರಿತು ಸಮಗ್ರ ಚಿಂತನೆ ನಡೆಸಬೇಕು ಎಂದು ದ.ಕ.ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಈಚೆಗೆ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ದೇಶದ ಯಾವುದೇ ಮೂಲೆಯಲ್ಲಿ ಭಯೋತ್ಪಾದನಾ ಚಟುವಚಿಕೆ ನಡೆದರೂ ಕರ್ನಾಟಕ ಕರಾವಳಿಯ ನಂಟು ಕಂಡುಬರುತ್ತಿರುವುದು ಜಿಲ್ಲೆಯ ಜನರಲ್ಲಿ ಆಂತಕ ಉಂಟುಮಾಡಿದೆ. ಇದಕ್ಕಾಗಿ ಕರಾವಳಿಗೆ 'ಉಗ್ರ ನಿಗ್ರಹ ಪಡೆ' ಮಂಜೂರು ಮಾಡಬೇಕು.
ಇದಕ್ಕೆ ಸ್ವಾಯತ್ತೆ ನೀಡಿ ಹೆಚ್ಚಿನ ಅಧಿಕಾರ ಮತ್ತು ಆಧುನಿಕ ಶಸ್ತ್ರಾಸ್ತ್ರ ಒದಗಿಸಬೇಕು. ಕರಾವಳಿ ತಟರಕ್ಷಣಾ ಪಡೆ ಬಲಪಡಿಸಿ ಉಗ್ರರ ಚಟುವಟಿಕೆ ಮೇಲೆ ನಿಗಾ ಇರಿಸಬೇಕು. ಕರಾವಳಿ ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ವಿಶೇಷ ಪೊಲೀಸ್ ಬಲ ನಿಯೋಜಿಸಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ಮಹಿಳೆಯರ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಧಾರ್ಮಿಕ ಯಾ ಸಾಮಾಜಿಕ ಮೌಢ್ಯಗಳನ್ನು ಬಿಜೆಪಿ ಬೆಂಬಲಿಸುವುದಿಲ್ಲ. ಆದರೆ ಧಾರ್ಮಿಕ ನಂಬಿಕೆಗಳ ಮೇಲೆ ಮೂಢನಂಬಿಕೆ ಎಂದು ಪ್ರಹಾರ ನಡೆಸುವುದನ್ನು ಒಪ್ಪುವುದಿಲ್ಲ. ಕಾಂಗ್ರೆಸ್ ಸರ್ಕಾರ ಯಾರದೋ ಒತ್ತಡಕ್ಕೆ ಮಣಿದು ಹಿಂದೂ ಧಾರ್ಮಿಕ ತಳಹದಿ ಮೇಲೆ ಪ್ರಹಾರ ಮಾಡುವುದು ಸರಿಯಲ್ಲ.
ಕಾಯ್ದೆ ಹೆಸರಿನಲ್ಲಿ ಜನತೆಯ ಧಾರ್ಮಿಕ ಆಚರಣೆಗಳ ಹಕ್ಕು ಕಸಿಯಬಾರದು. ಆದ್ದರಿಂದ ಸರ್ಕಾರ ಕರಡು ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸುವ ಬದಲು ವಿವಿಧ ಧಾರ್ಮಿಕ ಮುಖಂಡರು, ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಿ ಒಮ್ಮತಕ್ಕೆ ಬರಬೇಕು ಎಂದು ಬಿಜೆಪಿ ಆಗ್ರಹಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

