ಎತ್ತಿನಹೊಳೆ, ಜಲವಿದ್ಯುತ್ ಯೋಜನೆ ವಿರುದ್ಧ ಹೋರಾಟ
ಸುಬ್ರಹ್ಮಣ್ಯ: ಕೆಂಪುಹೊಳೆ ಮತ್ತು ಅದರ ಉಪನದಿಗಳಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಮೂರು ಜಲವಿದ್ಯುತ್ ಯೋಜನೆಯಿಂದ ಪಶ್ಚಿಮಘಟ್ಟದಲ್ಲಿ ವ್ಯಾಪಕ ಅರಣ್ಯ ಹಾನಿ ಸಂಭವಿಸಿದ್ದು, ಎತ್ತಿನಹೊಳೆ ಯೋಜನೆ ಜಾರಿಯಿಂದ ಇನ್ನಷ್ಟು ಅಪಾಯ ಎದುರಾಗಲಿದೆ. ಇದೇ ಹೊಳೆಯಲ್ಲಿ ಮಾರುತಿ ಝೆನ್ ಜಲ ವಿದ್ಯುತ್ ಯೋಜನೆ ಕಾಮಗಾರಿ ಕೂಡ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಲೆನಾಡು ಜನಹಿತರಕ್ಷಣಾ ವೇದಿಕೆ ವಿದ್ಯಾರ್ಥಿಗಳ ಮೂಲಕ ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟ ರೂಪಿಸಲು ನಿರ್ಧರಿಸಿದೆ.
ಎತ್ತಿನಹೊಳೆ ಹರಿಯುವ ಸಕಲೇಶಪುರ ತಾಲೂಕಿನ ನೆಡ್ಡಳ್ಳಿ ಗ್ರಾಮದ ಹಾರ್ಲೆ ಕೂಡಿಗೆಯಲ್ಲಿ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಸುದ್ದಿಗಾರರಿಗೆ ಬುಧವಾರ ಈ ಮಾಹಿತಿ ನೀಡಿದರು.
ನಿರ್ಮಾಣಗೊಂಡಿರುವ ಮೂರು ಜಲವಿದ್ಯುತ್ ಯೋಜನೆ ಮತ್ತು ನಿರ್ಮಾಣ ಹಂತದಲ್ಲಿರುವ ಮಾರುತಿ ಝೆನ್ ಪವರ್ ಪ್ರಾಜೆಕ್ಟ್ನಿಂದಾಗಿ ಪಶ್ಚಿಮಘಟ್ಟದಲ್ಲಿ ನದಿಗಳ ಸಹಜ ಹರಿಯುವಿಕೆಗೆ ತಡೆ ಉಂಟಾಗಿದೆ. ಇದರಿಂದಾಗಿ ವನ್ಯಜೀವಿ ಮತ್ತು ಕಾಡು ನಾಶಕ್ಕೆ ಕಾರಣವಾಗಿ ಜೀವವೈವಿಧ್ಯತೆಯ ತಾಣ ಅಪಾಯಕ್ಕೆ ಸಿಲುಕಿದೆ. ವಿದ್ಯುತ್ ಯೋಜನೆಗಳಿಗೆ ನೂರಾರು ಎಕರೆ ಅರಣ್ಯದಲ್ಲಿ ಕಾಂಕ್ರಿಟ್ ರಚನೆ ನಿರ್ಮಿಸಲಾಗಿದೆ. ವಿದ್ಯುತ್ ಸರಬರಾಜು ಮಾಡಲು ಕಾಡಿನ ನಡುವೆ ತಂತಿ ಎಳೆಯಲಾಗಿದೆ. ತಂತಿ ಸಾಗಿದ ಹಾದಿಯುದ್ದಕ್ಕೂ ಮರ ಕಡಿಯಲಾಗಿದೆ. ಅಲ್ಲಲ್ಲಿ ಸುರಂಗ ನಿರ್ಮಿಸಲಾಗಿದೆ. ಇದೀಗ ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಪಶ್ಚಿಮ ಘಟ್ಟದಲ್ಲಿ ಈ ಎಲ್ಲ ಅನಾಹುತಗಳು ಪುನರಾವರ್ತನೆಯಾಗಲಿವೆ. ಈ ಅಂಶಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ ಅವರು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡುವುದು, ಆ ಮೂಲಕ ಯೋಜನೆ ವಿರುದ್ಧ ಪ್ರಬಲ ಹೋರಾಟ, ಜನಜಾಗೃತಿ ನಡೆಸಲು ಮಲೆನಾಡು ಜನ ಹಿತರಕ್ಷಣಾ ವೇದಿಕೆ ಸಂಕಲ್ಪ ಮಾಡಿದೆ.
ಶೇ.70 ಅರಣ್ಯ ನಾಶ ಖಚಿತ: ಎತ್ತಿನಹೊಳೆ ಯೋಜನೆ ಜಾರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ಬತ್ತಿಹೋಗಿ, ಜನಜೀವನಕ್ಕೆ ತೊಂದರೆಯಾಗಲಿದೆ. ನೇತ್ರಾವತಿಯ ಉಪನದಿ ತಟದ ರೈತರು ಕೃಷಿಗೆ ನೀರಿಲ್ಲದೆ ಪರಿತಪಿಸಬೇಕಾಗುತ್ತದೆ. ಪೈಪ್ಲೈನ್ ಅಳವಡಿಕೆ, ಅರಣ್ಯ ನಾಶ, ಸುರಂಗ ನಿರ್ಮಾಣ, ಗುಡ್ಡಗಳನ್ನು ಸಮತಟ್ಟು ಮಾಡುವುದರಿಂದ ಈ ಭಾಗದಲ್ಲಿ ಶೇ.70ರಷ್ಟು ಅರಣ್ಯ ನಾಶಗೊಂಡು ಪಶ್ಚಿಮಘಟ್ಟ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ. ಯೋಜನೆ ಬಗ್ಗೆ ಸೂಕ್ತ ಮಾಹಿತಿ ನೀಡುತ್ತಿಲ್ಲ. ಸ್ಥಳೀಯವಾಗಿ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಕಿಶೋರ್ ಒತ್ತಾಯಿಸಿದ್ದಾರೆ.
ಯೋಜನೆ ಬಗ್ಗೆ ಮಾಹಿತಿ ನೀಡಬೇಕು. ಕೆಂಪುಹೊಳೆ ಜಲವಿದ್ಯುತ್ ಸ್ಥಾವರದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಅಧಿಕಾರಿಗಳನ್ನು ನಿಯೋಜಿಸಬೇಕು. ಯಾವುದೇ ಎತ್ತಿನಹೊಳೆ ಯೋಜನೆಯನ್ನು ಜಾರಿಗೊಳಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಸ್ಥಳೀಯಾಡಳಿತ ಅನುಮತಿ ಇಲ್ಲ: ಜಲವಿದ್ಯುತ್ ಯೋಜನೆಗಳಿಗೆ ಸ್ಥಳೀಯ ಆಡಳಿತದ ಅನುಮತಿ ಪಡೆದಿಲ್ಲ. ಸ್ಥಳೀಯರಿಗೆ ಉದ್ಯೋಗ ದೊರಕುತ್ತಿಲ್ಲ. ಯೋಜನೆಗೆ ಸಿಗುವ ಸಬ್ಸಿಡಿ ಬಳಸಿಕೊಂಡು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೆಗ್ಗದ್ದೆ ಗ್ರಾಮ ಪಂಚಾಯಿತಿ ಸದಸ್ಯ ರವಿ ಮಾರನಹಳ್ಳಿ ಆರೋಪಿದರು.
ಮಲೆನಾಡು ಜನಹಿತರಕ್ಷಣಾ ವೇದಿಕೆ ಅಧ್ಯಯನ ಪ್ರಮುಖ ದಾಮೋದರ ಗುಂಡ್ಯ, ಸದಸ್ಯರಾದ ಕೃಷ್ಣಪ್ಪ ಗೌಡ ಬೇಂಗಳ ಶಿಬಾಜೆ, ಸೂರ್ಯನಾರಾಯಣ ರಾವ್ ಶಿಶಿಲ, ಯತೀಶ್ ಗುಂಡ್ಯ, ಗಂಗಾಧರನ್, ವಿದ್ಯಾರ್ಥಿಗಳು ಇದ್ದರು.
ಹೈಕೋರ್ಟ್ ತಡೆ ಇದ್ದರೂ ಕಾಮಗಾರಿ ನಿರಾತಂಕ
ಮಾರುತಿ ಝೆನ್ ಕಂಪೆನಿ ಒಂದು ಮಿನಿ ಜಲವಿದ್ಯುತ್ ಯೋಜನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿ, ಹೊಂಗಡಹಳ್ಳ ನದಿಯಲ್ಲಿ ಎರಡು ದೊಡ್ಡ ಪ್ರಮಾಣದ ವಿದ್ಯುತ್ ಸ್ಥಾವರ ನಿರ್ಮಿಸಲು 2008ರಲ್ಲೇ ಕೆಲಸ ಪ್ರಾರಂಭಿಸಿತ್ತು. ಅದಕ್ಕಾಗಿ 5 ಸೇತುವೆ ನಿರ್ಮಿಸಲಾಗಿದೆ. ಕಾಡಿನಲ್ಲಿ 14 ಕಿ.ಮೀ. ರಸ್ತೆ ನಿರ್ಮಿಸಲಾಗಿದೆ. ನೀರು ಶೇಖರಣೆ ಮಾಡಿ ವಿದ್ಯುತ್ಗೆ ಉಪಯೋಗಿಸಲು 1.5 ಕಿ.ಮೀ. ಸುರಂಗ ಮಾರ್ಗ ನಿರ್ಮಿಸಲಾಗಿದೆ. ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಯೋಜನೆಗೆ ಹೈಕೋರ್ಟ್ ತಡೆ ನೀಡಿದೆ. ಆದರೂ ಸ್ಥಳದಲ್ಲಿ ಕೆಲಸ ಮುಂದುವರೆದಿದೆ. ಈ ಯೋಜನೆ ಜಾರಿಗೊಂಡರೆ ಇದರ ಕೆಳಭಾಗದಲ್ಲಿ ಇರುವ ವಿದ್ಯುತ್ ಸ್ಥಾವರಕ್ಕೆ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಕೃಷಿಕರಿಗೂ, ಕುಡಿಯುವ ನೀರಿಗೂ ತೊಂದರೆ ಉಂಟಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

