ತನಿಖೆಗೆ ಸಂಪೂರ್ಣ ಸಹಕಾರ: ಡಾ. ಹೆಗ್ಗಡೆ ಸ್ಪಷ್ಟನೆ
ಬೆಳ್ತಂಗಡಿ: 'ನನ್ನ ಸೇವಾ ಕಾರ್ಯಗಳನ್ನು ಎಂದಿಗೂ ನಿಲ್ಲಿಸುವುದಿಲ್ಲ. ನನ್ನಲ್ಲಿ ಆತ್ಮವಿಶ್ವಾಸ, ಆತ್ಮಾಭಿಮಾನದ ಕೊರತೆ ಆಗಿಲ್ಲ. ಸೌಜನ್ಯ ಹತ್ಯಾಚಾರ ಪ್ರಕರಣದ ತನಿಖೆಯ ಬಗ್ಗೆ ಸಂಪೂರ್ಣ ಜವಾಬ್ದಾರಿ ಸರ್ಕಾರ ಹಾಗೂ ಬೆಳ್ತಂಗಡಿ ಶಾಸಕರದ್ದು. ನಾನು ಇನ್ನು ಈ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ' ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಬುಧವಾರ ಸಂಜೆ ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಹಿತರಕ್ಷಣಾ ವೇದಿಕೆ ಬೆಳ್ತಂಗಡಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಅಭಿಮಾನಿಗಳ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ಸೌಜನ್ಯ ಪ್ರಕರಣದ ತನಿಖೆಗೆ ಪೂರ್ಣ ಸಹಕಾರ ನೀಡಿದ್ದೇನೆ. ಆಕೆ ಕಾಲವಾದಾಗ ಹೃದಯ ಪೂರ್ವಕವಾಗಿ ಅವರ ಮನೆಯವರೊಂದಿಗೆ ಸ್ಪಂದಿಸಿದ್ದೇನೆ. ತನಿಖೆ ಮಾಡುವುದು ಸರ್ಕಾರ ಹಾಗೂ ಪೊಲೀಸರ ಕೆಲಸ. ತನಿಖೆಯಾಗಿಲ್ಲ ಎಂದರೆ ಅದು ಪೊಲೀಸರು ಮತ್ತು ಸರ್ಕಾರಕ್ಕೆ ಅವಮಾನ. ಆರೋಪಗಳ ಹಿಂದೆ ದುರುದ್ದೇಶ ಇದೆ ಎಂದು ಹೇಳಿದರು.
ಆರಂಭದಲ್ಲೇ ಸಿಐಡಿ ತನಿಖೆ ನಡೆಸಿತ್ತು. ಆದರೆ, ತನಿಖೆಯ ವಿಚಾರಗಳನ್ನು ಅವರು ಬಹಿರಂಗ ಪಡಿಸಿರಲಿಲ್ಲ. ಈ ಬಗ್ಗೆ ಅವರನ್ನು ಕೇಳಿದಾಗ ತನಿಖಾ ಸಂದರ್ಭದಲ್ಲಿ ಮಾಹಿತಿಗಳನ್ನು ಬಹಿರಂಗ ಪಡಿಸಲು ಕಾನೂನು ಪ್ರಕಾರ ಸಾಧ್ಯವಿಲ್ಲ ಎಂದಿದ್ದರು. ಇದೇ ಜನರಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಮುಂದೆ ಸಿಬಿಐ ಅಥವಾ ಯಾವುದೇ ತನಿಖೆಗಳಾಗಲಿ ಅದನ್ನು ನಡೆಸುವುದು ಮತ್ತು ಸತ್ಯ ಹೊರತರುವ ಜವಾಬ್ದಾರಿ ಸರ್ಕಾರ ಮತ್ತು ಇಲ್ಲಿನ ಶಾಸಕ ವಸಂತ ಬಂಗೇರ ಅವರದ್ದು ಎಂದು ಸ್ಪಷ್ಟಪಡಿಸಿದರು.
ಇನ್ನು ಹೇಳಿಕೆ ನೀಡುವುದಿಲ್ಲ: ಧರ್ಮಸ್ಥಳದಲ್ಲಿ ಯಾವುದೇ ಭೂ ಮಾಫಿಯಾ ಇಲ್ಲ. ಯಾಕೆ ತಪ್ಪು ಅಭಿಪ್ರಾಯಗಳು ಮೂಡುತ್ತಿವೆ ಎಂದು ಗೊತ್ತಾಗುತ್ತಿಲ್ಲ. ಶ್ರೀಮಂತರು ನಮ್ಮಿಂದ ದೂರ ಇದ್ದಾರೆ ಎಂದು ತಿಳಿದುಕೊಂಡಿದ್ದೆ. ಆದರೆ, ಬಡವರನ್ನೂ ದೂರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗುತ್ತಿದೆ. ಕೆಲ ಶಕ್ತಿಗಳು ಅನಗತ್ಯ ಗೊಂದಲ ಹುಟ್ಟಿಸುವ ಪ್ರಯತ್ನ ನಡೆಸಿಯಾರು. ನನ್ನ ಕೆಲಸ ನಾನು ನಿಲ್ಲಿಸುವುದಿಲ್ಲ. ಇಂದಿನಿಂದ ಹೊಸ ಹುರುಪಿನಿಂದ ಹೊಸ ಯೋಜನೆಗಳೊಂದಿಗೆ ಮುಂದುವರಿಯಲಿದ್ದೇನೆ. ಇನ್ನು ಮುಂದೆ ಮಾಧ್ಯಮದವರಲ್ಲಿ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ. ಇಂದೇ ಕೊನೆ ಎಂದು ಘೋಷಿಸಿದರು.
ತನಿಖೆ ದಾರಿ ತಪ್ಪಿಸುವ ಯತ್ನ: ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಕ್ಷುಲ್ಲಕ ವಿಚಾರಗಳನ್ನು ಇಟ್ಟುಕೊಂಡು ಕೆಲ ದುಷ್ಕರ್ಮಿಗಳು ಮಾತನಾಡುತ್ತಿದ್ದಾರೆ. ಸಿಐಡಿ ತನಿಖೆಯನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕ್ಷೇತ್ರದ ಚಾರಿತ್ರ್ಯ ಹರಣ ಮಾಡುವುದಕ್ಕೆ ಪೂರ್ಣ ವಿರಾಮ ಹಾಕಬೇಕು. ಹುಳಿ ಹಿಂಡುವ ಕೆಲಸ ಮಾಡುವವರ ಮೇಲೆ ಸರ್ಕಾರ ನಿಗಾ ಇಡುತ್ತದೆ. ಈ ಬಗ್ಗೆ ಮುಖ್ಯಮಂತ್ರಿ, ಗೃಹಮಂತ್ರಿಗಳ ಗಮನಕ್ಕೆ ತಂದು ಸತ್ಯಾಂಶ ಹೊರತರುವಲ್ಲಿ ಪ್ರಯತ್ನಿಸುತ್ತೇನೆ ಎಂದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ತುಳುನಾಡಿನ ಧಾರ್ಮಿಕ ಕ್ಷೇತ್ರಕ್ಕೆ ಧಕ್ಕೆ ತರುವಂತಹ ಶಕ್ತಿಗಳನ್ನು ಎದುರಿಸುತ್ತೇವೆ. ಸಮಾಜ ನಿಮ್ಮೊಂದಿಗಿದೆ. ಪ್ರತಿಭಟನೆಗಳು ಪೊಲೀಸರ ವಿರುದ್ಧ ನಡೆಯಲಿ. ಸತ್ಯ ಹೊರಬರಲಿ ಸತ್ಯದ ಜೊತೆ ನಾವಿದ್ದೇವೆ ಎಂದರು.
ಸತ್ಯ ಕಾಪಾಡುತ್ತದೆ: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, ಪ್ರಕರಣದಲ್ಲಿ ಡಾ.ಹೆಗ್ಗಡೆಯವರ ಹೆಸರನ್ನು ಎಳೆತಂದು ಅವರ ಗೌರವಕ್ಕೆ ಚ್ಯುತಿ ತರಲು ಪ್ರಯತ್ನಿಸಿರುವುದು ಖಂಡನೀಯ. ಧರ್ಮಾಧಿಕಾರಿಯವರ ನೋವೇ ನಮ್ಮೆಲ್ಲರ ನೋವು. ಸತ್ಯ ನಿಮ್ಮನ್ನು ಕಾಪಾಡಿಕೊಂಡು ಬರುತ್ತದೆ ಎಂದರು.
ಸಚಿವ ಅಭಯಚಂದ್ರ ಜೈನ್ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿ.ಪಂ. ಮಾಜಿ ಅಧ್ಯಕ್ಷ ಸದಾನಂದ ಪೂಂಜ, ಉಜಿರೆ ಜನಾರ್ದನ ದೇವಳದ ಆಡಳ್ತೆ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಬೆಳ್ತಂಗಡಿ ತಾಲೂಕು ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಡಿ. ಹಷೇಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್, ಇ. ಸುಂದರ ಗೌಡ, ಯೋಗೀಶ್ ಕುಮಾರ್ ನಡಕರ, ಡಾ.ಬಿ. ಯಶೋವರ್ಮ, ಡಾ.ಎಲ್.ಎಚ್. ಮಂಜುನಾಥ್ ಇದ್ದರು.
ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಪ್ರಾಸ್ತಾವಿಸಿ, ಬಿ.ಕೆ. ಧನಂಜಯ ರಾವ್ ಸ್ವಾಗತಿಸಿದರು. ಶ್ರೀಹರಿ ಕಾರ್ಯಕ್ರಮ ನಿರ್ವಹಿಸಿದರು. ಮನೋರಮಾ ಭಟ್ ವಂದಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ತಾಲೂಕು ಅಲ್ಲದೆ ಉಭಯ ಜಿಲ್ಲೆಗಳ ವಿವಿಧ ಭಾಗಗಳಿಂದ ಕ್ಷೇತ್ರದ ಅಭಿಮಾನಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಉಜಿರೆಯ ಕ್ರೀಡಾಂಗಣದ ಸುತ್ತುಮುತ್ತ ವಾಹನಗಳ ಭಾರೀ ಸಾಲು ಕಂಡು ಬಂತು.
ನಾಳೆ ಉಪವಾಸ ಸತ್ಯಾಗ್ರಹ
ಬೆಳ್ತಂಗಡಿ: ಧರ್ಮಸ್ಥಳ ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಸಿ ಎಸ್ಎಫ್ಐಜೆಎಂಎಸ್ ಹಾಗೂ ಡಿವೈಎಫ್ಐ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಸೌಜನ್ಯಾಳ ಹುಟ್ಟಿದ ದಿನವಾದ ಅ. 18 ರಂದು ಬೆಳ್ತಂಗಡಿಯಲ್ಲಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿರುವುದಾಗಿ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮ ರೆಡ್ಡಿ ನೆರವೇರಿಸಲಿದ್ದು ಜೆಎಂಎಸ್ ಮುಖಂಡೆ ಕೆ. ನೀಲಾ, ಡಿವೈಎಫ್ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಹಾಗೂ ಇತರರು ಭಾಗವಹಿಸಲಿದ್ದಾರೆ.
ಕಮ್ಯೂನಿಸ್ಟ್ ಧರ್ಮ ವಿರೋಧಿಯಲ್ಲ: ಸಿಪಿಎಂ
ಮಂಗಳೂರು: ಸೌಜನ್ಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಪತ್ತೆಗೆ ಸಿಬಿಐ ತನಿಖೆ ನಡೆಯಬೇಕು. ಕಮ್ಯೂನಿಷ್ಟ್ ಪಕ್ಷದವರು ಯಾವುದೇ ವ್ಯಕ್ತಿಯ, ಧರ್ಮದ ವಿರುದ್ಧ ಇಲ್ಲ, ನ್ಯಾಯದಪರವಾಗಿ ಕೆಲಸ ಮಾಡುವವರು. ಕೊಲೆ ಪ್ರಕರಣ ನಿಷ್ಪಕ್ಷಪಾತ ತನಿಖೆ ನಡೆದು ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಸಿಪಿಎಂ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ. ಮಾಧವ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಿಪಿಎಂ ಪಕ್ಷದ ಹೋರಾಟವನ್ನು ಕೆಲವರು ಧರ್ಮವಿರೋಧಿ, ವ್ಯಕ್ತಿ ತೇಜೋವಧೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನೈಜ ಆರೋಪಿ ಬಂಧಿಸಬೇಕು ಎಂದು ಒಂದು ವರ್ಷದಿಂದಲೂ ಒತ್ತಾಯ ಮಾಡುತ್ತಾ ಬಂದಿದ್ದೇವೆ. ಆರೋಪಿಗಳ ಹೆಸರುಗಳನ್ನು ಸೌಜನ್ಯ ಹೆತ್ತವರು ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳ ಭಾವಚಿತ್ರ ಮಾಧ್ಯಮದಲ್ಲಿಯೂ ಪ್ರಕಟವಾಗಿದೆ. ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ಸಿಬಿಐ ತನಿಖೆಯೇ ಸೂಕ್ತ ಎಂದರು. ಸುದ್ದಿಗೋಷ್ಠಿಯಲ್ಲಿ ವಸಂತ ಆಚಾರಿ, ಕೆ.ಆರ್. ಶ್ರೀಯಾನ್ ಇದ್ದರು.
ಅವಹೇಳನ ಸರಿಯಲ್ಲ: ಡಾ. ಪದ್ಮಪ್ರಸಾದ್
ಬೆಳ್ತಂಗಡಿ: ಸೌಜನ್ಯಾ ಕೊಲೆಯ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿರುವುದು ಅಗತ್ಯ. ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೇ ಆಗಲೇಬೇಕು. ಇದರ ಮುಖೇನ ನೊಂದ ಕುಟುಂಬಕ್ಕೆ ಸಾಂತ್ವನ ಸಿಗುವುದು ಮುಖ್ಯ. ಆದರೆ, ಕ್ಷೇತ್ರದ ಬಗ್ಗೆ ಮತ್ತು ಧರ್ಮಾಧಿಕಾರಿಗಳ ಬಗ್ಗೆ ಅವಹೇಳನ ಖಂಡಿತಾ ಸರಿಯಲ್ಲ. ಕ್ಷೇತ್ರದ ಬಗ್ಗೆ ಅಪಾರ ಗೌರವ, ಭಕ್ತಿ ಅಗತ್ಯ ಎಂದು ಅಳದಂಗಡಿ ಆರಮನೆಯ ಡಾ. ಪದ್ಮಪ್ರಸಾದ್ ಅಜಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

