ಧರ್ಮ, ಸಂಸ್ಕೃತಿ ಉಳಿಸೋಣ: ಡಾ. ಹೆಗ್ಗಡೆ
ಬೆಳ್ತಂಗಡಿ: ದೇಶದಲ್ಲಿ ಎಷ್ಟೇ ಬದಲಾವಣೆಗಳು ಉಂಟಾದರೂ ನಮ್ಮ ಮೂಲ ಧರ್ಮ, ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗೋಣ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆದ ಧರ್ಮಾಧಿಕಾರಿ ಪಟ್ಟದ 46ನೇ ವರ್ಧಂತ್ಯುತ್ಸವ ಸಮಾರಂಭದಲ್ಲಿ ಸಂದೇಶ ನೀಡಿದರು.
ಧರ್ಮ, ಸಂಸ್ಕೃತಿಗಳನ್ನು ನಾವು ಎಷ್ಟೇ ದೂರ ಮಾಡಿದರೂ ಅವು ನಮ್ಮನ್ನು ಬಿಡುವುದಿಲ್ಲ, ಸುಖ, ದುಃಖಗಳು ಸಹಜ. ಇವೆರಡನ್ನೂ ನಿಭಾಯಿಸಿಕೊಂಡು ಹೋಗುವುದೇ ಸಂಸಾರ. ಭಗವಂತನನ್ನು ಸಹಾಯಕ್ಕೆ ಕರೆಯುವ ಪದ್ಧತಿ ಕ್ಷೇತ್ರದ್ದು. ಸಾನಿಧ್ಯವನ್ನು ರಕ್ಷಿಸುವ ಕೆಲಸ ನನಗೆ ಸಿಕ್ಕಿರುವುದು ನನ್ನ ಪುಣ್ಯ ಎಂದ ಅವರು ಸನ್ನಿಧಿಯ ಗರ್ಭಗುಡಿ, ಸುತ್ತುಪೌಳಿ, ಅಮ್ಮನವರ ಗುಡಿಯ ಜೀರ್ಣೋದ್ಧಾರದ ಅವಕಾಶ ಸಿಕ್ಕಿ ಆ ಮೂಲಕ ಭಗವಂತನ ಸೇವೆ ನೇರವಾಗಿ ದೊರಕ್ಕಿದ್ದು ನನ್ನ ಸೌಭಾಗ್ಯ. ಧರ್ಮಸ್ಥಳ ಎಂದರೆ ಅಂತರಂಗ, ಬಹಿರಂಗ ಪೂಜೆಗೆ ಇರುವ ಕ್ಷೇತ್ರ ಎಂದರು.
ಎಲ್ಲ ಯೋಜನೆಗಳೂ ರಾಷ್ಟ್ರಮಟ್ಟಕ್ಕೆ ಹಬ್ಬಿವೆ: ಕಳೆದ ಹಲವಾರು ವರ್ಷಗಳಿಂದ ಮಾಡುತ್ತಿರುವ ಯೋಜನೆಗಳು ರಾಷ್ಟ್ರೀಯ ಮಟ್ಟದಲ್ಲಿ ಹಬ್ಬಿವೆ. ಎಲ್ಲವನ್ನೂ ವೈಜ್ಞಾನಿಕವಾಗಿ, ಸಂಶೋಧನಾತ್ಮಕವಾಗಿ ಮಾಡಿದ್ದರಿಂದಲೇ ಯಶಸ್ಸು ಕಂಡಿದೆ. ಕ್ಷೇತ್ರದ ಸಿಬ್ಬಂದಿ ಇಲ್ಲಿನ ಸಂಪತ್ತು. ಇವರ ಸಹಕಾರದಿಂದ ಕ್ಷೇತ್ರದ ಕೆಲಸಗಳು ಶ್ರದ್ಧಾಪೂರ್ವಕ ನಡೆಯುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮಾತನಾಡಿ, ಡಾ. ಹೆಗ್ಗಡೆಯವರು ಪ್ರಚಾರಕ್ಕಾಗಿ ಸೇವೆಯನ್ನು ಮಾಡಿದವರಲ್ಲ. ಭಗವದ್ಗೀತೆಯಲ್ಲಿ ಹೇಳಿದಂತೆ ಕರ್ಮವನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಿ ಯಶಸ್ಸು ಕಂಡಿದ್ದಾರೆ. ನಿರಂತರ ಸೇವೆ ಮಾಡುವುದು, ಯಾವುದೇ ಸೇವೆಯನ್ನು ಮಾಡದೆ ತಟಸ್ಥನಾಗಿರುವುದು, ಸೇವೆಯನ್ನು ಅಸೂಯೆಯಿಂದ ನೋಡುವುದು ಈ ಮೂರರ ಪೈಕಿ ಡಾ. ಹೆಗ್ಗಡೆಯವರು ಮೊದಲನೆಯದನ್ನು ಅನುಸರಿಸಿ ವಿಶ್ವಮಾನ್ಯರಾಗಿದ್ದಾರೆ ಎಂದು ಶ್ಲಾಘಿಸಿದರು.
ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿದರು.
ಈ ಸಂದರ್ಭ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಸ್ಯಾಕ್ಸೋಫೋನ್ ವಾದಕ ಅಣ್ಣು ದೇವಾಡಿಗ, ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ವಿಶ್ವನಾಥ ಶೆಟ್ಟಿ, ಜಮಾ ಉಗ್ರಾಣದ ಬರ್ಕಿ ಸುಂದರ, ತೋಟ ವಿಭಾಗದ ಗುಮ್ಮಕ್ಕ, ಡಿ.ಯಂ.ಸಿ. ವಿಭಾಗದ ಕುಶಲಕರ್ಮಿ ಮಂಜುನಾಥ ಆಚಾರ್ಯ, ಯಕ್ಷಗಾನ ಮೇಳದಲ್ಲಿ ಗಣಪತಿ ಪೂಜೆಯನ್ನು ನಿರ್ವಹಿಸುತ್ತಿದ್ದ ಬಾಲಕೃಷ್ಣ ಭಟ್ ಅವರನ್ನು ಡಾ. ಹೆಗ್ಗಡೆಯವರು ಸನ್ಮಾನಿಸಿದರು. ವಿಶ್ವನಾಥ ಶೆಟ್ಟಿ ಸನ್ಮಾನಿತರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಕಟೀಲು ದೇವಳದ ಆಡಳಿತ ಮೊಕ್ತೇಸರ ಲಕ್ಷ್ಮೀನಾರಾಯಣ ಆಸ್ರಣ್ಣ, ಡಿ. ಹರ್ಷೇಂದ್ರ ಕುಮಾರ್, ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಪ್ರಭಾಕರ್ ಇದ್ದರು.
ಉಪನ್ಯಾಸಕ ಸುನಿಲ್ ಪಂಡಿತ್ ನಿರೂಪಿಸಿದರು. ಅನಂತ ಪದ್ಮನಾಭ ಭಟ್ ವೇದಘೋಷ, ಮನೋರಮಾ ತೋಳ್ಪಡಿತ್ತಾಯ ಪ್ರಾರ್ಥಿಸಿದರು.
ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ. ಯಶೋವರ್ಮ ಸ್ವಾಗತಿಸಿದರು. ಡಿ. ರಾಜೇಂದ್ರ ಕುಮಾರ್ ಛದ್ಮವೇಷ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು. ಎಸ್ಕೆಡಿಆರ್ಡಿಪಿ ನಿರ್ದೇಶಕ ಶಾಂತಾರಾಮ ಪೈ ವಂದಿಸಿದರು. ಇದಕ್ಕೂ ಮೊದಲು ಕ್ಷೇತ್ರದ ಲಾಂಛನದೊಂದಿಗೆ ಭವ್ಯವಾದ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಅತಿಥಿಗಳನ್ನು ಕರೆತರಲಾಯಿತು.
ಮುಂದಿನ ಕಾರ್ಯಗಳು..
ಸರ್ಕಾರದ ಸಹಾಯದಿಂದ 200 ಶುದ್ಧಗಂಗಾ ಘಟಕಗಳನ್ನು ತೆರೆಯಲಾಗುವುದು. ಈಗಾಗಲೇ 348 ರುದ್ರಭೂಮಿಗಳ ಜೀರ್ಣೋದ್ಧಾರ ನಡೆದಿದ್ದು ಮುಂದಿನ ದಿನಗಳಲ್ಲಿ ಸರ್ಕಾರವೂ ಈ ಕಾರ್ಯಕ್ಕೆ ಸಹಾಯ ಹಸ್ತ ನೀಡಲಿರುವುದರಿಂದ ಅದನ್ನು ವಿಸ್ತರಿಸಲಾಗುವುದು.
ಸೋಲಾರ್, ಗೋಬರ್ ಗ್ಯಾಸ್ ಘಟಕಗಳ ಅನುಷ್ಠಾನಕ್ಕೆ ಇನ್ನಷ್ಟು ಒತ್ತು ನೀಡಲಾಗುವುದು.
ಕ್ಷೇತ್ರದ ಶಿಕ್ಷಣ ಸಂಸ್ಥೆಗಳ ವತಿಯಿಂದ 10 ಸ್ನಾತಕೋತ್ತರ ಪದವಿಗಳ ಅವಕಾಶ ನೀಡಲಾಗಿದೆ. ಈಗಾಗಲೇ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ರಾಜ್ಯಾದ್ಯಂತ 116 ದೇವಸ್ಥಾನಗಳು ಪುನರ್ ನಿರ್ಮಾಣಗೊಂಡಿದ್ದು ಈ ವರ್ಷ 12 ದೇವಸ್ಥಾನಗಳು ನವೀಕರಣಗೊಂಡಿವೆ. ಹಾಸನದಲ್ಲಿ ಆಯರ್ವೇದ ಕಾಲೇಜಿನ ಹೊಸ ಕಟ್ಟಡವನ್ನು ಪ್ರಾರಂಭಿಸಲಾಗುವುದು. ಉಜಿರೆಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಹಾಸ್ಟೇಲ್ಗಳನ್ನು ನಿರ್ಮಿಸಲಾಗುವುದು ಎಂದು ಡಾ. ಹೆಗ್ಗಡೆ ಈ ವೇಳೆ ಮಾಹಿತಿ ನೀಡಿದರು. ಈ ಸಂದರ್ಭ ಛದ್ಮವೇಷ ಸ್ಪರ್ಧೆ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

