ಅಮಿತ ಕನಸುಗಳಿದ್ದರೂ ನಮಿತಾಗೆ ಸಾಲದ್ದೇ ಚಿಂತೆ
ಸುಳ್ಯ: ಸುಳ್ಯ ತಾಲೂಕಿನ ತೀರಾ ಹಳ್ಳಿ ಪ್ರದೇಶ ಕೊಲ್ಲಮೊಗ್ರದಲ್ಲಿ ಬೆಳೆದ ಈ ಹುಡುಗಿ ನಮಿತಾ ಎಂದೂ ವಿದೇಶದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತೇನೆಂದು ಕನಸು ಕಂಡವಳಲ್ಲ. ಆದರೆ ಚೀನಾದ ನಾನ್ಜಿಂಗ್ ಯೂತ್ ಗೇಮ್ಸ್ ಕ್ರೀಡಾಂಗಣ ಮೆಟ್ಟಿ ಬರುವುದಕ್ಕೆ ಈಕೆಯ ಸಾಧನೆಗೆ ಸಾಧ್ಯವಾಗಿದೆ.
ಆದರೆ ಹಾಗೆ ಹೋಗಿ ಬಂದ ನಮಿತಾಗೆ ಈಗ ಮನೆಯವರ ಸಾಲದ್ದೇ ಚಿಂತೆ. ಯಾಕೆಂದರೆ ಈಕೆಯ ಕುಟುಂಬದ ಆರ್ಥಿಕ ಸ್ಥಿತಿಗತಿ ಕ್ರೀಡಾ ಬದುಕಿಗೆ ಭಾರವಾಗಿದೆ.
ಸಂತೋಷ ಮತ್ತು ಬೇಸರ: ಚೀನಾದ ನಾನ್ಜಿಂಗ್‌ನಲ್ಲಿ ನಡೆದ ಎರಡನೇ ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವ ನಮಿತಾ ಇದೀಗ ಊರಿಗೆ ಮರಳಿದ್ದಾಳೆ. ಚೀನಾದ ಸಂತೋಷ ಮತ್ತು ಪರಿಸ್ಥಿತಿಯ ಬೇಸರವನ್ನು ನಮಿತಾ 'ಕನ್ನಡಪ್ರಭ'ದೊಂದಿಗೆ ಹಂಚಿಕೊಂಡಿದ್ದಾಳೆ.
ಕೇರಳದಲ್ಲಿ ನಡೆದ ರಾಷ್ಟ್ರೀಯ ಯೂತ್ ಗೇಮ್ಸ್‌ನಲ್ಲಿ ಗುಂಡೆಸೆತದಲ್ಲಿ ಮಾಡಿದ 13.56 ಮೀಟರ್ ಸಾಧನೆ ಆಧಾರದಲ್ಲಿ ನಮಿತಾ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಳು. 31 ಜನರ ತಂಡದೊಂದಿಗೆ ಆ.17ರಂದು ಈಕೆ ಚೀನಾಕ್ಕೆ ತೆರಳಿದ್ದಳು. ಈ ಪೈಕಿ 8 ಮಂದಿಗಷ್ಟೆ ಮಾತ್ರ ನಾನ್ಜಿಂಗ್‌ನಲ್ಲಿ ನಿರ್ವಹಣೆ ತೋರುವ ಅವಕಾಶ ಸಿಕ್ಕಿದೆ. ಹೀಗಾಗಿ ನಮಿತಾಗೆ ಮೈದಾನಕ್ಕಿಳಿಯುವ ಅವಕಾಶ ಸಿಕ್ಕಿಲ್ಲ. ಆದರೂ ಸರ್ಟಿಫಿಕೇಟ್‌ನೊಂದಿಗೆ ಈಕೆ ಮರಳಿದ್ದಾಳೆ.
ಅಲ್ಲಿ ಬೆಳಗ್ಗೆ ಮತ್ತು ಸಂಜೆ ಪ್ರಾಕ್ಟೀಸ್ ಇರುತ್ತಿತ್ತು. ಗುಂಡೆಸೆತದಲ್ಲಿ ನನಗಿಂತಸ್ವಲ್ಪ ಅಧಿಕ ಸಾಧನೆ ತೋರಿದ ಮೇಘನಾಗೆ ಮೈದಾನಕ್ಕಿಳಿಯುವ ಅವಕಾಶ ದೊರೆಯಿತು. ಆಕೆ ನಾಲ್ಕನೇ ಸ್ಥಾನಿಯಾದಳು ಎಂದು ನಮಿತಾ ಹೇಳಿದ್ದಾರೆ.
ಅವಕಾಶದ ನಿರೀಕ್ಷೆ: ಖಂಡಿತವಾಗಿಯೂ ಮುಂದಿನ ವರ್ಷಗಳಲ್ಲಿ ನನಗೆ ಈ ಕೂಟದಲ್ಲಿ ಭಾಗವಹಿಸುವ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ಭರವಸೆಯಿಂದ ನುಡಿಯುವ ನಮಿತಾ ಮುಂದೆ ರಾಂಚಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಿದ್ಧತೆ ಆರಂಭಿಸಿದ್ದಾಳೆ.
ಚೀನಾದಿಂದ ಅನೇಕ ಅನುಭವಗಳನ್ನು ಪಡೆದಿದ್ದೇನೆ. ದೇಶ ವಿದೇಶಗಳ ನೂರಾರು ಕ್ರೀಡಾಪಟುಗಳೊಂದಿಗೆ ಬೆರೆತಿದ್ದೇನೆ. ಅಲ್ಲಿಯ ಸಂಸ್ಕೃತಿ ಏನೆಂದು ಅರಿತಿದ್ದೇನೆ. ನನ್ನ ಭಾಷೆಯನ್ನು ಸುಧಾರಿಸಿಕೊಂಡಿದ್ದೇನೆ ಎಂದು ಸಂತೋಷದಿಂದ ನಮಿತಾ ಹೇಳಿಕೊಳ್ಳುತ್ತಾಳೆ.
ಸಾಲದ ಶೂಲ: ವಿಪರ್ಯಾಸವೆಂದರೆ ಅದೇ ಸಂತೋಷ ಆಕೆಯ ಮನೆಯ ಪರಿಸ್ಥಿತಿಯ ಬಗ್ಗೆ ಹೇಳುವಾಗ ಇರುವುದಿಲ್ಲ. ಕಾರಣ ಈಕೆಯ ಈ ಕ್ರೀಡಾ ಸಾಧನೆಗಾಗಿ ಮನೆಯವರು ಸುಮಾರು ರು. 50 ಸಾವಿರದಷ್ಟು ಸಾಲ ಮಾಡಿದ್ದಾರೆ. ಇದಕ್ಕಾಗಿ ಮನೆಯ ಚಿನ್ನ ಅಡವಿಟ್ಟಿದ್ದಾರೆ, ಕೈಸಾಲ ಮಾಡಿದ್ದಾರೆ.
ನಮಿತಾರದ್ದು ಅಷ್ಟೇನೂ ಸ್ಥಿತಿವಂತ ಕುಟುಂಬವಲ್ಲ, ತಂದೆ ಕುಶಾಲಪ್ಪ ಗೌಡ ಕೂಲಿ ಕಾರ್ಮಿಕರು. ಅಲ್ಪ ಸ್ವಲ್ಪ ಅಡಕೆ ಕೃಷಿ ಇದೆ. ಅದಕ್ಕೂ ಈಗ ಕೊಳೆರೋಗ. ಹೀಗಾಗಿ ನಮಿತಾಳ ಶೈಕ್ಷಣಿಕ ಮತ್ತು ಕ್ರೀಡಾ ಬದುಕಿಗೆ ಯಥೇಚ್ಛ ಹಣ ಖರ್ಚು ಮಾಡುವ ಸ್ಥಿತಿಯಲ್ಲಿ ಈ ಕುಟುಂಬ ಇಲ್ಲ.
ದೆಹಲಿಯಿಂದ ಚೀನಾಕ್ಕೆ ಹೋಗಿ ಬರುವವರೆಗೂ ಎಲ್ಲಾ ಖರ್ಚುಗಳನ್ನು ಕ್ರೀಡಾ ಪ್ರಾಧಿಕಾರ ಭರಿಸಿದೆ. ಆದರೆ ಪಾಸ್‌ಪೋರ್ಟ್ ಸೇರಿದಂತೆ ಇನ್ನಿತರ ಅನೇಕ ಖರ್ಚುಗಳಿಗೆ ಕುಟುಂಬವೇ ಹೊಣೆ ಹೊತ್ತಿದೆ. ಈ ಮಧ್ಯೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಸಹಕಾರ ನೀಡಿದ್ದಾರೆ. ಊರವರೂ ಅಲ್ಪಸ್ವಲ್ಪ ಸಹಾಯ ಮಾಡಿದ್ದಾರೆ.
ಸಹಾಯದ ನಿರೀಕ್ಷೆ: ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ನಮಿತಾ ಕ್ರೀಡಾ ಬದುಕು ಇನ್ನಷ್ಟು ಬೆಳಗಬೇಕಾದರೆ ಸರ್ಕಾರದ, ದಾನಿಗಳ ಸಹಕಾರ ಬೇಕಾಗಿದೆ. ಎಲ್ಲಕ್ಕೂ ಮೊದಲು ಗ್ರಾಮೀಣ ಪ್ರದೇಶದ ಈ ಕ್ರೀಡಾ ತಾರೆಯನ್ನು ಗುರುತಿಸಿವ ಕಾರ್ಯ ಆಗಬೇಕಾಗಿದೆ. ಆ ನಿರೀಕ್ಷೆಯಲ್ಲಿ ನಮಿತಾ, ಆಕೆಯ ಕುಟುಂಬ ಇದೆ.
-ದುರ್ಗಾ ಕುಮಾರ್ ನಾಯರ್‌ಕೆರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

