ಅಕ್ಕಿ ಸರಬರಾಜಿಲ್ಲವೆಂದು ಮಕ್ಕಳಿಗೆ ಬಿಸಿಯೂಟವಿಲ್ಲ
ಉಪ್ಪಿನಂಗಡಿ: ಅಕ್ಕಿ ಪೂರೈಕೆಯಲ್ಲಿ ಲೋಪವುಂಟಾಗಿ ಅಕ್ಕಿ ಅಗತ್ಯ ಪ್ರಮಾಣದಲ್ಲಿ ಬರಲಿಲ್ಲ ಎಂದು ಮಕ್ಕಳಿಗೆ ಬಿಸಿಯೂಟವನ್ನೇ ರದ್ದುಗೊಳಿಸಿದ ಘಟನೆ ಕಡಬ ಗ್ರಾ.ಪಂ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಓಂತ್ರಡ್ಕ ಶಾಲೆಯಲ್ಲಿ ಸೋಮವಾರ ನಡೆದಿದೆ.
ಶಾಲೆಗೆ ಅಗತ್ಯವಾದ ಪ್ರಮಾಣದಲ್ಲಿ ಅಕ್ಕಿ ಪೂರೈಕೆಯಾಗುತ್ತಿಲ್ಲ, ಎರವಲು ಅಕ್ಕಿ ಪಡೆದು ಪಡೆದು ಸಾಕಾಗಿದೆ. ಅದಕ್ಕಾಗಿ ಸೋಮವಾರ ಮಕ್ಕಳಿಗೆ ಮನೆಯಿಂದಲೇ ಬುತ್ತಿಯೂಟ ತರಬೇಕೆಂದು ಸೂಚಿಸಲಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಪ್ರತಿಪಾದಿಸಿದ್ದು, ಜನಪ್ರತಿನಿಧಿಗಳನ್ನು ಕೆರಳಿಸುವಂತೆ ಮಾಡಿದೆ.
ಬುತ್ತಿ ತರಲು ಸೂಚನೆ: ಆ.31ರಂದು ಶಿಕ್ಷಕರು ಮಕ್ಕಳಲ್ಲಿ , ಸೋಮವಾರ ಬಿಸಿಯೂಟ ಇಲ್ಲ, ನೀವು ಮನೆಯಿಂದ ಊಟ ಕಟ್ಟಿಕೊಂಡು ಬರಬೇಕು ಅಥಾವ ಊಟಕ್ಕೆ ಮನೆಗೆ ಹೋಗಬೇಕೆಂದು ತಿಳಿಸಿದ್ದರು. ಈ ಮಾಹಿತಿ ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿದು ಮಧ್ಯಾಹ್ನದ ವೇಳೆ ಶಾಲೆಗೆ ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿತು.
ವಿಚಾರ ತಿಳಿದಾಕ್ಷಣ ಶಾಲೆಗೆ ಆಗಮಿಸಿದ ಗ್ರಾ.ಪಂ. ಅಧ್ಯಕ್ಷ ಹನೀಫ್ ಕೆ.ಎಂ., ಜಿ.ಪಂ. ಸದಸ್ಯೆ ಕುಮಾರಿ ವಾಸುದೇವನ್, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸೈಮನ್ ಲೂಯಿಸ್ ರೋಡ್ರಿಗಸ್, ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಫಝಲ್ ಕೋಡಿಂಬಾಳ, ಕೃಷ್ಣಪ್ಪ ಪೂಜಾರಿ, ನಾರಾಯಣ ಗೌಡ ಅಲೂಂಗೂರು, ಜ್ಯೋತಿ ಡಿ. ಕೋಲ್ಪೆ ಮುಖ್ಯ ಶಿಕ್ಷಕಿಯಿಂದ ವಿವರ ಪಡೆದುಕೊಂಡರು.
ಘಟನೆಗೆ ಮುಖ್ಯ ಶಿಕ್ಷಕಿಯ ಬೇಜವ್ದಾರಿ ಎಂದು ಆರೋಪಿಸಿ ಶಿಕ್ಷಕಿಯನ್ನು ತರಾಟೆಗೆತ್ತಿಕೊಂಡರು.
ಅಕ್ಕಿ ಕೊರತೆಯಿದೆ: ಅಕ್ಕಿಯ ಕೊರತೆ ಸತತವಾಗಿ ಕಾಡುತ್ತಿದೆ ಎಂದು ಶಾಲಾಭಿವೃದ್ಧಿ ಸಭೆಯಲ್ಲಿ ಪ್ರಸ್ತಾಪವೆತ್ತಿದ್ದರೂ ಯಾರೂ ಸಮಸ್ಯೆ ನಿವಾರಣೆಗೆ ಗಮನ ಹರಿಸಿಲ್ಲ ಎಂದು ಶಿಕ್ಷಕಿ ತಿಳಿಸಿದರೆ, ಪ್ರಸ್ತಾಪವೆತ್ತಿದರೆ ಸಾಕೇ? ಅದನ್ನು ಮೇಲಾಧಿಕಾರಿಗಳಿಗೆ ತಿಳಿಸುವ ಕರ್ತವ್ಯ ಯಾಕೆ ಮಾಡಿಲ್ಲ ಎಂದು ಜನಪ್ರತಿನಿಧಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಕ್ಷರ ದಾಸೋಹದ ನಿರ್ದೇಶಕ ಜಿನ್ನಪ್ಪ ಗೌಡರಲ್ಲಿ ಪ್ರಸ್ತಾಪಿಸಿದಾಗಲೆಲ್ಲಾ, ದಾಖಲೆಯಲ್ಲಿ ನಿಮ್ಮ ಬಳಿ ಅಕ್ಕಿ ಇದೆ ಎಂಬ ಉತ್ತರ ಲಭಿಸುತ್ತಿದೆ ಎಂದು ಶಿಕ್ಷಕಿ ಇಲಾಖೆಯೊಳಗಿನ ಶೀತಲ ಸಮರ ಬೆಳಕಿಗೆ ತಂದಿದ್ದಾರೆ.
ಒಟ್ಟಾರೆ ಇಲಾಖೆಯ ಅಧಿಕಾರಿಗಳ ಮೇಲಾಟದಿಂದ ಬಡಪಾಯಿ ವಿದ್ಯಾರ್ಥಿಗಳು ಮಧ್ಯಾಹ್ನದ ಅನ್ನವಿಲ್ಲದೇ ದಿನಕಳೆಯಬೇಕಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

