ಪಂಜ ಅರಣ್ಯ ವಲಯದಲ್ಲಿ ಅವ್ಯವಹಾರ: ಇಬ್ಬರ ಅಮಾನತು
ಸುಬ್ರಹ್ಮಣ್ಯ: ಪಂಜ ಅರಣ್ಯ ವಲಯದ ಬಳ್ಪ ಗ್ರಾಮದಲ್ಲಿ 1970 ಹಾಗೂ 1972ನೇ ಇಸವಿಯಿಂದ ಬೆಳೆಸಿದ ಮರಗಳಿಂದ ಮೇಣ ತೆಗೆಯುವ ಹಕ್ಕಿನ ಹರಾಜಿನಲ್ಲಿ ಸಿಬ್ಬಂದಿ ಹಾಗೂ ಇಲಾಖಾ ಅಧಿಕಾರಿಗಳು ಶಾಮಿಲಾತಿಯಿಂದ ಸರ್ಕಾರಕ್ಕೆ ಲಕ್ಷಾಂತರ ರುಪಾಯಿ ವಂಚನೆ ಮಾಡಲಾಗಿದ್ದು ಈ ಪ್ರಕರಣದಲ್ಲಿ ಬಳ್ಪ ಸೆಕ್ಷನ್ನ ಫಾರೆಸ್ಟರ್ ಶಿವಶಂಕರ ಹಾಗೂ ಫಾರೆಸ್ಟ್ ಗಾರ್ಡ್ ವಿನಾಯಕ ದುರುದುಂಡಿ ಬಾಗಿಯಾಗಿರುವುದು ಪ್ರಾಥಮಿಕ ಹಂತದ ತನಿಖೆಯಲ್ಲಿ ಕಂಡು ಬಂದಿದ್ದು ಅವರನ್ನು ಸೇವೆಯಿಂದ ಅಮಾನತುಗೊಳಸಲಾಗಿದೆ.
ಬೆಂಗಳೂರಿನ ಅರಣ್ಯ ಘಟಕದ ಗುಪ್ತಚರ ಹಾಗೂ ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳ ತನಿಖೆಯಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಲಕ್ಷಾಂತರ ರುಪಾಯಿ ವೆಚ್ಚದ ಈ ಹಗರಣವನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಕರಣದ ಹಿನ್ನಲೆ: 2009ನೇ ಇಸವಿಯಲ್ಲಿ ದ.ಕ. ಜಿಲ್ಲೆಯಲ್ಲಿ ಇರುವ ಅರಣ್ಯ ಇಲಾಖೆಯ ಹಾಲುಮಡ್ಡಿ ನೆಡು ತೋಪುಗಳ ಮರದಿಂದ ಹಾಲು ಮಡ್ಡಿ ಮೇಣದ ಸಂಗ್ರಹಣೆಯ ಹಕ್ಕನ್ನು ಹರಾಜು ಮಾಡಲಾಗಿರುತ್ತದೆ.
ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ಆದಾಯ ಬಂದಿರುತ್ತದೆ. ಈ ಹರಾಜಿನ ಅವಧಿ 2013ರ ಫೆಬ್ರವರಿಗೆ ಮುಕ್ತಾಯಗೊಂಡಿರುತ್ತದೆ. ಈ ಹರಾಜಿನಲ್ಲಿ ಪಂಜ ವಲಯದ ಬಳ್ಪ ಶಾಖೆಯಲ್ಲಿ 2 ಹಾಲು ಮಡ್ಡಿ ನೆಡು ತೋಪುಗಳು ಹರಾಜಾಗಿರುತ್ತದೆ. ಹರಾಜಾದ ಹಾಲು ಮಡ್ಡಿ ನೆಡು ತೋಪಿನ ಪಕ್ಕದಲ್ಲಿ ಸುಮಾರು 2000 ಹಾಲು ಮಡ್ಡಿ ಮರಗಳು ಇರುವ ಇನ್ನೊಂದು ನೆಡು ತೋಪು ಇದ್ದು ಇದನ್ನು ಹರಾಜಿಗೆ ಅಧಿಕಾರಿಗಳು ಇಟ್ಟಿರುವುದಿಲ್ಲ. ನೆಡು ತೋಪಿನ ಮರಗಳ ಜೊತೆಗೆ ಪಕ್ಕದಲ್ಲಿ ಇದ್ದ ನೆಡು ತೋಪಿನ ಮರಗಳಿಂದ ಹಾಲು ಮಡ್ಡಿ ಟ್ಯಾಪಿಂಗ್ 2 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿತ್ತು. ಈ ನೆಡು ತೋಪಿನಲ್ಲಿ ದೊರಕುವ ಆದಾಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಂಚಿಗೆಯಾಗುತ್ತಿದ್ದು ಕದ್ದು ಮುಚ್ಚಿ ಈ ವ್ಯವಹಾರ ನಡೆಯುತ್ತಿತ್ತೆಂದು ಸ್ಥಳೀಯರು ಆರೋಪಿಸಿದ್ದು ಪಾಲುಗಾರಿಕೆಯಲ್ಲಿ ತಕರಾರು ಬಂದು ಬೆಂಗಳೂರು ವಿಜಿಲೆನ್ಸಿ ತಂಡಕ್ಕೆ ದೂರು ಹೋದ ಹಿನ್ನಲೆಯಲ್ಲಿ ತನಿಖೆ ನಡೆದು ಈ ಪ್ರಕರಣ ಬೆಳಕಿಗೆ ಬಂದಿದೆ.
ಸರ್ಕಾರಕ್ಕೆ ಲಕ್ಷಾಂತರ ರುಪಾಯಿ ನಷ್ಟ: ಈ ನೆಡು ತೋಪನ್ನು ಹರಾಜು ಮಾಡದೆ ಇರುವುದರಿಂದ ಸರ್ಕಾರಕ್ಕೆ ಲಕ್ಷಾಂತರ ನಷ್ಟವಾಗಿದೆ. ಈ ನೆಡು ತೋಪನ್ನು ಉದ್ದೇಶಪೂರ್ವಕವಾಗಿ ಹರಾಜಿಗೆ ಪ್ರಸ್ತಾಪಿಸದೆ, ಸರ್ಕಾರಕ್ಕೆ ಇಲಾಖೆಯ ಅಧಿಕಾರಿಗಳೇ ವಂಚಿಸಿದ್ದಾರೆ. ಅಲ್ಲದೆ ಸಣ್ಣಪುಟ್ಟ ಗಾತ್ರದ ಹಾಲು ಮಡ್ಡಿ ಮರಗಳಿಂದ ಅವೈಜ್ಞಾನಿಕವಾಗಿ ಟ್ಯಾಪಿಂಗ್ ಮಾಡಿರುವುದರಿಂದ ಮರಗಳು ಸಾಲು ಸಾಲು ನೆಲಕ್ಕುರುಳಿ ಸಾಯುವ ಸ್ಥಿತಿ ತಲುಪಿದೆ. ಈ ರೀತಿ ಅಧಿಕಾರಿಗಳೇ ಲಕ್ಷಾಂತರ ಹಣ ಸರ್ಕಾರಕ್ಕೆ ವಂಚಿಸಿರುವ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ ಶಿಸ್ತು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

