ಮೊದಲು ರಾಮರಾಜ್ಯ ಅರಳಿದ್ದು ಲಂಕೆಯಲ್ಲಿ!
ಮಂಗಳೂರು: 'ಕೆಲವರು ಎಷ್ಟೇ ಕೆಡುಕರಾದರೂ ಅವರಲ್ಲಿ ಒಳ್ಳೆಯ ಅಂಶ ಇದ್ದೇ ಇದೆ. ಹಾಗೆಯೇ ಒಳ್ಳೆಯವರಾಗಿದ್ದರೂ ಅವರಲ್ಲಿ ಕೆಟ್ಟ ಅಂಶಗಳೂ ಇವೆ. ಕೆಟ್ಟವರು ಯಾವಾಗಲೂ ಕೆಟ್ಟವರಲ್ಲ. ಹಿಂದೆ ಲಂಕೆಯಲ್ಲೂ ಒಳ್ಳೆಯವರಿದ್ದರು. ಅಯೋಧ್ಯೆಯಲ್ಲಿ ರಾಮರಾಜ್ಯಕ್ಕೆ ಮುನ್ನ ಲಂಕೆಯಲ್ಲಿ ವಿಭೀಷಣನ ಮೂಲಕ ಮೊದಲು ರಾಮರಾಜ್ಯ ಅರಳಿತ್ತು...'
ಬಂಟ್ವಾಳ ಪೆರಾಜೆ ಮಾಣಿ ಮಠದಲ್ಲಿ ವಿಜಯ ಚಾತುರ್ಮಾಸ್ಯ ವ್ರತದಲ್ಲಿರುವ ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರು ರಾಮಕಥಾ ಸರಣಿಯ ಕೊನೆ ಕಂತಿನ ಐದನೇ ದಿನ ಗುರುವಾರ, ಲಂಕೆಯಲ್ಲಿ ವಿಭೀಷಣ ಪಾರುಪತ್ಯದ ಬಗ್ಗೆ ನುಡಿದ ಮಾತುಗಳಿವು.
ಸತ್ಯದ ಪರ ವಾದಿಸಲಿ: ರಾಮಾಯಣದಲ್ಲಿ ನ್ಯಾಯವಾದಿ ಬಳಕೆ ಸರಿಯಾದ್ದೆ. ವಿಭೀಷಣ ನ್ಯಾಯದ ಪರವಾಗಿದ್ದ. ರಾಮನನ್ನು ವ್ಯಕ್ತಿಗತವಾಗಿ ಭೇಟಿಯಾಗುವುದಕ್ಕೆ ಮೊದಲೇ ರಾಮನ ಪರವಾಗಿ ರಾಕ್ಷಸ ಸಹೋದರರಲ್ಲಿ ವಾದಿಸಿದ್ದ. ಇಂದು ಉಗ್ರವಾದಿ, ಕಿರಾತಕರ ಪರ ವಾದಿಸುವವರಿದ್ದಾರೆ. ಉತ್ತಮ ನ್ಯಾಯವಾದಿಗಳೂ ಇದ್ದಾರೆ. ನ್ಯಾಯವಾದಿಗಳು ಸತ್ಯದ ಪರ ಕೆಲಸ ಮಾಡಲಿ, ಆ ಮೂಲಕ ನ್ಯಾಯವಾದಿಗಳಿಗೆ ವಿಭೀಷಣ ಆವೇಶವಾಗಲಿ ಎಂದು ಹಾರೈಸಿದರು.
ಇದಕ್ಕೂ ಮೊದಲು ಲಂಕೆಗೆ ಆಗಮಿಸಿದ ಹನುಮ ಸೀತೆಯನ್ನು ಹುಡುಕುತ್ತಾನೆ. ರಾಕ್ಷಸರ ಕೋಣೆಯನ್ನು ಹುಡುಕುವಾಗ ನಿದ್ರೆಯಲ್ಲಿದ್ದ ಕುಂಭಕರ್ಣನ ಉಸಿರಿನ ರಭಸಕ್ಕೆ ಹನುಮಂತ ಎಗರಿಬೀಳುವ ಚಿತ್ರರೂಪಕ ಜತೆಗೆ ನೀರ್ನಳ್ಳಿ ಗಣಪತಿ ಕ್ಯಾನ್ವಾಸ್ನಲ್ಲಿ ಇದೇ ಚಿತ್ರವನ್ನು ಸೊಗಸಾಗಿ ಮೂಡಿಸಿದರು. ಲಂಕೆಯ ಸೊಬಗನ್ನು ಸವಿಯುತ್ತಾ ಹನುಮಂತ ಸೀತೆಯನ್ನು ಶೋಧಿಸುತ್ತಾನೆ. ಲಂಕೆ ಎಷ್ಟು ಸುಂದರವೋ ಅಷ್ಟೇ ಭೀಭತ್ಸವೂ ಎಂಬುದನ್ನು ಮನಗಾಣುತ್ತಾನೆ. ಈ ವೇಳೆ 'ಅರರೆ ಏನಿದು ಆಶ್ಚರ್ಯ...' ಮತ್ತು 'ಶ್ರೀರಾಮ ಚಂದಿರನೆ...'ಎಂಬ ಸುಶ್ರಾವ್ಯ ಹಾಡಿಗೆ ಪ್ರೇಕ್ಷಕರ ಗಡಣ ಚಪ್ಪಾಳೆ ಮೂಲಕ ಸಾಥ್ ನೀಡಿತು. ಕೊನೆಯಲ್ಲಿ ಹನುಮ-ವಿಭೀಷಣನ ಅಪರೂಪದ ಸಮಾಗಮವನ್ನು ಶ್ರೀಗಳು ನಿರೂಪಣೆಯಲ್ಲಿ ಸಾದರಪಡಿಸಿದರು.
ಬಳಿಕ ಹುಲಿಯ ಎಲುಬಿಗೆ ರೂಪನೀಡಿ ಜೀವ ಕೊಟ್ಟು ರಾಕ್ಷಸರು ತಾವೇ ಆಹಾರವಾದ ನೀತಿಕಥೆಯ ದೃಶ್ಯರೂಪಕ ಪ್ರದರ್ಶಿಸಲ್ಪಟ್ಟಿತು. ಜೈ ಜೈ ರಾಮಕಥಾ ಹಾಡಿಗೆ ಭಕ್ತವೃಂದ ನಲಿದು ಸಂಭ್ರಮಿಸಿತು.
ಒಡಿಯೂರುಶ್ರೀ ಭೇಟಿ: ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಅನಂತಕೃಷ್ಣ ರಾಮಕಥಾಗೆ ಭೇಟಿ ನೀಡಿ ವೀಕ್ಷಿಸಿದರು. ರಾಘವೇಶ್ವರಶ್ರೀಗಳ ಜತೆ ಮಾತನಾಡಿದ ಒಡಿಯೂರುಶ್ರೀ, ರಾಮಕಥೆಯನ್ನು ತಮ್ಮ ಕ್ಷೇತ್ರದಲ್ಲೂ ನಡೆಸಿಕೊಡುವ ಬಗ್ಗೆ ಭಿನ್ನವಿಸಿದರು ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

