ದಕ್ಷಿಣ ಕನ್ನಡ

ರಫ್ತು ಪಾರ್ಕ್ ಉತ್ತೇಜನ: ಸರ್ಕಾರ ನಿಸ್ತೇಜ!

Published On :

ಮಂಗಳೂರು: ಕೈಗಾರಿಕಾ ಸ್ಥಾಪನೆಗೆ ಉತ್ತೇಜನ ನೀಡುವ ಸಲುವಾಗಿ ವಿಶೇಷ ಆರ್ಥಿಕ ವಲಯ, ಕೈಗಾರಿಕಾ ಹಬ್ ನಿರ್ಮಿಸಲು ಹೊರಟಿರುವ ಸರ್ಕಾರ ತನ್ನದೇ ರಫ್ತು ಉತ್ತೇಜಿತ ಕೈಗಾರಿಕಾ ಪಾರ್ಕ್ ಅಭಿವೃದ್ಧಿಯತ್ತ ನಿರ್ಲಕ್ಷ್ಯ ತೋರಿದೆ.
ಮಂಗಳೂರಿನ ಗಂಜಿಮಠದಲ್ಲಿರುವ ರಾಜ್ಯದ 2ನೇ ರಫ್ತು ಉತ್ತೇಜಿತ ಕೈಗಾರಿಕಾ ಪಾರ್ಕ್(ಇಪಿಐಪಿ) ಮೂಲಸೌಕರ್ಯ ವಂಚಿತವಾಗಿದೆ. ಬೆಂಗಳೂರು ಹೊರತುಪಡಿಸಿದರೆ ಈ ಪಾರ್ಕ್‌ನಲ್ಲಿ ಕೈಗಾರಿಕೆಗಳೇ ಇಲ್ಲ. ಕೈಗಾರಿಕೆ ತ್ವರಿತವಾಗಿ ಸ್ಥಾಪನೆಯಾಗಬೇಕಾದರೆ ಅಲ್ಲಿ ಮೂಲ ಸೌಕರ್ಯ ಬೇಕು.
2005ರಲ್ಲಿ ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಡಿಬಿ) ಗಂಜಿಮಠದಲ್ಲಿ 205 ಎಕರೆ ವಶಪಡಿಸಿ 158 ಎಕರೆಯನ್ನು ಕೈಗಾರಿಕೆಗೆ ಅಭಿವೃದ್ಧಿಪಡಿಸಿದ್ದು ಬಿಟ್ಟರೆ ಬೇರೇನೂ ಅಭಿವೃದ್ಧಿ ಕಂಡಿಲ್ಲ. ಮೂಲಸೌಕರ್ಯಕ್ಕೆ ಒತ್ತು ನೀಡದ ಪರಿಣಾಮ ಕಳೆದ 8 ವರ್ಷದಿಂದ ಕೈಗಾರಿಕೆಗಳು ತಳವೂರದೆ ಸರ್ಕಾರವೇ ಕೋಟ್ಯಂತರ ರಫ್ತು ವಹಿವಾಟನ್ನು ಕೈಯಾರೆ ಸುಟ್ಟುಕೊಂಡಂತಾಗಿದೆ.
ಸೌಕರ್ಯ 25 ಎಕರೆಯಲ್ಲಿ: ಕೆಐಡಿಬಿ ಒಳಚರಂಡಿ ಕಾಮಗಾರಿ ನಡೆಸಿದ್ದು 21.43 ಎಕರೆ ಮಾತ್ರ. ನೀರು, ಪಾರ್ಕ್, ಕಚೇರಿ ಸೇರಿದಂತೆ ಇತರೆ ಕಾಮಗಾರಿ 25.55 ಎಕರೆಯಲ್ಲಿ ನಡೆಸಿದೆ. ಉಳಿದ ಕಡೆ ಮೂಲಸೌಕರ್ಯ ಬಾಕಿ ಇದೆ. ಕೆಐಡಿಬಿ ಭೂಸ್ವಾಧೀನಪಡಿಸಿ ಕೈಗಾರಿಕೆಗೆ ನೀಡುವಾಗ ಸೀಮಿತ ಪ್ರಮಾಣದಲ್ಲಿ ಮೂಲಸೌಕರ್ಯ ಒದಗಿಸಿದೆ. ಇದು ಪೂರ್ತಿಯಾದಲ್ಲಿ ಇನ್ನಷ್ಟು ಕೈಗಾರಿಕೆಗಳು ಆಗಮಿಸುವ ಸಾಧ್ಯತೆ ಇದೆ.
28 ಕೈಗಾರಿಕೆಗಳ ಅರ್ಜಿ: ಇಲ್ಲಿ ರಫ್ತು ಕೈಗಾರಿಕೆ ಸ್ಥಾಪನೆಗೆ 28 ಕೈಗಾರಿಕಾ ಕಂಪನಿಗಳು ಅರ್ಜಿ ಸಲ್ಲಿಸಿವೆ. ಇವುಗಳಲ್ಲಿ 4 ಕೈಗಾರಿಕೆ ಕಂಪನಿಗಳು ಕಾರ್ಯಾರಂಭಿಸಿದೆ ಎನ್ನುವುದು ಕೆಐಡಿಬಿ ದಾಖಲೆ ಹೇಳುತ್ತದೆ.
ವಾಸ್ತವದಲ್ಲಿ ಇಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಿರುವುದು ಬಿಗ್ ಬ್ಯಾಗ್ಸ್ ಇಂಟರ್‌ನ್ಯಾಷನಲ್ ಪ್ರೈ.ಲಿ. ಮಾತ್ರ. ಇನ್ನು 4 ಕೈಗಾರಿಕೆಗಳು ನೆಲ ಸಮತಟ್ಟುಗೊಳಿಸುವುದು, ಕಂಪೌಂಡ್ ನಿರ್ಮಿಸುವುದಕ್ಕಷ್ಟೇ ಸೀಮಿತ. ಮತ್ತೆ 7 ಕೈಗಾರಿಕೆಗಳಿಗೆ ಅರ್ಜಿ ಸಲ್ಲಿಸಿ 2 ವರ್ಷ ಕಳೆದರೂ ಉದ್ದಿಮೆ ಪ್ರಾರಂಭಿಸದಿರುವ ಬಗ್ಗೆ ಕೆಐಡಿಬಿ ನೋಟಿಸ್ ಕಳುಹಿಸಿದೆ. ಉಳಿದ 13 ಕೈಗಾರಿಕೆಗಳು ಅರ್ಜಿ ಸಲ್ಲಿಸಿ ಅಷ್ಟಕ್ಕೇ ಸುಮ್ಮನಾಗಿವೆ.
ಲೋ ವೋಲ್ಟೇಜ್ ಸಮಸ್ಯೆ: ಬಿಗ್ ಬ್ಯಾಗ್ಸ್ ಇಂಟರ್‌ನ್ಯಾಷನಲ್ ಬ್ಯಾಗ್ ರಫ್ತು ಉತ್ಪನ್ನ ಆರಂಭಿಸಿ 1 ವರ್ಷ ಕಳೆದಿದೆ. ಬ್ಯಾಗ್ ಉತ್ಪಾದನೆಯಲ್ಲಿ 4 ಸಾವಿರ ಸಿಬ್ಬಂದಿಗೆ ಅವಕಾಶವಿದ್ದರೂ ಈಗ ಇರುವುದು 800 ಮಂದಿ ಮಾತ್ರ. ಕಾರಣ, ವಿದ್ಯುತ್ ಕೊರತೆಯಿಂದ ನಿಗದಿತ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ದಿನಂಪ್ರತಿ ಲೋ ವೋಲ್ಟೇಜ್ ಸಮಸ್ಯೆ. ಹಾಗಾಗಿ ಉತ್ಪಾದನೆ ಸಾಮರ್ಥ್ಯ ಇದ್ದರೂ ಉತ್ಪಾದಿಸಲು ಆಗುತ್ತಿಲ್ಲ. ಕೈಗಾರಿಕಾ ಪ್ರದೇಶದಲ್ಲೇ ವಿದ್ಯುತ್ ಸಮಸ್ಯೆ ತಲೆದೋರಿದರೆ ಇನ್ನೇನು ಮಾಡಲು ಸಾಧ್ಯ ಎನ್ನುತ್ತಾರೆ ಕಂಪನಿಯ ಜನರಲ್ ಮ್ಯಾನೇಜರ್ ಶ್ರೀನಾಥ್ ಅಡ್ಯಂತಾಯ. ಇಪಿಐಪಿಗೆ ವಿದ್ಯುತ್ ಪೂರೈಕೆ ಗ್ರಾಮೀಣ ಫೀಡರ್‌ನಿಂದ. ಹಳ್ಳಿಯಲ್ಲಿ ನಿತ್ಯ ಪವರ್ ಕಟ್ ಇರುವಾಗ ಇನ್ನು ಅದರಿಂದಲೇ ವಿದ್ಯುತ್ ನೀಡಿದರೆ ಕೈಗಾರಿಕೆ ಹೇಗೆ ನಡೆದೀತು? ಎಂದು ಪ್ರಶ್ನಿಸುತ್ತಾರೆ.
ಅತ್ಯಾಧುನಿಕ ಸಬ್‌ಸ್ಟೇಷನ್‌ಗೆ ಇಲ್ಲಿ 16 ಎಕರೆ ಗುರುತಿಸಲಾಗಿದೆ. ಜತೆಗೆ ಅಗ್ನಿಶಾಮಕ ಕೇಂದ್ರ ಸ್ಥಾಪನೆಗೂ ಜಾಗ ನಿಗದಿಪಡಿಸಲಾಗಿದೆ. ಮೆಸ್ಕಾಂ ಸಮಿತಿ ಈ ಬಗ್ಗೆ ಕಾರ್ಯಪ್ರವೃತ್ತವಾಗಬೇಕು ಎನ್ನುವ ಸಮಜಾಯಿಷಿ ಕೆಐಡಿಬಿಯದ್ದು. ಕೆಲವು ವರ್ಷ ಹಿಂದೆ ನೀರಿನ ಸಮಸ್ಯೆ ಇತ್ತು. ಈಗ ಗುರುಪುರ ನದಿಯಿಂದ ಕೈಗಾರಿಕೆಗೆ ನೀರು ಪೂರೈಸಲಾಗುತ್ತಿದೆ. ಇಪಿಐಪಿ ಸುತ್ತಲಿನ 4 ಗ್ರಾಮಗಳಿಗೆ ನೀರು ಉಚಿತ ಸರಬರಾಜು ಮಾಡುತ್ತೇವೆ ಎನ್ನುತ್ತಾರೆ ಕೆಐಡಿಬಿ ಅಧಿಕಾರಿಗಳು.

ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.