ದಕ್ಷಿಣ ಕನ್ನಡ

ನಾಯಿ ತಿನ್ನಲು ನಾಡಿಗೆ ಬಂದ ಕರಿ ಚಿರತೆ ಸೆರೆ

Published On :

ಉಡುಪಿ: ಅಪರೂಪವಾಗಿರುವ ಕರಿ ಚಿರತೆಯೊಂದು ಉಡುಪಿ ತಾಲೂಕಿನ ಕಾಡೂರು ಗ್ರಾಮದ ಹೆಗ್ಗೋಡು ಎಂಬಲ್ಲಿ ಬುಧವಾರ ಪತ್ತೆಯಾಗಿದ್ದು ಜನತೆ ಅಚ್ಚರಿಗೆ ಕಾರಣವಾಗಿದೆ.
ಇಲ್ಲಿನ ಕಮಲ ಶೆಟ್ಟಿ ಎಂಬವರ ಮನೆಯ ನಾಯಿಯನ್ನು ತಿನ್ನಲು ಬಂದಿದ್ದ ಈ ಚಿರತೆ ಮನೆಗೆ ತಾಗಿಕೊಂಡಿರುವ ಹಳೆಯ ಕೋಣೆಯೊಳಗೆ ಸಿಕ್ಕಿಬಿದ್ದು, ಕೊನೆಗೆ ಅರಣ್ಯ ಇಲಾಖೆಯವರು ಬೋನಿನಲ್ಲಿ ಬಂಧಿಸಿ, ಕುದುರೆಮುಖ ಅಭಯಾರಣ್ಯದಲ್ಲಿ ಬಿಟ್ಟಿದ್ದಾರೆ.
ಘಟನೆ ವಿವರ: ಬುಧವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕೋಣೆಯೊಳಗೆ ಕುಳಿತುಕೊಂಡಿದ್ದ ಚಿರತೆಯನ್ನು ನೋಡಿದ ಕಮಲ ಶೆಟ್ಟಿ ಕೋಣೆಯ ಬಾಗಿಲು ಮುಚ್ಚಿ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು.
ಈ ಸುದ್ದಿ ಕೇಳಿ ಊರಿನ ಜನರು ಚಿರತೆಯನ್ನು ನೋಡುವುದಕ್ಕೆ ಮನೆ ಮುಂದೆ ಜಮಾಯಿಸಿದ್ದರು. ಸುಮಾರು 9 ಗಂಟೆಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ಕೋಣೆಯ ಬಾಗಿಲಿಗೆ ಬೋನು ಇಟ್ಟು ಬಾಗಿಲು ತೆರೆದರು.
ಹೊರ ಹೋಗುವುದಕ್ಕೆ ಕಾಯುತ್ತಿದ್ದ ಚಿರತೆ, ಬಾಗಿಲು ತೆಗೆದೊಡನೆ ಹೊರಗೆ ಬಂದು ಬೋನಿಗೆ ಹೊಕ್ಕಿತು. ತಕ್ಷಣ ಅರಣ್ಯ ಸಿಬ್ಬಂದಿ ಬೋನಿನ ಬಾಗಿಲನ್ನು ಭದ್ರ ಪಡಿಸಿ ಚಿರತೆಯನ್ನು ಬಂಧಿಸಿದರು.
ಜಿಲ್ಲೆಯಲ್ಲಿ ಪ್ರಥಮ: ಉಡುಪಿ ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಕಪ್ಪು ಚಿರತೆ ಪತ್ತೆಯಾಗಿದ್ದು, ಸುಮಾರು 6 ತಿಂಗಳ ಹಿಂದೆ ಇಂತಹುದೆ ಕಪ್ಪು ಚಿರತಯೊಂದನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಹಿಡಿಯಲಾಗಿತ್ತು. ಕರ್ನಾಟಕದಲ್ಲಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅಭಯಾರಣ್ಯ ಕಪ್ಪು ಚಿರತೆಗಳ ಪ್ರಮುಖ ವಾಸ ಸ್ಥಳವಾಗಿದೆ. ಅಲ್ಲಿಂದ ಈ ಚಿರತೆ ಉಡುಪಿ ಜಿಲ್ಲೆಯತ್ತ ಬಂದಿರಬಹುದು ಎಂದು ಅಂದಾಜಿಸಲಾಗಿದೆ.
ಹೆಣ್ಣು ಚಿರತೆ: ಹೆಗ್ಗೋಡಿನಲ್ಲಿ ಸೆರೆ ಸಿಕ್ಕಿರುವುದು ಹೆಣ್ಣು ಚಿರತೆಯಾಗಿದ್ದು, ಅದಕ್ಕೆ ಸುಮಾರು ಅಂದಾಜು 6-7 ವರ್ಷ ಪ್ರಾಯವಾಗಿದೆ  ಎಂದು ಉಡುಪಿ ವಲಯ ಅರಣ್ಯ ಸಂರಕ್ಷಾಣಾಧಿಕಾರಿ ಪ್ರಕಾಶ ಪೂಜಾರಿ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಉಪವಲಯ ಅರಣ್ಯಾಧಿಕಾರಿ ಮಂಜ ಗಾಣಿಗ, ಅರಣ್ಯ ರಕ್ಷಕರಾದ ದೇವರಾಜ ಪಾಣ, ಶಿವಪ್ಪ ನಾಯ್ಕ, ಜೋಯ್ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.