ರು. 50 ಲಕ್ಷಕ್ಕೂ ಹೆಚ್ಚು ಅನುದಾನ ದುರ್ಬಳಕೆ ಆರೋಪ
ಕುಡಿಯುವ ನೀರು ಯೋಜನೆ ಅವ್ಯವಹಾರ: ರೆಖ್ಯಾ ಗ್ರಾಮದಲ್ಲಿ ಲೋಕಾ ತನಿಖೆ
ಉಪ್ಪಿನಂಗಡಿ: ಜಿ.ಪಂ. ಅನುದಾನ ಬಳಸಿ, ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸುವಲ್ಲಿ ಹಣದ ದುರುಪಯೋಗ, ನಿರ್ಲಕ್ಷ್ಯದ ಹಾಗೂ ಅಸಮರ್ಪಕ ಕಾಮಗಾರಿ ನಡೆಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕು ಅರಸಿನಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೆಖ್ಯಾ ಗ್ರಾಮದಲ್ಲಿ ಗುರುವಾರಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನಾ ಕಾರ್ಯ ನಡೆಯಿತು.
ಲೋಕಾಯುಕ್ತ ಅಧಿಕಾರಿಗಳಾದ ಸುಬ್ರಹ್ಮಣ್ಯ ಕಾರಂತ್ ನೇತೃತ್ವದ ತಂಡ ರೆಖ್ಯಾ ಗ್ರಾಮದ ಕೊಡೆಂಚಿ, ಮುಚ್ಚಿರಡ್ಕ ಮುಂತಾದ ಕಡೆಗಳ ನೀರಿನ ಟ್ಯಾಂಕ್ ಮತ್ತು ಪೈಪ್ ಲೈನ್ಗಳನ್ನು ಪರಿಶೀಲನೆ ನಡೆಸಿದರು.
ಮುಚ್ಚಿರಡ್ಕ ಎಂಬಲ್ಲಿಗೆ ರು. 7.5 ಲಕ್ಷದಲ್ಲಿ ಕೈಗೊಂಡ ಪೈಪ್ಲೈನ್ ಅಳವಡಿಕೆ ಪೂರ್ಣಗೊಂಡ ಕಾಮಗಾರಿಯ ಸಂಬಂಧ ಅಧಿಕಾರಿಗಳ ಸಮಕ್ಷಮದಲ್ಲಿ ಪೈಪುಗಳನ್ನು ಅಳತೆ ಮಾಡಲಾಯಿತು. ಅರಸಿನಮಕ್ಕಿ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಗೌಡ ಅಡ್ಕಾಡಿ, ಜಿ.ಪಂ. ಎಂಜಿನಿಯರ್ ತಿಪ್ಪೇಸ್ವಾಮಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವೆಂಕಪ್ಪ ಮತ್ತು ರೆಖ್ಯಾ ಗ್ರಾಮದ ಗ್ರಾಮಸ್ಥರು ತನಿಖೆ ವೇಳೆ ಇದ್ದರು.
ಗ್ರಾ.ಪಂ.ಗೆ ವಿದ್ಯುತ್ ಬಿಲ್ಲು: ನೇಲ್ಯಡ್ಕ ಶಾಲಾ ಬಳಿ ಸಾರ್ವಜನಿಕ ಉದ್ದೇಶಕ್ಕಾಗಿ ಐದಾರು ವರ್ಷಗಳ ಹಿಂದೆಯೇ ಟ್ಯಾಂಕ್ ನಿರ್ಮಿಸಿ, ಪೈಪ್ಲೈನ್ ಅಳವಡಿಕೆಯಾಗಿದ್ದರೂ ಟ್ಯಾಂಕ್ನಲ್ಲಿ ತುಂಬಿಸಲಾದ ನೀರು ಸಾರ್ವಜನಿಕರಿಗೆ ಲಭಿಸುತ್ತಿಲ್ಲವೆನ್ನಲಾಗಿದೆ.
ಸ್ಥಳೀಯ ರಾಜಕೀಯ ಪ್ರಭಾವಿ ವ್ಯಕ್ತಿಯೊಬ್ಬರ ಕೃಷಿತೋಟಕ್ಕೆ ಈ ಟ್ಯಾಂಕರ್ನಿಂದ ಸರಬರಾಜು ಆಗುತ್ತಿತ್ತೆಂದೂ, ಟ್ಯಾಂಕರ್ ನೀರು ಶೇಖರೆಣೆಯ ವಿದ್ಯುತ್ ಬಿಲ್ ಮಾತ್ರ ಪಂಚಾಯ್ತಿ ಅಡಳಿತ ಪಾವತಿಸಬೇಕಾಗಿತ್ತೆಂದು ಗ್ರಾಮಸ್ಥರ ಆಪಾದನೆ ಕೇಳಿ ಬಂದಿತ್ತು.
ಸ್ಥಳೀಯ ಶಾಲೆಗೆ ನೀರಿನ ಅಗತ್ಯತೆ ಮನಗಂಡು ಶಾಲೆಯನ್ನು ಹೊರತು ಪಡಿಸಿ ಉಳಿದ ಸಾರ್ವಜನಿಕ ಪೈಪ್ಲೈನ್ ಸಂಪರ್ಕ ಕಡಿತಗೊಳಿಸಲಾಗಿದೆ. ಗ್ರಾಮಸ್ಥರಿಗಾಗಿ ಒದಗಿಸಿದ ಲಕ್ಷಾಂತರ ರು. ಅನುದಾನ ಇಲ್ಲಿ ದುರ್ಬಳಕೆಯಾಗುವುದು ಗ್ರಾಮಸ್ಥರ ದೂರಿಗೆ ಕಾರಣವಾಗಿದೆ.
ರಸ್ತೆ ಚರಂಡಿಯಲ್ಲೇ ಪೈಪ್ಲೈನ್: ಕುಡಿಯುವ ನೀರಿನ ಪೈಪ್ ಅಳವಡಿಕೆಗೆ ನಿರ್ದಿಷ್ಟ ಕಾಮಗಾರಿಯ ನಿಯಮಾವಳಿಗಳಿದ್ದರೂ ಈ ಭಾಗದಲ್ಲಿ ಹೊಸದಾಗಿ ನೆಲ ಕಡಿಯದೇ ರಸ್ತೆ ಬದಿಯ ಚರಂಡಿಯಲ್ಲೇ ಪೈಪು ಅಳವಡಿಸಿ ಅದರ ಮೇಲೆ ಮಣ್ಣು ಸುರಿದಿದ್ದಾರೆನ್ನಲಾಗಿದೆ. ಇದು ಮಳೆಗಾಲದಲ್ಲಿ ಮಣ್ಣು ಕೊಚ್ಚಿ ಹೋಗಿ ಪೈಪುಗಳೆಲ್ಲಾ ಎದ್ದು ಕಾಣುವಂತಿದೆ. ಮಾತ್ರವಲ್ಲದೆ ಅಳವಡಿಸಲಾದ ಪೈಪುಗಳ ಗುಣಮಟ್ಟದ ಬಗ್ಗೆಯೂ ಶಂಕೆ ವ್ಯಕ್ತಪಡಿಸಿ ದೂರು ಸಲ್ಲಿಸಲಾಗಿತ್ತು. ವ್ಯಕ್ತವಾದ ಎಲ್ಲಾ ದೂರುಗಳ ಬಗ್ಗೆ ಸತ್ಯಾಂಶ ತಿಳಿಯುವ ಹಿನ್ನೆಲೆಯಲ್ಲಿ ಗುರುವಾರ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನಾ ಕಾರ್ಯ ನಡೆಯಿತು.
ದಾಖಲೆಯಲ್ಲಿ 3 ಸಾವಿರ ಮೀ, ಅಳವಡಿಕೆಯಲ್ಲಿ 500 ಮೀ.!
ಲೋಕಾಯುಕ್ತ ಅಧಿಕಾರಿಗಳ ತನಿಖೆಯ ವೇಳೆ ನೇಲ್ಯಡ್ಕ ಪ್ರೌಢಶಾಲಾ ಬಳಿಯ ನೀರಿನ ಟ್ಯಾಂಕ್ ಪರಿಶೀಲನೆಗೆ ಒಳಗಾಯಿತು.
ಮುಚ್ಚಿರಡ್ಕ ಎಂಬಲ್ಲಿಗೆ ವಿಸ್ತರಣೆಯಾದ ಪೈಪ್ಲೈನ್ಗಾಗಿ ರು. 7.5 ಲಕ್ಷ ಅನುದಾನ ನಿಗದಿಪಡಿಸಿದ್ದು, ಕಾಮಗಾರಿಯಲ್ಲಿ ಈ ಸ್ಥಳದ ದೂರ ರು. 3 ಸಾವಿರ ಮೀಟರ್ಗಿಂತಲೂ ಅಧಿಕ ಎಂದು ದಾಖಲಾಗಿದ್ದರೆ, ಕಾಮಗಾರಿಯಲ್ಲಿ ಅಂದಾಜು 500 ಮೀ.ನಷ್ಟು ದೂರ ಮಾತ್ರ ಪೈಪ್ ಅಳವಡಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

