ದಕ್ಷಿಣ ಕನ್ನಡ

ಮನೆಮಂದಿ ಮಲಗಿದ್ದಾಗಲೇ 68 ಸಾವಿರ ನಗದು ಕಳವು

Published On :

ಉಪ್ಪಿನಂಗಡಿ: ಮನೆ ಮಂದಿ ರಾತ್ರಿ ಮಲಗಿದ್ದ ವೇಳೆಯಲ್ಲೇ ನ್ಯಾಯವಾದಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು, ಎರಡು ಕಪಾಟುಗಳನ್ನು ಜಾಲಾಡಿ 68 ಸಾವಿರ ನಗದು ದೋಚಿರುವ ಘಟನೆ 34ನೇ ನೆಕ್ಕಿಲಾಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
 ಯುವ ನ್ಯಾಯವಾದಿ ಅಶ್ರಫ್ ಅಗ್ನಾಡಿ ಎಂಬವರ ಕೊಡಿಪ್ಪಾಡಿ ಮನೆಗೆ  ರಾತ್ರಿ ಹಿಂಬದಿ ಬಾಗಿಲ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು, ಮನೆಯಲ್ಲಿ ಮಕ್ಕಳಾದಿಯಾಗಿ ಹತ್ತು ಮಂದಿ ಮಲಗಿರುವಾಗಲೇ ಕೋಣೆಯೊಳಗೆ ನುಗ್ಗಿ ಕಪಾಟುಗಳ ಬಾಗಿಲು ತೆರೆದು ಕಪಾಟೊಂದರಲ್ಲಿದ್ದ 65 ಸಾವಿರ ನಗದು ಹಾಗೂ ಇನ್ನೊಂದು ಕೋಣೆಯಲ್ಲಿದ್ದ ಪರ್ಸ್‌ನಿಂದ 3 ಸಾವಿರ ನಗದನ್ನು ಕದ್ದೊಯ್ದಿದ್ದಾರೆ. ಅದೃಷ್ಟವಶಾತ್ ಚಿನ್ನಾಭರಣಗಳನ್ನು ಇಟ್ಟಿದ್ದ ಜಾಗ ಕಳ್ಳರ ಗಮನಕ್ಕೆ ಬಾರದೆ ಇದ್ದುದ್ದರಿಂದ ಚಿನ್ನಾಭರಣಗಳು ಹಾಗೇ ಉಳಿದಿವೆ. ಅಶ್ರಫ್ ಅವರ ಮನೆಗೆ ಬೆರಳಚ್ಚು ತಜ್ಞರು, ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಲಾಯಿತು.
ಮನೆ ಮಂದಿ ಮಲಗಿದ್ದಾಗಲೇ ಕಳ್ಳತನಕ್ಕೆ ಯತ್ನಿಸುವ ನೂತನ ಪ್ರಯತ್ನಗಳು ಇತ್ತೀಚೆಗೆ ನಡೆಯುತ್ತಿದ್ದು, ಮಲಗಿದ್ದವರಿಗೆ ಎಚ್ಚರವಾಗದಂತೆ ರಾಸಾಯನಿಕ ಸಿಂಪಡಿಸಿ ಕಳ್ಳತನ ನಡೆಸಲಾಗುತ್ತಿದೆಯೇ ಎಂಬ ಸಂಶಯ ಮೂಡಿದೆ.
ಮತ್ತೊಂದು ಕಳವು ಯತ್ನ ವಿಫಲ: ನ್ಯಾಯವಾದಿ ಆಶ್ರಫ್ ಅಗ್ನಾಡಿಯ ಮನೆಯಲ್ಲಿ ಕಳ್ಳತನ ನಡೆಸಿದ ಕಳ್ಳರು, 34ನೇ ನೆಕ್ಕಿಲಾಡಿ ಗ್ರಾಮದ ಸಂತೆಕಟ್ಟೆಯ ಅಬ್ದುಲ್ ಖಾದರ್ ಎಂಬವರ ಮನೆಗೂ ನುಗ್ಗುವುದಕ್ಕೆ ಯತ್ನಿಸಿದೆ. ತಂಡದ ಕಾರ್ಯಯೋಜನೆಯಂತೆ ಮನೆಯ ಹಿಂಬಾಗಿಲ ಚಿಲಕವನ್ನು ಮುರಿಯುವ ಯತ್ನ ಮಾಡುತ್ತಿದ್ದಂತೆಯೇ ಪಾತ್ರೆಗಳು ಬಿದ್ದ ಸದ್ದಾಗಿ ಮನೆ ಮಂದಿ ಎಚ್ಚರಗೊಂಡಿದ್ದಾರೆ. ಕೂಡಲೇ ಕಳ್ಳರ ತಂಡ ಅಲ್ಲಿಂದ ಕಾಲ್ಕಿತ್ತಿದೆ.
ಇತ್ತೀಚಿನ ದಿನಗಳಲ್ಲಿ ಉಪ್ಪಿನಂಗಡಿ ಪರಿಸರದಲ್ಲಿ ಕಳ್ಳತನ ಹೆಚ್ಚುತ್ತಿರುವುದರಿಂದ ಎಚ್ಚರಗೊಂಡಿರುವ ನಾಗರಿಕರು ರಾತ್ರಿ ವೇಳೆ ಮನೆಯ ಎಲ್ಲ ಬಾಗಿಲಿಗೆ ಚಿಲಕ ಹಾಕಿದ ಮೇಲೆ ಚಿಲಕ ಬಳಿ ಪಾತ್ರೆಗಳನ್ನು ಅಳವಡಿಸಿ ಮಲಗುತ್ತಾರೆ. ಕಳ್ಳರು ಬಾಗಿಲು ತೆರೆಯಲು ಯತ್ನಿಸಿದಾಗ ಚಿಲಕದಲ್ಲಿರುವ  ಪಾತ್ರೆಗಳು ಬಿದ್ದು ಸದ್ದು ಮಾಡುತ್ತವೆ. ಅದು ಮಲಗಿದ್ದವರನ್ನು ಎಚ್ಚರಗೊಳ್ಳಲು ಕಾರಣವಾಗುತ್ತದೆ. ಇದೇ ತಂತ್ರ ಅಬ್ದುಲ್ ಖಾದರ್ ಅಳವಡಿಸಿದ್ದರಿಂದ ಅವರ ಮನೆಯಲ್ಲಿ ಕಳ್ಳತನವಾಗುವುದು ತಪ್ಪಿದೆ.
 ಸ್ಥಳಕ್ಕೆ ಉಪ್ಪಿನಂಗಡಿ ವೃತ್ತ ನಿರೀಕ್ಷಕ ಸುರೇಶ್ ಕುಮಾರ್, ಎಸ್‌ಐ ಶಿವ ಕುಮಾರ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.