ದಕ್ಷಿಣ ಕನ್ನಡ

ಬಡವರಿಗೆ ಸೂರು: ತೊಂದರೆ ನೂರು

Published On :

ಮಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಪ್ರತಿ ತಾಲೂಕಿಗೆ ತಲಾ 52 ಮನೆ ನೀಡಬೇಕು ಎಂಬುದು ನಿಯಮ. ಆದರೆ 2 ವರ್ಷ ಹಿಂದಿನ ಯೋಜನೆಯೇ ಪೂರ್ತಿಯಾಗಿಲ್ಲ, ಈ ವರ್ಷದ ಗುರಿ ಇನ್ನೂ ನಿಗದಿಯಾಗಿಲ್ಲ.
 ಇದು ಅಂಬೇಡ್ಕರ್ ವಸತಿ ಯೋಜನೆ ಮಾತ್ರವಲ್ಲ, ಬಸವ ವಸತಿ, ಇಂದಿರಾ ಆವಾಸ್ ಯೋಜನೆಯಲ್ಲೂ ನಿಗದಿತ ಗುರಿ ತಲುಪುವಲ್ಲಿ ತಾಲೂಕುಗಳು ವಿಫಲವಾಗಿದೆ. ಸರ್ಕಾರ ಬಡವರಿಗೆ ಸೂರು ಕೊಡಬೇಕು ಎಂಬ ಮಹತ್ವಾಕಾಂಕ್ಷೆಯಲ್ಲಿ ಯೋಜನೆ ಜಾರಿಗೊಳಿಸಿದರೂ ಬಿಗಿಯಾದ ನಿಯಮ ನಿರೀಕ್ಷಿತ ರೀತಿಯಲ್ಲಿ ಫಲ ನೀಡುತ್ತಿಲ್ಲ. ಇದರಿಂದ ಅರ್ಹ ಫಲಾನುಭವಿಗಳು ಸೂರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಂಗಳೂರಲ್ಲಿ ಫಲಾನುಭವಿಗಳೇ ಇಲ್ವಂತೆ!: ಅಂಬೇಡ್ಕರ್ ವಸತಿ ಯೋಜನೆಯ 2011-12ನೇ ಸಾಲಿನ ಪ್ರಗತಿಯ ಪಟ್ಟಿ ನೋಡಿದರೆ ಮಂಗಳೂರು ತಾಲೂಕಲ್ಲಿ ಯಾವುದೇ ಪ್ರಗತಿ ದಾಖಲಿಸಿಲ್ಲ. ಮಂಗಳೂರು ತಾಲೂಕಿಗೆ ಮೂಡುಬಿದಿರೆಯೂ ಸೇರುತ್ತದೆ.
   ಹಾಗಾದರೆ ಇಡೀ ತಾಲೂಕಲ್ಲಿ ಎಸ್‌ಸಿ ಎಸ್‌ಟಿ ಫಲಾನುಭವಿಗಳು ಇಲ್ಲವೇ ಎಂದು ಪ್ರಶ್ನಿಸಿದರೆ ತಾಲೂಕು ಪಂಚಾಯ್ತಿ ಅಧಿಕಾರಿಗಳು, ಸರ್ಕಾರಿ ನಿಯಮಾನುಸಾರ ಅರ್ಹ ಫಲಾನುಭವಿ ಸಿಕ್ಕಿಲ್ಲ ಎಂಬ ಸಮಜಾಯಿಸಿ ನೀಡುತ್ತಾರೆ. ಇದು ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ಅಧಿಕಾರಿಗಳಿರುವ ನೈಜ ಕಾಳಜಿ.
ಈ ವರ್ಷ ಗುರಿ ಇನ್ನೂ ಬಂದಿಲ್ಲ: ಜಿಲ್ಲೆಯ 4 ತಾಲೂಕುಗಳಲ್ಲಿ 260 ಗುರಿಯಲ್ಲಿ 189 ಫಲಾನುಭವಿಗಳು ಇದ್ದು, 14 ಮನೆ ಮಾತ್ರ ಪೂರ್ತಿಯಾಗಿದೆ. 79 ಮನೆ ಪ್ರಗತಿಯಲ್ಲಿದೆ. ನಿಯಮ ಪ್ರಕಾರ ನಿರ್ಮಿಸಲು ಆರಂಭಿಸಿದ 4 ತಿಂಗಳಲ್ಲಿ ಕಾಮಗಾರಿ ಮುಕ್ತಾಯವಾಗಬೇಕು. ಇದು ಯಾವಾಗ ಪೂರ್ಣವಾಗುತ್ತದೆ ಎಂದರೆ ಅಧಿಕಾರಿಗಳಲ್ಲಿ ಉತ್ತರ ಇಲ್ಲ.
ಪ್ರತಿ ವರ್ಷ ಯೋಜನೆಯಲ್ಲಿ ಎಷ್ಟು ಮನೆ ನಿರ್ಮಿಸಬೇಕು ಎಂದು ಸರ್ಕಾರವೇ ಗುರಿ ನಿಗದಿಪಡಿಸುತ್ತದೆ. ಕಳೆದೆರಡು ವರ್ಷದ ಕಾಮಗಾರಿ ಪೂರ್ತಿಯಾಗಿಲ್ಲ, ಈ ವರ್ಷದ ಗುರಿಯನ್ನೂ ಸರ್ಕಾರ ನೀಡಿಲ್ಲ.
ಇಂದಿರಾ ಆವಾಸ್‌ಗೆ ಸಾಲ ಕೊಡೋಲ್ಲ: ಮುಖ್ಯವಾಗಿ ಮಹಿಳೆಯರಿಗೆ ಮನೆ ನಿರ್ಮಾಣಕ್ಕೆ ನೀಡುವ ಇಂದಿರಾ ಆವಾಸ್ ಯೋಜನೆಯಲ್ಲಿ ಮಹಿಳೆಯರಿಗೆ ಸಾಲ ನೀಡಲು ಬ್ಯಾಂಕ್‌ಗಳು ಮುಂದೆ ಬರುತ್ತಿಲ್ಲ.
 2002ರ ಸರ್ವ ಕುಟುಂಬ ಸಮೀಕ್ಷೆ ಪ್ರಕಾರ ಜನಸಂಖ್ಯೆ ಆಧಾರದಲ್ಲಿ ಮನೆಯ ಗುರಿಯನ್ನು ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ ನಿಗದಿಪಡಿಸಿದೆ. ಫಲಾನುಭವಿಗೆ ರು. 1.20 ಲಕ್ಷ ಅನುದಾನ ನೀಡಲಿದ್ದು, ರು. 20 ಸಾವಿರ ಮೊತ್ತ ಫಲಾನುಭವಿ ಭರಿಸಬೇಕು. ಈ ಮೊತ್ತಕ್ಕೆ ಬ್ಯಾಂಕ್ ಸಾಲಕ್ಕೆ ಎಡತಾಕಿದರೆ 'ಸಾಧ್ಯವಿಲ್ಲ' ಎಂದು ಬ್ಯಾಂಕ್‌ಗಳು ಹಿಂದಕ್ಕೆ ಕಳುಹಿಸುತ್ತವೆ. ಜಾಗದ ಪಹಣಿಪತ್ರ ಸರಿಯಾಗಿ ಇಲ್ಲದಿರುವುದೇ ಸಾಲ ನಿರಾಕರಣೆಗೆ ಕಾರಣ ಎಂದು ಬ್ಯಾಂಕ್ ಅಧಿಕಾರಿಗಳು ಸಮಜಾಯಿಸಿ ನೀಡುತ್ತಾರೆ.  
ಜಿಲ್ಲೆಯಲ್ಲಿ ಎಸ್‌ಸಿ 659, ಎಸ್‌ಟಿ 487, ಅಲ್ಪಸಂಖ್ಯಾತ 138, ಇತರೆ 181, ಒಟ್ಟು 2707 ಮನೆ ನಿರ್ಮಾಣಕ್ಕೆ ಅವಕಾಶವಿದೆ. ವಿಪರ್ಯಾಸ ಎಂದರೆ ಯೋಜನೆ ಮಂಜೂರಾಗಿ ತಿಂಗಳು ಕಳೆದರೂ ಫಲಾನುಭವಿಗಳ ಆಯ್ಕೆ ಇನ್ನೂ ನಡೆದಿಲ್ಲ. ಗ್ರಾಮ ಸಭೆಯಲ್ಲಿ ಫಲಾನುಭವಿ ಆಯ್ಕೆ ನಡೆಸಬೇಕಿದ್ದು, ಈ ಪ್ರಕ್ರಿಯೆ ಮುಕ್ತಾಯಕ್ಕೆ ಸೆ.30 ಗಡು ವಿಧಿಸಲಾಗಿದೆ. ಈ ಯೋಜನೆಯಲ್ಲಿ ಕಚ್ಚಾ ಹಾಗೂ ಪಕ್ಕಾ ಮನೆಗಳ ನವೀಕರಣಕ್ಕೂ ಅವಕಾಶವಿದೆ.
ಲಾಕ್ ತಾಪತ್ರಯ: ಫಲಾನುಭವಿಗಳಿಗೆ ಕಗ್ಗಂಟಾಗಿರುವುದು ಬಸವ ವಸತಿ ಯೋಜನೆ. ಈ ಯೋಜನೆಯಲ್ಲಿ ಜಿಲ್ಲೆಗೆ 30 ಸಾವಿರ ಮನೆ ನಿರ್ಮಾಣದ ಗುರಿ ಹಾಕಿಕೊಳ್ಳಲಾಗಿದೆ. ಸರ್ಕಾರದಿಂದ ಪ್ರತಿ ಮನೆಗೆ ರು. 1.20 ಲಕ್ಷ ಸಬ್ಸಿಡಿ ಸಿಗುತ್ತದೆ. ಪ್ರತಿ ಗ್ರಾಮ ಪಂಚಾಯ್ತಿಗೆ ತಲಾ 20 ಮನೆ ನಿಗದಿ. ಬಂಟ್ವಾಳ 6998, ಬೆಳ್ತಂಗಡಿ 6000, ಮಂಗಳೂರು 10288, ಪುತ್ತೂರು 4288, ಸುಳ್ಯ 2426 ಮನೆಗಳ ಗುರಿ ಹೊಂದಿದೆ. ಈ ಮನೆಗಳ ಸುಗಮ ನಿರ್ಮಾಣಕ್ಕೆ ಲಾಕ್ ವ್ಯವಸ್ಥೆ ಅಡ್ಡಿಯಾಗಿದೆ.
 ಜಿಲ್ಲಾ ಪಂಚಾಯ್ತಿ ಕಳುಹಿಸಿದ ಫಲಾನುಭವಿಗಳ ಪಟ್ಟಿಗೆ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮ ಅನುಮೋದನೆ ನೀಡುತ್ತದೆ. ಅನುಮೋದನೆ ನೀಡಿದ ದಿನಾಂಕದಿಂದ 90 ದಿನದಲ್ಲಿ ಮನೆ ನಿರ್ಮಾಣ ಶುರುವಾಗಬೇಕು. ನಿಗಮ ಮಂಜೂರಾತಿ ಪತ್ರ ನೀಡಿದರೂ ಹಣಕಾಸು ಅಡಚಣೆ, ಮಳೆಗಾಲ, ಕಾರ್ಮಿಕರ ಅಭಾವ ಇತ್ಯಾದಿ ನಾನಾ ಕಾರಣದಿಂದ 90 ದಿನದೊಳಗೆ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗದೆ ಅನುದಾನ ಲಾಕ್ ಆಗಿ ಕೈಗೆ ಬಂದ ತುತ್ತನ್ನು ಫಲಾನುಭವಿಗಳೇ ಕೈಚೆಲ್ಲಿದ ಪ್ರಸಂಗ ಅನೇಕ ಕಡೆ ನಡೆದಿದೆ. ಈ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದು 2012 ಜು.ವರೆಗೆ ಅನುದಾನ ಲಾಕ್ ಆದವರಿಗೆ ಫೋಟೋ ತೆಗೆದು ತಾ.ಪಂ ಅಧಿಕಾರಿಗಳಿಂದ ದೃಢೀಕರಿಸುವಂತೆ ಈಗ ನಿಗಮ ಅವಕಾಶ ನೀಡಿದೆ.

ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.