ಒಂಬತ್ತುಕೆರೆಯಲ್ಲಿ ಮುಳುಗಿದ 390 ಮನೆ!
ಮಂಗಳೂರು: ಇದು ಸರ್ಕಾರದ ಆಶ್ರಯ ಯೋಜನೆ ಯಾವ ರೀತಿ ಹಾಳು ಮಾಡಬಹುದು ಎಂಬದುಕ್ಕೆ ಜ್ವಲಂತ ಉದಾಹರಣೆ ಉಳ್ಳಾಲ ಒಂಬತ್ತುಕೆರೆಯಲ್ಲಿದೆ.
ಇಟ್ಟಿಗೆ ಗೂಡಿನಂತೆ ಉದ್ದಾನುದ್ದ ಮನೆಗಳು. ಹೆಗ್ಗಣ ಗೂಡಿನಂತಿದೆ ಎಂಬ ಕಾರಣಕ್ಕೆ ಮನೆಗೆ ಬಾರದ ಫಲಾನುಭವಿಗಳು. ಮನೆಗಳ ಸುತ್ತ ಗಿಡಗಳು ಬೆಳೆದವು...
ಇದನ್ನು ನೋಡಿದ ಉಳ್ಳಾಲ ಪುರಸಭೆ ಜನಪ್ರತಿನಿಧಿಗಳಿಗೆ ಅಲ್ಲಿ ಪಾರ್ಕ್ ನಿರ್ಮಿಸುವ ಐಡಿಯಾ ಹೊಳೆಯಿತು. ಅಲ್ಲಿ ಲಾಡ್ಜ್ ನಿರ್ಮಾಣ ಮಾಡುತ್ತಾರೆ ಎಂದು ಜನ ಬೊಬ್ಬೆ ಹೊಡೆದರು, ಪಾರ್ಕ್ ಯೋಜನೆಯೂ ನಿಂತು ಹೋದರು ಮನೆಗಳು ಮಾತ್ರ ಗಿಡಗಳಿಂದ ಆವೃತವಾಗಿದೆ!
ಫಲಾನುಭವಿಗೆ ಮನೆ ನೀಡುವ ಮುನ್ನ ಒಳಚರಂಡಿ ವ್ಯವಸ್ಥ ಕಲ್ಪಿಸಿ ಎಂಬ ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ರು. 65.72 ಕೋಟಿ ವೆಚ್ಚದಲ್ಲಿ ಒಳಚರಂಡಿ ನಿರ್ಮಾಣ ಶುರು. ಇದರ ನಡುವೆ ಲೋಕಾಯುಕ್ತ ತನಿಖೆ ಸುಮಾರು 3 ವರ್ಷದಿಂದ ನಡೆಯುತ್ತಲೇ ಇದೆ, ಮನೆಗಳು ಬೀಳುತ್ತಿವೆ, ಒಳಚರಂಡಿ ಕಾಮಗಾರಿಗಳು ಅರೆಬರೆ ಮುಗಿದು ತುಕ್ಕು ಹಿಡಿಯುತ್ತಿವೆ.
ಮನೆಗಳ ಇತಿಹಾಸ!: 2001ರಲ್ಲಿ ಉಳ್ಳಾಲ ಒಂಬತ್ತುಕೆರೆಯ 9.5 ಎಕರೆ ಖಾಸಗಿ ಜಾಗವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಖರೀದಿಸಿ ರಾಜೀವ ಗಾಂಧಿ ವಸತಿ ನಿಗಮ ವತಿಯಿಂದ ಅನುದಾನ ಪಡೆದು ಉಳ್ಳಾಲ ಪುರಸಭೆಗೆ ಹಸ್ತಾಂತರಿಸಿದ್ದರು.
ಶಾಸಕರ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿ ನಿರ್ಣಯದಂತೆ ಗುತ್ತಿಗೆದಾರರಿಗೆ 390 ಮನೆಗ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿತ್ತು. ನಿಗಮ ವತಿಯಿಂದ 25 ಸಾವಿರ ಮತ್ತು ಫಲಾನುಭವಿಯಿಂದ 5 ಸಾವಿರ ಪಡೆದು 220 ಚದರಡಿಯಲ್ಲಿ ಮನೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು.
2002 ನವೆಂಬರ್ಗೆ ಮನೆಗಳ ನಿರ್ಮಾಣ ಶೇ.90 ಕಾಮಗಾರಿ ಮುಗಿದಿತ್ತು. ಸಾವಿರಾರು ಅರ್ಜಿಗಳು ಬಂದಿದ್ದು, ಅಂತಿಮವಾಗಿ 390 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು.
ಮನೆ ರೂಪುಗೊಂಡಾಗ 20್ಢ10 ಚದರಡಿ ವಿಸ್ತೀರ್ಣ, 8 ಅಡಿ ಎತ್ತರ ಮನೆ, 3.5 ಇಂಚು ತೆಳುವಾದ ಚಾವಣಿ! ಮನೆಗಳ ನಡುವಿನ ಅಂತರ 8 ಚದರಡಿ. ಇಂಥ ಮನೆಯಲ್ಲಿ ವಾಸಿಸುವುದು ಅಸಾಧ್ಯ ಎಂಬುದು ಫಲಾನುಭವಿಗಳ ವಾದ. ಪರಿಸರ ಇಲಾಖೆಗೂ ದೂರು ನೀಡಿದರು, ಕೋರ್ಟ್ನಲ್ಲಿ ದಾವೆ ದಾಖಲಿಸಿ ಕಾಮಗಾರಿಗೆ ತಡೆಯಾಜ್ಞೆ ತರಲಾಯಿತು. 11 ವರ್ಷಗಳಿಂದ ಮನೆಗಳು ಹಾಗೆಯೇ ಪಾಳು ಬಿದ್ದಿವೆ. 10ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. 50ಕ್ಕೂ ಹೆಚ್ಚು ಮನೆಗಳು ಭಾಗಶಃ ಬಿದ್ದಿವೆ.
ಸುದೀರ್ಘ ಲೋಕಾ ತನಿಖೆ !: 2009ರಲ್ಲಿ ಕಬೀರ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. 'ಫಲಾನುಭವಿಗಳನ್ನು ಆಶ್ರಯ ಸಮಿತಿ ನಿರ್ಣಯದಂತೆ ಆಯ್ಕೆ ಮಾಡಲಾಗಿದ್ದು, ಯಾವುದೇ ವಂಚನೆ ನಡೆದಿಲ್ಲ' ಎಂದು ಪುರಸಭೆ ಮುಖ್ಯಾಧಿಕಾರಿ ಲೋಕಾಯುಕ್ತಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದ್ದರು.
ಮೂರು ವರ್ಷಗಳಾದರೂ ತನಿಖೆ ಮುಗಿಯದ ಹಿನ್ನೆಲೆಯಲ್ಲಿ ತನಿಖೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ಕಬೀರ್ ಮಾಹಿತಿ ಹಕ್ಕಲ್ಲಿ ಕೇಳಿದ್ದರು. 'ಇನ್ನು ಹಲವರ ವಿಚಾರಣೆ ಬಾಕಿ ಇದೆ' ಎಂದು ಲೋಕಾಯುಕ್ತ ಪೊಲೀಸರು ಉತ್ತರ ನೀಡಿದ್ದರು.
ಹೈಕೋರ್ಟ್ ಆದೇಶ: 390 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವ ಮೊದಲು ಒಳಚರಂಡಿ ಸೌಲಭ್ಯ ಕಲ್ಪಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿತ್ತು. ಆದರಂತೆ 2562 ಮ್ಯಾನ್ಹೋಲ್ಗಳು, 12 ವೆಟ್ವೆಲ್ಗಳ 65.72 ಕೋಟಿ ವೆಚ್ಚದ ಭಾರಿ ಯೋಜನೆ ಈ ವರ್ಷ ಮುಗಿಯಬೇಕಿತ್ತು. ಆದರೆ ಕಾಮಗಾರಿ ಶೇ.80 ಆಗಿ ಅರ್ಧದಲ್ಲಿಯೇ ನಿಂತಿದೆ. ಒಂಬತ್ತುಕೆರೆ ಮನೆಗಳಿಗೆ ಸಂಪರ್ಕ ಕಲ್ಪಿಸಿಲ್ಲ, ಹೀಗಾಗಿ ಮನೆ ಫಲಾನುಭವಿಗಳಿಗೆ ಹಸ್ತಾಂತರವಾಗಿಲ್ಲ.
'ಮಳೆಯ ಕಾರಣಕ್ಕೆ ಕಾಮಗಾರಿ ನಿಂತಿದೆ. ಒಂಬತ್ತುಕೆರೆ ಬಳಿಯೂ ಒಳಚರಂಡಿ ಕಾಮಗಾರಿ ಮಾಡಲಾಗಿದೆ ಆದರೆ ಸಂಪರ್ಕ ಕೊಟ್ಟಿಲ್ಲ' ಎಂದು ಪುರಸಭೆ ಮಾಜಿ ಅಧ್ಯಕ್ಷ ಬಾಸೆಲ್ ಡಿ'ಸೋಜ ಹೇಳುತ್ತಾರೆ. ಉಳ್ಳಾಲ ಶಾಸಕ ಯು.ಟಿ.ಖಾದರ್ ರಾಜ್ಯಕ್ಕೆ ಆರೋಗ್ಯ ಸಚಿವರಾಗಿದ್ದಾರೆ. ಆದರೆ ಒಂಬತ್ತುಕೆರೆ ಮನೆಗಳ ಆರೋಗ್ಯ ಸರಿಮಾಡಲು ಮಾತ್ರ ಪುರುಸೊತ್ತೇ ಇಲ್ಲದಷ್ಟು ಬ್ಯುಸಿಯಾಗಿದ್ದಾರೆ.
ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

