ದಕ್ಷಿಣ ಕನ್ನಡ

ಸುಳ್ಯ: ಮಿತಿ ಮೀರಿದ ವಿದ್ಯುತ್ ಸಮಸ್ಯೆ

Published On :

ಸುಳ್ಯ: ಸುಳ್ಯದಲ್ಲಿ ವಿದ್ಯುತ್ ಸಮಸ್ಯೆ ಮಿತಿ ಮೀರಿದೆ. ಈ ಸಮಸ್ಯೆಗೆ ಕಾರಣಗಳು ಅನೇಕವಾಗಿದ್ದರೂ, ಪರಿಹಾರಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಇಚ್ಚಾಶಕ್ತಿ ತೋರಿಲ್ಲ.
ಸುಳ್ಯಕ್ಕೆ ದಿನಂಪ್ರತಿ 20 ಮೆಗಾ ವ್ಯಾಟ್ ವಿದ್ಯುತ್ನ ಬೇಡಿಕೆಯಿದ್ದು, ಇದು ನಿಯಮಿತವಾಗಿ ಸರಬರಾಜು ಮಾಡಲು ಹಳೆಯ ಕಾಲದ 33 ಕೆ.ವಿ. ವಿದ್ಯುತ್ ಲೈನ್ ಚಾಲ್ತಿಯಲ್ಲಿದೆ. ಇದನ್ನು 110 ಕೆ.ವಿ. ಆಗಿ ಪರಿವರ್ತಿಸುವ ಬೇಡಿಕೆ ಕಳೆದ ಹಲವು ವರ್ಷಗಳಿಂದ ಇದ್ದರೂ ಈವರೆಗೆ ಯಾರೂ ಕೂಡ ಗಮನಹರಿಸದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸುಳ್ಯದ ಎಲ್ಲಾ ವಿದ್ಯುತ್ ಸಮಸ್ಯೆ ನೀಗಿಸಲು ಇರುವ ಏಕೈಕ ದಾರಿ 110 ಕೆ.ವಿ. ವಿದ್ಯುತ್ ಯೋಜನೆ. ಇದಕ್ಕೆ ತಕ್ಷಣ ಚಾಲನೆ ನೀಡಿ ಅನುಷ್ಠಾನಗೊಳಿಸಿ ಪೂರ್ತಿಗೊಳಿಸುವಂತೆ ಆದೇಶ ನೀಡಬೇಕಾಗಿದೆ.
ಸುಳ್ಯ ಕೃಷಿ ಪ್ರಧಾನವಾಗಿದ್ದು, ಹಳ್ಳಿ ಹಳ್ಳಿಗಳಲ್ಲಿ ಕೃಷಿಯೇ ಜೀವನಾ ಧಾರವಾಗಿದೆ. ಪ್ರಸ್ತುತ ತ್ರೀ ಫೇಸ್ ವಿದ್ಯುತ್ ಸರಬರಾಜು ಇದ್ದರೂ ಇದು ವ್ಯವಸ್ಥಿತ ರೀತಿಯಲ್ಲಿ ಇಲ್ಲದೆ ಆಗಾಗ ವಿದ್ಯುತ್ ಕೈ ಕೊಡುತ್ತಾ ಎಲ್ಲಾ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಇಲಾಖೆಯನ್ನು ಕೇಳಿದರೆ ಟ್ರಾನ್ಸ್ಫಾರ್ಮರ್ ಓವರ್ ಲೋಡ್ ಎಂಬ ಸಿದ್ಧ ಉತ್ತರ ಬರುತ್ತದೆ. 7 ಗಂಟೆಯೂ ನಿರಂತರ ವಿದ್ಯುತ್ ಸಂಪರ್ಕದೊಂದಿಗೆ ಅದನ್ನು 12 ಗಂಟೆಗೆ ಏರಿಸಬೇಕು ಎಂದು ಕೃಷಿಕರ ಒತ್ತಾಯ.
ನೀರಿನ ಅಭಾವ: ಸುಳ್ಯ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಅಭಾವ ಕಂಡು ಬರುತ್ತಿದ್ದು, 24 ಗಂಟೆಯೂ ನಿರಂತರ ವಿದ್ಯುತ್ ಸಂಪರ್ಕದ ಎಕ್ಸ್ಪ್ರೆಸ್ ಲೈನ್ ವ್ಯವಸ್ಥೆಯನ್ನು ಕುಡಿಯುವ ನೀರಿನ ವ್ಯವಸ್ಥೆಗೆ ಕಲ್ಪಿಸಿಕೊಡಬೇಕು ಎಂಬುದು ಒತ್ತಾಯ.
ಸಂಪಾಜೆಯಲ್ಲಿ ವಿದ್ಯುತ್ ಸಬ್ ಸ್ಟೇಷನ್ ಅವಶ್ಯಕತೆಯಿದ್ದು, ಈ ಪ್ರದೇಶವು ಕೊಡಗು ಜಿಲ್ಲೆಯ ಗಡಿ ಪ್ರದೇಶದಲ್ಲಿದೆ. ಮಡಿಕೇರಿಗೂ ವಿದ್ಯುತ್ ವಿತರಣೆ ಆಗುವುದರಿಂದ ಈ ಸಬ್ ಸ್ಟೇಷನ್ ಅತೀ ಅಗತ್ಯವಾಗಿ ಆಗಬೇಕಿದೆ.
ಸುಳ್ಯ ತಾಲೂಕಿನ ಗುತ್ತಿಗಾರು ಮತ್ತು ಪುತ್ತೂರು ತಾಲೂಕಿನ ಗಡಿ ಪ್ರದೇಶವಾದ ಕಾವು ಎಂಬಲ್ಲಿ ವಿದ್ಯುತ್ ಸಬ್ಸ್ಟೇಷನ್ ಸ್ಥಾಪಿಸಿದಲ್ಲಿ ಸುಳ್ಯ ತಾಲೂಕಿನ ವಿದ್ಯುತ್ ಸಮಸ್ಯೆಗೆ ಪರಿಹಾರವಾಗುತ್ತದೆ.
ಲೈನ್ಮ್ಯಾನ್ಗಳ ಕೊರತೆ: ಮೆಸ್ಕಾಂ ಇಲಾಖೆಯಲ್ಲಿ ಸುಳ್ಯ ತಾಲೂಕಿನಲ್ಲಿ ಲೈನ್ಮ್ಯಾನ್ಗಳ ಕೊರತೆಯಿದ್ದು ಇದರ ಜೊತೆಗೆ ಇನ್ನಿತರ ಅಗತ್ಯ ಸಿಬ್ಬಂದಿ ನೇಮಕಾತಿಗೊಳಿಸಬೇಕಾಗಿದೆ. ಸುಳ್ಯ ನಗರದಲ್ಲಿ ಎಬಿಸಿ ಕೇಬಲ್ ಅಳವಡಿಸುವುದರ ಮೂಲಕ ಸಂಭಾವ್ಯ ವಿದ್ಯುತ್ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ.
ಪುತ್ತೂರು- ಕುಂಬ್ರದಿಂದ ಸುಳ್ಯಕ್ಕೆ ವಿದ್ಯುತ್ ಸರಬರಾಜು ಆಗುತ್ತಿದ್ದು 33 ಕೆ.ವಿ. ಯಲ್ಲಿಯೇ ಬೆಳ್ಳಾರೆಯಿಂದ ಸುಳ್ಯಕ್ಕೆ 33 ಕೆ.ವಿ ಗ್ರಿಡ್ನಿಂದ ವಿದ್ಯುತ್ ವೈಫಲ್ಯ ಉಂಟಾದಲ್ಲಿ ಬೆಳ್ಳಾರೆಯಿಂದ ಸುಳ್ಯಕ್ಕೆ ವಿದ್ಯುತ್ ಸರಬರಾಜಿನ ಬದಲಿ ವ್ಯವಸ್ಥೆಯನ್ನು ಕಲ್ಪಿಸಲು ಅನುಕೂಲವಾಗುತ್ತದೆ.
ವಿದ್ಯುತ್ ಸಮಸ್ಯೆಗೆ ಪರಿಹಾರ ರೂಪಿಸಬೇಕು ಎಂದು ಈಗಾಗಲೇ ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ಗೆ ಮನವಿ ಸಲ್ಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.